ಏನಿದು ಸಿಕಲ್ ಸೆಲ್ ಕಾಯಿಲೆ? ಗುಣಪಡಿಸಲು ಸಾಧ್ಯವಾಗದ ಈ ಅಪರೂಪದ ಕಾಯಿಲೆ ಬರಲು ಕಾರಣ, ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ
Jul 17, 2024 07:00 AM IST
ಏನಿದು ಸಿಕಲ್ ಸೆಲ್ ಕಾಯಿಲೆ? ಗುಣಪಡಿಸಲು ಸಾಧ್ಯವಾಗದ ಈ ಅಪರೂಪದ ಕಾಯಿಲೆ ಬರಲು ಕಾರಣ, ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ
- ಪ್ರಪಂಚದಾದ್ಯಂತ ಇರುವ ಅಪರೂಪದ ಕಾಯಿಲೆಗಳಲ್ಲಿ ಸಿಕಲ್ ಸೆಲ್ ರೋಗ ಕೂಡ ಒಂದು. ಗುಣಪಡಿಸಲಾಗದ ಕಾಯಿಲೆ ಎಂದು ಹೆಸರು ಪಡೆದಿರುವ ಈ ರೋಗವು ರಕ್ತ ಕಣಗಳಿಗೆ ಸಂಬಂಧಿಸಿದ್ದು. ಈ ರೋಗ ಬರಲು ಕಾರಣವೇನು, ಇದರ ಲಕ್ಷಣಗಳೇನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಸತೀಶ್ ಕುಮಾರ್ ಎ.
ಪ್ರಪಂಚದಲ್ಲಿ ಗುಣಪಡಿಸಲು ಸಾಧ್ಯವಾಗದ ಕಾಯಿಲೆಗಳು ಹಲವಿವೆ. ಅದರಲ್ಲಿ ಸಿಕಲ್ ಸೆಲ್ ರೋಗ ಅಥವಾ ಸಿಕಲ್ ಸೆಲ್ ಕಾಯಿಲೆಯೂ ಒಂದು. ಇದು ಅನುವಂಶಿಕ ಕಾಯಿಲೆಯಾಗಿದ್ದು, ಕೆಂಪು ರಕ್ತ ಕಣ (RBC) ಗಳ ಮೇಲೆ ಪರಿಣಾಮ ಬೀರುತ್ತದೆ. ಕೆಂಪು ರಕ್ತ ಕಣಗಳು ಹಿಮೋಗ್ಲೋಬಿನ್ ಎಂಬ ಪ್ರೊಟೀನ್ ಅನ್ನು ಬಳಸಿಕೊಂಡು ದೇಹದ ಮೂಲಕ ಆಮ್ಲಜನಕ (oxygen) ವನ್ನು ಸಾಗಿಸುತ್ತವೆ. ಆರೋಗ್ಯಕರ ಕೆಂಪು ರಕ್ತ ಕಣಗಳು ಡಿಸ್ಕ್ ಆಕಾರವನ್ನು ಹೊಂದಿದ್ದು, ಇವು ರಕ್ತನಾಳಗಳಲ್ಲಿ ಸುಲಭವಾಗಿ ಚಲಿಸುತ್ತವೆ. ಸಿಕಲ್ ಸೆಲ್ ಕಾಯಿಲೆಯಲ್ಲಿ, ಹಿಮೋಗ್ಲೋಬಿನ್ ಅಸಹಜವಾಗಿದ್ದು, ಕೆಂಪು ರಕ್ತ ಕಣಗಳನ್ನು ಗಟ್ಟಿ ಮತ್ತು ಅರ್ಧಚಂದ್ರಾಕಾರ ಅಥವಾ ಸಿಕಲ್ (ಕುಡಗೋಲು) ನಂತೆ ಮಾಡುತ್ತದೆ. ಇದು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ನೋವು, ಅಂಗಾಂಶದ ಹಾನಿ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಸಿಕಲ್ ಸೆಲ್ ಕಾಯಿಲೆ ಬರಲು ಕಾರಣಗಳು
ಪೋಷಕರಿಬ್ಬರಿಂದಲೂ ಅನುವಂಶಿಕವಾಗಿ ಪಡೆದ ವಂಶವಾಹಿ ರೂಪಾಂತರವು (genetic mutation) ಸಿಕಲ್ ಸೆಲ್ ರೋಗಕ್ಕೆ ಮುಖ್ಯ ಕಾರಣವಾಗಿದೆ.
