logo
ಕನ್ನಡ ಸುದ್ದಿ  /  ಜೀವನಶೈಲಿ  /  Andropause: ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಋತುಬಂಧ, ಏನಿದು ಆಂಡ್ರೋಪಾಸ್‌, ಲಕ್ಷಣಗಳೇನು, ಚಿಕಿತ್ಸೆ ಇರುವುದೇ, ಇಲ್ಲಿದೆ ವಿವರ

Andropause: ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಋತುಬಂಧ, ಏನಿದು ಆಂಡ್ರೋಪಾಸ್‌, ಲಕ್ಷಣಗಳೇನು, ಚಿಕಿತ್ಸೆ ಇರುವುದೇ, ಇಲ್ಲಿದೆ ವಿವರ

Praveen Chandra B HT Kannada

Dec 22, 2023 05:53 PM IST

google News

ಏನಿದು ಆಂಡ್ರೋಪಾಸ್‌, ಲಕ್ಷಣಗಳೇನು

  • Whats is Andropause: ಪುರುಷರ ಋತುಬಂಧ ಎಂದು ಕರೆಯಲ್ಪಡುವ ಆಂಡ್ರೋಪಾಸ್‌ ಎಂದರೇನು, ಇದರ ಲಕ್ಷಣಗಳೇನು, ಏಕೆ ಇದು ಸಂಭವಿಸುತ್ತದೆ, ಇದಕ್ಕೆ ಚಿಕಿತ್ಸೆ ಇರುವುದೇ ಇತ್ಯಾದಿ ವಿವರ ಇಲ್ಲಿದೆ.

ಏನಿದು ಆಂಡ್ರೋಪಾಸ್‌, ಲಕ್ಷಣಗಳೇನು
ಏನಿದು ಆಂಡ್ರೋಪಾಸ್‌, ಲಕ್ಷಣಗಳೇನು (Photo by Cynthia Magana on Unsplash)

ಋತುಬಂಧ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಎಂಬ ಒಂದು ಸಾಮಾನ್ಯ ತಿಳುವಳಿಕೆ ಬಹುತೇಕರಲ್ಲಿ ಇರಬಹುದು. ವಯಸ್ಸಾದ ಪುರುಷರು ಕೂಡ ಆಂಡ್ರೋಪಾಸ್‌ ಎಂಬ ಪುರುಷ ಋತುಬಂಧ ಅನುಭವಿಸಬಹುದು. ವಯಸ್ಸಾದಂತೆ ಪುರುಷರಲ್ಲಿ ಹಾರ್ಮೋನ್‌ ಮಟ್ಟ ಕಡಿಮೆಯಾಗುತ್ತದೆ. ಆಂಡ್ರೋಪಾಸ್‌ ಮನುಷ್ಯರ ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಋತುಬಂಧಕ್ಕೆ ಭಿನ್ನವಾಗಿ ಆಂಡ್ರೋಪಾಸ್‌ ಹೆಚ್ಚು ಸೂಕ್ಷ್ಮ ಮತ್ತು ದೀರ್ಘಾವಧಿಯ ಪ್ರಕ್ರಿಯೆ. ಸಾಮಾನ್ಯವಾಗಿ ಪುರುಷರಿಗೆ 40ನೇ ವಯಸ್ಸಿನ ಬಳಿಕ ಇದು ಅನುಭವಕ್ಕೆ ಬರಬಹುದು. ಹಲವು ದಶಕಗಳ ಕಾಲ ಆಂಡ್ರೋಪಾಸ್‌ ಮುಂದುವರೆಯಬಹುದು.

"ಹೆಣ್ಣಿನ ಋತುಬಂಧದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತವೆ. ದುರದೃಷ್ಟವಶಾತ್‌ ಕೆಲವರು ಪುರುಷ ಋತುಬಂಧಕ್ಕೆ ಒಳಗಾಗುತ್ತಾರೆ. ಇದನ್ನು ಆಂಡ್ರೋಪಾಸ್ ಎಂದೂ ಕರೆಯುತ್ತಾರೆ. 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಸೀರಮ್ ಟೆಸ್ಟೋಸ್ಟೆರಾನ್ ಪ್ರತಿ ವರ್ಷ ಶೇಕಡಾ 1ರಷ್ಟು ಕಡಿಮೆಯಾಗುತ್ತದೆ. ಈ ಕುರಿತು ಜನರಲ್ಲಿ ಅರಿವಿನ ಕೊರತೆಯಿದೆ" ಎಂದು ನೋಯ್ಡಾದ ಝೀವಾ ಫರ್ಟಿಲಿಟಿಯ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕಿ ಡಾ ಶ್ವೇತಾ ಗೋಸ್ವಾಮಿ ಹೇಳಿದ್ದಾರೆ.

