logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಎಣ್ಣೆಯನ್ನ ಮತ್ತೆ ಮತ್ತೆ ಕುದಿಸಿ ಬಳಸುವುದು ಆರೋಗ್ಯಕ್ಕೆ ಒಳಿತಲ್ಲ, ಕ್ಯಾನ್ಸರ್‌ ಸೇರಿದಂತೆ ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ

ಅಡುಗೆಎಣ್ಣೆಯನ್ನ ಮತ್ತೆ ಮತ್ತೆ ಕುದಿಸಿ ಬಳಸುವುದು ಆರೋಗ್ಯಕ್ಕೆ ಒಳಿತಲ್ಲ, ಕ್ಯಾನ್ಸರ್‌ ಸೇರಿದಂತೆ ಗಂಭೀರ ಸಮಸ್ಯೆ ಎದುರಾಗಬಹುದು ಎಚ್ಚರ

Reshma HT Kannada

May 29, 2024 11:32 AM IST

google News

ಅಡುಗೆಎಣ್ಣೆಯನ್ನ ಮತ್ತೆ ಮತ್ತೆ ಕುದಿಸಿ ಬಳಸುವುದು ಆರೋಗ್ಯಕ್ಕೆ ಒಳಿತಲ್ಲ

    • ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಕುದಿಸಿ ಬಳಸುವುದು ಆರೋಗ್ಯಕ್ಕೆ ಹಾನಿಕರ ಎಂಬ ವಿಷಯ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಸಮಸ್ಯೆ ಆಗುತ್ತೆ, ಈ ಬಗ್ಗೆ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಲ್ಲಿ ಏನಿದೆ ಎಂಬಿತ್ಯಾದಿ ವಿವರ ಇಲ್ಲಿದೆ.
ಅಡುಗೆಎಣ್ಣೆಯನ್ನ ಮತ್ತೆ ಮತ್ತೆ ಕುದಿಸಿ ಬಳಸುವುದು ಆರೋಗ್ಯಕ್ಕೆ ಒಳಿತಲ್ಲ
ಅಡುಗೆಎಣ್ಣೆಯನ್ನ ಮತ್ತೆ ಮತ್ತೆ ಕುದಿಸಿ ಬಳಸುವುದು ಆರೋಗ್ಯಕ್ಕೆ ಒಳಿತಲ್ಲ

ಹೋಟೆಲ್‌ಗಳಲ್ಲಾಗಲಿ, ಮನೆಗಳಲ್ಲಾಗಲಿ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಕುದಿಸಿ ಬಳಸುವುದು ಸಾಮಾನ್ಯ. ಭಾರತದಂತಹ ಮಧ್ಯಮವರ್ಗದವರು ಹೆಚ್ಚಿರುವ ದೇಶಗಳಲ್ಲಿ ಇಂತಹ ಅಭ್ಯಾಸ ಸಹಜ, ಆದರೆ ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಕುದಿಸಿ ಬಳಸುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂದು ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌ (ಐಸಿಎಂಆರ್‌) ಎಚ್ಚರಿಕೆ ನೀಡಿದೆ.

ಮೇ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಭಾರತೀಯ ಆಹಾರಕ್ರಮದ ಮಾರ್ಗಸೂಚಿಗಳ ಪ್ರಕಾರ ಅಡುಗೆಗಾಗಿ ಸಸ್ಯಜನ್ಯ ಎಣ್ಣೆಗಳನ್ನು ಬಳಕೆ ಮಾಡುವುದು ಸಹಜ. ಆದರೆ ಇದನ್ನು ಪದೇ ಪದೇ ಬಿಸಿ ಮಾಡಿ ಅಥವಾ ಕುದಿಸಿ ಬಳಸುವುದು ಆಕ್ಸಿಡೀಕರಣಕ್ಕೆ ಕಾರಣವಾಗುತ್ತದೆ. ಇದು ಹಾನಿಕಾರಕ ಅಥವಾ ವಿಷಕಾರಿ ಸಂಯಕ್ತಗಳ ಉತ್ಪಾದನೆಗೆ ಕಾರಣವಾಗುವುದು ಮಾತ್ರವಲ್ಲ ಇದು ಹೃದಯ ರಕ್ತನಾಳದ ಕಾಯಿಲೆ ಹಾಗೂ ಕ್ಯಾನ್ಸರ್‌ನ ಅಪಾಯವನ್ನೂ ಹೆಚ್ಚಿಸುತ್ತದೆ.

