Heart Attack: ಯುವಕರೇ ಎಚ್ಚರ, ಹೆಚ್ಚುತ್ತಿದೆ ಹೃದಯಾಘಾತ; ನಿರ್ಲಕ್ಷ್ಯ ಮಾಡದಿರಿ; ಹೃದಯದ ಸಮಸ್ಯೆ ಹೆಚ್ಚಲು ಇವೂ ಕಾರಣ
Jun 12, 2023 10:00 AM IST
ಯುವಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತ, ಎರಲಿ ಎಚ್ಚರ
- Raising Heart Attack on Youth: ಇತ್ತೀಚೆಗೆ 30 ರಿಂದ 40 ವರ್ಷ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಮಧ್ಯ ವಯಸ್ಕರ ಧಿಡೀರ್ ಸಾವು ಆತಂಕವನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಹಾಗಾದರೆ ಈ ವಯಸ್ಸಿನಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಲು ಕಾರಣವೇನು?
ಹಿಂದೆಲ್ಲಾ ಹೃದಯಾಘಾತವನ್ನು ʼವೃದ್ಧರ ಕಾಯಿಲೆʼ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಸಾಮಾನ್ಯವಾಗಿ 60,70 ವರ್ಷ ಮೇಲ್ಪಟ್ಟವರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದರು. ಅಪರೂಪದಲ್ಲಿ ಅಪರೂಪ ಎಂಬಂತೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದರು.
ಆದರೆ ಈಗ ಇದು ಸಾಮಾನ್ಯ ಎಂಬಂತಾಗಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚು ಹೃದಯಾಘಾತಕ್ಕೆ ಒಳಾಗುತ್ತಿದ್ದಾರೆ. ಇದು ಸಾಮಾನ್ಯ ಜನರನ್ನು ಮಾತ್ರವಲ್ಲ, ವೈದ್ಯಲೋಕವನ್ನೂ ತಲ್ಲಣಗೊಳಿಸಿದೆ. ತಜ್ಞರ ಪ್ರಕಾರ ಒತ್ತಡ, ಜಡ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ನಿದ್ರೆಯ ಕೊರತೆಯಿಂದಾಗಿ ಹೃದಯದ ಮೇಲಾಗುವ ಪರಿಣಾಮವು ಹೃದಯಾಘಾತಕ್ಕೆ ಕಾರಣವಾಗಬಹುದು.
ಯುವಜನರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತಿದೆ. ಧೂಮಪಾನ, ತಂಬಾಕು ಸೇವನೆ, ಮಾದಕ ವ್ಯಸನ ಮುಂತಾದ ಕೆಟ್ಟ ಅಭ್ಯಾಸಗಳು ಇದಕ್ಕೆ ಇನ್ನಷ್ಟು ಕೊಡುಗೆ ಕೊಡುತ್ತಿದೆ. ಆ ಕಾರಣಕ್ಕೆ ಹೃದಯದ ಸಮಸ್ಯೆಗಳನ್ನು ನಿಯಂತ್ರಿಸಲು ಸಮತೋಲಿತ ಜೀವನಶೈಲಿಯನ್ನು ಅನುಸರಿಸುವುದು ನಿರ್ಣಾಯಕವಾಗಿದೆ.
ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್ ವಿಭಾಗಕ್ಕೆ ಸಂದರ್ಶನ ನೀಡಿದ ಮುಂಬೈನ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಹೃದೋಗ ತಜ್ಞ ಡಾ. ಬಿಪಿನ್ ಚಂದ್ರ ಭಾಮ್ರೆ ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಹಿಂದಿನ 4 ಕಾರಣಗಳನ್ನು ಎತ್ತಿ ತೋರಿಸಿದ್ದಾರೆ.
