ಬಾಳೆಎಲೆಯಲ್ಲಿ ಊಟ ಮಾಡಿದ್ರೆ ರುಚಿ ಹೆಚ್ಚು ಅನ್ನೋದಕ್ಕೆ ಕಾರಣವಿದು, ಪುರಾಣದಲ್ಲೂ ಕದಳಿಗಿತ್ತು ವಿಶೇಷ ಮಹತ್ವ
Aug 08, 2024 11:36 AM IST
ಬಾಳೆ ಎಲೆ ಊಟಕ್ಕೆ ರುಚಿ ಜಾಸ್ತಿ
- ಊಟಕ್ಕೆ ಬಾಳೆ ಎಲೆಗಳ ಬಳಕೆ ಕಡಿಮೆ ಆಗಿದೆ. ಆದರೆ ಈ ಬಾಳೆಲೆಗಳಲ್ಲಿ ಊಟ ಮಾಡಿದಾಗ ಸಿಗುವ ರುಚಿ ಹಾಗೂ ಆರೋಗ್ಯ ಇನ್ನೆಲ್ಲೂ ಸಿಗದು. ನೀವು ಬಾಳೆ ಎಲೆಯಲ್ಲಿ ಊಟ ಮಾಡಿದರೆ ಸಾಲದು ಅದರಲ್ಲಿ ನೀವು ಊಟವನ್ನು ಬೇಯಿಸಿ ತಿನ್ನಬೇಕು. ಬಾಳೆಎಲೆ ಊಟ ರುಚಿ ಅನ್ನೋದಕ್ಕೆ ಕಾರಣಗಳು ಹೀಗಿವೆ.
ನಮ್ಮ ಪೂರ್ವಜರು ಹಿಂದಿನಿಂದಲೂ ಬಾಳೆ ಎಲೆಯಲ್ಲಿ ಊಟ ಬಡಿಸಿ ಅದರಲ್ಲೇ ಊಟ ಮಾಡುತ್ತಾ ಬಂದಿದ್ದಾರೆ. ಆದರೆ ನಾವು ಇಂದು ಸ್ಟೀಲ್ ತಟ್ಟೆಗಳಲ್ಲಿ ಊಟ ಮಾಡುತ್ತಿದ್ದೇವೆ. ದೇವಸ್ಥಾನಗಳಿಗೆ ಹೋದರೂ ಬಾಳೆ ಎಲೆ ಊಟ ಸವಿಯಬಹುದು ಎಂಬ ಖಾತ್ರಿ ಇಲ್ಲ. ಹೋಟೆಲ್ಗಳಲ್ಲಂತೂ ಈ ಬಾಳೆ ಎಲೆಯ ಊಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳ ಜೊತೆ ಜೊತೆಗೆ ನಮ್ಮ ಊಟದ ಸ್ವಾದವೂ ಹೆಚ್ಚಾಗುತ್ತದೆ. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದರ ವೈಜ್ಞಾನಿಕ ಉಪಯೋಗಗಳನ್ನು ಕಿಶೋರ್ ಅಶೋಕ್ ಎಂಬುವವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅವರು ಈ ಬಗ್ಗೆ ವಿವರಿಸುತ್ತಾ ʼಬಾಳೆ ಎಲೆಗಳು ದೊಡ್ಡ ಎಲೆಗಳಾಗಿದ್ದು, ಗಟ್ಟಿಮುಟ್ಟಾಗಿ ಇರುತ್ತದೆ. ವಿಶೇಷವಾಗಿ ಭಾರತದ ದಕ್ಷಿಣ ಪ್ರದೇಶಗಳಲ್ಲಿ ಇದನ್ನು ಅತಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಬಾಳೆಲೆಯಲ್ಲಿ ಊಟ ಮಾಡಿದರೆ ಊಟದ ಸ್ವಾದವು ಹೆಚ್ಚಾಗುತ್ತದೆ. ಬಾಳೆ ಎಲೆಯಲ್ಲಿ ಅದ್ಭುತವಾದ ಆರೋಮ್ಯಾಟಿಕ್ ಮತ್ತು ಆರೋಗ್ಯಕರ ಪಾಲಿಫೆನಾಲ್ ಸಂಯುಕ್ತಗಳಿವೆ. ಆದರೆ ಈ ಅಂಶಗಳು ನಿಮ್ಮ ದೇಹದೊಳಗೆ ಹೋಗಬೇಕು ಎಂದಾದರೆ ನೀವು ಬಾಳೆ ಎಲೆಯಲ್ಲಿ ಊಟ ಮಾಡಿದರೆ ಸಾಲದು, ಬಾಳೆಲೆಯಲ್ಲೇ ಅಡುಗೆ-ಊಟವನ್ನು ಬೇಯಿಸಬೇಕುʼʼ ಎಂದು ವಿವರಿಸಿದ್ದಾರೆ
ನಾರಿನಾಂಶ
ಇನ್ನು ಈ ಕುರಿತು ಕೇ ಜೆ ಸೋಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಆಹಾರ ತಜ್ಞರಾದ ಡಾ. ಮೊನಲ ವೇಲಂಗಿ ಅವರು ಬಾಳೆ ಎಲೆಯೂ ಅದರ ಮೇಲ್ಮೈಯಲ್ಲಿ ಬಹಳ ವಿಶಿಷ್ಟವಾದ ಮಣ್ಣಿನ ಪರಿಮಳವನ್ನು ಮತ್ತು ಸ್ವಲ್ಪ ಮೇಣದಂತ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ನಾರಿನಾಂಶವು ಸಮೃದ್ಧವಾಗಿದೆ, ಅಂದರೆ ಸುಮಾರು ಶೇ 72 ರಷ್ಟಿದೆ ಎಂದಿದ್ದಾರೆ.