ಒಬ್ಬ ವ್ಯಕ್ತಿಯು ಹಿಮೋಗ್ಲೋಬಿನ್‌ಗಾಗಿ ಎರಡು ವಂಶವಾಹಿ (gene) ಗಳನ್ನು ಅನುವಂಶಿಕವಾಗಿ ಪಡೆಯುತ್ತಾನೆ, ಅಂದರೆ ತಂದೆ-ತಾಯಿ ಇಬ್ಬರಿಂದಲೂ ಒಂದೊಂದು ವಂಶವಾಹಿ ಪಡೆಯುತ್ತಾನೆ. ಎರಡೂ ವಂಶವಾಹಿಗಳು ಸಾಮಾನ್ಯವಾಗಿದ್ದರೆ, ವ್ಯಕ್ತಿಗೆ ರೋಗ ಬರಲು ಸಾಧ್ಯವಿಲ್ಲ. ಹಾಗೆಯೇ, ಒಬ್ಬ ವ್ಯಕ್ತಿಯು ಒಂದು ಸಾಮಾನ್ಯ ವಂಶವಾಹಿ ಮತ್ತು ಒಂದು ಸಿಕಲ್ ಸೆಲ್ ವಂಶವಾಹಿಯನ್ನು ಅನುವಂಶಿಯವಾಗಿ ಪಡೆದರೆ, ಅಂತಹ ವ್ಯಕ್ತಿಗಳು ರೋಗ ಲಕ್ಷಣಗಳನ್ನು ಹೊಂದಿರದೇ ರೋಗವನ್ನು ಹೊಂದಿರುತ್ತಾರೆ. ಆದರೆ, ಒಬ್ಬ ವ್ಯಕ್ತಿಯು ಎರಡು ಸಿಕಲ್ ಸೆಲ್ ವಂಶವಾಹಿಗಳನ್ನು ಪಡೆದರೆ, ಅಂದರೆ ಪ್ರತಿ ಪೋಷಕರಿಂದ ಒಂದು, ಸಿಕಲ್ ಸೆಲ್ ವಂಶವಾಹಿಯನ್ನು ಪಡೆದರೆ, ಅವರು ಗಮನಾರ್ಹ ರೋಗಲಕ್ಷಣಗಳೊಂದಿಗೆ ಸಿಕಲ್ ಸೆಲ್ ರೋಗವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಸಿಕಲ್ ಸೆಲ್ ಕಾಯಿಲೆಯ ಲಕ್ಷಣಗಳು
ಸಿಕಲ್ ಸೆಲ್ ಕಾಯಿಲೆಯ ರೋಗಲಕ್ಷಣಗಳು ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಬದಲಾಗಬಹುದು. ನೋವು (ವಾಸೊ-ಆಕ್ಲೂಸಿವ್ ಕ್ರೈಸಿಸ್) ಸಿಕಲ್ ಸೆಲ್ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಸಿಕಲ್ ಸೆಲ್ ಕಾಯಿಲೆಯಿಂದ ನೋವು ದೇಹದಲ್ಲಿ ಎಲ್ಲಿ ಬೇಕಾದರೂ ಸಂಭವಿಸಬಹುದು, ಆದರೆ ಇದು ಎದೆ, ಹೊಟ್ಟೆ ಮತ್ತು ಕೈಕಾಲುಗಳಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ ಮತ್ತು ಕೆಲವು ಗಂಟೆಗಳು ಅಥವಾ ಕೆಲವು ದಿನಗಳವರೆಗೆ ಇರುತ್ತದೆ.
ಇತರ ಸಾಮಾನ್ಯ ರೋಗಲಕ್ಷಣಗಳು
• ರಕ್ತಹೀನತೆ ಇದರಿಂದ ಆಯಾಸ, ಉಸಿರಾಟದ ತೊಂದರೆ ಮತ್ತು ಬಿಳಿಚಿಕೊಂಡ ತೆಳುವಾದ ಚರ್ಮ ಇಂತಹ ಲಕ್ಷಣಗಳು ಎದುರಾಗಬಹುದು.