ಮಧುಮೇಹ
ರಕ್ತದಲ್ಲಿನ ಅಧಿಕ ಸಕ್ಕರೆಯ ಮಟ್ಟವು ದೇಹದ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ ಮತ್ತು ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ ಮತ್ತು ಸುಗಮ ರಕ್ತಸಂಚಾರಕ್ಕೆ ಅಡ್ಡಿಗೊಳಿಸುತ್ತವೆ. ಇದರಿಂದ ಹೃದಯಕ್ಕೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡವು ಹೃದಯದ ಸ್ನಾಯುಗಳನ್ನು ದಪ್ಪವಾಗಿಸುತ್ತದೆ. ಇದರಿಂದ ಹೃದಯದ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ. ಇದರಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.
ಬೊಜ್ಜು
ಅತಿ ತೂಕ ಹಾಗೂ ಬೊಜ್ಜು ಹೃದಯ ಆರೋಗ್ಯಕ್ಕೆ ಮಾರಕ. ಮದ್ಯಪಾನ ಹಾಗೂ ಅಸರ್ಮಪಕ ನಿದ್ದೆಯು ಯುವಕರಲ್ಲಿ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ, ಆ ಕಾರಣಕ್ಕೆ ಸಾಧ್ಯವಾದಷ್ಟು ತೂಕ ಕಡಿಮೆ ಮಾಡಿಕೊಳ್ಳುವುದು ಹಾಗೂ ಹೃದಯದ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸುವುದು ಮುಖ್ಯವಾಗುತ್ತದೆ.
ಧೂಮಪಾನ
ಯುವ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಲು ಪ್ರಮುಖ ಅಪಾಯಕಾರಿ ಕಾರಣ ಧೂಮಪಾನ ಹಾಗೂ ಧೂಮಪಾನದ ಹೊಗೆ ಸೇವನೆ. ಸಿಗರೇಟಿನ ಹೊಗೆಯಲ್ಲಿನ ರಾಸಾಯನಿಕಗಳು ಅಪಧಮನಿಯೊಳಗಿನ ರಕ್ತ ದಪ್ಪವಾಗಲು ಮತ್ತು ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ.
ಹೀಗಿರಲಿ ಜೀವನಶೈಲಿ
ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಡಾ. ಬಿಪೀನ್ ಚಂದ್ರ ಭಾಮ್ರೆ ಸಲಹೆ ನೀಡುವುದು ಹೀಗೆ ʼಹೃದಯದ ಆರೋಗ್ಯವನ್ನು ಸುಧಾರಿಸಲು ಆರೋಗ್ಯವಾಗಿರುವುದು ಹಾಗೂ ಹೃದಯಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಮಾಡಲು ಪ್ರಯತ್ನಿಸಿ ಮತ್ತು ದಿನದಲ್ಲಿ ಕನಿಷ್ಠ 30 ನಿಮಿಷ ದೈಹಿಕ ಚಟುವಟಿಕೆಗೆ ಸಮಯ ಕೊಡಿ. ಹೆಚ್ಚು ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ. ಜಂಕ್, ಎಣ್ಣೆ ಪದಾರ್ಥ, ಸಂಸ್ಕರಿಸಿದ ಹಾಗೂ ರೆಡಿಮೇಡ್ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟೂ ತಪ್ಪಿಸಿ. ಉಪ್ಪಿನಾಂಶ ಸೇವನೆ ಕಡಿಮೆ ಮಾಡಿ. ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಿ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿ. ಮಧುಮೇಹ ಹಾಗೂ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧಿಗಳ ಸೇವನೆಯನ್ನು ತಪ್ಪಿಸಬೇಡಿ. ಯೋಗ ಮತ್ತು ಧ್ಯಾನ ಮಾಡುವ ಮೂಲಕ ಒತ್ತಡದಿಂದ ಮುಕ್ತರಾಗಿ ಮತ್ತು ವೈದ್ಯರ ಸಲಹೆಯಂತೆ ಹೃದಯ ತಪಾಸಣೆ ಮಾಡಿಸಿʼ ಎನ್ನುತ್ತಾರೆ.
ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಸುಲಭ ಮಾರ್ಗಗಳನ್ನು ಅನುಸರಿಸಿ, ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ವಿಭಾಗ