Monsoon Health: ಮಳೆಗಾಲದಲ್ಲಿ ನೀರಿನಿಂದಷ್ಟೇ ಅಲ್ಲ, ಆಹಾರದಿಂದಲೂ ಹರಡುತ್ತವೆ ಕಾಯಿಲೆಗಳು; ಆರೋಗ್ಯ ರಕ್ಷಣೆಗೆ ಈ ಕ್ರಮ ಪಾಲಿಸಲು ಮರೆಯದಿರಿ
Jul 12, 2023 10:07 AM IST
ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳ ಬಗ್ಗೆ ಇರಲಿ ಗಮನ
- ಮಳೆಗಾಲದಲ್ಲಿ ನೀರು, ಆಹಾರ ಹಾಗೂ ಗಾಳಿಯಿಂದ ರೋಗ ಹರಡುವುದು ಸಾಮಾನ್ಯ. ಆರ್ದ್ರತೆ ಹೆಚ್ಚಿರುವ ಕಾರಣದಿಂದ ಸೋಂಕುಗಳು, ಸೂಕ್ಷ್ಮಜೀವಿಗಳು ಹೆಚ್ಚು ಹರಡುತ್ತವೆ. ಹಾಗಾಗಿ ಆಹಾರ ಸೇವನೆಗೂ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಮುಂಗಾರಿನ ಋತುವಿನಲ್ಲಿ ಆಹಾರದಿಂದ ಹರಡುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮ ಪಾಲಿಸಿ.
ಮಳೆಗಾಲ ಆರಂಭವಾಗಿ ಮಳೆರಾಯನ ಆರ್ಭಟ ಜೋರಾಗಿದೆ. ವರ್ಷಧಾರೆಯೊಂದಿಗೆ ಕಾಯಿಲೆಗಳು ಜೊತೆಯಾಗಿವೆ. ಮಾನ್ಸೂನ್‌ನಲ್ಲಿ ನೀರಿನಿಂದ ಹಾಗೂ ಆಹಾರದಿಂದ ಹರಡುವ ಕಾಯಿಲೆಗಳ ಪ್ರಮಾಣ ಹೆಚ್ಚು. ಆಹಾರದಿಂದಲೂ ಸೋಂಕುಗಳು ಹರಡುವ ಕಾರಣ ನಾವು ತಿನ್ನುವ ಆಹಾರಗಳ ಮೇಲೂ ಸಾಕಷ್ಟು ನಿಗಾ ವಹಿಸಬೇಕು. ಮಳೆಗಾಲದಲ್ಲಿ ಆಹಾರದಿಂದ ಹರಡುವ ಕಾಯಿಲೆಗಳು ವಿಚಾರದಲ್ಲಿ ನೆರವಾಗುವ ಟಿಪ್ಸ್‌ಗಳು ಹೀಗಿವೆ.
ನೀರು, ಗಾಳಿ, ಆಹಾರದಿಂದ ಹರಡುವ ರೋಗಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಇದು ಇನ್ನಿತರ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಳೆಗಾಲದಲ್ಲಿ ಆರ್ದ್ರತೆ ಉಂಟಾಗುವುದು ಸಹಜ. ಈ ಕಾಲದಲ್ಲಿ ಶಿಲೀಂದ್ರ ಸೋಂಕುಗಳು, ವೈರಾಣುಗಳ ಬೆಳವಣಿಗೆ ಹೆಚ್ಚುತ್ತದೆ. ಇಂತಹ ಸೂಕ್ಷ್ಮಜೀವಿಗಳು ಆಹಾರದ ಮೇಲೆ ನಮಗೆ ತಿಳಿಯದಂತೆ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುತ್ತವೆ ಮತ್ತು ಆಹಾರವನ್ನು ಕಲುಷಿತಗೊಳಿಸುತ್ತವೆ. ಆ ಕಾರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕಾಯಿಲೆ ಬಂದ ಮೇಲೆ ಪರದಾಡುವುದಕ್ಕಿಂತ ಬಾರದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಆಹಾರದಿಂದ ಹರಡುವ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಪಾಲಿಸಬೇಕಾದ ಕೆಲವು ಪ್ರಮುಖ ಸಲಹೆಗಳು ಹೀಗಿವೆ
ಸದಾ ತಾಜಾ ಆಹಾರಗಳನ್ನೇ ಸೇವಿಸಿ
ಹಣ್ಣು, ತರಕಾರಿಗಳನ್ನು ತುಂಡುರಿಸಿ ಅದನ್ನು ಹಾಗೇ ಇರಿಸಿ ಬಹಳ ಸಮಯದ ಅಥವಾ ಹಲವು ಗಂಟೆಗಳ ನಂತರ ಸೇವಿಸುವುದು ಹಲವರಿಗೆ ರೂಢಿ. ಈ ಅಭ್ಯಾಸ ಎಂದಿಗೂ ಒಳ್ಳೆಯದಲ್ಲ. ಅದರಲ್ಲೂ ಮಳೆಗಾಲದಲ್ಲಿ ಈ ಅಭ್ಯಾಸಕ್ಕೆ ಬ್ರೇಕ್ ಹಾಕುವುದು ಉತ್ತಮ. ಮಳೆಗಾಲದಲ್ಲಿ ಇದರಿಂದ ರೋಗ ಹರಡುವ ಸಾಧ್ಯತೆ ಅಧಿಕ. ಈ ಕಾಲದಲ್ಲಿ ಸದಾ ತಾಜಾ ಹಣ್ಣು, ತರಕಾರಿಗಳನ್ನೇ ಸೇವಿಸಿ. ಪ್ರತಿದಿನ ತಾಜಾ ಆಹಾರವನ್ನೇ ತಯಾರಿಸಿ ಸೇವಿಸಿ. ಆಹಾರವನ್ನು ಬಿಸಿ ಮಾಡುವುದು ಅಥವಾ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಸೂಕ್ಷ್ಮಜೀವಿಗಳು ಹರಡುವ ಸಾಧ್ಯತೆ ಕಡಿಮೆ.
