Monsoon Diet: ಮಳೆಗಾಲದಲ್ಲಿ ಸೇವಿಸಬಹುದಾದ ಕೆಲವು ಬೆಸ್ಟ್ ಆಹಾರಗಳ ಪಟ್ಟಿ ಇಲ್ಲಿದೆ; ಡಯೆಟ್‌ಗೂ, ಆರೋಗ್ಯಕ್ಕೂ ಇವು ಮಸ್ಟ್
Jul 17, 2023 03:01 PM IST
ಮಳೆಗಾಲ ಮತ್ತು ಆಹಾರ (ಸಾಂಕೇತಿಕ ಚಿತ್ರ)
- Rainy Season and Food: ಮಳೆಗಾಲದಲ್ಲಿ ಬೇಯಿಸಿದ ತಾಜಾ ಆಹಾರ, ಸಮತೋಲಿತ ಆಹಾರ ಹಾಗೂ ಸರಳವಾಗಿ ಜೀರ್ಣವಾಗಲು ನೆರವಾಗುವ ಆಹಾರ ಸೇವನೆಯತ್ತ ಹೆಚ್ಚು ಗಮನ ಹರಿಸಬೇಕು. ಈ ಋತುಮಾನದಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಹಾಗಾದರೆ ಮಾನ್ಸೂನ್‌ನಲ್ಲಿ ಆರೋಗ್ಯ ಹಾಗೂ ಡಯೆಟ್ ಹಿನ್ನೆಲೆಯಲ್ಲಿ ಯಾವೆಲ್ಲಾ ಆಹಾರಗಳು ಸೇವಿಸಲು ಯೋಗ್ಯ ನೋಡಿ.
ಮಳೆಗಾಲದಲ್ಲಿ ಹೊರಗಡೆ ಧೋ ಎಂದು ಮಳೆ ಸುರಿಯುತ್ತಿರುವಾಗ ಬಿಸಿಯಾದ, ಖಾರದ, ಕುರುಕಲು ತಿಂಡಿಯಂತಹ ತಿನಿಸುಗಳನ್ನು ಸವಿಯಬೇಕು ಎನ್ನಿಸುವುದು ಸಹಜ. ಆದರೆ ಹೊರಗಡೆ ಸಿಗುವ ಇಂತಹ ಆಹಾರಗಳು ನಮ್ಮ ಆರೋಗ್ಯವನ್ನು ಕೆಡಿಸಬಹುದು. ಈ ಆಹಾರವನ್ನು ತಯಾರಿಸುವ ವಿಧಾನವು ದೇಹದಲ್ಲಿ ಸೋಂಕು ಹೆಚ್ಚಲು ಕಾರಣವಾಗಬಹುದು. ಮಳೆಗಾಲದಲ್ಲಿ ಸೋಂಕಿನ ಕಾರಣದಿಂದ ಶೀತ, ನೆಗಡಿ, ಮಲೇರಿಯಾ, ಡೆಂಗಿ, ಟೈಫಾಯಿಡ್‌ನಂತಹ ಸಮಸ್ಯೆಗಳು ಕಾಡುವುದು ಸಹಜ. ಆ ಕಾರಣಕ್ಕೆ ಈ ಋತುಮಾನದಲ್ಲಿ ಬೇಯಿಸಿದ ತಾಜಾ ಆಹಾರ, ಸಮತೋಲಿತ ಆಹಾರ ಹಾಗೂ ಸರಳವಾಗಿ ಜೀರ್ಣವಾಗಲು ನೆರವಾಗುವ ಆಹಾರ ಸೇವನೆಯತ್ತ ಹೆಚ್ಚು ಗಮನ ಹರಿಸಬೇಕು. ನಿಮ್ಮ ಆಹಾರದಲ್ಲಿ ಮಳೆಗಾಲದಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇರಿಸಬೇಕು. ಹಾಗಾದರೆ ಮಳೆಗಾಲದಲ್ಲಿ ಆರೋಗ್ಯ ಹಾಗೂ ಡಯೆಟ್ ಹಿನ್ನೆಲೆಯಲ್ಲಿ ಯಾವೆಲ್ಲಾ ಅಹಾರಗಳು ಸೇವಿಸಲು ಯೋಗ್ಯ ನೋಡಿ.
