Monsoon Health: ಮಳೆಗಾಲದಲ್ಲಿ ಹರಡುವ ಸೋಂಕುಗಳ ಬಗ್ಗೆ ಇರಲಿ ಎಚ್ಚರ; ಈ ಕ್ರಮಗಳನ್ನು ಅನುಸರಿಸಿ ಫಂಗಲ್ ಸೋಂಕಿನಿಂದ ರಕ್ಷಿಸಿಕೊಳ್ಳಿ
Jul 04, 2023 10:07 AM IST
ಮಳೆಗಾಲ ಮತ್ತು ಫಂಗಲ್ ಇನ್‌ಫೆಕ್ಷನ್ (ಸಾಂಕೇತಿಕ ಚಿತ್ರ)
- Monsoon Health: ಮಳೆಗಾಲ (Rainy Season) ದಲ್ಲಿ ಫಂಗಲ್ ಸೋಂಕಿ (Fungal Infection) ನಿಂದ ಚರ್ಮ ಸೇರಿದಂತೆ ಇತರ ಸಮಸ್ಯೆಗಳು ಕಾಡುವುದು ಸಹಜ. ಅದಕ್ಕಾಗಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಕೆಲವೊಂದು ಸುಲಭ ಮಾರ್ಗಗಳನ್ನು ಅನುಸರಿಸಬೇಕು. ಅವು ನಿಮ್ಮನ್ನು ಮಳೆಗಾಲ ಪೂರ್ತಿ ಆರೋಗ್ಯವಾಗಿರಲು ಸಹಾಯ ಮಾಡುತ್ತವೆ. ಅಂತಹ ಕೆಲವು ಸಲಹೆಗಳು ಹೀಗಿವೆ.
Monsoon Health: ಜೂನ್ ತಿಂಗಳ ಅಂತ್ಯದವರೆಗೂ ಅತಿಯಾದ ಬಿಸಿಲಿನಿಂದ ದೇಹ, ಮನಸ್ಸು ಕಂಗೆಟ್ಟಿತ್ತು. ಈ ವರ್ಷ ಬಿಸಿಲಿನ ಝಳ ಜೋರಾಗಿಯೇ ಇತ್ತು ಎನ್ನಬಹುದು. ಆದರೆ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದ್ದು ದೇಹ, ಮನಸ್ಸಿಗೆ ಆಹ್ಲಾದ ಭಾವ ಮೂಡುವಂತೆ ಮಾಡಿದೆ. ಮಳೆಗಾಲ (Rainy Season) ಮನಸ್ಸಿಗೆ ಖುಷಿ ಕೊಡುವ ಋತುಮಾನ. ಸದಾ ಹರಿಯುವ ಮಳೆ ಭೂಮಿ, ದೇಹವನ್ನು ತಂಪಾಗಿಸುವುದೇನೋ ನಿಜ. ಆದರೆ ಅತಿಯಾದ ವಾತಾವರಣದ ಆರ್ದ್ರತೆಯು ಸೂಕ್ಷ್ಮಜೀವಿಗಳು ಮತ್ತು ರೋಗಗಳು ಹರಡಲು ಕಾರಣವಾಗುತ್ತವೆ. ಅಲ್ಲದೆ ಸೂಕ್ಷ್ಮಜೀವಿಗಳು ಅಭಿವೃದ್ಧಿ ಹೊಂದಲು ಸುಲಭವಾಗುತ್ತದೆ. ಆ ಕಾರಣಕ್ಕೆ ಮಳೆಗಾಲದಲ್ಲಿ ಫಂಗಲ್ ಇನ್‌ಫೆಕ್ಷನ್ ಅಥವಾ ಶೀಲಿಂಧ್ರಗಳು ಸೋಂಕು ಹೆಚ್ಚು ಪ್ರಚಲಿತವಾಗಿದೆ.
ಫಂಗಲ್ ಇನ್‌ಫೆಕ್ಷನ್ ಕೆಲವೊಮ್ಮೆ ಅನಾನುಕೂಲ ಉಂಟು ಮಾಡಬಹುದು, ನೋವಿನಿಂದ ಕೂಡಿರಬಹುದು ಮತ್ತು ಸಾಮಾನ್ಯವಾಗಿ ಚಿಕಿತ್ಸೆ ನೀಡಲು ಕಷ್ಟಕರವಾಗಬಹುದು. ಆ ಕಾರಣಕ್ಕೆ ಮಳಗಾಲ ಪೂರ್ತಿ ಆರೋಗ್ಯವಾಗಿ, ಆರಾಮವಾಗಿ ಇರಲು ಶೀಲಿಂಧ್ರ ಸೋಂಕುಗಳ ವಿರುದ್ಧ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ.
