logo
ಕನ್ನಡ ಸುದ್ದಿ  /  ಜೀವನಶೈಲಿ  /  ಜೀವನಶೈಲಿಯಲ್ಲಿ ಇಂದಿನಿಂದಲೇ ಈ 10 ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಹೃದ್ರೋಗದ ಸಮಸ್ಯೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ

ಜೀವನಶೈಲಿಯಲ್ಲಿ ಇಂದಿನಿಂದಲೇ ಈ 10 ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಹೃದ್ರೋಗದ ಸಮಸ್ಯೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ

Reshma HT Kannada

Sep 28, 2024 07:00 AM IST

google News

ಹೃದಯ ಆರೋಗ್ಯ ಕಾಪಾಡುವ ಜೀವನಶೈಲಿಗೆ ಸಂಬಂಧಿಸಿದ ಅಭ್ಯಾಸಗಳು

    • ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ಹೃದ್ರೋಗಿಗಳ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೃದಯದ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರು ಹಲವರು. ಈ ನಿಟ್ಟಿನಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವತ್ತ ನಾವು ಹೆಚ್ಚು ಗಮನಹರಿಸಬೇಕಾಗಿದೆ. ಹೃದಯದ ಅಪಾಯದಿಂದ ದೂರ ಇರಬೇಕು ಅಂದ್ರೆ ನಮ್ಮ ದಿನಚರಿಯಲ್ಲಿ ತಪ್ಪದೇ ಈ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. 
ಹೃದಯ ಆರೋಗ್ಯ ಕಾಪಾಡುವ ಜೀವನಶೈಲಿಗೆ ಸಂಬಂಧಿಸಿದ ಅಭ್ಯಾಸಗಳು
ಹೃದಯ ಆರೋಗ್ಯ ಕಾಪಾಡುವ ಜೀವನಶೈಲಿಗೆ ಸಂಬಂಧಿಸಿದ ಅಭ್ಯಾಸಗಳು (PC: Canva)

ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆ, ದೀರ್ಘಕಾಲ ಕುಳಿತು ಕೆಲಸ ಮಾಡುವುದು ಈ ಹಲವು ಕಾರಣಗಳಿಂದ ದಿನೇದಿನೇ ಹೃದ್ರೋಗದ ಅಪಾಯ ಹೆಚ್ಚುತ್ತಿದೆ. ಯುವಕರು, ಚಿಕ್ಕಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಯಾವುದೇ ಸೂಚನೆ ನೀಡದೆ ಸಾವು ಬರುತ್ತಿದೆ. ಇದರಿಂದ ಹೃದಯದ ಕಾಳಜಿ ಮಾಡುವುದು ಅವಶ್ಯವಾಗಿದೆ. ಹೃದ್ರೋಗ ಅಪಾಯದ ಬಗ್ಗೆ ಅರಿವು ಮೂಡಿಸುವುದು, ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವವನ್ನು ವಿವರಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಣೆ ಇದೆ. 

ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳ ಪಟ್ಟಿಗೆ ಹೃದ್ರೋಗವು ಸೇರಿಕೊಂಡಿದ್ದು ಜಾಗತಿಕ ಮಟ್ಟದಲ್ಲಿ ಸಾವಿಗೆ ಇದು ಪ್ರಮುಖ ಕಾರಣವಾಗಿದೆ. ಆದರೆ ಇದಕ್ಕಾಗಿ ಹೆಚ್ಚಿದ್ದೇನೂ ಮಾಡಬೇಕಾಗಿಲ್ಲ. ನಿಮ್ಮ ಜೀವನಶೈಲಿಯಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು, ಹೃದಯದ ಸಮಸ್ಯೆ ನಿಮ್ಮನ್ನು ಎಂದಿಗೂ ಕಾಡುವುದಿಲ್ಲ. ಈ 10 ಸರಳ ಬದಲಾವಣೆಗಳನ್ನ ಮಾಡಿಕೊಂಡರೆ ಹೃದಯದ ಸಮಸ್ಯೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ ಎನ್ನುತ್ತಾರೆ ಹೃದ್ರೋಗ ತಜ್ಞರು. ಹೃದಯದ ಆರೋಗ್ಯಕ್ಕೆ ತಜ್ಞರು ಸೂಚಿಸಿದ 10 ಜೀವನಶೈಲಿಯ ಬದಲಾವಣೆಗಳಿವು.