ಹಂಗ್ರಿ ಕೋಲಾ ಸಂಸ್ಥೆಯ ಹಿರಿಯ ಪೌಷ್ಟಿಕ ತಜ್ಞರಾದ ಇಪ್ಸಿತಾ ಚಕ್ರವರ್ತಿ ಅವರ ಪ್ರಕಾರ ʼಸಸ್ಯಜನ್ಯ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿದರೆ, ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs), ಆಲ್ಡಿಹೈಡ್‌ಗಳು ಮತ್ತು ಅಕ್ರಿಲಾಮೈಡ್‌ನಂತಹ ಹಾನಿಕಾರಕ ಸಂಯುಕ್ತಗಳ ರಚನೆಗೆ ಕಾರಣವಾಗುತ್ತದೆ. ಈ ಸಂಯುಕ್ತಗಳು ಆಕ್ಸಿಡೀಕರಣ, ಹೈಡ್ರೋಲಿಸಿಸ್‌ ಮತ್ತು ಪಾಲಿಮರೀಕರಣವನ್ನು ಒಳಗೊಂಡಂತೆ ರಾಸಾಯನಿಕ ಕ್ರಿಯೆಗಳ ಸರಣಿಯ ಮೂಲಕ ರಚನೆಯಾಗುತ್ತವೆ. ಎಣ್ಣೆಯನ್ನು ಪದೇ ಪದೇ ಕಾಯಿಸಿದ ಇದು ಪ್ರಕ್ರಿಯೆ ಹೆಚ್ಚುತ್ತದೆ.

ಪಾಲಿಸೈಕ್ಲಿಕ್‌ ಆರೊಮ್ಯಾಟಿಕ್‌ ಹೈಡ್ರೋಕಾರ್ಬನ್‌ಗಳು ಡಿಎನ್‌ಎಗೆ ಹಾನಿ ಮಾಡುವ ಮತ್ತು ಕ್ಯಾನ್ಸರ್‌ ಬೆಳವಣಿಗೆಗೆ ಕಾರಣವಾಗುವ ಕಾರ್ಸಿನೋಜೆನ್‌ಗಳು ಎಂದು ಅವರು ಎಚ್ಚರಿಸಿದ್ದಾರೆ. ಅಲ್ಡಿಹೈಡ್ಸ್, ವಿಶೇಷವಾಗಿ ಅಕ್ರೋಲಿನ್, ವಿಷಕಾರಿ ಮತ್ತು ಉಸಿರಾಟದ ವ್ಯವಸ್ಥೆಗೆ ಕಿರಿಕಿರಿಯುಂಟುಮಾಡುತ್ತದೆ. ಹೆಚ್ಚುವರಿಯಾಗಿ, ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ಪಿಷ್ಟ ಆಹಾರಗಳಲ್ಲಿ ರೂಪುಗೊಳ್ಳುವ ಅಕ್ರಿಲಾಮೈಡ್ ಅನ್ನು ಸಂಭವನೀಯ ಮಾನವ ಕಾರ್ಸಿನೋಜೆನ್ ಎಂದು ವರ್ಗೀಕರಿಸಲಾಗಿದೆ. ಈ ಸಂಯಕ್ತಕಗಳು ಆರೋಗ್ಯದ ಮೇಲೆ ಗಮನಾರ್ಹ ಅಪಾಯವನ್ನು ಉಂಟು ಮಾಡುತ್ತದೆ. ಹಾಗಾಗಿ ಅಡುಗೆಗೆ ಬಳಸುವ ಎಣ್ಣೆಯ ಬಳಕೆಯ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ.

ಯಾವ ಎಣ್ಣೆಗಳನ್ನು ಹೆಚ್ಚು ಕುದಿಸಬಾರದು

ʼಸೋಯಾಬಿನ್‌, ಸೂರ್ಯಕಾಂತಿ ಹಾಗೂ ಜೋಳ ಎಣ್ಣೆಯಂತಹ ಹೆಚ್ಚಿನ ಪ್ರಮಾಣದ ಬಹುಅಪರ್ಯಾಪ್ತ ಕೊಬ್ಬಿನಾಂಶ ಹೊಂದಿರುವ ತೈಲಗಳನ್ನು ಪದೇ ಪದೇ ಬಿಸಿ ಮಾಡಿದಾಗ ಹಾನಿಕಾರಕವಾಗುತ್ತದೆ. ಬಹುಅಪರ್ಯಾಪ್ತ ಕೊಬ್ಬಿನ ರಾಸಾಯನಿಕ ರಚನೆಯ ಕಾರಣದಿಂದ ಇದು ಸಂಭವಿಸುತ್ತದೆ.

ಆಲಿವ್‌ ಎಣ್ಣೆ, ಕ್ಯಾನೊಲ ಎಣ್ಣೆಯಂತಹ ಹೆಚ್ಚು ಮೊನೊಸಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಎಣ್ಣೆ ಹಾಗೂ ತೆಂಗಿನ ಎಣ್ಣೆ ಮತ್ತು ಪಾಮ್ ಎಣ್ಣೆಯಂತಹ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನಂಶ ಹೊಂದಿರುವ ತೈಲಗಳು ಹೆಚ್ಚಿನ ತಾಪಮಾನದಲ್ಲಿ ಹೆಚ್ಚು ಸ್ಥಿರವಾಗಿರುತ್ತವೆ. ತೈಲಗಳ ಸೂಕ್ಷ್ಮತೆಗೆ ಕಾರಣವಾಗುವ ಅಂಶಗಳು ಅವುಗಳ ಕೊಬ್ಬಿನಾಮ್ಲ ಸಂಯೋಜನೆ, ಉತ್ಕರ್ಷಣ ನಿರೋಧಕಗಳ ಉಪಸ್ಥಿತಿ ಮತ್ತು ತಾಪಮಾನದ ಅವಧಿಯನ್ನು ಒಳಗೊಂಡಿರುತ್ತದೆ.

