logo
ಕನ್ನಡ ಸುದ್ದಿ  /  ಜೀವನಶೈಲಿ  /  Cholesterol: ಯುವಜನರಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ; ನಿರ್ಲಕ್ಷ್ಯ ಮಾಡದಿರಿ

Cholesterol: ಯುವಜನರಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ; ನಿರ್ಲಕ್ಷ್ಯ ಮಾಡದಿರಿ

Reshma HT Kannada

Apr 04, 2024 01:55 PM IST

google News

ಯುವಜನರಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ

    • ಇತ್ತೀಚಿನ ದಿನಗಳಲ್ಲಿ ಯುವಜನರ ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ಹೃದಯದ ಸಮಸ್ಯೆ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾದರೆ ಯಂಗ್‌ ಜನರೇಷನ್‌ನಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಕಾರಣವೇನು, ಇದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬಿತ್ಯಾದಿ ವಿವರ ಇಲ್ಲಿದೆ.
ಯುವಜನರಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ
ಯುವಜನರಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಲು ಈ ಅಂಶಗಳೇ ಪ್ರಮುಖ ಕಾರಣ

ಇತ್ತೀಚಿಗೆ ಯುವಜನರು ಹೃದಯಾಘಾತ, ಹೃದಯ ಸ್ತಂಭನದಂತಹ ಸಮಸ್ಯೆಗಳನ್ನು ಹೆಚ್ಚು ಎದುರಿಸುತ್ತಿದ್ದಾರೆ. ಹೃದಯದ ಸಮಸ್ಯೆಗಳು ಹೆಚ್ಚಲು ಪ್ರಮುಖ ಕಾರಣ ದೇಹದಲ್ಲಿನ ಕೊಲೆಸ್ಟ್ರಾಲ್‌ ಪ್ರಮಾಣ. ಯುವಜನರಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣವು ಅಪಾಯದ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಅವರು ಹಲವು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾದಷ್ಟೂ ಅಪಾಯ ಜಾಸ್ತಿ. ತಜ್ಞರ ಪ್ರಕಾರ ಕೊಲೆಸ್ಟ್ರಾಲ್‌ ಶೇಖರಣೆಯು ಕಿರಿಯ ವಯಸ್ಸಿನಲ್ಲಿ ಅಂದರೆ ಹದಿವಯಸ್ಸಿನಲ್ಲೇ ಆರಂಭವಾಗಬಹುದು. ಆದರೆ 20 ವರ್ಷ ದಾಟುವವರೆಗೆ ಇದರ ತೊಂದರೆಗಳು ಅರಿವಿಗೆ ಬರುವುದಿಲ್ಲ. ಆ ಕಾರಣಕ್ಕೆ ಈ ವಯಸ್ಸಿನಲ್ಲಿ ಹೃದಯ ತೊಂದರೆ ಹೆಚ್ಚು ಕಾಡುತ್ತವೆ.

ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಎಷ್ಟಿರಬೇಕು? ಕೊಲೆಸ್ಟ್ರಾಲ್‌ನ ಕಾರ್ಯವೇನು?