"ಹೆಚ್ಚಿನ ವಯಸ್ಸಾದ ಪುರುಷರು ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಹೊಂದಿರಬಹುದು. ಅಂದಾಜು ಶೇಕಡ 10-25ರಷ್ಟು ಪುರುಷರು ಆಂಡ್ರೋಪಾಸ್‌ಗೆ ಒಳಗಾಗುತ್ತಾರೆ. ಲೈಂಗಿಕ ಬಯಕೆ ಕಡಿಮೆಯಾಗುವುದು, ನಿಮಿರುವಿಕೆ ಕಡಿಮೆಯಾಗುವುದು, ಮೂಳೆ ನಷ್ಟ, ಶಕ್ತಿ ಕಡಿಮೆಯಾಗುವುದು, ಖಿನ್ನತೆ, ಕೆಲಸದ ಮೇಲೆ ಏಕಾಗ್ರತೆ ಕಡಿಮೆಯಾಗುವುದು ಆಂಡ್ರೋಪಾಸ್‌ನ ಕೆಲವು ಸಾಮಾನ್ಯ ರೋಗಲಕ್ಷಣಗಳು. ಇಂತಹ ರೋಗಲಕ್ಷಣಗಳನ್ನು ಹೊಂದಿರುವವರು ತಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಪರೀಕ್ಷಿಸಬೇಕು. ಅಗತ್ಯವಿದ್ದರೆ ಚಿಕಿತ್ಸೆ ಪಡೆಯುತ್ತಾರೆ. ಪುರುಷರು ಸತ್ಯದಿಂದ ದೂರ ಸರಿಯಲು ಬಯಸುತ್ತಾರೆ, ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಇದು ವೈಜ್ಞಾನಿಕವಾಗಿ ಸತ್ಯ. ಸಾರ್ವಜನಿಕರು ಈ ಕುರಿತು ಹೆಚ್ಚಿನ ಮಾಹಿತಿ ಹೊಂದಿರಬೇಕು" ಎಂದು ಅವರು ಹೇಳಿದ್ದಾರೆ.

ಆಂಡ್ರೋಪಾಸ್ ಟೆಸ್ಟೋಸ್ಟೆರಾನ್ ಮಟ್ಟಗಳಲ್ಲಿನ ಕುಸಿತಕ್ಕೆ ಸಂಬಂದಪಟ್ಟದ್ದಾಗಿದೆ. ಮಹಿಳೆಯರಲ್ಲಿ ಸಂತಾನೋತ್ಪತ್ತಿ ಕ್ರಿಯೆಯ ಹಠಾತ್ ನಿಲುಗಡೆಯಾದ ಋತುಬಂಧಕ್ಕಿಂತ ಭಿನ್ನವಾಗಿ, ಆಂಡ್ರೋಪಾಸ್ ಅನ್ನೋದು ಹಾರ್ಮೋನ್ ಉತ್ಪಾದನೆಯಲ್ಲಿ ಕ್ರಮೇಣ ಕುಸಿತವಾಗಿದೆ. ಇದು ಸಾಮಾನ್ಯವಾಗಿ ಮಧ್ಯವಯಸ್ಕ ಅಥವಾ ವಯಸ್ಸಾದ ಪುರುಷರಲ್ಲಿ ಕಂಡುಬರುತ್ತದೆ ಎಂದು ಗುರುಗ್ರಾಮದ ಕ್ಲೌಡ್‌ನೈನ್‌ನ ಹಿರಿಯ ಸ್ತ್ರೀರೋಗತಜ್ಞ ಮತ್ತು ಫಲವತ್ತತೆ ತಜ್ಞರಾದ ಡಾ.ಅಂಶಿಕಾ ಲೇಖಿ ಮಾಹಿತಿ ನೀಡಿದ್ದಾರೆ.

ಆಂಡ್ರೋಪಾಸ್‌ಗೆ ಕಾರಣಗಳೇನು?