ಮಳೆಗಾಲದಲ್ಲಿ ನಿಮ್ಮ ಡಯೆಟ್ ಕ್ರಮದಲ್ಲಿ ಸೇರಿಸಬೇಕಾದ ಆಹಾರಗಳು
ಹಣ್ಣುಗಳು: ಮಳೆಗಾಲದಲ್ಲಿ ಹೆಚ್ಚು ಸಿಗುವ ಪೀಚ್ ಹಣ್ಣುಗಳು, ನೇರಳೆ, ಪಿಯರ್ಸ್, ಫ್ಲಮ್, ಚೆರ್ರಿ, ಲೀಚಿ ಹಾಗೂ ದಾಳಿಂಬೆ ಹಣ್ಣುಗಳು ನಿಮ್ಮ ಡಯೆಟ್‌ನಲ್ಲಿ ಇರಬೇಕು. ಮಳೆಗಾಲದಲ್ಲಿ ಸಿಗುವ ಈ ಹಣ್ಣುಗಳಲ್ಲಿ ವಿಟಮಿನ್ ಎ, ಸಿ, ನಾರಿನಾಂಶ ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳಿಂದ ಸಮೃದ್ಧವಾಗಿರುತ್ತವೆ.
ತರಕಾರಿಗಳು: ಮಳೆಗಾಲದ ವಾತಾವರಣಕ್ಕೆ ಹಗಲಕಾಯಿ, ಸೋರೆಕಾಯಿ, ಹೀರೆಕಾಯಿ, ಕುಂಬಳಕಾಯಿಯಂತಹ ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಇವು ಮಳೆಗಾಲದ ಡಯೆಟ್‌ಗೆ ಹೇಳಿ ಮಾಡಿಸಿದಂತಹವು.
ಪಾನೀಯಗಳು: ಮಳೆಗಾಲದಲ್ಲಿ ಸಾಕಷ್ಟು ಬಿಸಿನೀರು ಕುಡಿಯಬೇಕು. ಇದರೊಂದಿಗೆ ತಾಜಾ ಸೂಪ್‌ಗಳನ್ನು ಹೆಚ್ಚು ಹೆಚ್ಚು ಕುಡಿಯಬೇಕು. ಇದು ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಸೂಪ್ ಕುಡಿಯವುದನ್ನು ಮರೆಯಬಾರದು ಯಾಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮಸಾಲೆ ಪದಾರ್ಥಗಳು: ಅರಿಸಿನ ಮತ್ತು ಶುಂಠಿ ನಂಜುನಿರೋಧಕಗಳು. ಇವು ಉರಿಯೂತ ವಿರೋಧ ಅಂಶಗಳನ್ನೂ ಹೊಂದಿವೆ. ಆಂಟಿ ಆಕ್ಸಿಡೆಂಟ್ ಅಂಶಗಳು ಇದರಲ್ಲಿ ಸಮೃದ್ಧವಾಗಿದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು.