ಕೊಲೆಸ್ಟ್ರಾಲ್‌ ಯಕೃತ್ತಿನಲ್ಲಿ ತಯಾರಾಗುವ ಮೇಣದಂತಹ ವಸ್ತುವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕರಿಸುವ ಹಾರ್ಮೋನುಗಳು, ವಿಟಮಿನ್‌ ಡಿ ಹಾಗೂ ಪಿತ್ತರಸ ಲವಣಗಳನ್ನು ಉತ್ಪಾದಿಸಲು ಅವಶ್ಯಕವಾಗಿದೆ. ಕೊಲೆಸ್ಟ್ರಾಲ್‌ 2 ವಿಧಗಳಿವೆ. ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಮತ್ತು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಈ ಎರಡೂ ಕೊಲೆಸ್ಟ್ರಾಲ್‌ನ ವಿಧಗಳಾಗಿವೆ. ಎಚ್‌ಡಿಎಲ್‌ ಅನ್ನು ಉತ್ತರ ಕೊಲೆಸ್ಟ್ರಾಲ್‌ ಎಂದು ಕರೆಯಲಾಗುತ್ತದೆ. ಇದರ ಪ್ರಮಾಣ ದೇಹದಲ್ಲಿ 50mg/dL ಅಥವಾ ಅದಕ್ಕಿಂತ ಹೆಚ್ಚಿರಬೇಕು. ಎಲ್‌ಡಿಎಲ್‌ ಅನ್ನು ಕೆಟ್ಟ ಕೊಲೆಸ್ಟ್ರಾಲ್‌ ಎಂದು ಕರೆಯುತ್ತಾರೆ. ಇದರ ಪ್ರಮಾಣ 100 mg/dL ಗಿಂತ ಕಡಿಮೆ ಇರಬೇಕು. 130 ರಿಂದ 159 mg/dL ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಬಾರ್ಡರ್‌ ಲೈನ್‌ ಹೈ ಎಂದು ಕರೆದರೆ, 160 ರಿಂದ 189 mg/dL ಗಿಂತ ಅಧಿಕವಾಗಿದ್ದರೆ ಕೊಲೆಸ್ಟ್ರಾಲ್‌ ಹೆಚ್ಚಿದೆ ಎಂದು ಪರಿಗಣಿಸಲಾಗುತ್ತದೆ. 190 mg/dL ಗಿಂತಲೂ ಅಧಿಕವಿದ್ದರೆ ಅಪಾಯಕಾರಿ ಮಟ್ಟ ಎಂದು ಪರಿಗಣಿಸಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾದರೆ ಹೃದ್ರೋಗ ಸಮಸ್ಯೆಗಳು ಎದುರಾಗುತ್ತವೆ.

ಯುವಜನರಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಳಕ್ಕೆ ಕಾರಣ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಲು ನಾವು ಸೇವಿಸುವ ಆಹಾರಗಳಿಂದ ಹಿಡಿದು ನಮ್ಮ ಜೀವನಶೈಲಿಯು ಪ್ರಮುಖ ಕಾರಣವಾಗುತ್ತದೆ. ಸ್ಯಾಚುರೇಟೆಡ್‌ ಹಾಗೂ ಟ್ರಾನ್ಸ್‌ ಕೊಬ್ಬಿನಾಂಶ ಹೆಚ್ಚಿರುವ ಪ್ರದಾರ್ಥಗಳ ಸೇವನೆಯು ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ. ಇತ್ತೀಚಿನ ಸಂಸ್ಕೃರಿತ ಹಾಗೂ ಕ್ವಿಕ್‌ ರೆಡಿ ಫುಡ್‌ಗಳಲ್ಲಿ ಈ ಅಂಶ ಹೆಚ್ಚಿರುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ ಈ ಎಲ್ಲವೂ ಒಂದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾಗಲು ಕಾರಣವಾಗುತ್ತದೆ. ಇದರೊಂದಿಗೆ ಅತಿಯಾದ ಸಕ್ಕರೆ ಅಂಶ ಇರುವ ಪಾನೀಯಗಳು ಕೂಡ ಕೊಲೆಸ್ಟ್ರಾಲ್‌ ಹೆಚ್ಚಲು ಕಾರಣವಾಗುತ್ತದೆ. ಇವೆಲ್ಲದರ ಜೊತೆಗೆ ಕೌಟುಂಬಿಕ ಇತಿಹಾಸ ಹಾಗೂ ಮಧುಮೇಹ ಕೂಡ ಕಾರಣವಾಗಬಹುದು. ಡಯಾಬಿಟಿಕ್ ಡಿಸ್ಲಿಪಿಡೆಮಿಯಾ ಎಂದು ಕರೆಯಲ್ಪಡುವ ಸ್ಥಿತಿಯು ಎಲ್‌ಡಿಎಲ್‌ ಹೆಚ್ಚಿಸಿ, ಎಚ್‌ಡಿಎಲ್‌ ಕಡಿಮೆಯಾಗಲು ಕಾರಣವಾಗುತ್ತದೆ.