ಮಿಕ್ಕಿದ ಆಹಾರಗಳ ಬಗ್ಗೆ ನಿಗಾ ವಹಿಸಿ
ಬಳಸಿ ಉಳಿದ ಅಥವಾ ಮಿಕ್ಕಿದ ಆಹಾರದ ಮೇಲೆ ಹೆಚ್ಚು ಗಮನ ಹರಿಸಿ. ಇವುಗಳನ್ನು ಸರಿಯಾದ ಕ್ರಮದಲ್ಲಿ ಇರಿಸದಿದ್ದರೆ ಆಹಾರವು ಕಲುಷಿತವಾಗುವ ಸಾಧ್ಯತೆ ಅಧಿಕ. ನಿಮ್ಮ ಊಟ ಮುಗಿದ ಬಳಿಕ ಆಹಾರ ಮಿಕ್ಕಿದ್ದರೆ ಕೂಡಲೇ ಅದನ್ನು ಫ್ರಿಜ್‌ನಲ್ಲಿ ಇರಿಸಿ. ಒಂದು ವೇಳೆ ಮಿಕ್ಕಿದ ಆಹಾರವನ್ನು ಬಿಸಿ ಮಾಡದೇ ಅಥವಾ ಫ್ರಿಜ್‌ನಲ್ಲಿ ಇಡದೇ ಹಾಗೆ ಬಿಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಹರಡುವ ಹಾಗೂ ಬೆಳವಣಿಗೆಯಾಗವು ಸಾಧ್ಯತೆ ಹೆಚ್ಚು. ಅಲ್ಲದೆ ಇದರಿಂದ ಆಹಾರ ಕಲುಷಿತವಾಗಿ, ಕೆಡಬಹುದು. ಇದರ ಸೇವನೆಯಿಂದ ಆಹಾರದ ಮೇಲೆ ಪರಿಣಾಮ ಬೀರಬಹುದು.
ಹಣ್ಣು, ತರಕಾರಿಯನ್ನು ಚೆನ್ನಾಗಿ ತೊಳೆಯಿರಿ
ಹಣ್ಣು, ತರಕಾರಿಗಳನ್ನು ಸೇವಿಸುವ ಮುನ್ನ ತೊಳೆಯುವುದು ಎಷ್ಟು ಮುಖ್ಯ ಎನ್ನುವುದು ಬಹುಶಃ ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದು ಸಾಮಾನ್ಯ ವಿಚಾರವಾಗಿರಬಹುದು. ಆದರೆ ಮಳೆಗಾಲದಲ್ಲಿ ಇದು ಬಹಳ ಮುಖ್ಯ. ಕೆಲವು ತಜ್ಞರ ಪ್ರಕಾರ ಮಳೆಗಾಲದಲ್ಲಿ ಹಣ್ಣು ಮತ್ತು ತರಕಾರಿಗಳ ಮೇಲ್ಮೈ ಮೇಲೆ ವಿಷಕಾರಿ ಬ್ಯಾಕ್ಟೀರಿಯಾಗಳು ತುಂಬಿರುತ್ತವೆ. ಆ ಕಾರಣಕ್ಕೆ ಇವನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ನಂತರ ಬಳಸುವುದು ಅವಶ್ಯ. ಇಲ್ಲದಿದ್ದರೆ ಬ್ಯಾಕ್ಟೀರಿಯಾವು ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು.