ಸಮತೋಲಿತ ಆಹಾರ ಸೇವನೆ

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಲೀನ್‌ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವು ನಿಮ್ಮ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಂಸ್ಕರಿಸಿದ ಆಹಾರಗಳು, ಹೆಚ್ಚುವರಿ ಉಪ್ಪು ಮತ್ತು ಹೆಚ್ಚಿ ಹೆಚ್ಚು ಸಕ್ಕರೆ ಅಂಶಗಳಿರುವ ಆಹಾರ ಸೇವನೆಯನ್ನು ತಪ್ಪಿಸಿ.

ನಿಯಮಿತ ವ್ಯಾಯಾಮ

ವಾರದಲ್ಲಿ ಕನಿಷ್ಠ 5 ದಿನಗಳ ಕಾಲ 30 ಗಂಟೆ ಹೊತ್ತು ಸ್ಲೈಕಿಂಗ್‌, ವಾಕಿಂಗ್ ಅಥವಾ ಸ್ವಿಮ್ಮಿಂಗ್‌ನಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿ. ಸಾಮಾನ್ಯವಾಗಿ ಸಕ್ರಿಯರಾಗಿರುವುದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ,ಹೃದಯ ಬಡಿತವನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯಕರ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ತೂಕ ನಿರ್ವಹಣೆ

ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸವಾಲಾಗಿರುವುದು ತೂಕ ಹೆಚ್ಚಳ ಸಮಸ್ಯೆ. ಇದನ್ನು ನಿಯಂತ್ರಿಸುವುದು ಬಹುತೇಕರಿಗೆ ಕಷ್ಟಸಾಧ್ಯವಾಗಿದೆ. ಆದರೆ ಅತಿಯಾದ ತೂಕವು ಹೃದ್ರೋಗಗಳಿಗೆ ಅಪಾಯ ತಂದೊಡ್ಡುತ್ತಿರುವುದು ಸುಳ್ಳಲ್ಲ. ಕಿಬ್ಬೊಟ್ಟೆಯ ಕೊಬ್ಬು ವಿಶೇಷವಾಗಿ ಹೊಟ್ಟೆ ಮತ್ತು ಎದೆಯ ಮಧ್ಯ ಭಾಗದಲ್ಲಿ ಕೊಬ್ಬು ಸಂಗ್ರಹವಾಗುವುದು ಹೃದಯದ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಹೃದಯ ಸಂಬಂಧಿ ಅಪಾಯಗಳನ್ನು ಸ್ವಯಂಚಾಲಿತವಾಗಿ ಹೆಚ್ಚಿಸುತ್ತದೆ. ಆಹಾರ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ನಿಮ್ಮ ಹೃದಯ ಸಮಸ್ಯೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಧೂಮಪಾನ ತ್ಯಜಿಸಿ

ಹೃದ್ರೋಗಗಳ ಪ್ರಮುಖ ಕಾರಣಗಳಲ್ಲಿ ಒಂದು ತಂಬಾಕು ಸೇವನೆ ಹಾಗೂ ಧೂಮಪಾನವೂ ಒಂದು. ಧೂಮಪಾನವನ್ನು ತ್ಯಜಿಸುವುದರಿಂದ ಹೃದಯಾಘಾತ ಮತ್ತು ಇತರ ಹೃದಯರಕ್ತನಾಳದ ಸಮಸ್ಯೆಗಳ ಅಪಾಯವನ್ನು ತೀವ್ರವಾಗಿ ಕಡಿಮೆ ಮಾಡಬಹುದು.

ಆಲ್ಕೊಹಾಲ್‌ ಸೇವನೆಯನ್ನು ಮಿತಗೊಳಿಸುವುದು

ಆಲ್ಕೊಹಾಲ್ ಸೇವಿಸುವ ಅಭ್ಯಾಸ ಇರುವವರು ಮಿತವಾಗಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಅತಿಯಾದ ಮದ್ಯಪಾನವು ರಕ್ತದೊತ್ತಡವನ್ನು ಹೆಚ್ಚಿಸಬಹುದು, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹೃದಯದ ಸಂಬಂಧಿ ಸಮಸ್ಯೆಗಳಿಂದ ದೂರ ಇರಲು ಬಯಸುವ ಮಹಿಳೆಯರು ಹಾಗೂ ಪುರುಷರು ತಪ್ಪದೇ ಈ ಕ್ರಮ ಪಾಲಿಸಬೇಕು.

