Dengue Alert: ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳು; ಆರಂಭಿಕ ಹಂತದ ರೋಗಲಕ್ಷಣಗಳ ಕುರಿತು ನಿರ್ಲಕ್ಷ್ಯ ಮಾಡದಿರಿ; ಮುನ್ನೆಚ್ಚರಿಕೆ ಇರಲಿ
Jul 19, 2023 10:54 AM IST
ಹೆಚ್ಚುತ್ತಿರುವ ಡೆಂಗಿ ಪ್ರಕರಣ; ಮುನ್ನೆಚ್ಚರಿಕೆ ಇರಲಿ
- Early Signs Of Dengue Should Not Ignore: ಮಳೆರಾಯನ ಆಗಮನ, ಬದಲಾಗುತ್ತಿರುವ ವಾತಾವರಣವು ಭಾರತದಲ್ಲಿ ಡೆಂಗಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಜ್ವರ, ದದ್ದು ಉಂಟಾಗುವುದು, ಕಣ್ಣುಗಳ ಹಿಂಭಾಗದಲ್ಲಿ ನೋವು ಕಾಣಿಸುವುದು ಸೇರಿದಂತೆ ಈ ಕೆಲವು ಪ್ರಾಥಮಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ.
ಕಳೆದ ಕೆಲವು ತಿಂಗಳಿನಿಂದ ದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು, ವಯಸ್ಕರು ಮತ್ತು ಹಿರಿ ವಯಸ್ಸಿನವರಲ್ಲಿ ಡೆಂಗಿ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಡೆಂಗಿಯು ಈಡಿಸ್ಟ್ ಈಜಿಪ್ಟಿ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ರಾತ್ರಿಗಿಂತ ಹಗಲಿನಲ್ಲಿ ವೇಳೆಯಲ್ಲೇ ಸೊಳ್ಳೆಯ ದಾಳಿ ಹೆಚ್ಚಿರುತ್ತದೆ. ಹಾಗಾಗಿ ಜನರು ತುಂಬು ತೋಳಿನ ಬಟ್ಟೆಗಳನ್ನು ಧರಿಸುವುದು, ಸೊಳ್ಳೆಗಳ ಉತ್ಪತ್ತಿಯನ್ನು ತಪ್ಪಿಸಲು ನೀರು ನಿಲ್ಲುವುದನ್ನು ತಡೆಯುವುದು, ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಪರದೆಗಳನ್ನು ಬಳಸುವುದನ್ನು ಅಭ್ಯಾಸ ಮಾಡಬೇಕು.
ಡೆಂಗಿ ವೈರಸ್‌ಗಳು DENV-1, DENV-2, DENV-3 ಮತ್ತು DENV-4 ಎಂಬ ನಾಲ್ಕು ಸಿರೊಟೈಪ್‌ಗಳನ್ನು ಹೊಂದಿವೆ. ಪ್ರತಿಯೊಂದು ಸಿರೊಟೈಪ್‌ಗಳು ಭಿನ್ನ ತೀವ್ರತೆಯದ್ದಾಗಿವೆ. DENV-2 ಅನ್ನು ಎಲ್ಲಕ್ಕಿಂತ ಮಾರಕ ಎಂದು ಪರಿಗಣಿಸಲಾಗಿದೆ. DENV-4 ಕೂಡ ತೀವ್ರವಾದ ತೊಡಕುಗಳನ್ನು ಉಂಟು ಮಾಡಬಹುದಾದ ಮತ್ತು ಡೆಂಗಿ ಹೆಮರಾಜಿಕ್ ಜ್ವರದ ಅಪಾಯವನ್ನು ಹೆಚ್ಚಿಸುತ್ತದೆ.
