logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ; ಕಡಲೆಕಾಯಿ ಸೇವನೆಯ 10 ಉಪಯೋಗ ತಿಳಿಯಿರಿ

ಚಳಿಗಾಲದಲ್ಲಿ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ; ಕಡಲೆಕಾಯಿ ಸೇವನೆಯ 10 ಉಪಯೋಗ ತಿಳಿಯಿರಿ

Reshma HT Kannada

Dec 08, 2023 10:17 AM IST

google News

ಚಳಿಗಾಲದಲ್ಲಿ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ

    • ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುವ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಇದರ ಪ್ರಯೋಜನಗಳು ಹಾಗೂ ಸೇವನೆಯ ಕ್ರಮದ ವಿವರ ಇಲ್ಲಿದೆ.
ಚಳಿಗಾಲದಲ್ಲಿ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ
ಚಳಿಗಾಲದಲ್ಲಿ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ

ಚಳಿಗಾಲದಲ್ಲಿ ಶೇಂಗಾ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಹುರಿದ ಶೇಂಗಾ ಬಾಯಿ ರುಚಿ ಹೆಚ್ಚಿಸುವ ಕಾರಣಕ್ಕೆ ಚಳಿಗಾಲದಲ್ಲಿ ಹಲವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಹುರಿದ ಶೇಂಗಾ ತಿನ್ನುವುದಕ್ಕಿಂತ ನೆನೆಸಿಟ್ಟು ತಿನ್ನುವುದು ಉತ್ತಮ ಎನ್ನುತ್ತಾರೆ ತಜ್ಞರು. ಇಡೀ ರಾತ್ರಿ ನೆನೆಸಿಟ್ಟು, ಬೆಳಗೆದ್ದು ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಪೋಷಕಾಂಶಗಳು ದೇಹ ಸೇರುತ್ತವೆ. ಹೆಚ್ಚಿನ ನಾರಿನಾಂಶ ಮತ್ತು ಪ್ರೊಟೀನ್‌, ಉತ್ತಮ ಕೊಬ್ಬು, ಉತ್ಕರ್ಷಣ ನಿರೋಧಕಗಳ ಅದ್ಭುತ ಮೂಲವಾಗಿರುವ ನೆನೆಸಿದ ಕಡಲೆಕಾಯಿ ಬೆಳಗಿನ ಉಪಾಹಾರದ ಸಮಯದಲ್ಲಿ ತಿನ್ನುವುದರಿಂದ ಇದು ನಿಮಗೆ ಪೂರ್ಣವಾಗಿ ಹಾಗೂ ದೀರ್ಘಕಾಲದವರೆಗೆ ಪೋಷಣೆಯನ್ನು ನೀಡುತ್ತದೆ. ಹಸಿವಿನಿಂದಾಗುವ ಸಂಕಟ ತಡೆಯಲು ಇದು ಸಹಕಾರಿ. ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಹಲವರು ನೆನೆಸಿದ ಶೇಂಗಾದಿಂದ ಚಾಟ್ಸ್‌ ತಯಾರಿಸುತ್ತಾರೆ. ಕೆಲವರು ಉಪ್ಪಿಟ್ಟು, ಅವಲಕ್ಕಿಯಂತಹ ತಿನಿಸಿನೊಂದಿಗೆ ಸೇರಿಸುತ್ತಾರೆ. ನೆನೆಸಿದ ಕಡಲೆಕಾಯಿಯನ್ನು ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು. ರಾತ್ರಿ ಊಟದಲ್ಲಿಯೂ ಕೂಡ ಸೇರಿಸಬಹುದು. ರಾತ್ರಿ ನೆನೆಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದನ್ನು ಫ್ರೈಗಳು, ಕರಿ ಅಥವಾ ಸಲಾಡ್‌ನೊಂದಿಗೆ ಕೂಡ ಸೇರಿಸಿ ತಿನ್ನಬಹುದು.

ನೆಲಗಡಲೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದ್ದು, ಇದು ದೇಹಕ್ಕೆ ಅಗತ್ಯ ಪೋಷಕಾಂಶ ಸೇರಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಮೊನೊಸ್ಯಾಚುರೇಟೆಡ್‌ ಮತ್ತು ಪಾಲಿಅನ್‌ಸ್ಯಾಚುರೇಟೆಡ್‌ ಕೊಬ್ಬಿನಾಂಶವಿದೆ. ಇದು ಜಿಐ ಕಡಿಮೆ ಪ್ರಮಾಣದಲ್ಲಿರುವ ಆಹಾರವಾದ ಕಾರಣ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನೆನೆಸಿದ ಶೇಂಗಾ ತಿನ್ನುವುದರಿಂದಾಗುವ ಪ್ರಯೋಜನಗಳು

ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶೇಂಗಾವನ್ನು ನೆನೆಸಿ ತಿನ್ನುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ.

ಪೋಷಕಾಂಶ ಸಮೃದ್ಧ: ನೆಲಗಡಲೆಯಲ್ಲಿ ಪ್ರೊಟೀನ್‌, ನಾರಿನಾಂಶ, ವಿಟಮಿನ್‌ ಹಾಗೂ ಮಿನರಲ್ಸ್‌ಗಳಿಂದ ತುಂಬಿರುವ ಅಗತ್ಯ ಪೋಷಕಾಂಶಗಳಿರುತ್ತವೆ. ಇದು ಶಕ್ತಿಯ ಮೂಲವಾಗಿರುವುದು ಮಾತ್ರವಲ್ಲ, ಸಮತೋಲಿತ ಡಯೆಟ್‌ ಕ್ರಮಕ್ಕೆ ಉತ್ತಮ ಆಯ್ಕೆಯಾಗಿದೆ.