ಕುದಿಸಿದ ಎಣ್ಣೆಯಿಂದಾಗುವ ಅಪಾಯ ಕಡಿಮೆಯಾಗಲು ಈ ಕ್ರಮ ಪಾಲಿಸಿ

ಸಸ್ಯಜನ್ಯ ಎಣ್ಣೆಗಳ ಪದೇ ಪದೇ ಕುದಿಸಿದ ಎಣ್ಣೆಯಿಂದಾಗುವ ಅಪಾಯಗಳನ್ನು ಕಡಿಮೆ ಮಾಡಲು, ವ್ಯಕ್ತಿಗಳು ಹಲವಾರು ಸುರಕ್ಷಿತ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.

* ಮೊದಲನೇದಾಗಿ ತೈಲವನ್ನು ಹಲವು ಬಾರಿ ಮರುಬಳಕೆ ಮಾಡುವುದನ್ನು ತಪ್ಪಿಸಬೇಕು. ಅದರಲ್ಲೂ ಪದೇ ಪದೇ ಬಿಸಿ ಮಾಡಿದ ಎಣ್ಣೆಯನ್ನು ಬಳಸಲೇಬಾರದು. ಪ್ರತಿ ಬಾರಿ ಅಡುಗೆ ಮಾಡುವಾಗಲೂ ತಾಜಾ ಎಣ್ಣೆಯನ್ನೇ ಬಳಸಬೇಕು. ಏಕೆಂದರೆ ಇದು ಹಾನಿಕಾರಕ ಸಂಯುಕ್ತಗಳ ರಚನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆʼ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಚಕ್ರವರ್ತಿ.

* ನಾವು ಅಡುಗೆ ಮಾಡಲು ಹೆಚ್ಚಿನ ಸ್ಮೋಕ್‌ ಪಾಯಿಂಟ್‌ ಅಥವಾ ಸ್ಥಿರತೆ ಹೊಂದಿರುವ ಎಣ್ಣೆಯನ್ನು ಆರಿಸಬೇಕು. ಆಲಿವ್ ಎಣ್ಣೆ, ಆವಕಾಡೊ ಎಣ್ಣೆ ಅಥವಾ ತೆಂಗಿನ ಎಣ್ಣೆಯಂತಹ ಅಡುಗೆಎಣ್ಣೆಗಳ ಬಳಕೆ ಉತ್ತಮ. ಸ್ಟೀಮಿಂಗ್, ಬೇಕಿಂಗ್ ಅಥವಾ ಗ್ರಿಲ್ಲಿಂಗ್‌ನಂತಹ ಕಡಿಮೆ ಎಣ್ಣೆಯ ಅಗತ್ಯವಿರುವ ಅಡುಗೆ ವಿಧಾನಗಳನ್ನು ಪಾಲಿಸುವ ಮೂಲಕ ಎಣ್ಣೆಯನ್ನು ಹೆಚ್ಚು ಬಿಸಿ ಮಾಡುವುದು ಅಥವಾ ಕುದಿಸುವ ಅವಶ್ಯಕತೆ ಇರುವುದಿಲ್ಲ. ಅಡುಗೆ ಸಮಯದಲ್ಲೂ ಎಣ್ಣೆಯನ್ನು ಅತಿಯಾಗಿ ಕುದಿಸುವುದನ್ನು ತಪ್ಪಿಸುವುದು ಉತ್ತಮ.

ಉತ್ತಮ ಆರೋಗ್ಯಕ್ಕಾಗಿ ಈ ಅಡುಗೆ ಕ್ರಮಗಳನ್ನು ಅನುಸರಿಸಿ

ಡೀಪ್‌ ಫ್ರೈಯಿಂಗ್‌ ಬದಲಿಗೆ ಬೇಕಿಂಗ್‌ಗಾಗಿ ಏರ್‌ ಫ್ರೈಯರ್‌ಗಳು ಮತ್ತು ಓವನ್‌ಗಳನ್ನು ಬಳಸುವುದರಿಂದ ಗಮನಾರ್ಹವಾಗಿ ಎಣ್ಣೆ ಬಳಕೆ ಕಡಿಮೆ ಮಾಡಬಹುದು. ಆವಿಯಲ್ಲಿ ಬೇಯಿಸುವುದು ಹಾಗೂ ಕುದಿಸುವುದು ಕೂಡ ಎಣ್ಣೆಯ ಅಗತ್ಯವಿಲ್ಲದೇ ಪೋಷಕಾಂಶಗಳನ್ನು ಸಂರಕ್ಷಿಸುವ ಅತ್ಯುತ್ತಮ ವಿಧಾನಗಳಾಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