ಆಂಡ್ರೋಪಾಸ್‌ಗೆ ಪ್ರಾಥಮಿಕ ಕಾರಣವೆಂದರೆ ಟೆಸ್ಟೋಸ್ಟೆರಾನ್ ಉತ್ಪಾದನೆಯಲ್ಲಿ ಕುಸಿತ. ಟೆಸ್ಟೋಸ್ಟೆರಾನ್ ಮಟ್ಟವು ಸಾಮಾನ್ಯವಾಗಿ 30 ವರ್ಷ ವಯಸ್ಸಿನ ನಂತರ ವರ್ಷಕ್ಕೆ ಶೇಕಡ 1 ರಷ್ಟು ಕಡಿಮೆಯಾಗುತ್ತದೆ. ಇದಲ್ಲದೆ ಇತರೆ ಅಂಶಗಳು ಕೂಡ ಕಾರಣಗಳಾಗಬಹುದು. ಅದನ್ನು ಈ ರೀತಿ ಪಟ್ಟಿ ಮಾಡಬಹುದು ಎಂದು ಡಾ.ಅಂಶಿಕಾ ಲೇಖಿ ಹೇಳಿದ್ದಾರೆ. ಅವರ ಪ್ರಕಾರ,

  1. ಜೀವನಶೈಲಿಯ ಅಂಶಗಳು: ಕಳಪೆ ಆಹಾರ, ವ್ಯಾಯಾಮದ ಕೊರತೆ, ಅತಿಯಾದ ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನದಂತಹ ಅನಾರೋಗ್ಯಕರ ಜೀವನಶೈಲಿ ಅಭ್ಯಾಸಗಳು ಟೆಸ್ಟೋಸ್ಟೆರಾನ್ ಮಟ್ಟದಲ್ಲಿನ ಕುಸಿತವನ್ನು ಹೆಚ್ಚಿಸಬಹುದು. ಆಂಡ್ರೋಪಾಸ್ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.
  2. ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳು: ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಕೆಲವು ದೀರ್ಘಕಾಲದ ಪರಿಸ್ಥಿತಿಗಳು ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಇವು ಕೂಡ ಆಂಡ್ರೋಪಾಸ್‌ಗೆ ಕಾರಣವಾಗಬಹುದು.
  3. ಔಷಧಿಗಳು ಮತ್ತು ಚಿಕಿತ್ಸೆಗಳು: ಖಿನ್ನತೆ-ಶಮನಕಾರಿ ಔಷಧಗಳು, ಕಾರ್ಟಿಕೊಸ್ಟೆರಾಯ್ಡ್‌ಗಳು, ಒಪಿಯಾರ್ಡ್‌ಗಳು ಸೇರಿದಂತೆ ಕೆಲವು ಔಷಧಿಗಳು ಟೆಸ್ಟೋಸ್ಟೆರಾನ್ ಉತ್ಪಾದನೆಯಲ್ಲಿ ಹಸ್ತಕ್ಷೇಪ ಮಾಡಬಹುದು. ಕ್ಯಾನ್ಸರ್‌ಗೆ ಕೀಮೋಥೆರಪಿ ಅಥವಾ ವಿಕಿರಣ ಚಿಕಿತ್ಸೆಯಂತಹ ಚಿಕಿತ್ಸೆಗಳು ಹಾರ್ಮೋನ್ ಮಟ್ಟವನ್ನು ಸಹ ಪರಿಣಾಮ ಬೀರಬಹುದು.
  4.  ಮಾನಸಿಕ ಅಂಶಗಳು: ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕವು ಆಂಡ್ರೋಪಾಸ್‌ನೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರಬಹುದು. ಹಾರ್ಮೋನುಗಳ ಬದಲಾವಣೆಗಳು ಭಾವನಾತ್ಮಕ ತೊಂದರೆಗಳನ್ನು ಉಂಟು ಮಾಡಬಹುದು. ಭಾವನಾತ್ಮಕ ತೊಂದರೆಯು ಹಾರ್ಮೋನ್‌ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಆಂಡ್ರೋಪಾಸ್‌ ಲಕ್ಷಣಗಳು

ಆಂಡ್ರೋಪಾಸ್‌ ಸಮಯದಲ್ಲಿಪುರುಷ ಸಂತಾನೋತ್ಪತ್ತಿ ಕ್ರಿಯೆಗೆ ಕಾರಣವಾಗುವ ಪ್ರಮುಖ ಹಾರ್ಮೋನ್ ಟೆಸ್ಟೋಸ್ಟೆರಾನ್ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕಡಿಮೆ ಕಾಮಾಸಕ್ತಿ, ಆಯಾಸ ಸೇರಿದಂತೆ ವಿವಿಧ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು" ಎಂದು ಗುರುಗ್ರಾಮದ ಆರ್ಟೆಮಿಸ್‌ ಆಸ್ಪತ್ರೆಯ ಐವಿಎಫ್‌ ವಿಭಾಗದ ಡಾ. ಪಾರುಲ್‌ ಪ್ರಕಾಶ್‌ ಹೇಳಿದ್ದಾರೆ. ಅವರ ಪ್ರಕಾರ ರೋಗಲಕ್ಷಣಗಳು ಈ ಮುಂದಿನಂತೆ ಇರುತ್ತವೆ.

