Male Birth Control Pill: ಪುರುಷರಿಗೂ ಗರ್ಭ ನಿರೋಧಕ ಮಾತ್ರೆ, ವಿಶ್ವದಲ್ಲಿ ಇದೇ ಮೊದಲು, ಬ್ರಿಟನ್‌ನಲ್ಲಿ ಶುರುವಾಗಿದೆ ಪ್ರಯೋಗ
Dec 17, 2023 08:00 AM IST
ಪುರುಷರಿಗಾಗಿ ಇರುವಂಥ ಹಾರ್ಮೋನ್ ಮುಕ್ತ ಗರ್ಭನಿರೋಧಕ ಮಾತ್ರೆಗಳ ಕ್ಲಿನಿಕಲ್ ಪ್ರಯೋಗ ಯುನೈಟೆಡ್ ಕಿಂಗ್ಡಂನಲ್ಲಿ ನಡೆಯುತ್ತಿದೆ. (ಸಾಂಕೇತಿಕ ಚಿತ್ರ)
ಪುರುಷರಿಗಾಗಿ ಇರುವಂತಹ ಹಾರ್ಮೋನ್ ಮುಕ್ತ ಗರ್ಭನಿರೋಧಕ ಮಾತ್ರೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗವು ಯುನೈಟೆಡ್ ಕಿಂಗ್ಡಂನಲ್ಲಿ ಶುರುವಾಗಿದೆ. ಗರ್ಭನಿರೋಧಕ ಮಾತ್ರೆಗಳ ಪೈಕಿ ಮೊದಲ ರೀತಿಯದ್ದಾಗಿದ್ದು, ವೈದ್ಯ ಜಗತ್ತಿನ ಗಮನಸೆಳೆದಿದೆ. ಇದರ ಪ್ರಯೋಗ ಬ್ರಿಟನ್‌ನಲ್ಲೇ ಮೊದಲು ನಡೆಯುತ್ತಿದ್ದು, ಈ ವಿಚಾರದಲ್ಲಿ ವಿಶ್ವ ಕುತೂಹಲಿಯಾಗಿದೆ.
ಪುರುಷರ ಗರ್ಭ ನಿರೋಧಕ ಮಾತ್ರೆ ಸದ್ಯ ಪ್ರಚಲಿತದಲ್ಲಿರುವ ಬಿಸಿಬಿಸಿ ಚರ್ಚೆಯ ವಿಷಯ. ಹಾರ್ಮೋನ್ ಯುಕ್ತ ಗರ್ಭನಿರೋಧಕ ಮಾತ್ರೆಗಳು ಪುರುಷರಿಗೆ ಲಭ್ಯವಿದೆಯಾದರೂ ಅಡ್ಡಪರಿಣಾಮಗಳ ಕಾರಣ ಹೆಚ್ಚು ಬಳಕೆಯಲ್ಲಿಲ್ಲ. ಇದೇ ಮೊದಲ ಬಾರಿಗೆ ಪುರುಷರಿಗಾಗಿ ಇರುವಂಥ ಹಾರ್ಮೋನ್ ಮುಕ್ತ ಗರ್ಭನಿರೋಧಕ ಮಾತ್ರೆಗಳ ಕ್ಲಿನಿಕಲ್ ಪ್ರಯೋಗ ಯುನೈಟೆಡ್ ಕಿಂಗ್ಡಂನಲ್ಲಿ ನಡೆಯುತ್ತಿದೆ ಎಂಬ ಸುದ್ದಿ ಗಮನಸೆಳೆದಿದೆ.
ಹಾರ್ಮೋನ್ ಯುಕ್ತ ಗರ್ಭನಿರೋಧಕ ಮಾತ್ರೆ ಬಳಕೆಯ ಹಿಂದಿನ ವಿಧಾನವು ಪುರುಷರಲ್ಲಿ ಹಲವು ಅಡ್ಡಪರಿಣಾಮ ಉಂಟುಮಾಡಿತ್ತು. ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿತ್ತು. ಈಗ ಹೊಸ ಹಾರ್ಮೋನ್ ಮುಕ್ತ ಗರ್ಭನಿರೋಧಕ ಮಾತ್ರೆಗಳು ಪುರುಷರ ಗರ್ಭನಿರೋಧಕ ಆರೈಕೆಯ ವಿಚಾರದಲ್ಲಿ ಒಂದು ಭರವಸೆಯ ಹೆಜ್ಜೆಯಾಗಿ ಕಂಡುಬಂದಿದೆ.
ಯುವರ್‌ಚಾಯ್ಸ್ ಥೆರಪ್ಯೂಟಿಕ್ಸ್ ಈ ವಾರ “ ವೈಸಿಟಿ - 529 (YCT-529” ಎಂದು ಕರೆಯಲ್ಪಡುವ ತನ್ನ ನಿತ್ಯ ಬಳಕೆಯ ಪುರುಷ ಗರ್ಭನಿರೋಧಕ ಮಾತ್ರೆಯ ಮೊದಲ ಹಂತದ ಪ್ರಯೋಗವನ್ನು ಪ್ರಾರಂಭಿಸಿತು. ಬ್ರಿಟಿಷ್ ಪ್ರಜೆಗಳ ಮೇಲೆಯೇ ಈ ಪ್ರಯೋಗ ನಡೆಯುತ್ತಿದೆ.