ಬೆಂಗಳೂರಿನಲ್ಲೂ ಹೆಚ್ಚುತ್ತಿದೆ ಡೆಂಗಿ
ʼಡೆಂಗಿ ಪ್ರಕರಣಗಳ ಹೆಚ್ಚಳವು ಕಳವಳಕಾರಿಯಾಗಿದೆ. ನಮ್ಮ ಒಪಿಡಿಯಲ್ಲಿ ಡೆಂಗಿಗೆ ಪರೀಕ್ಷೆಗೆ ಬರುವ ವ್ಯಕ್ತಿಗಳ ಸಂಖ್ಯೆಯಲ್ಲಿ ದಿನಕ್ಕೆ ಸುಮಾರು 20 ರಿಂದ 40 ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ನಾವು ಗಮನಿಸಿದ್ದೇವೆ. ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಈಗ ಶೇ 20 ರಿಂದ 30 ರಷ್ಟು ಏರಿಕೆಯಾಗಿದೆ. ವಯಸ್ಕರು ಡೆಂಗಿಯ ಭಿನ್ನ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಆರಂಭಿಕ ಹಂತದಲ್ಲಿ ಪತ್ತೆ ಮಾಡಿ, ಪರೀಕ್ಷೆ ಮಾಡಿಸುವುದು ಮುಖ್ಯವಾಗುತ್ತದೆʼ ಎನ್ನುತ್ತಾರೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಡಾ. ನಿಧಿನ್ ಮೋಹನ್.
ಮೊದಲ ಬಾರಿ ವೈರಸ್ ಸೋಂಕಿಗೆ ಒಳಗಾದ ಹಲವರು ಡೆಂಗಿಯ ಯಾವುದೇ ಸಂಕೇತಗಳು ಹಾಗೂ ರೋಗಲಕ್ಷಣಗಳನ್ನು ವರದಿ ಮಾಡುವುದಿಲ್ಲ. ಮೊದಲ ಬಾರಿ ಡೆಂಗಿ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯಲ್ಲಿ ಹಿಂದಿನ ದಾಳಿ ಸೋಂಕಿಗೆ ಒಳಗಾದ ವ್ಯಕ್ತಿಗಿಂತ ಎರಡು ಪಟ್ಟು ಎರಡನೇ ಬಾರಿ ಡೆಂಗಿ ರೋಗಲಕ್ಷಣಗಳು ಕಾಣಿಸುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು ಮುಖ್ಯ ಮತ್ತು ಡೆಂಗಿಯ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷ್ಯ ಮಾಡಬಾರದು.
ʼಜನರು ವಿವರಿಸಲು ಸಾಧ್ಯವಾಗದಂತಹ ಜ್ವರ, ಸಾಮಾನ್ಯವಾಗಿ ಅಧಿಕ ಜ್ವರ, ನಿರಂತರ ತಲೆನೋವು, ಕಣ್ಣು ನೋವು(ಕಣ್ಣಿನ ರೆಪ್ಪೆಗಳ ಸುತ್ತ), ಮೈಕೈ ನೋವು, ದೇಹದ ಕೆಲವು ಭಾಗಗಳಲ್ಲಿ ಉರಿಯೂತ, ಕೀಲುನೋವು ಮತ್ತು ಅನಾರೋಗ್ಯ ಕಾಣಿಸಿಕೊಂಡಾಗ ದೇಹದಲ್ಲಿ ದದ್ದು ಉಂಟಾಗುವುದು ಇಂತಹ ವಿಷಯದಲ್ಲಿ ಜಾಗರೂಕರಾಗಿರಬೇಕು. ನಿರಂತರ ವಾಂತಿ, ಒಸಡುಗಳಲ್ಲಿ ರಕ್ತಸ್ರಾವ, ಮೂಗೇಟು, ಕಿಬ್ಬೊಟ್ಟೆಯ ನೋವು ಮುಂತಾದವುಗಳು ಗಮನಿಸಬೇಕಾದ ಇತರ ಸೂಚಕಗಳಾಗಿವೆ. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಕಡ್ಡಾಯʼ ಎನ್ನುತ್ತಾರೆ ಡಾ. ಮೋಹನ್.
