ಸಿ-ಸೆಕ್ಷನ್ ಡೆಲಿವರಿ ಬಳಿಕ ಇನ್ನೊಂದು ಮಗು ಪಡೆಯಲು ಎಷ್ಟು ಅಂತರವಿರಬೇಕು? ಮಹಿಳೆಯರಿಗೆ ಇಲ್ಲಿದೆ ಮಹತ್ವದ ಮಾಹಿತಿ
May 27, 2024 07:30 AM IST
ಸಿ-ಸೆಕ್ಷನ್ ಡೆಲಿವರಿ ಬಳಿಕ ಇನ್ನೊಂದು ಮಗು ಪಡೆಯಲು ಎಷ್ಟು ಅಂತರವಿರಬೇಕು?
- ಮಗುವಿಗೆ ಜನ್ಮ ನೀಡುವುದು ಎಂದರೆ ಸುಲಭದ ಪ್ರಕ್ರಿಯೆಯಲ್ಲ. ಅದರಲ್ಲೂ ಸಿ ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿ ಆ ಬಳಿಕ ಮತ್ತೊಂದು ಮಗು ಬೇಕೆಂದು ನಿಮ್ಮ ಮನಸ್ಸು ಹಾತೊರೆಯುತ್ತಿದ್ದರೆ ಕೆಲವೊಂದು ಮುಖ್ಯ ಅಂಶಗಳನ್ನು ನೀವು ಗಮನಿಸಲೇಬೇಕು. ಎರಡು ಆರೋಗ್ಯಕರ ಮಕ್ಕಳ ತಾಯಿಯಾಗಬೇಕು ಎಂದರೆ ನೀವು ಯಾವೆಲ್ಲ ವಿಚಾರಗಳಿಗೆ ಮಹತ್ವ ನೀಡಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ನವಮಾಸಗಳ ಕಾಲ ಮಗುವನ್ನು ಗರ್ಭದಲ್ಲಿ ಹೊತ್ತು ಕಂದಮ್ಮನಿಗೆ ಜನ್ಮ ನೀಡುವುದು ಎಂದರೆ ಅದು ಖಂಡಿತವಾಗಿಯೂ ಹೆಣ್ಣಿಗೆ ಮರುಜನ್ಮ ಸಿಕ್ಕಂತೆಯೇ ಸರಿ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ಸಿಸೇರಿಯನ್ ಹೆರಿಗೆಯ ಪ್ರಮಾಣ ಹೆಚ್ಚುತ್ತಿದೆ. ಮಗುವಿನ ಹೃದಯ ಬಡಿತ ಇಳಿಮುಖವಾಗುವುದು, ಬರ್ತ್ ಪ್ಯಾಸೇಜ್ ಮಗು ಸರಿಯಾಗಿ ಬಾರದೇ ಇರುವುದು, ಮಗುವಿನ ತೂಕ ಹೆಚ್ಚಳ ಹೀಗೆ ನಾನಾ ಕಾರಣಗಳಿಂದಾಗಿ ವೈದ್ಯರು ನೈಸರ್ಗಿಕ ಹೆರಿಗೆ ವಿಧಾನದ ಬದಲಾಗಿ ಅನಿವಾರ್ಯವಾಗಿ ಸಿ ಸೆಕ್ಷನ್ ಹೆರಿಗೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ.
ಸಿ-ಸೆಕ್ಷನ್ ನಂತರ ಇನ್ನೊಂದು ಮಗು ಪಡೆಯಲು ಎಷ್ಟು ಸಮಯ ಬೇಕು
ನೈಸರ್ಗಿಕ ಹೆರಿಗೆಗೆ ಹೋಲಿಕೆ ಮಾಡಿದರೆ ಮಹಿಳೆಯರು ಸಿ ಸೆಕ್ಷನ್ ಹೆರಿಗೆಯಿಂದ ಗುಣಮುಖರಾಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಆಪರೇಷನ್‌ನಿಂದಾಗಿ ಉಂಟಾದ ಗಾಯ ಮಾಸಲು ಕೆಲವು ದಿನಗಳ ಅವಶ್ಯಕತೆ ಇರುವುದರಿಂದ ಈ ಸಮಯದಲ್ಲಿ ಹೆಚ್ಚು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೇ ಯಾವ ಮಹಿಳೆಯು ಸಿ ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳುತ್ತಾರೋ ಅವರು ಇನ್ನೊಂದು ಮಗು ಮಾಡಿಕೊಳ್ಳಲು 2 ವರ್ಷಗಳ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.
