logo
ಕನ್ನಡ ಸುದ್ದಿ  /  ಜೀವನಶೈಲಿ  /  ಧೂಮಪಾನಕ್ಕಿಂತಲೂ ಅಪಾಯ ದೀರ್ಘಕಾಲ ಕುಳಿತು ಕೆಲಸ ಮಾಡುವುದು; ಡೆಸ್ಕ್‌ ವರ್ಕ್ ಇರುವವರು ಗಮನಿಸಬೇಕಾದ ವಿಚಾರವಿದು

ಧೂಮಪಾನಕ್ಕಿಂತಲೂ ಅಪಾಯ ದೀರ್ಘಕಾಲ ಕುಳಿತು ಕೆಲಸ ಮಾಡುವುದು; ಡೆಸ್ಕ್‌ ವರ್ಕ್ ಇರುವವರು ಗಮನಿಸಬೇಕಾದ ವಿಚಾರವಿದು

Reshma HT Kannada

Sep 09, 2024 07:52 AM IST

google News

ದೀರ್ಘಕಾಲ ಕುಳಿತಿರುವುದು ಧೂಮಪಾನದಷ್ಟೇ ಅಪಾಯಕಾರಿ

    • ನೀವು ದೀರ್ಘಾವಧಿಯವರೆಗೆ ಕುಳಿತ ಕೆಲಸ ಮಾಡುತ್ತೀರಾ? 8 ಗಂಟೆಗಳಿಂತಲೂ ಹೆಚ್ಚು ಕಾಲ ಕುಳಿತಿರುವುದು ಧೂಮಪಾನ ಮಾಡುವಷ್ಟೇ ಅಪಾಯಕಾರಿ, ಇದರಿಂದ ಧೂಮಪಾನ ಮಾಡದೇ ಇದ್ದರೂ ನೀವು ಅದರಷ್ಟೇ ಅಪಾಯಗಳನ್ನು ಎದುರಿಸಬೇಕಾಗಬಹುದು ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ವೈದ್ಯರು ಎಚ್ಚರಿಸಿದ್ದಾರೆ. ಹಾಗಾದರೆ ದೀರ್ಘಕಾಲ ಕುಳಿತು ಕೆಲಸ ಮಾಡುವುದು ನಿಜಕ್ಕೂ ಅಪಾಯಕಾರಿಯೇ? 
ದೀರ್ಘಕಾಲ ಕುಳಿತಿರುವುದು ಧೂಮಪಾನದಷ್ಟೇ ಅಪಾಯಕಾರಿ
ದೀರ್ಘಕಾಲ ಕುಳಿತಿರುವುದು ಧೂಮಪಾನದಷ್ಟೇ ಅಪಾಯಕಾರಿ (PC: Canva)

ಇತ್ತೀಚಿನ ದಿನಗಳಲ್ಲಿ ಡೆಸ್ಕ್‌ ವರ್ಕ್ ಕಾರಣದಿಂದ ಹಲವರು ಗಂಟೆಗಟ್ಟಲೇ ಕುಳಿತಲ್ಲೇ ಕುಳಿತಿರುತ್ತಾರೆ. ಇಂತಹ ಜಡಜೀವನಶೈಲಿಯು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎನ್ನುತ್ತಿವೆ ಅಧ್ಯಯನಗಳು. ದೀರ್ಘಕಾಲ ಕುಳಿತು ಕೆಲಸ ಮಾಡುವುದು ಧೂಮಪಾನದಷ್ಟೇ ಅಪಾಯಕಾರಿ ಎಂಬ ಸಂಗತಿಯೊಂದು ಇದೀಗ ಹೊರ ಬಿದ್ದಿದೆ.

ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಪ್ರಾಧ್ಯಾಪಕರಾದ ಡಾ. ಐ-ಮಿನ್ ಲೀ ಅವರ ಪ್ರಕಾರ ಧೂಮಪಾನ ಆರೋಗ್ಯಕ್ಕೆ ಎಷ್ಟು ಹಾನಿಕರವೋ ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಅಥವಾ ಸುಮ್ಮನೆ ಹೆಚ್ಚು ಕಾಲ ಕುಳಿತಿರುವುದು ಕೂಡ ಆರೋಗ್ಯಕ್ಕೆ ಅಷ್ಟೇ ಹಾನಿಕರ. ಕುಳಿತಲ್ಲೇ ಕುಳಿತಿರುವುದು ಬಹಳ ಅಪಾಯಕಾರಿ ಎಂದು ಮಿನ್ ಲೀ ಎಚ್ಚರಿಸಿದ್ದಾರೆ. ಅಲ್ಲದೇ ಈ ವಿಷಯದ ಕುರಿತಾಗಿ ಇವರು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ನಿಷ್ಕ್ರೀಯತೆ ಅಥವಾ ಜಡಜೀವನಶೈಲಿಯು ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ಕಂಡುಕೊಂಡ ಮೊದಲಿಗ ಇವರು.