ಮಳೆಗಾಲದಲ್ಲಿ ಫಂಗಲ್ ಇನ್‌ಫೆಕ್ಷನ್ ತಡೆಗಟ್ಟಲು ಸಲಹೆಗಳು ಇಲ್ಲಿವೆ
ವೈಯಕ್ತಿಕ ನೈರ್ಮಲ್ಯ
ಶೀಲಿಂಧ್ರ ಸೋಂಕು ಅಥವಾ ಫಂಗಲ್ ಇನ್‌ಫೆಕ್ಷನ್ ಹರಡದಂತೆ ತಡೆಯಲು ಉತ್ತಮ ವೈಯಕ್ತಿಕ ನೈಮರ್ಲ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯ. ನಿಯಮಿತವಾಗಿ ಆಂಟಿಫಂಗಲ್ ಸೋಪು ಅಥವಾ ಹ್ಯಾಂಡ್‌ವಾಶ್‌ನಿಂದ ನಿಮ್ಮ ಕೈಗಳನ್ನು ತೊಳೆಯುತ್ತಿರಿ. ಮಳೆ ನೀರಿನಲ್ಲಿ ನೆನೆದು ಬಂದ ಮೇಲೆ ಸ್ನಾನ ಮಾಡುವುದು, ಕೈ ಕಾಲು ತೊಳೆಯುವುದನ್ನು ಮರೆಯದಿರಿ. ಮಳೆಗಾಲದಲ್ಲಿ ಉಗುರು ಸಂಧಿಯಲ್ಲಿ ಸೋಂಕುಗಳು ಸೇರಿಕೊಳ್ಳುವ ಸಾಧ್ಯತೆ ಅಧಿಕ. ಹಾಗಾಗಿ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ ಹಾಗೂ ಸ್ವಚ್ಛವಾಗಿರಿಸಿಕೊಳ್ಳಿ. ಸಾಧ್ಯವಾದಷ್ಟು ಗಾಯಗಳಾಗದಂತೆ ನೋಡಿಕೊಳ್ಳಿ.
ಆರಾಮದಾಯಕ ಉಡುಪು
ಹತ್ತಿ ಅಥವಾ ಲೆನಿನ್‌ನಂತಹ ಗಾಳಿಯಾಡಬಲ್ಲ, ಸಡಿಲವಾಗಿರುವ ಬಟ್ಟೆಗಳನ್ನು ಧರಿಸಿ. ಗಾಳಿ ಹರಡುವಂತಹ ಬಟ್ಟೆಗಳು ಚರ್ಮದ ತೇವಾಂಶ ಹೀರಿಕೊಳ್ಳಲು ಹಾಗೂ ಒಣಗಲು ಸಹಾಯ ಮಾಡುತ್ತವೆ. ಇದರಿಂದ ಚರ್ಮವನ್ನು ಶಿಲೀಂಧ್ರದಿಂದ ರಕ್ಷಿಸುತ್ತದೆ.
ಚರ್ಮ ಒದ್ದೆಯಾಗುವುದನ್ನು ತಡೆಯಿರಿ
ಚರ್ಮ ಒದ್ದೆಯಾಗಿರುವುದು, ಚರ್ಮದ ಮೇಲಿನ ಅತಿಯಾದ ತೇವಾಂಶವು ಶಿಲೀಂಧ್ರದ ಸಂಗ್ರಹಕ್ಕೆ ಕಾರಣವಾಗುತ್ತದೆ. ಮಳೆಯಲ್ಲಿ ಆಕಸ್ಮಾತ್ ಆಗಿ ನೆನೆದರೆ ಸಂಪೂರ್ಣ ದೇಹವನ್ನು ಒರೆಸಿಕೊಳ್ಳಿ. ತಲೆಕೂದಲು ಹಾಗೂ ಚರ್ಮದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಕಂಕುಳ, ಸ್ತನಗಳ ಕೆಳಗೆ, ತೊಡೆಸಂಧಿ, ಕೈಕಾಲಿನ ಬೆರಳುಗಳ ಸಂಧಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಯಾಕೆಂದರೆ ಇಂತಹ ಜಾಗದಲ್ಲಿ ಸೋಂಕು ತಲುಗುವ ಅಪಾಯ ಹೆಚ್ಚು.
ಸೋಂಕು ನಿವಾರಕ ಪೌಡರ್‌ಗಳನ್ನು ಬಳಸಿ
ಚರ್ಮದ ತೇವಾಂಶವನ್ನು ಹೀರಿಕೊಳ್ಳುವಂತೆ ಮಾಡಲು ಮತ್ತು ಶಿಲೀಂಧ್ರಗಳ ರಚನೆಯನ್ನು ಸೋಂಕು ನಿವಾರಕ ಪೌಡರ್‌ಗಳನ್ನು ಬಳಸಬಹುದು. ಅದರಲ್ಲೂ ಅತಿಯಾಗಿ ಬೆವರು ನಿಲ್ಲುವ ಜಾಗದಲ್ಲಿ ಇದನ್ನು ಹೆಚ್ಚು ಬಳಸಿ. ಕ್ಲೋಟ್ರಿಮಜೋಲ್ ಅಥವಾ ಮೈಕೋನಜೋಲ್ನ್ ಅಂಶ ಇರುವ ಪೌಡರ್‌ಗಳನ್ನು ಹೆಚ್ಚು ಬಳಸಿ.
ಸಾಕಷ್ಟು ನೀರು ಕುಡಿಯಿರಿ
ಆರೋಗ್ಯಕರ ಚರ್ಮಕ್ಕಾಗಿ ಸಾಕಷ್ಟು ನೀರು ಕುಡಿಯಿರಿ. ದೇಹದಿಂದ ಕಲ್ಮಷಗಳನ್ನು ಹೊರ ಹಾಕಲು ಇದು ಸಹಾಯ ಮಾಡುತ್ತದೆ. ವಿಟಮಿನ್ ಹಾಗೂ ಖನಿಜಾಂಶ ಇರುವ ಆರೋಗ್ಯಕರ ಡಯೆಟ್ ಕ್ರಮ ಪಾಲಿಸಿ. ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಸೋಂಕು ಹರಡುವುದನ್ನು ತಡೆಯಲು ಇದು ಸಹಕಾರಿ.