ಹೃದಯದ ಆರೋಗ್ಯ: ನೆಲಗಡಲೆ ತಿನ್ನುವುದಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ. ಇದರಲ್ಲಿ ಮೊನೊಅನ್‌ ಸ್ಯಾಚುರೇಟೆಡ್‌ಹಾಗೂ ಪಾಲಿಅನ್‌ಸ್ಯಾಚುರೇಟೆಡ್‌ ಕೊಬ್ಬಿನಾಂಶಗಳಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸುತ್ತದೆ. ಆ ಮೂಲಕ ಹೃದ್ರೋಗ ಸಂಬಂಧಿ ಸಮಸ್ಯೆಗಳಿಂದ ದೂರ ಮಾಡುತ್ತದೆ.

ತೂಕ ಇಳಿಕೆ: ಶೇಂಗಾದಲ್ಲಿ ಕ್ಯಾಲೊರಿ ಅಂಶ ದಟ್ಟವಾಗಿದ್ದರೂ ಸಹ, ಇವು ತೃಪ್ತಿಕರ ಗುಣಲಕ್ಷಣಗಳಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನಾಂಶವು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದು ಒಟ್ಟಾರೆ ಕ್ಯಾಲೊರಿ ಸೇವನೆಯ ಪ್ರಮಾಣವನ್ನು ತಗ್ಗಿಸುತ್ತದೆ.

ಆಂಟಿಆಕ್ಸಿಡೆಂಟ್‌ ಅಂಶ: ನೆಲಗಡಲೆಯಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ರೆಸ್ವೆರಾಟ್ರೋಲ್‌ ಅಂಶವೂ ಸೇರಿರುತ್ತದೆ. ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಫ್ರಿ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತವೆ. ಆ ಮೂಲಕ ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತದೆ. ಜೊತೆಗೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ: ಕಡಲೆಕಾಯಿಯಲ್ಲಿರುವ ಕಡಿಮೆ ಗ್ಲೈಸೆಮಿಕ್‌ ಸೂಚ್ಯಂಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಮಧುಮೇಹಿಗಳಿಗೆ ಸಕ್ಕರೆಯ ಪ್ರಮಾಣವನ್ನು ನಿರ್ವಹಿಸಲು ಉತ್ತಮ ಆಹಾರವಾಗಿದೆ.

ಮೆದುಳಿನ ಆರೋಗ್ಯ: ನೆಲಗಡಲೆಯಲ್ಲಿರುವ ನಿಯಾಸಿನ್‌ ಮತ್ತು ಫೋಲೇಟ್‌ನಂತಹ ಪೋಷಕಾಂಶಗಳು ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ನಿಯಾಸಿನ ನಿರ್ದಿಷ್ಟವಾಗಿ ಅರಿವಿನ ಕಾರ್ಯವನ್ನು ಬೆಂಬಲಿಸುತ್ತದೆ.

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ: ಶೇಂಗಾದಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಆ ಕಾರಣದಿಂದ ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಸಮಪ್ರಮಾಣದಲ್ಲಿ ನಾರಿನಾಂಶ ಸೇವಿಸುವುದು ಮಲಬದ್ಧತೆ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಉತ್ತಮ.

ಸ್ನಾಯುಗಳನ್ನು ಸದೃಢವಾಗಿಸುವುದು: ಅತ್ಯಧಿಕ ಪ್ರೊಟೀನ್‌ ಅಂಶವಿರುವ ನೆಲಗಡಲೆಯನ್ನು ಆಹಾರದೊಂದಿಗೆ ಸೇರಿಸುವುದರಿಂದ ಸ್ನಾಯುಗಳ ಬಲವರ್ಧನೆ ಸಾಧ್ಯ. ಇದು ಸ್ನಾಯುಗಳನ್ನು ದುರಸ್ತಿಗೊಳಿಸುವ ಕೆಲಸವನ್ನೂ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೂ ಉತ್ತಮ: ವಿಟಮಿನ್‌ ಇ ಹಾಗೂ ವಿಟಮಿನ್‌ ಸಿ ಸಮೃದ್ಧವಾಗಿರುವುದು ಹಾಗೂ ಆಂಟಿಆಕ್ಸಿಡೆಂಟ್‌ ಅಂಶ ಹೇರಳವಾಗಿರುವುದು ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ಆಕ್ಸಿಡೇಟಿವ್‌ ಒತ್ತಡಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಸದಾ ಯೌವನಿಗರಂತೆ ಕಾಣುವಂತೆ ಮಾಡುತ್ತದೆ.

ಏನರ್ಜಿ ಬೂಸ್ಟರ್‌: ನೆಲಗಡಲೆ ನೆನೆಸಿ ತಿನ್ನುವುದರಿಂದ ದೇಹದಲ್ಲಿ ಚೈತನ್ಯ ಹೆಚ್ಚುತ್ತದೆ. ಇದು ಎನರ್ಜಿ ಬೂಸ್ಟರ್‌ನಂತೆ ಕೆಲಸ ಮಾಡುತ್ತದೆ. ವರ್ಕೌಟ್‌ ಮಾಡುವ ಮೊದಲು ಇದನ್ನು ಸೇವಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