ಒತ್ತಡ ನಿರ್ವಹಣೆ

ದೀರ್ಘಕಾಲದ ಒತ್ತಡವು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂದಿನ ದಿನಗಳಲ್ಲಿ ನಿರಂತರ ಕೆಲಸದ ಹೊರೆ ಮತ್ತು ಹೆಚ್ಚಿನ ಒತ್ತಡದ ವಾತಾವರಣದ ಕಾರಣ ಹೃದ್ರೋಗದ ಅಪಾಯ ದಿನ ಹೆಚ್ಚುತ್ತಿದೆ. ಒತ್ತಡ ನಿರ್ವಹಿಸಲು ಆಳವಾದ ಉಸಿರಾಟ, ಯೋಗ, ಧ್ಯಾನ ಮುಂತಾದ ವಿಶ್ರಾಂತಿ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು. 

ನಿಯಮಿತ ರಕ್ತದೊತ್ತಡ ಮೇಲ್ವಿಚಾರಣೆ 

ಅಧಿಕ ರಕ್ತದೊತ್ತಡ ಅಥವಾ ಹೈಬಿಪಿಯಿಂದ ಹೃದಯದ ಕಾಯಿಲೆಗಳ ಅಪಾಯವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತಿದೆ. ಮನೆಯಲ್ಲಿ ನಿಯಮಿತವಾಗಿ ಬಿಪಿ ತಪಾಸಣೆ ಮತ್ತು ಮೇಲ್ವಿಚಾರಣೆಯು ನಿಮ್ಮ ರಕ್ತದೊತ್ತಡವನ್ನು ಆರೋಗ್ಯಕರ ವ್ಯಾಪ್ತಿಯಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ. 

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ

ಅಧಿಕ ಕೊಲೆಸ್ಟ್ರಾಲ್  ಅಪಧಮನಿಗಳನ್ನು ಮುಚ್ಚುವಂತೆ ಮಾಡಿ ಹೃದ್ರೋಗಕ್ಕೆ ಕಾರಣವಾಗಬಹುದು. ನಿಯಮಿತ ವ್ಯಾಯಾಮದ ಜೊತೆಗೆ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವ ಆಹಾರ ಸೇವನೆಯ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು.

ಸಾಕಷ್ಟು ನಿದ್ರೆ ಮಾಡಿ

ಕಳಪೆ ನಿದ್ರೆಯ ಅಭ್ಯಾಸಗಳು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ನಿಮ್ಮ ಹೃದಯವು ಚೇತರಿಸಿಕೊಳ್ಳಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಪ್ರತಿ ರಾತ್ರಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಅತಿ ಅವಶ್ಯ. ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲ ಗುಣಮಟ್ಟದ ನಿದ್ದೆ ಮಾಡಿ. 

ಸಾಕಷ್ಟು ನೀರು ಕುಡಿಯಿರಿ 

ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ಹೃದಯವು ರಕ್ತವನ್ನು ಹೆಚ್ಚು ಸುಲಭವಾಗಿ ಪಂಪ್ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹವನ್ನು ಚೆನ್ನಾಗಿ ನಿಯಂತ್ರಿಸುತ್ತದೆ. ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರನ್ನು ಗುರಿಯಾಗಿಸಲು ವೈದ್ಯರು ಶಿಫಾರಸು ಮಾಡುತ್ತಾರೆ.

ಹೃದ್ರೋಗದ ಅಪಾಯ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಈ ಸರಳ ಅಭ್ಯಾಸಗಳನ್ನು ತಪ್ಪದೇ ಅನುಸರಿಸಬೇಕು. ಜೀವನಶೈಲಿಯನ್ನ ತಕ್ಷಣವೇ ಬದಲಿಸಿಕೊಂಡರೆ ಹೃದ್ರೋಗ ಅಪಾಯ ತನ್ನಿಂತಾನೇ ಕಡಿಮೆಯಾಗುತ್ತದೆ. ಆ ಕಾರಣಕ್ಕೆ ಇಂದಿನಿಂದಲೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