ಡೆಂಗಿಯ ಕೆಲವು ಆರಂಭಿಕ ಲಕ್ಷಣಗಳು ಹೀಗಿವೆ
ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಕೇರ್ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಡಾ. ಎಂ. ಎ. ಮುಕ್ಸಿತ್ ಕ್ವಾದ್ರಿ ಡೆಂಗಿನ ಆರಂಭಿಕ ಹಂತದ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಅಲ್ಲದೆ ಇದನ್ನು ನಿರ್ಲಕ್ಷ್ಯ ಮಾಡಬೇಡಿ ಎಂದೂ ಸಲಹೆ ನೀಡಿದ್ದಾರೆ.
ಜ್ವರ
ಡೆಂಗಿ ಸೋಂಕಿ ಪ್ರಾಥಮಿಕ ಲಕ್ಷಣ ಎಂದರೆ ಜ್ವರ. ಸಾಮಾನ್ಯವಾಗಿ ಇದು ಇದ್ದಕ್ಕಿದಂತೆ ಕಾಣಿಸಿಕೊಂಡು ಹಲವು ದಿನಗಳವರೆಗೆ ಇರಬಹುದು. ಅತಿಯಾದ ಜ್ವರದ ಜೊತೆಗೆ ತೀವ್ರ ತಲೆನೋವು, ಕೀಲು, ಸ್ನಾಯುನೋವು ಮತ್ತು ಆಯಾಸವನ್ನೂ ಉಂಟು ಮಾಡಬಹುದು. ಈ ಜ್ವರದಂತಹ ರೋಗಲಕ್ಷಣಗಳನ್ನು ಸಾಮಾನ್ಯ ಕಾಯಿಲೆಗಳಂತೆ ತಪ್ಪಾಗಿ ಗ್ರಹಿಸಬಹುದು. ಆದರೆ ಡೆಂಗಿ ಸಾಧ್ಯತೆಯನ್ನು ಪರಿಗಣಿಸುವುದು ಮುಖ್ಯವಾಗುತ್ತದೆ.
ದದ್ದು
ಡೆಂಗಿಯ ಇನ್ನೊಂದು ವಿಶಿಷ್ಟ ಲಕ್ಷಣ ಎಂದರೆ ದದ್ದು ಉಂಟಾಗುವುದು. ಇದು ಸಾಮಾನ್ಯವಾಗಿ ಜ್ವರ ಬಂದ ಎರಡದಿಂದ ಐದು ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಇದು ವ್ಯಾಪಕವಾಗಿ ಹರಡಬಹುದು. ಸಾಮಾನ್ಯವಾಗಿ ಚರ್ಮದ ಮೇಲೆ ಸಣ್ಣ ಕೆಂಪು ಕಲೆಗಳು ಅಥವಾ ತೇಪೆಯಂತೆ ಕಾಣಿಸಬಹುದು. ಜ್ವರದ ಜೊತೆಗೆ ದದ್ದು ಉಂಟಾದಾಗ ಗಮನ ಹರಿಸುವುದು ಅತ್ಯಗತ್ಯ. ಏಕೆಂದರೆ ಇದು ಡೆಂಗಿಯನ್ನು ಸೂಚಿಸುತ್ತದೆ.
ಕಣ್ಣಿನ ಹಿಂಭಾಗದಲ್ಲಿ ನೋವು, ವಾಂತಿ, ಮೂಗು, ವಸಡಿನಿಂದ ರಕ್ತಸ್ರಾವ
ಡೆಂಗಿ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಕಣ್ಣುಗಳ ಹಿಂಭಾಗದಲ್ಲಿ ನೋವು, ವಾಕರಿಕೆ, ವಾಂತಿ ಮತ್ತು ಮೂಗು ಅಥವಾ ಒಸಡುಗಳಿಂದ ಸಣ್ಣಗೆ ರಕ್ತಸ್ರಾವವಾಗಬಹುದು. ತೀವ್ರತರದ ಪ್ರಕರಣಗಳಲ್ಲಿ ಡೆಂಗಿ ಹೆಮರಾಜಿಕ್ ಜ್ವರ ಅಥವಾ ಡೆಂಗಿ ಶಾಕ್ ಸಿಂಡ್ರೋಮ್ ಪ್ರಗತಿ ಹೊಂದಬಹುದು. ಇದಕ್ಕೆ ತಕ್ಷಣಕ್ಕೆ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ.
ವಿಭಾಗ