ಡಾ. ವೇಲಂಗಿ ಅವರ ಪ್ರಕಾರ, ಬಾಳೆ ಎಲೆಗಳ ರಸಗಳು ತಮ್ಮ ಸಿಹಿ, ಮಣ್ಣಿನ ಪರಿಮಳ ಮತ್ತು ಹಬೆಯಲ್ಲಿ ಬಳಸುವಾಗ ಸೂಕ್ಷ್ಮವಾದ ರುಚಿಯಿಂದಾಗಿ ಆಹಾರಕ್ಕೆ ವಿಶಿಷ್ಟವಾದ ಸವಿಯನ್ನು ಕೊಡುತ್ತದೆ. ಅಡುಗೆಯು ಎಲೆಗಳಿಂದ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್ಗಳನ್ನು ಬಿಡುಗಡೆ ಮಾಡುತ್ತದೆ, ಇದು ಆಹಾರವನ್ನು ಇನ್ನುಷ್ಟು ಆರೋಗ್ಯಯುತವಾಗಿಸುತ್ತದೆ. ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆ ಮಧುಮೇಹ-ವಿರೋಧಿ ಗುಣವನ್ನು ಹೊಂದಿದೆ ಎಂದು ತಿಳಿಸಿದೆ. ಆದರೆ ಈ ಬಗ್ಗೆ ಇನ್ನಷ್ಟು ನಿಖರ ಸಂಶೋಧನೆ ನಡೆಯಬೇಕಿದೆ. ಈ ಉತ್ಕರ್ಷಣ ನಿರೋಧಕಗಳು ಮಧುಮೇಹ, ಕ್ಯಾನ್ಯರ್ ಮತ್ತು ಹೃದ್ರೋಗದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಆಕ್ರಮಣವನ್ನು ನಿಧಾನಗೊಳಿಸುತ್ತದೆ.
ಹಿಂದೂ ಪುರಾಣದಲ್ಲಿ ಪವಿತ್ರವಸ್ತು
ಸಂಸ್ಕೃತದಲ್ಲಿ, ಬಾಳೆ ಎಲೆಗಳನ್ನು 'ಕದಳಿ' ಎಲೆಗಳು ಎಂದು ಕರೆಯಲಾಗುತ್ತದೆ ಮತ್ತು ಹಿಂದೂ ಪುರಾಣಗಳಲ್ಲಿ ಪವಿತ್ರವೆಂದು ಇದನ್ನು ಪರಿಗಣಿಸಲಾಗುತ್ತದೆ. "ಹಿಂದೂ ಧರ್ಮದಲ್ಲಿ ವೈದಿಕ ಆಚರಣೆಗಳು ಮತ್ತು ಧಾರ್ಮಿಕ ಪೂಜೆಗಳಿಗೆ ಅಗತ್ಯವಿರುವ ವಿಷಯಗಳ ಪಟ್ಟಿಯಲ್ಲಿ ಬಾಳೆ ಎಲೆಗಳು ಸ್ಥಿರವಾಗಿ ಕಾಣಿಸಿಕೊಳ್ಳುತ್ತವೆ" ಎಂದು ಡಾ ವೇಲಂಗಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ವೇಲಂಗಿ ಹೇಳಿದ್ದಾರೆ.
ಬಾಳೆ ಎಲೆಗಳನ್ನು ನೈಸರ್ಗಿಕ ಟೇಬಲ್ ಮ್ಯಾಟ್‌ಗಳಾಗಿ ಹಿಂದೆ ಉಪಯೋಗ ಮಾಡುತ್ತಿದ್ದರೆ ಇಂದು ಅದನ್ನೇ ಹೋಲುವಂತಹ ಪ್ಲಾಸ್ಟಿಕ್ ಬಾಳೆ ಎಲೆಗಳನ್ನು ಮಾಡಿ ಬಡಿಸುತ್ತಾ ಇರುವುದು ವಿಪರ್ಯಾಸ.