ಬೇಸಿಗೆಯಲ್ಲಿ ಎಷ್ಟು ಲೀಟರ್ ನೀರು ಕುಡಿಯವುದು ಆರೋಗ್ಯಕ್ಕೆ ಉತ್ತಮ, ನೀರು ಕುಡಿಯದೇ ಇದ್ರೆ ಏನಾಗುತ್ತೆ, ಇಲ್ಲಿದೆ ಉತ್ತರ
Apr 11, 2024 05:40 PM IST
ಬೇಸಿಗೆಯಲ್ಲಿ ಎಷ್ಟು ಲೀಟರ್ ನೀರು ಕುಡಿಯವುದು ಆರೋಗ್ಯಕ್ಕೆ ಉತ್ತಮ, ನೀರು ಕುಡಿಯದೇ ಇದ್ರೆ ಏನಾಗುತ್ತೆ
- ನೀರು ಮನುಷ್ಯ ದೇಹಕ್ಕೆ ಅತ್ಯಗತ್ಯ. ದಿನದಲ್ಲಿ ಸರಾಸರಿ ಇಂತಿಷ್ಟು ನೀರು ಕುಡಿಯಬೇಕು ಎಂಬ ಕ್ರಮವಿದೆ. ಅದರಲ್ಲೂ ಬೇಸಿಗೆಯಲ್ಲಿ ನೀರು ಕುಡಿಯವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಹಾಗಾದ್ರೆ ಉತ್ತಮ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಎಷ್ಟು ನೀರು ಕುಡಿಯಬೇಕು, ನೀರು ಕುಡಿಯದೇ ಇದ್ದರೆ ಆಗುವ ಅಪಾಯಗಳೇನು ತಿಳಿಯಿರಿ.
ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವ ಕ್ರಮದಲ್ಲಿ ನೀರು ಕುಡಿಯುವುದು ಕೂಡ ಬಹಳ ಮುಖ್ಯವಾಗುತ್ತದೆ. ದೇಹಕ್ಕೆ ಪ್ರತಿದಿನ ಇಂತಿಷ್ಟು ನೀರಿನ ಅಗತ್ಯವಿರುತ್ತದೆ. ನೀರು ಕುಡಿಯುವುದರಿಂದ ದೇಹದ ಸಕಲ ಅಂಗಾಂಗಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ತೂಕ ಇಳಿಕೆ ಕೂಡ ಸಾಧ್ಯವಾಗುತ್ತದೆ.
ನಾವು ಪ್ರತಿದಿನ ಕುಡಿಯುವ ನೀರಿನ ಪ್ರಮಾಣವು ನಮ್ಮ ಲಿಂಗ, ಚಟುವಟಿಕೆಗಳು, ಆರೋಗ್ಯ ಪರಿಸ್ಥಿತಿಗಳು ಮತ್ತು ತೂಕದಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ದಿನಕ್ಕೆ ಗರಿಷ್ಠ 8 ಲೋಟ ಅಥವಾ 2 ಲೀಟರ್ ನೀರು ಕುಡಿಯುವುದು ಅತ್ಯಗತ್ಯ ಎನ್ನುತ್ತಾರೆ ವೈದ್ಯರು. ಆದರೆ ಕೆಲವು ಪೌಷ್ಟಿಕತಜ್ಞರು 4 ಲೀಟರ್ ನೀರಿನಷ್ಟು ಕುಡಿಯಲು ಸಲಹೆ ನೀಡುತ್ತಾರೆ.
ನಮ್ಮ ದೇಹದ ಶೇ 70ರಷ್ಟು ಭಾಗ ನೀರಿನಿಂದ ತುಂಬಿರುತ್ತದೆ. ಈ ನೀರು ಮೂತ್ರ ಮತ್ತು ಬೆವರಿನ ಮೂಲಕ ನಮ್ಮ ದೇಹದಿಂದ ವಿಷಾಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನೀರು ಕುಡಿಯುವುದು ಬಹಳ ಅವಶ್ಯ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಬೇರೆ ದಿನಗಳಿಗಿಂತ ಹೆಚ್ಚು ನೀರು ಕುಡಿಯುತ್ತೇವೆ. ಪದೇ ಪದೇ ಬಾಯಾರುವ ಕಾರಣ ದ್ರವಾಹಾರ ಸೇವನೆಗೆ ಹೆಚ್ಚು ಒತ್ತು ನೀಡುತ್ತೇವೆ. ಹಾಗಂತ ಅತಿಯಾಗಿ ನೀರು ಕುಡಿಯುವುದು ಕೂಡ ಒಳ್ಳೆಯದಲ್ಲ. ಬೇಸಿಗೆಯಲ್ಲಿ ಎಷ್ಟು ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ, ನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ದೇಹಕ್ಕೆ ಇಷ್ಟು ನೀರು ಅವಶ್ಯ
ನೀರು ನಮ್ಮ ಚರ್ಮ ನಯಗೊಳಿಸಲು ಮತ್ತು ದೇಹದಲ್ಲಿ ಸಂವೇದನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಸರಾಸರಿ 8 ಗ್ಲಾಸ್ ನೀರು ಕುಡಿಯುವುದು ದೇಹಕ್ಕೆ ಸಾಕಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ನೀವು ಸಾಕಷ್ಟು ನೀರು ಕುಡಿಯದಿದ್ದರೆ, ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲಾಗುವುದಿಲ್ಲ. ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಆದರೆ ಅನೇಕರು ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುತ್ತಾರೆ. ಇದರಿಂದ ಸಮರ್ಪಕವಾದ ಲಾಭ ದೊರೆಯುತ್ತಿಲ್ಲ. ಪ್ರತಿದಿನ 2 ಲೀಟರ್‌ನಿಂದ 3 ಲೀಟರ್‌ಗಳಷ್ಟು ನೀರನ್ನು ಸೇವಿಸುವುದು ಬಹಳ ಮುಖ್ಯ.
