ತೂಕ ಇಳಿಸಲು ಪ್ರಯತ್ನ ಮಾಡ್ತಿದ್ದೀರಾ? ಈ ಆಯುರ್ವೇದ ಪುಡಿಗಳನ್ನ ಟ್ರೈ ಮಾಡಿ, ಕೆಲವೇ ದಿನಗಳಲ್ಲಿ ತೂಕ ಕಡಿಮೆಯಾಗೋದು ಪಕ್ಕಾ
Aug 07, 2024 02:23 PM IST
ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಆಯುರ್ವೇದ ಪುಡಿಗಳನ್ನು ಬಳಕೆ ಮಾಡಬಹುದು.
ಇಂದು ಬಹುತೇಕ ಮಂದಿ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳಿಂದ ಹಿರಿಯರವರೆಗೂ ಅನೇಕರನ್ನು ಈ ಸಮಸ್ಯೆ ಕಾಡುತ್ತಿದೆ. ತೂಕ ಇಳಿಕೆಗೆ ನಾನಾ ಪ್ರಯತ್ನ ಮಾಡುತ್ತಾರೆ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಆಯುರ್ವೇದ ಪುಡಿಗಳನ್ನು ಬಳಕೆ ಮಾಡಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಇಂದಿನ ಆಧುನಿಕ ಜೀವನದಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ತೂಕ ಇಳಿಸಿಕೊಳ್ಳಲು ಪ್ರಯತ್ನಪಡುವವರೇ ಆಗಿದ್ದಾರೆ. ತಾವು ಸ್ಲಿಮ್ ಆಗಿ ಕಾಣಬೇಕು ಎಂದು ಅದಕ್ಕೆ ತಕ್ಕಂತೆ ತಮ್ಮ ಆಹಾರವನ್ನು ತೆಗೆದುಕೊಳ್ಳುತ್ತಾರೆ. ನೀವೂ ಕೂಡ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇದ್ದರೆ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.
ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಪರಿಣಾಮಕಾರಿ ಮಾರ್ಗಗಳನ್ನು ಹುಡುಕುವುದು ಜನರಿಗೆ ಒಂದು ಸವಾಲಾಗಿದೆ. ಹೆಚ್ಚಿನ ಜನರು ಶ್ರದ್ಧೆಯಿಂದ ವ್ಯಾಯಾಮ ಮಾಡುತ್ತಾರೆ. ಇನ್ನು ಕೆಲವರು ಡಯಟ್ ಮಾಡುತ್ತಾರೆ. ತೂಕ ಇಳಿಸಿಕೊಳ್ಳುವವರು ತಮ್ಮ ಜೀರ್ಣಕ್ರೀಯೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಅದರಲ್ಲೂ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ತೆಳ್ಳಗಾಗಲು ಪ್ರಯತ್ನಿಸುವುದು ಉತ್ತಮ ಮಾರ್ಗ. ಅಂಟುವಾಳದ ಪುಡಿ (ಮುಕುಲ್ ಪೌಡರ್) ಹಾಗೂ ಅಶ್ವಗಂಧ ನಿಮ್ಮ ತೂಕ ಇಳಿಕೆಗೆ ತುಂಬಾ ಉಪಕಾರಿ.
ಮುಕುಲ್ ಪೌಡರ್: ಮುಕುಲ್ ಪೌಡರ್ ಎಂದರೆ ಅಂಟುವಾಳದ ಪುಡಿ. ಇದರಿಂದ ನೀವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು. ಇದು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಮತ್ತು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಮುಕುಲ್ ಪುಡಿಯನ್ನು ಒಳಗೊಂಡಿರುವ ಗಿಡಮೂಲಿಕೆಗಳ ಈ ಪುಡಿ ಚರ್ಮದ ಪದರದ ದಪ್ಪ ಮತ್ತು ದೇಹದ ಸುತ್ತಳತೆ ಎರಡನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ದೇಹದಲ್ಲಿರುವ ಕೊಬ್ಬನ್ನು ಇದು ಕಡಿಮೆ ಮಾಡುತ್ತದೆ. ಹೀಗಾಗಿ ಕೊಬ್ಬಿನ ಅಂಶದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ. ತೂಕ ಇಳಿಕೆ ಒಂದೇ ಅಲ್ಲ ಅದರ ಜೊತೆಗೆ ಇದು ಆಂತರಿಕ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದು ನಿರ್ವಿಷಗೊಳಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ ಇದು ಕೆಲವು ಹೃದಯ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
ಅಶ್ವಗಂಧ: ಹಾಲಿನೊಂದಿಗೆ ನೀವು ಈ ಪುಡಿಯನ್ನು ಸೇವಿಸಬಹುದು. ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ. ಅಶ್ವಗಂಧವು ದೇಹವನ್ನು ಪೋಷಿಸುವ ಮತ್ತು ಸ್ನಾಯುವಿಗೆ ಬಲ ತುಂಬುವ ಕೆಲಸ ಮಾಡುತ್ತದೆ. ಇದು ದೇಹದಲ್ಲಿನ ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಒಟ್ಟಾರೆ ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ತೂಕ ಇಳಿಸಿಕೊಳ್ಳುವವರಿಗೆ ಹಸಿವನ್ನು ನಿಗ್ರಹಿಸುವ ಗುಣವನ್ನು ಹೊಂದಿದೆ. ಆಗಾಗ ಏನನ್ನಾದರೂ ತಿನ್ನಬೇಕು ಎಂದು ಅನಿಸುವವರಿಗೆ ಆ ಬಯಕೆಗಳನ್ನು ಕಡಿಮೆ ಮಾಡುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಆಯುರ್ವೇದಿಕ ಪುಡಿಗಳು ಅಶ್ವಗಂಧ ಹಾಗೂ ಅಂಟುವಾಳದಂತಹ ಮಿಶ್ರಣಗಳು ನಿಮ್ಮನ್ನು ಜಂಕ್ ಫುಡ್‍ಗಳಿಂದ ದೂರವಿಟ್ಟು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯು ಯಾವಾಗ ತನ್ನ ಚಯಾಪಚಯ ಕ್ರಿಯೆಗಳನ್ನು ಸುಧಾರಿಸಿಕೊಳ್ಳುತ್ತಾನೋ ಆಗ ಅವನು ತೂಕ ಇಳಿಸಿಕೊಳ್ಳಲು ಸಮರ್ಥನಾಗುತ್ತಾನೆ. ಅದಕ್ಕೆ ಈ ಆಯುರ್ವೇದಿಕ ಗಿಡಮೂಲಿಕೆಗಳು ಸಹಾಯ ಮಾಡುತ್ತದೆ. ನೀವು ಕೂಡ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರೆ ಇವುಗಳನ್ನು ಟ್ರೈ ಮಾಡಿ.
ವಿಭಾಗ