ದೀರ್ಘಾವಧಿಯವರೆಗೆ ಕುಳಿತು ಕೆಲಸ ಮಾಡುವುದು ನಿಜಕ್ಕೂ ಅಪಾಯವೇ?

ಡಾ.ಮಿನ್ ಲೀ ಅವರ ಹೇಳಿಕೆಯ ನಂತರ ನಿಜಕ್ಕೂ ಕುಳಿತಲ್ಲೇ ಕುಳಿತುಕೊಳ್ಳುವುದು ಅಥವಾ ಡೆಸ್ಕ್ ವರ್ಕ್ ಮಾಡುವುದು ಧೂಮಪಾನದಷ್ಟೇ ಹಾನಿಕರವೇ ಎಂಬ ವಿಚಾರ ಇದೀಗ ಚರ್ಚೆಯಾಗುತ್ತಿದೆ. ಹಾಗಾದರೆ ಇದು ನಿಜವೇ, ಜಡಜೀವನಶೈಲಿ ಅಷ್ಟೊಂದು ಅಪಾಯವೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ತಜ್ಞರು ಏನಂತಾರೆ ನೋಡಿ.

ಧೂಮಪಾನದ ಆರೋಗ್ಯ ಅಪಾಯಗಳು ಹಾಗೂ ಕುಳಿತುಕೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳನ್ನು ಒಂದಕ್ಕೊಂದು ಹೋಲಿಸುವುದು ಖಂಡಿತ ಸಂಕೀರ್ಣ ವಿಚಾರ. ಏಕೆಂದರೆ ಈ ಎರಡರಿಂದಲೂ ಆರೋಗ್ಯದ ಮೇಲೆ ಭಿನ್ನ ಪರಿಣಾಮ ಬೀರುತ್ತದೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಈ ಎರಡೂ ಕಾರಣಗಳಿಂದ ಆರೋಗ್ಯದ ಮೇಲೆ ಕೆಲವು ಸಂಭಾವ್ಯ ಅಪಾಯಗಳಾಗುತ್ತವೆ ಎಂದು ಹೇಳಲಾಗುತ್ತದೆ.

8 ಗಂಟೆಗೂ ಹೆಚ್ಚು ಕಾಲ ಕುಳಿತು ಕೆಲಸ ಮಾಡುವುದರ ಅಪಾಯ

ದಿನದಲ್ಲಿ 6 ರಿಂದ 8 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಜರ್ನಲ್ ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಮೆಟಾ-ವಿಶ್ಲೇಷಣೆಯು ದೀರ್ಘಕಾಲ ಕುಳಿತುಕೊಳ್ಳುವುದು ಎಲ್ಲಾ ವಿವಿಧ ಕಾರಣಗಳಿಂದ ಬರುವ ಸಾವು, ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್ ಸಂಭವ ಮತ್ತು ಟೈಪ್ 2 ಮಧುಮೇಹದಂತಹ ಅಪಾಯಗಳನ್ನು ಹೆಚ್ಚಿಸಬಹುದು ಸೂಚಿಸಿದೆ‘ ಎಂದು ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್, ಎಂಡೋಕ್ರೈನಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ ಮೋಹಿತ್ ಶರ್ಮಾ ಹೇಳುತ್ತಾರೆ.

ದಿನಕ್ಕೆ ಸುಮಾರು 60-75 ನಿಮಿಷಗಳ ಮಧ್ಯಮದಿಂದ ತೀವ್ರತೆಯ ದೈಹಿಕ ಚಟುವಟಿಕೆಯು ದೀರ್ಘಕಾಲದ ಕುಳಿತುಕೊಳ್ಳುವಿಕೆಗೆ ಸಂಬಂಧಿಸಿದ ಅಪಾಯಗಳನ್ನು ಸರಿದೂಗಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿದ್ದನ್ನು ಅವರು ಉಲ್ಲೇಖಿಸುತ್ತಾರೆ.