ನಿರ್ಜಲೀಕರಣದಿಂದ ಮೆದುಳಿಗೆ ಅಪಾಯ
ಬೇಸಿಗೆಯಲ್ಲಿ, ನಿಮ್ಮ ದೇಹವು ಶಕ್ತಿಯ ಕೊರತೆಯನ್ನು ಅನುಭವಿಸಬಹುದು. ದೀರ್ಘಕಾಲದ ನಿರ್ಜಲೀಕರಣವು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಕನಿಷ್ಠ 4 ಲೀಟರ್ ನೀರನ್ನು ಕುಡಿಯುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಉತ್ತಮ.
ನೀರು ಕುಡಿಯದೇ ಇದ್ದಾಗ ಏನಾಗುತ್ತೆ
ನೀವು ಎಷ್ಟು ದಣಿದಿದ್ದೀರಿ ಎಂದು ನಿಮಗೆ ತಿಳಿಯದಿದ್ದರೂ, ನಿಮ್ಮ ಮೆದುಳು ಅದನ್ನು ಗ್ರಹಿಸಲು ಪ್ರಾರಂಭಿಸುತ್ತದೆ. ದೇಹದ ಜೀವಕೋಶಗಳಿಗೆ ವಿದ್ಯುತ್ ಸಂಕೇತಗಳನ್ನು ರವಾನಿಸಲು ನೀರು ಅತ್ಯಗತ್ಯ. ಡೀಹೈಡ್ರೇಷನ್ ಆದಾಗ ತಾನಾಗಿಯೇ ತಲೆ ತಿರುಗಲು ಆರಂಭವಾಗುತ್ತದೆ. ನಿಮ್ಮ ಕಣ್ಣುಗಳೂ ಮಂಜಾಗುತ್ತವೆ. ನೀರಿನ ಕೊರತೆ ಕಾಡಿದಾಗ, ಮೆದುಳು ದೇಹಕ್ಕೆ ಅಗತ್ಯವಾದ ಚಲನೆಯನ್ನು ಹೊರತುಪಡಿಸಿ ಬೇರೆ ಆಜ್ಞೆಗಳನ್ನು ನೀಡುವುದಿಲ್ಲ. ಇದರಿಂದ ಅಪಾಯ ಜಾಸ್ತಿ.
ಎಲ್ಲದಕ್ಕೂ ನೀರು ಅತ್ಯಗತ್ಯ
ನೀರಿಗೆ ಕ್ಯಾಲೊರಿ ಇಲ್ಲ. ಇದು ದೇಹದಲ್ಲಿ ಸಂಗ್ರಹವಾಗಿರುವ ಕ್ಯಾಲೊರಿಗಳನ್ನು ಕರಗಿಸಲು ನೀರು ಸಹಾಯ ಮಾಡುತ್ತದೆ. ಹಸಿವಿನ ಸಂವೇದನೆಯನ್ನು ನಿಯಂತ್ರಿಸುತ್ತದೆ. ಅತಿಯಾಗಿ ತಿನ್ನುವುದನ್ನು ತಪ್ಪಿಸಲಾಗುತ್ತದೆ. ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಮ್ಮ ಚರ್ಮವು ನೀರಿನಿಂದ ತುಂಬಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಚರ್ಮವು ನಿರ್ಜಲೀಕರಣಗೊಂಡಿದ್ದರೆ, ಅದು ಶುಷ್ಕ ಮತ್ತು ಸುಕ್ಕುಗಟ್ಟಿದಂತೆ ಕಾಣುತ್ತದೆ. ಆದ್ದರಿಂದ ಸಾಕಷ್ಟು ನೀರು ತೆಗೆದುಕೊಳ್ಳಿ. ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಿರಿ.
ದೇಹದ ತೂಕವನ್ನು ಕಡಿಮೆ ಮಾಡಲು ಕೂಡ ನೀರು ಸಹಕಾರಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಸಾಕಷ್ಟು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ಹಸಿವಾಗುವುದು ಕಡಿಮೆಯಾಗುತ್ತದೆ. ಇದರಿಂದ ನೀರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತೂಕ ಇಳಿಯಲು ಸಹಾಯ ಮಾಡುತ್ತದೆ.