ಕೊಲೆಸ್ಟ್ರಾಲ್‌ ಹೆಚ್ಚಳದಿಂದಾಗುವ ಅಪಾಯಗಳು

ಯುವಜನರಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾದರೂ ಅದರ ಲಕ್ಷಣಗಳು ಗೋಚರವಾಗುವುದಿಲ್ಲ. ಇದರಿಂದ ಸೂಕ್ತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾದಂತೆ ಅಪಧಮನಿಗಳಲ್ಲಿ ಪ್ಲೇಕ್‌ ನಿರ್ಮಾಣವಾಗಲು ಕಾರಣವಾಗುತ್ತದೆ. ಇದರಿಂದ ಅಪಧಮನಿಗಳು ಕಿರಿದಾಗಿ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯರಕ್ತನಾಳದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ನಿಂದ ಅಪಧಮನಿಗಳಿಗೆ ಹಾನಿಯಾದರೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ.

ಆರಂಭಿಕ ಪತ್ತೆ, ತಡೆಗಟ್ಟುವ ಮಾರ್ಗ

ಈ ಮೊದಲೇ ಹೇಳಿದಂತೆ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ ದೇಹದಲ್ಲಿ ಯಾವುದೇ ಲಕ್ಷಣಗಳು ಗೋಚರವಾಗುವುದಿಲ್ಲ. ಅದಕ್ಕಾಗಿ 20 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ದೈಹಿಕವಾಗಿ ಫಿಟ್‌ ಆಗಿದ್ದರೂ 5 ವರ್ಷಕ್ಕೊಮ್ಮೆ ಕೊಲೆಸ್ಟ್ರಾಲ್‌ ಪರೀಕ್ಷೆ ಮಾಡಿಸಬೇಕು. ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾಗಿರುವುದು ಕಂಡುಬಂದರೆ ಪ್ರತಿ ವರ್ಷ ಪರೀಕ್ಷೆ ಮಾಡಿಸಬೇಕು.

ದಪ್ಪಗಿದ್ದವರಲ್ಲಿ ಮಾತ್ರ ಕೊಲೆಸ್ಟ್ರಾಲ್‌ ಹೆಚ್ಚಿರುತ್ತದೆ ಎಂದು ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ತೆಳ್ಳಗಿರುವವರಲ್ಲೂ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿರಬಹುದು. ಇದಕ್ಕಾಗಿ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೇ ಈ ಬಗ್ಗೆ ವೈದ್ಯರ ಮಾರ್ಗದರ್ಶನವನ್ನೂ ಪಡೆಯಬೇಕು.

ಇದರೊಂದಿಗೆ ಹಣ್ಣು, ತರಕಾರಿ, ಧಾನ್ಯಗಳು, ಲೀನ್‌ ಪ್ರೊಟೀನ್‌ ಅಂಶ ಇರುವ ಸಮತೋಲಿತ ಡಯೆಟ್‌ ಮೇಲೆ ಗಮನ ಹರಿಸಿ. ನಿರಂತರ ದೈಹಿಕ ಚಟುವಟಿಕೆ, ಆರೋಗ್ಯಕರ ತೂಕ ನಿರ್ವಹಣೆ ಕೂಡ ಕೊಲೆಸ್ಟ್ರಾಲ್‌ ನಿರ್ವಹಣೆಗೆ ಮುಖ್ಯವಾಗಿದೆ. ಧೂಮಪಾನ ಹಾಗೂ ಮಧ್ಯಪಾನ ತ್ಯಜಿಸುವುದು ಕೂಡ ಹೃದಯರಕ್ತನಾಳದ ಆರೋಗ್ಯ ಸುಧಾರಿಸಲು ಅವಶ್ಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