ಮಳೆಗಾಲಕ್ಕೆ ಈ ಆಹಾರಗಳು ಬೆಸ್ಟ್; ಆದರೆ ಹೊರಗಡೆ ತಿನ್ನದಿರಿ
ಜೋಳ: ಮಳೆಗಾಲದಲ್ಲಿ ಕಾರ್ನ್ ಹೇಳಿ ಮಾಡಿಸಿದ ತಿನಿಸು. ಇದನ್ನು ಬಿಸಿ ಬಿಸಿಯಾಗಿ ಬೇಯಿಸಿಕೊಂಡು ತಿನ್ನಬಹುದು. ನಿಮಗೆ ಬೇಕಾದ ಹಾಗೆ ಇದಕ್ಕೆ ಬೆಣ್ಣೆ, ಬೆಳ್ಳುಳ್ಳಿ, ನಿಂಬೆಹಣ್ಣಿನ ಫ್ಲೇವರ್ ಸೇರಿಸಿ ಸವಿಯಬಹುದು. ಇದು ಹಲವರ ನೆಚ್ಚಿನ ಆಹಾರ ಮಾತ್ರವಲ್ಲ, ಇದು ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ಪಕೋಡಾ: ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ, ಕಾಫಿ ಜೊತೆಗೆ ಪಕೋಡಾ ಸವಿಯುತ್ತಿದ್ದರೆ, ಆಹಾ ಸ್ವರ್ಗಕ್ಕೆ ಮೂರೇ ಗೇಣು. ಹೋಕೋಸು, ಈರುಳ್ಳಿ, ದೊಣ್ಣೆಮೆಣಸು, ಆಲೂಗೆಡ್ಡೆ, ಪನ್ನೀರು ಪಕೋಡಾಗಳು ಮಳೆಗಾಲದಲ್ಲಿ ಸವಿಯಲು ಬೆಸ್ಟ್. ಆದರೆ ಇದನ್ನು ನೀವು ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿ ತಯಾರಿಸಿ ಸೇವಿಸುವುದು ಬೆಸ್ಟ್.
ಸಮೋಸಾ: ಆಲೂಗೆಡ್ಡೆಯಿಂದ ತಯಾರಿಸಿದ ಸಮೋಸಾ ಮಳೆಗಾಲದಲ್ಲಿ ತಿನ್ನಲು ಬೆಸ್ಟ್. ಕೀಮಾ, ಪನ್ನಿರ್‌ನಂತರ ಸಮೋಸಗಳು ಜಿಹ್ವ ಚಾಪಲ್ಯ ತಣಿಸಬಹುದು. ಸಮೋಸಾದ ಒಳಗೆ ಭಿನ್ನ ಪದಾರ್ಥಗಳನ್ನು ತುಂಬಿ ಕರಿಯಬಹುದು. ಇದನ್ನೂ ಮನೆಯಲ್ಲಿ ತಯಾರಿಸಿ ತಿನ್ನುವುದು ಉತ್ತಮ.
ಮಸಾಲ ಟೀ: ಮಳೆ ಬರುವಾಗ ಮಸಾಲ ಟೀ ಅಥವಾ ಚಹಾ ಕುಡಿಯವುದು ಉತ್ತಮ. ಇದರಲ್ಲಿ ಶುಂಠಿ ಹಾಗೂ ಏಲಕ್ಕಿ ಸೇರಿಸುವುದರಿಂದ ಇವು ಒತ್ತಡ ನಿವಾರಣೆಗೂ ಸಹಾಯ ಮಾಡುತ್ತವೆ.
ಸೂಪ್: ಮಳೆಗಾಲದಲ್ಲಿ ತರಕಾರಿ ಸೂಪ್‌ಗಳನ್ನು ತಯಾರಿಸಿ ಕುಡಿಯುವುದು ದೇಹಕ್ಕೆ ಹೇಳಿ ಮಾಡಿಸಿದ್ದು. ಫ್ಲೂ, ವೈರಸ್‌ನಂತಹ ಸೋಂಕುಗಳು ದೇಹವನ್ನು ಬಾಧಿಸುವುದನ್ನು ಇದು ತಡೆಯುತ್ತದೆ. ಇದು ಮಳೆಗಾಲದಲ್ಲಿ ಮನಸ್ಸು, ದೇಹಕ್ಕೆ ಮುದ ನೀಡುತ್ತದೆ.
ಮಳೆಗಾಲದಲ್ಲಿ ಆರೋಗ್ಯಕರ ಡಯೆಟ್‌ಗೆ ಇಲ್ಲಿದೆ ಟಿಪ್ಸ್
ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯ ಕೊರತೆಯು ಹಲವು ರೋಗಗಳು ಹರಡಲು ಕಾರಣವಾಗುತ್ತವೆ. ಆ ಕಾರಣಕ್ಕೆ ನಾವು ಸೇವಿಸುವ ಆಹಾರದ ಮೇಲೆ ಹೆಚ್ಚು ಗಮನ ಹರಿಸಬೇಕು.