  1. ಆಂಡ್ರೋಪಾಸ್ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆಂಡ್ರೊಪಾಸ್‌ನಿಂದಾಗಿ ವೀರ್ಯಾಣು ಉತ್ಪಾದನೆ ಕಡಿಮೆಯಾಗಬಹುದು. ಹಾರ್ಮೋನಿನ ಏರಿಳಿತದ ಕಾರಣದಿಂದಾಗಿ ವೀರ್ಯದ ಗುಣಮಟ್ಟ ಕಡಿಮೆಯಾಗಬಹುದು.
  2. ಆಂಡ್ರೊಪಾಸ್ ನಿಮಿರುವಿಕೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಟೆಸ್ಟೋಸ್ಟೆರಾನ್ ಮಟ್ಟದಲ್ಲಿನ ಇಳಿಕೆಯು ರಕ್ತದ ಹರಿವು ಮತ್ತು ನರಗಳ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಆಂಡ್ರೋಪಾಸ್‌ ಇರುವ ಎಲ್ಲಾ ಪುರುಷರಿಗೂ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಎನ್ನುವಂತಿಲ್ಲ. ಕೆಲವರಿಗೆ ಇದರ ಅನುಭವವಾಗಬಹುದು.
  3. ಕಿರಿಕಿರಿ, ಖಿನ್ನತೆ ಮತ್ತು ಕಡಿಮೆ ಆತ್ಮ ವಿಶ್ವಾಸ ಸೇರಿದಂತೆ ಮಾನಸಿಕ ಪರಿಣಾಮಗಳನ್ನು ಸಹ ಹೊಂದಿರಬಹುದು.

"ಆಂಡ್ರೋಪಾಸ್‌ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು. ಕೆಲವು ಪುರುಷರಿಗೆ ಸೌಮ್ಯವಾದ ರೋಗ ಲಕ್ಷಣ ಮಾತ್ರ ಇರಬಹುದು" ಎಂದು ಡಾ. ಅನ್ಶಿಕಾ ಲೇಖಿ ಹೇಳಿದ್ದಾರೆ. ಅವರ ಪ್ರಕಾರ ಈ ಮುಂದಿನ ರೋಗ ಲಕ್ಷಣಗಳು ಇರಬಹುದು.

  1. ನಿಶ್ಯಕ್ತಿ, ಆಯಾಸ: ಆಂಡ್ರೋಪಾಸ್‌ಗೆ ಒಳಗಾಗುವ ಪುರುಷರಿಗೆ ತಮ್ಮ ಶಕ್ತಿ ಸಾಮರ್ಥ್ಯ ಇಳಿಕೆಯಾಗಿದೆ ಎಂದು ತಿಳಿಸುತ್ತಾರೆ. ಸಾಕಷ್ಟು ವಿಶ್ರಾಂತಿ ಪಡೆದರೂ ಆಯಾಸ ಅನುಭವಿಸುತ್ತಾರೆ.
  2. ಲೈಂಗಿಕ ಬದಲಾವಣೆ: ಅನೇಕ ಪುರುಷರು ಲೈಂಗಿಕ ಬಯಕೆಯಲ್ಲಿ (ಲಿಬಿಡೋ) ಕುಸಿತವನ್ನು ಅನುಭವಿಸುತ್ತಾರೆ. ನಿಮಿರುವಿಕೆ ತೊಂದರೆ ಅನುಭವಿಸುತ್ತಾರೆ.
  3. ಮೂಡ್ ಬದಲಾವಣೆ: ಆಂಡ್ರೋಪಾಸ್‌ಗೆ ಒಳಗಾದ ಕೆಲವು ವ್ಯಕ್ತಿಗಳಲ್ಲಿ ಮೂಡ್‌ ಬದಲಾವಣೆ, ಕಿರಿಕಿರಿ, ಹೆಚ್ಚಿದ ಆತಂಕ, ಖಿನ್ನತೆ ಇತ್ಯಾದಿಗಳು ಉಂಟಾಗಬಹುದು. ಇದು ಮಾನಸಿಕ ಪ್ರಭಾವವನ್ನೂ ಉಂಟುಮಾಡಬಲ್ಲದು.
  4. ಸ್ನಾಯು ಮತ್ತು ಮೂಳೆ: ಸ್ನಾಯುವಿನ ದ್ರವ್ಯರಾಶಿ ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಟೆಸ್ಟೋಸ್ಟೆರಾನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆಂಡ್ರೋಪಾಸ್ ಸಮಯದಲ್ಲಿ, ಪುರುಷರು ಸ್ನಾಯುವಿನ ದ್ರವ್ಯರಾಶಿ, ಶಕ್ತಿ ಕಡಿಮೆಯಾದಂತೆ ಮತ್ತು ಮೂಳೆ ಸಾಂದ್ರತೆಯಲ್ಲಿ ಇಳಿಕೆಯನ್ನು ಅನುಭವಿಸಬಹುದು. ಇದರಿಂದ ಹೆಚ್ಚಿನ ದೌರ್ಬಲ್ಯ, ಆಸ್ಟಿಯೊಪೊರೋಸಿಸ್ ಅಪಾಯ ಉಂಟಾಗಬಹುದು.
  5. ದೇಹದಲ್ಲಿ ಬದಲಾವಣೆಗಳು: ಆಂಡ್ರೋಪಾಸ್ ದೇಹದ ಕೊಬ್ಬು ಹೆಚ್ಚಿಸುತ್ತದೆ. ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗಬಹುದು. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರಬಹುದು.