ಕ್ವಾಟಿಯಂಟ್ ಸೈನ್ಸಸ್ ಈ ಪ್ರಯೋಗವನ್ನು ನಡೆಸುತ್ತಿದೆ. ಈ ಕ್ಲಿನಿಕಲ್ ಪ್ರಯೋಗದಲ್ಲಿ 16 ಪುರುಷರು ಭಾಗಿಯಾಗಿದ್ದು, ಒಂದು ಡೋಸ್ ಮಾತ್ರೆಯನ್ನು ಸೇವಿಸಲು ನೀಡುತ್ತಿದ್ದು, ಅವರ ಶರೀರ ಅದನ್ನು ಹೇಗೆ ಸಹಿಸಿಕೊಳ್ಳುತ್ತದೆ, ಸುರಕ್ಷತೆ ಯಾವ ಮಟ್ಟದಲ್ಲಿದೆ, ಫಾರ್ಮಾಕೊಕಿನೆಟಿಕ್ಸ್ ಮತ್ತು ಫಾರ್ಮಾಕೊಡೈನಾಮಿಕ್ಸ್ ಯಾವ ರೀತಿ ಇದೆ ಎಂಬುದನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಕ್ಲಿನಿಕಲ್ ಟ್ರಯಲ್ಸ್ ಅರೇನಾ ವರದಿ ಮಾಡಿದೆ.
ಈಗ ಕ್ಲಿನಿಕಲ್ ಪ್ರಯೋಗದಲ್ಲಿ ಬಳಕೆಯಾಗಿರುವ ವೈಸಿಟಿ - 529 ಮಾತ್ರೆಯು ವೀರ್ಯದ ಫಲವತ್ತತೆಗೆ ಕಾರಣವಾದ ರೆಟಿನೊಯಿಕ್ ಆಸಿಡ್ ರಿಸೆಪ್ಟರ್-ಆಲ್ಫಾ (ಆರ್‌ಎಆರ್-ಆಲ್ಫಾ) ಅನ್ನು ತಡೆಯುವಂಥ ಶಕ್ತಿಹೊಂದಿದೆ. ಸರಳವಾಗಿ ಹೇಳಬೇಕು ಎಂದರೆ ವೀರ್ಯದ ಶಕ್ತಿ ವೃದ್ಧಿಸುವ ವಿಟಮಿನ್ ಎ ಅದನ್ನು ಪ್ರವೇಶಿಸದಂತೆ ತಡೆದು ವೃಷಣದಲ್ಲಿ ವೀರ್ಯ ಉತ್ಪಾದನೆ ಆಗದಂತೆ ಮಾಡುತ್ತದೆ. ಅದೇ ರೀತಿ, ಆರ್‌ಎಆರ್-ಆಲ್ಫಾವನ್ನು ತಡೆಯುವ ಮೂಲಕ ವೀರ್ಯ ಕೋಶಗಳ ಬಿಡುಗಡೆಯನ್ನು ಕೂಡ ತಡೆಯುತ್ತದೆ. ಇದು ವಿಟಮಿನ್ ಎ ಅನ್ನು ರೆಟಿನೊಯಿಕ್ ಆಮ್ಲಕ್ಕೆ ಅಂಟಿಕೊಳ್ಳುವ ಒಂದು ರೀತಿಯ ಶಕ್ತಿಯನ್ನು ಹೊಂದಿದೆ.
ಇದರ ಪ್ರಾಥಮಿಕ ಕ್ಲಿನಿಕಲ್ ಪೂರ್ವ ಸಂಶೋಧನೆಗೆ ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಹಣ ಒದಸಿತ್ತು. ಆ ಸಂಶೋಧನೆಯಲ್ಲಿ ವೈಸಿಟಿ 529 ಯಾವುದೇ ಅಡ್ಡ ಪರಿಣಾಮ ಇಲ್ಲದ ಶೇ.99 ಪರಿಣಾಮಕಾರಿಯಾಗಿ ಗರ್ಭನಿರೋಧಕ ಕೆಲಸ ಮಾಡಬಲ್ಲದು ಎಂಬುದನ್ನು ನಿರೂಪಿಸಿತ್ತು ಎಂದು ದತ್ತಾಂಶಗಳು ಹೇಳಿರುವುದಾಗಿ ವರದಿ ವಿವರಿಸಿದೆ.
ಯುನೈಟೆಡ್ ಕಿಂಗ್ಡಂನಲ್ಲಿ ಶುರುವಾಗಿರುವ ವೈಸಿಟಿ 529 ರ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ 2024ರ ಜೂನ್ ತಿಂಗಳಲ್ಲಿ ಕೊನೆಗೊಳ್ಳುವ ನಿರೀಕ್ಷೆ ಇದೆ. ಆದರೆ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
ಇನ್ನೂ ಒಂದು ವಿಚಾರ, ಅಮೆರಿಕದಲ್ಲಿ 1 ಕೋಟಿ ಪುರುಷರು ಮತ್ತು ಇತರೆಡೆಯ 5 ಕೋಟಿ ಪುರುಷರನ್ನು ಮಾರುಕಟ್ಟೆಯ ಗ್ರಾಹಕರಾಗಿ ಪರಿಗಣಿಸಿಕೊಂಡು ಹೊಸದಾಗಿ ರೂಪುಗೊಳ್ಳುತ್ತಿರುವ ಪುರುಷ ಗರ್ಭನಿರೋಧಕಗಳ ಸದ್ಯದ ಮಾರುಕಟ್ಟೆ ಮೌಲ್ಯ 20000 ಕೋಟಿ ಡಾಲರ್ ಎಂದು ಅಂದಾಜಿಸಿರುವುದಾಗಿ ಕರೆಂಟ್ ಒಬೆಸ್ಟೆಟ್ರಿಕ್ಸ್ ಆಂಡ್ ಗೈನಕಾಲಜಿ ರಿಪೋರ್ಟ್‌ನ ಅಧ್ಯಯನ ವರದಿ ಹೇಳಿದೆ.