ಆದರೆ ಕೆಲವು ತಾಯಂದಿರು ತಮ್ಮ ಮೊದಲ ಮಗುವಿಗೆ ಜನ್ಮ ನೀಡುವಾಗಲೇ 35 ವರ್ಷ ಮೀರಿದ್ದರೆ ಇಂತಹ ಸಂದರ್ಭಗಳಲ್ಲಿ ಇನ್ನೂ 2 ವರ್ಷ ಅಂತರದ ಬಳಿಕ ಮತ್ತೊಂದು ಮಗುವಿಗೆ ಗರ್ಭವತಿಯಾಗುವ ಸಾಧ್ಯತೆಗಳು ಕಡಿಮೆಯಾಗುವ ಹಿನ್ನೆಲೆಯಲ್ಲಿ ವೈದ್ಯರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮತ್ತೊಂದು ಮಗುವಿನ ನಿರ್ಧಾರಕ್ಕೆ ಬರುವಂತೆ ಸೂಚಿಸುತ್ತಾರೆ.
ಆದರೆ ಸಿ ಸೆಕ್ಷನ್‌ಗೆ ಒಳಗಾದ ಮಹಿಳೆಯ ದೇಹದಲ್ಲಿ ಉಂಟಾದ ಬದಲಾವಣೆಗಳು ಸರಿಯಾಗಿ ಆಕೆ ಸಾಮಾನ್ಯ ಸ್ಥಿತಿಗೆ ಮರಳಲು ಕನಿಷ್ಠ 2 ವರ್ಷಗಳ ಕಾಲಾವಕಾಶ ಬೇಕೇ ಬೇಕು ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಈ ಅವಧಿಯಲ್ಲಿ ಆಕೆ ತನ್ನ ದೇಹದಲ್ಲಾದ ಬದಲಾವಣೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಪೋಷಕಾಂಶದ ಕೊರತೆ ಕಾಡಬಹುದು
ಕೇವಲ ಇದು ಮಾತ್ರವಲ್ಲ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಎರಡರಿಂದ ಮೂರು ವರ್ಷಗಳ ಅಂತರ ಕಾಯ್ದುಕೊಂಡಾಗ ಮಾತ್ರ ಮೊದಲನೇ ಮಗುವಿಗೆ ತಾಯಿಯ ಹಾಲು ಹೆಚ್ಚು ಸಮಯಗಳವರೆಗೆ ಸಿಗಲಿದೆ. ತಾಯಿಯ ಹಾಲು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಮೊದಲನೇ ಮಗು ದಷ್ಠಪುಷ್ಠವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಒಂದು ವೇಳೆ ಮೊದಲನೇ ಮಗು ಜನಿಸಿದ ವರ್ಷದ ಒಳಗಾಗಿ ಎರಡನೇ ಮಗುವಿನ ನಿರ್ಧಾರಕ್ಕೆ ಬಂದಲ್ಲಿ ಮೊದಲನೇ ಮಗು ಸರಿಯಾಗಿ ಎದೆಹಾಲು ಸಿಗದೇ ಪೋಷಕಾಂಶದ ಕೊರತೆಯಿಂದ ಬಳಲಬೇಕಾಗಿ ಬರುತ್ತದೆ.
ಮಕ್ಕಳ ಜನನ ನಡುವೆ ಅಂತರ ಕಾಯ್ದುಕೊಳ್ಳುವುದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಆಯ್ಕೆ. ಒಂದು ಮಗುವಿನ ಜನಿಸಿದ ಬಳಿಕ ತನ್ನ ಆರೋಗ್ಯದ ಕಡೆಯೂ ಗಮನ ಹರಿಸಿ, ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು, ದೇಹದಲ್ಲಿ ಎಲ್ಲಾ ರೀತಿಯ ಪೋಷಕಾಂಶ, ಜೀವಸತ್ವಗಳನ್ನು ಮರುಸ್ಥಾಪನೆ ಮಾಡಿಕೊಂಡು ಜೊತೆಯಲ್ಲಿ ಮಾನಸಿಕವಾಗಿಯೂ ಸದೃಢಳಾದಾಗ ಮಾತ್ರ ಆಕೆ ಮತ್ತೊಂದು ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಸಾಧ್ಯವಿದೆ.