• ಕಾಮಾಲೆ, ಚರ್ಮ ಮತ್ತು ಕಣ್ಣುಗಳು ಹಳದಿಯಾಗುವುದು
• ಆಗಾಗ್ಗೆ ಸೋಂಕುಗಳು ಕಾಣಿಸುವುದು
• ವಿಳಂಬಗೊಂಡಿರುವ ಬೆಳವಣಿಗೆ
ಸಿಕಲ್ ಸೆಲ್ ಕಾಯಿಲೆಯಿಂದ ಉಂಟಾಗುವ ತೊಡಕುಗಳು
ಸಿಕಲ್ ಸೆಲ್ ರೋಗವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಸ್ಟ್ರೋಕ್ ಕೂಡ ಉಂಟಾಗಬಹುದು. ಏಕೆಂದರೆ ಕುಡಗೋಲು (ಸಿಕಲ್) ಆಕಾರದ ಜೀವಕೋಶಗಳು ಮೆದುಳಿಗೆ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಸಿಕಲ್ ಸೆಲ್ ಕಾಯಿಲೆಯಿಂದ ಪಲ್ಮನರಿ ಹೈಪರ್ಟೆನ್ಶನ್ (ಶ್ವಾಸಕೋಶದಲ್ಲಿ ಅಧಿಕ ರಕ್ತದೊತ್ತಡ), ತೀವ್ರವಾದ ಎದೆಯ ಸಿಂಡ್ರೋಮ್ (ತೀವ್ರವಾದ ಶ್ವಾಸಕೋಶದ ಸೋಂಕು), ರಕ್ತದ ಹರಿವಿನ ಅಡಚಣೆಯಿಂದಾಗಿ ಮೂತ್ರಪಿಂಡಗಳು, ಯಕೃತ್ತು(ಲಿವರ್) ಮತ್ತು ಗುಲ್ಮ (ಸ್ಪ್ಲೀನ್) ನಂತಹ ಅಂಗಗಳ ಅಂಗ ಹಾನಿ, ಮತ್ತು ಸ್ಪ್ಲೇನಿಕ್ ಸೀಕ್ವೆಸ್ಟ್ರೇಶನ್ (ಈ ಸ್ಥಿತಿಯಲ್ಲಿ ಸಿಕಲ್ ಸೆಲ್‌ಗಳು ಸ್ಪ್ಲೀನ್‌ನಲ್ಲಿ ಸಿಲುಕಿಕೊಂಡು ಊತ ಉಂಟುಮಾಡುತ್ತವೆ).
ಸಿಕಲ್ ಸೆಲ್ ರೋಗವನ್ನು ನಿರ್ವಹಿಸಲು ಚಿಕಿತ್ಸೆಯು ಸಹಾಯ ಮಾಡಬಹುದೇ?
ಪ್ರಸ್ತುತ ಸಿಕಲ್ ಸೆಲ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ಆದರೆ ಲಭ್ಯವಿರುವ ಚಿಕಿತ್ಸೆಗಳಿಂದ ಸಿಕಲ್ ಸೆಲ್ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ನೋವು ನಿವಾರಕಗಳಂತಹ ಔಷಧಿಗಳು ನೋವಿನ ಸಮಯದಲ್ಲಿ ಆರಾಮವನ್ನು ನೀಡುತ್ತವೆ, ಆದರೆ ಸಾಕಷ್ಟು ನೀರು ಕುಡಿಯುವುದರಿಂದ ಜೀವಕೋಶಗಳು ಕುಡಗೋಲು (ಸಿಕಲ್) ಆಕಾರ ಪಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇತರ ಚಿಕಿತ್ಸೆಗಳಲ್ಲಿ ಹೈಡ್ರಾಕ್ಸಿಯುರಿಯಾ - ಇದು ನೋವು ಬರುವ ಆವರ್ತನೆಯನ್ನು ಕಡಿಮೆ ಮಾಡುತ್ತದೆ ಮತ್ತು ಫೋಲಿಕ್ ಆಸಿಡ್ ಪೂರಕಗಳನ್ನು ತೆಗೆದುಕೊಳ್ಳುವುದು ಮತ್ತು ವ್ಯಾಕ್ಸಿನೇಷನ್ ಪಡೆಯುವುದು - ಇವು ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತವೆ.
ತೀವ್ರತರವಾದ ಪ್ರಕರಣಗಳಲ್ಲಿ, ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಮತ್ತು ಕುಡಗೋಲು (ಸಿಕಲ್) ಆಕಾರದ ಜೀವಕೋಶಗಳ ಪ್ರಮಾಣವನ್ನು ಕಡಿಮೆ ಮಾಡಲು ರಕ್ತ ವರ್ಗಾವಣೆಯ ಅಗತ್ಯವಿರಬಹುದು. ಸೂಕ್ತವಾದ ದಾನಿ ಲಭ್ಯವಿದ್ದಲ್ಲಿ ಮೂಳೆ ಮಜ್ಜೆಯ ಕಸಿ (Bone Marrow Transplant) ಕೂಡ ಈ ಸ್ಥಿತಿಯನ್ನು ಗುಣಪಡಿಸಬಹುದು. ಸರಿಯಾದ ವೈದ್ಯಕೀಯ ಆರೈಕೆಯನ್ನು ನೀಡಿದರೆ, ಸಿಕಲ್ ಸೆಲ್ ಕಾಯಿಲೆ ಇರುವ ಜನರು ಕೂಡ ಸಾಮಾನ್ಯ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದು.
(ಬರಹ: ಡಾ. ಸತೀಶ್ ಕುಮಾರ್ ಎ, ಕನ್ಸಲ್ಟೆಂಟ್ - ಹೆಮಟಾಲಜಿಸ್ಟ್ ಮತ್ತು ಹೆಮಟೋ-ಆಂಕೊಲಾಜಿಸ್ಟ್, ಮಣಿಪಾಲ್ ಆಸ್ಪತ್ರೆ ಯಶವಂತಪುರ)
ವಿಭಾಗ