Covid Variant: ಹೊಸ ಕೋವಿಡ್ ರೂಪಾಂತರಿ ಜೆಎನ್.1ನ 7 ಪ್ರಮುಖ ರೋಗಲಕ್ಷಣಗಳಿವು; ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡ್ಬೇಡಿ
Dec 20, 2023 12:30 PM IST
ಸಾಂಕೇತಿಕ ಚಿತ್ರ
- ಕೋವಿಡ್ ಆತಂಕ ಮತ್ತೆ ಜಗತ್ತನ್ನು ಕಾಡುತ್ತಿದೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸ ತಳಿಯನ್ನು ʼವೇರಿಯೆಂಟ್ ಆಫ್ ಇಂಟರೆಸ್ಟ್ʼ ಎಂದು ಕರೆದಿದೆ. ಸದ್ಯ ಹರಡುತ್ತಿರುವ ಜೆಎನ್.1 ಪ್ರಮುಖ ರೋಗಲಕ್ಷಣಗಳಿವು.
ಒಂದಿಷ್ಟು ದಿನ ಸದ್ದಡಗಿದ್ದ ಕೋವಿಡ್ ಈಗ ಹೊಸ ರೂಪಾಂತರಿಯ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ವಿದೇಶಗಳಲ್ಲಿ ಕಳೆದ ಸೆಪ್ಟೆಂಬರ್‌ನಿಂದ ಹರಡುತ್ತಿದ್ದ ಹೊಸ ತಳಿ ಜೆಎನ್.1 ಇದೀಗ ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ನೆರೆ ರಾಜ್ಯ ಕೇರಳದಲ್ಲಿ ಡಿಸೆಂಬರ್ 8 ರಂದ ಜೆಎನ್.1 ವೈರಸ್ 78 ವರ್ಷ ಮಹಿಳೆಯೊಬ್ಬರಲ್ಲಿ ಮೊದಲ ಬಾರಿ ಕಾಣಿಸಿತ್ತು. ಇದೀಗ ಜೆಎನ್.1 ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿವೆ.
ಈ ಮೊದಲೇ ಹೇಳಿದಂತೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಇದು ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲು ಅಮೆರಿಕದಲ್ಲಿ ಪತ್ತೆಯಾಗಿತ್ತು. ಇದು ಬಿ.2.86 ರೂಪಾಂತರಿ (ಓಮಿಕ್ರಾನ್) ಸಂತತಿ ವಂಶಾವಳಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಹೊಸ ರೂಪಾಂತರಿ ತಳಿಯನ್ನು ʼಆಸಕ್ತಿಯ ರೂಪಾಂತರʼ ಎಂದು ವರ್ಗೀಕರಿಸಿದೆ. ಹಾಗಾಗಿ ಈ ವೈರಸ್ ಮೇಲೆ ಕೊಂಚ ಭಯ ಹೆಚ್ಚಿರುವುದು ಸಹಜ. ಆದರೆ ಇದು ಸಾರ್ವಜನಿಕ ಆರೋಗ್ಯದ ಆರೋಗ್ಯದ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಎಂದು ಕೂಡ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ ಉಪತಳಿ ಜೆಎನ್ 1 ಎಷ್ಟು ಅಪಾಯಕಾರಿ; ತಜ್ಞರು, ವೈದ್ಯರು ಏನು ಹೇಳುತ್ತಾರೆ
ಜೆಎನ್.1 ಪ್ರಮುಖ ಲಕ್ಷಣಗಳಿವು
ಕೋವಿಡ್ ರೂಪಾಂತರಿಯು ವೇಗವಾಗಿ ಹರಡುತ್ತಿದ್ದು, ಕೆಲವು ಸಾವುಗಳು ಆಗಿವೆ. ಹೀಗಾಗಿ ಹೊಸ ರೂಪಾಂತರಿಯ ರೋಗಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸಲ್ಲ. ಇಲ್ಲಿಯವರೆಗೆ ವರದಿಯಾದ ಪ್ರಕರಣಗಳ ಆಧಾರದ ಮೇಲೆ ಜೆಎನ್.1 ವೈರಸ್‌ನ ರೋಗಲಕ್ಷಣಗಳಿವು.
* ಜ್ವರ
* ಮೂಗು ಸೋರುವುದು
* ಕಫ
* ತಲೆನೋವು
* ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಗಳು (ಕೆಲವರಲ್ಲಿ ಇರುವುದು)
* ಅತಿಯಾದ ಆಯಾಸ
* ಆಯಾಸ ಹಾಗೂ ಸ್ನಾಯುಗಳ ದೌರ್ಬಲ್ಯ
ಹೆಚ್ಚಿನ ರೋಗಿಗಳು ಸೌಮ್ಯತರದ ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಆದರೆ ಈ ರೋಗಲಕ್ಷಣಗಳು ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತವೆ.
ಕೆಲವು ಪ್ರಕರಣಗಳಲ್ಲಿ ಹೊಸ ರೂಪಾಂತರವು ಹಸಿವಾಗದೇ ಇರುವುದು ಮತ್ತು ನಿರಂತರ ವಾಕರಿಕೆಯಂತಹ ಲಕ್ಷಣಗಳು ಕೂಡ ಸೇರಿದೆ.
ಈ ರೋಗಲಕ್ಷಣಗಳು ಕಾಣಿಸಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಜೆಎನ್.1 ರೂಪಾಂತರಿಯನ್ನು ಎದುರಿಸಲು ಎಲ್ಲಾ ರೀತಿಯಿಂದಲೂ ಸಿದ್ಧರಾಗಲು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.
ಸದ್ಯ ಸೋಂಕಿತ ವ್ಯಕ್ತಿಗಳು ಮನೆಯಲ್ಲಿ ಐಸೋಲೇಷನ್ ಆಗಿರುವುದು ಹಾಗೂ ಸೌಮ್ಯರೋಗಲಕ್ಷಣಗಳನ್ನು ಎದುರಿಸುತ್ತಿದ್ದಾರೆ.