* ಉಪ್ಪಿನಾಂಶ ಕಡಿಮೆ ಸೇವಿಸಿ: ಮಳೆಗಾಲದಲ್ಲಿ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೆಚ್ಚಿಸಲು ಉಪ್ಪಿನಾಂಶವನ್ನು ಕಡಿಮೆ ಸೇವಿಸಬೇಕು. ಮಳೆಗಾಲದಲ್ಲಿ ಹೆಚ್ಚಿದ ಉಪ್ಪಿನಾಂಶ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಸಾಧ್ಯವಾದಷ್ಟು ಕಡಿಮೆ ಉಪ್ಪಿನಾಂಶ ಸೇವಿಸಿ.
* ಮಜ್ಜಿಗೆ, ಲಸ್ಸಿ, ಕಲ್ಲಂಗಡಿ ಮುಂತಾದ ದೇಹದ ಉಷ್ಣತೆಯನ್ನು ತಗ್ಗಿಸುವ ಆಹಾರ ಮತ್ತು ಪಾನೀಯಗಳು ದೇಹದಲ್ಲಿ ಊತದ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಅಂತಹ ಆಹಾರವನ್ನು ತಪ್ಪಿಸುವುದು ಉತ್ತಮ.
* ಮಳೆಗಾಲದಲ್ಲಿ ಆಹಾರಗಳಿಗೆ ಹೆಚ್ಚು ಹೆಚ್ಚು ಬೆಳ್ಳುಳ್ಳಿಯನ್ನು ಸೇರಿಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
* ಹೆಚ್ಚಿನ ಪ್ರಮಾಣದಲ್ಲಿ ಮೊಸರು ಮತ್ತು ಯೋಗರ್ಟ್ ಸೇವನೆಗೆ ಒತ್ತು ನೀಡಬೇಕು. ಇದು ಹಾನಿಕಾರಕ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಹಾಲು ಸೇವಿಸುವುದು ಕಡಿಮೆ ಮಾಡಿ.
* ಕೆಪಿನ್ ಅಂಶಗಳಿರುವ ಆಹಾರಗಳ ಬದಲು ಬಿಸಿನೀರು ಕುಡಿಯುವುದು ಉತ್ತಮ, ಇದರಿಂದಲೂ ದೇಹ ಬೆಚ್ಚಗಾಗುತ್ತದೆ.
* ಎಳ್ಳು, ಕಡಲೆ ಎಣ್ಣೆ, ಸಾಸಿವೆ ಎಣ್ಣೆ ಬದಲಿಗೆ ಜೋಳದ ಎಣ್ಣೆ ಬಳಕೆ ಉತ್ತಮ. ಇದು ದೇಹದಲ್ಲಿ ಸೋಂಕು ನಿವಾರಣೆಗೆ ಸಹಾಯ ಮಾಡುತ್ತದೆ.
* ಶುದ್ಧ ನೀರು ಕುಡಿಯಲು ಆಧ್ಯತೆ ನೀಡಿ.
* ಮಳೆಗಾಲದಲ್ಲಿ ಮಾಂಸಾಹಾರದ ಸೇವನೆಗೆ ಕಡಿವಾಣ ಹಾಕಿ.
* ಗಿಡಮೂಲಿಕೆಯೊಂದಿಗೆ ಶುಂಠಿ, ತುಳಸಿ, ದಾಲ್ಚಿನ್ನಿ, ಮೆಣಸು, ಏಲಕ್ಕಿ ಮತ್ತು ಲವಂಗ ಸೇರಿಸಿದ ನೀರು ಅಥವಾ ಕಷಾಯ ಕುಡಿಯಿರಿ. ಇದು ರೋಗನಿರೋಧಕ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.