ಚಿಕಿತ್ಸೆ ಆಯ್ಕೆಗಳು

  1. ಜೀವನಶೈಲಿ ಬದಲಾವಣೆ ಮೂಲಕ ಇಂತಹ ತೊಂದರೆಯಾಗುವುದನ್ನು ತಡೆಯಲು ಪ್ರಯತ್ನಿಸಬಹುದು. ಅಂದ್ರೆ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆಯು ಇದರ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  2. ಆರೋಗ್ಯ ತಜ್ಞರ ಜತೆ ಸಮಲೋಚನೆ ಮಾಡಿ ಇದರ ಪ್ರಭಾವ ಕಡಿಮೆ ಮಾಡಲು ಪ್ರಯತ್ನಿಸಬಹುದು.
  3. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಗೂ ಪ್ರಯತ್ನಿಸಬಹುದು. ಇದರ ಅಡ್ಡಪರಿಣಾಮದ ಕುರಿತು ಮೇಲ್ವಿಚಾರಣೆ ಮಾಡಲು ಆರೋಗ್ಯ ವೃತ್ತಿಪರರ ಮಾರ್ಗದರ್ಶನ ಅತ್ಯಂತ ಅಗತ್ಯ.
  4. ಸಕಾರಾತ್ಮಕ ಜೀವನಶೈಲಿ ಮೂಲಕ ಆಂಡ್ರೋಪಾಸ್‌ ರೋಗಲಕ್ಷಣಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದು.
  5. ಆಂಡ್ರೋಪಾಸ್‌ಗೆ ಸಂಬಂಧಿಸಿದ ಭಾವನಾತ್ಮಕ ಸವಾಲುಗಳನ್ನು ಎದುರಿಸುವ ಪುರುಷರಿಗೆ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ. ಆಪ್ತ ಸಮಾಲೋಚನೆ, ಚಿಕಿತ್ಸೆಯು ಪ್ರಯೋಜನಕಾರಿ.
  6. ನಿರ್ದಿಷ್ಟ ರೋಗಲಕ್ಷಣಗಳಿಗೆ ಔಷಧಿಗಳನ್ನು ನೀಡುವ ಮೂಲಕ ಆಂಡ್ರೋಪಾಸ್‌ಗೆ ಚಿಕಿತ್ಸೆ ನೀಡಬಹುದು.

"ಆಂಡ್ರೋಪಾಸ್‌ ಎನ್ನುವುದು ನೈಸರ್ಗಿಕ ಪ್ರಕ್ರಿಯೆ. ಯಾವುದೇ ಪುರುಷರಲ್ಲಿ 30 ವರ್ಷದ ಬಳಿಕ ಇದು ಕಾಣಿಸಬಹುದು. ದೈಹಿಕ ಮತ್ತು ಭಾವನಾತ್ಮಕ ರೋಗಲಕ್ಷಣಗಳನ್ನು ಹತೋಟಿಯಲ್ಲಿ ಇಡಲು ಪ್ರಯತ್ನಿಸುವ ಮೂಲಕ ಈ ತೊಂದರೆಯಿಂದ ಹೊರಬರಲು ಪ್ರಯತ್ನಿಸಬಹುದು. ಜೀವನಶೈಲಿ ಬದಲಾವಣೆ, ಕೆಲವು ಚಿಕಿತ್ಸೆ, ಭಾವನಾತ್ಮಕ ಬೆಂಬಲ ಆಂಡ್ರೋಪಾಸ್‌ ಸಂದರ್ಭದಲ್ಲಿ ನೆರವಾಗಬಹುದು" ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