ಸಮರ್ಪಕ ಕ್ರಮದಲ್ಲಿ ಆಹಾರ ಸಂಗ್ರಹಿಸಿ
ತಾಜಾ ಆಹಾರವನ್ನು ತಯಾರಿಸುವಂತೆ ಆಹಾರವನ್ನು ಸರಿಯಾಗಿ ಸಂಗ್ರಹಿಸುವುದು ಮುಖ್ಯವಾಗುತ್ತದೆ. ಆಹಾರವನ್ನು ಸರಿಯಾಗಿ ಸಂಗ್ರಹಿಸುವುದರಿಂದ ಆಹಾರದಿಂದ ಹರಡುವ ಬಹಳಷ್ಟು ರೋಗಗಳನ್ನು ನಿರ್ಮೂಲನೆ ಮಾಡಬಹುದು. ಆಹಾರ ತಜ್ಞರ ಪ್ರಕಾರ ಬೇಯಿಸಿದ ಅಥವಾ ಬಿಸಿ ಮಾಡಿದ ಆಹಾರವನ್ನು ಫ್ರಿಜ್‌ನಲ್ಲಿ ಇಡುವ ಮೊದಲು ತಣಿಸಿ ಇಡಬೇಕು. ಇದರೊಂದಿಗೆ ಗಾಳಯಾದಂತಹ ಡಬ್ಬ ಅಥವಾ ಪಾತ್ರೆಯಲ್ಲಿ ಇರಿಸುವುದು ಮುಖ್ಯವಾಗುತ್ತದೆ. ಇದರಿಂದ ಆಹಾರವು ತೇವಾಂಶಕ್ಕೆ ತೆರೆದುಕೊಳ್ಳುವುದನ್ನು ತಡೆಯಬಹುದು.
ಋತುಮಾನಕ್ಕೆ ತಕ್ಕ ಆಹಾರ ಸೇವನೆ
ಪ್ರತಿ ಋತುಮಾನದಲ್ಲೂ ಭಿನ್ನ ಥರದ ಹಣ್ಣು ಹಾಗೂ ತರಕಾರಿ ಗಳು ಸಿಗುತ್ತವೆ. ಆಯಾ ಋತುಮಾನದಲ್ಲಿ ಸಿಗುವ ಹಣ್ಣು, ತರಕಾರಿಗಳು ದೇಹಕ್ಕೆ ಸಾಕಷ್ಟು ಪೋಷಕಾಂಶವನ್ನು ಒದಗಿಸುತ್ತವೆ. ಮಳೆಗಾಲದಲ್ಲಿ ಸಾಧ್ಯವಾದಷ್ಟು ಪ್ಯಾಕ್ ಮಾಡಿ ಇಟ್ಟಿರುವ ಆಹಾರಗಳ ಸೇವನೆಗೆ ಕಡಿವಾಣ ಹಾಕಿ. ಋತುಮಾನದಲ್ಲಿ ಸಿಗುವ ಹಣ್ಣು, ತರಕಾರಿಗಳ ಆಯಾ ಕಾಲಕ್ಕೆ ಹರಡುವ ಸೋಂಕುಗಳು ಹಾಗೂ ಕಾಯಿಲೆಗಳನ್ನು ನಿವಾರಿಸುವ ಗುಣವನ್ನೂ ಹೊಂದಿವೆ.
ಅಡುಗೆಗೆ ಶುದ್ಧ ನೀರು ಬಳಸಿ
ಮಳೆಗಾಲದಲ್ಲಿ ನೀರು ಕಲುಷಿತವಾಗುವ ಅಪಾಯ ಹೆಚ್ಚು. ಮಳೆಗಾಲದಲ್ಲಿ ಅನಾರೋಗ್ಯವನ್ನು ತಡೆಗಟ್ಟಲು ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಲು ಮತ್ತು ಆಹಾರ ತಯಾರಿಕೆಗೆ ಬಳಸುವುದು ಉತ್ತಮ. ಇದು ನಿಮ್ಮನ್ನು ರೋಗಗಳಿಂದ ರಕ್ಷಿಸಿ, ಆರೋಗ್ಯವಾಗಿರಲು ಆಹಾರ ಮಾಡುತ್ತದೆ.
ಇದನ್ನೂ ಓದಿ
Monsoon Health: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್‌ಫುಡ್‌ಗಳಿವು; ದಿನನಿತ್ಯದ ಬಳಕೆಗಿರಲಿ ಪ್ರಾಧಾನ್ಯ
ಮಳೆಗಾಲದಲ್ಲಿ ಅನಾರೋಗ್ಯ ಕಾಡುವುದು ಸಾಮಾನ್ಯ. ಆ ಕಾರಣಕ್ಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಪ್ರತಿನಿತ್ಯ ನಾವು ಸೇವಿಸುವ ಆಹಾರಗಳೊಂದಿಗೆ ಕೆಲವೊಂದು ಸೂಪರ್‌ಫುಡ್‌ಗಳನ್ನು ಸೇರಿಸಬೇಕು. ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ವಿಭಾಗ