ದಿನಕ್ಕೆ 8 ಗಂಟೆಗಳಿಗಿಂತಲೂ ಹೆಚ್ಚು ಕಾಲ ಕುಳಿತುಕೊಳ್ಳುವವರಲ್ಲಿ ಶೇ 34ರಷ್ಟು ಮರಣದ ಅಪಾಯ ಹೆಚ್ಚು. ಆದರೆ ಧೂಮಪಾನ ಮಾಡದವರಿಗೆ ಹೋಲಿಸಿದರೆ ಪ್ರತಿದಿನ 1-5 ಸಿಗರೇಟ್ ಸೇದುವುದು ಶೇ 40 ರಿಂದ 50 ರಷ್ಟು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ‘ ಎಂದು ಡಾ. ಮೋಹಿತ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ದಿನದಲ್ಲಿ 8 ಗಂಟೆಗಳಿಗೂ ಹೆಚ್ಚು ಕುಳಿತುಕೊಳ್ಳುವುದು, ವಾರಕ್ಕೆ 10-15 ಸಿಗರೇಟ್‌ ಸೇದುವುದು ಈ ಎರಡೂ ಮರಣದ ಅಪಾಯವನ್ನು ಹೆಚ್ಚಿಸಬಹುದು‘ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಧೂಮಪಾನವು ಸಾಮಾನ್ಯವಾಗಿ ಹೆಚ್ಚು ತಕ್ಷಣದ ಮತ್ತು ತೀವ್ರವಾದ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡುತ್ತದೆ. ದೀರ್ಘಾವಧಿಯಲ್ಲಿ ಕುಳಿತು ಕೆಲಸ ಮಾಡುವುದು ದೀರ್ಘಕಾಲದ, ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ.

ಹೃದಯದ ಸಮಸ್ಯೆ ಹೆಚ್ಚಬಹುದು

ಎರಡೂ ನಡವಳಿಕೆಗಳು ಆರೋಗ್ಯವನ್ನು ಗಮನಾರ್ಹವಾಗಿ ಹಾನಿಗೊಳಿಸುತ್ತವೆಯಾದರೂ, ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಜೀವನಶೈಲಿಯ ಬದಲಾವಣೆಗಳೊಂದಿಗೆ ಪ್ರತಿಯೊಂದನ್ನು ಪರಿಹರಿಸುವುದು ಅತ್ಯಗತ್ಯ" ಎಂದು ಡಾ. ಮೋಹಿತ್ ಹೇಳುತ್ತಾರೆ.

“ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದರಿಂದ ಸಾಮಾನ್ಯವಾಗಿ ಕುಳಿತುಕೊಳ್ಳುವುದನ್ನು ಧೂಮಪಾನಕ್ಕೆ ಹೋಲಿಸಲಾಗುತ್ತದೆ. ದೀರ್ಘಕಾಲದ ದೈಹಿಕ ನಿಷ್ಕ್ರಿಯತೆಯು ಮೆಟಾಬಾಲಿಕ್ ಸಿಂಡ್ರೋಮ್, ಅಧಿಕ ರಕ್ತದೊತ್ತಡ, ಮಧುಮೇಹ, ಡಿಸ್ಲಿಪಿಡೆಮಿಯಾ, ಬೊಜ್ಜು, ಹೈಪೋಥೈರಾಯ್ಡಿಸಮ್ ಮತ್ತು ಮೈಕ್ರೊವಾಸ್ಕುಲರ್ ಮತ್ತು ಮ್ಯಾಕ್ರೋವಾಸ್ಕುಲರ್ ತೊಡಕುಗಳಾದ ಪರಿಧಮನಿಯ ಕಾಯಿಲೆ ಮತ್ತು ಪಾರ್ಶ್ವವಾಯು ಸೇರಿದಂತೆ ಹಲವಾರು ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ದೆಹಲಿಯ ಸಫ್ದರ್ಜ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರೀತಿ ಗುಪ್ತಾ ಹೇಳಿದರು.

ಇನ್ನೊಂದು ದೊಡ್ಡ ಕಾಳಜಿಯೆಂದರೆ LDL ಕೊಲೆಸ್ಟ್ರಾಲ್‌ನ ಹೆಚ್ಚಳ, ಇದನ್ನು ಸಾಮಾನ್ಯವಾಗಿ 'ಕೆಟ್ಟ' ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ, ಇದು ದೀರ್ಘಾವಧಿಯ ದೈಹಿಕ ನಿಷ್ಕ್ರಿಯತೆಯ ಕಾರಣದಿಂದಾಗಿ. ಹೆಚ್ಚಿದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೃದಯರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ, ”ಎಂದು ಅವರು ಹೇಳಿದರು.

ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು, ಸಕ್ರಿಯವಾಗಿರಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ ಎಂಬುದು ತಜ್ಞರು ಅಭಿಪ್ರಾಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