ಊಟಕ್ಕೆ ಮೊದಲು vs ಊಟದ ನಂತರ, ಯಾವ ಸಮಯದಲ್ಲಿ ಹಣ್ಣು ತಿನ್ನೋದು ಆರೋಗ್ಯಕ್ಕೆ ಉತ್ತಮ, ಇಲ್ಲಿದೆ ತಜ್ಞರ ಸಲಹೆ
Sep 25, 2024 07:06 AM IST
ಊಟಕ್ಕೆ ಮೊದಲು vs ಊಟದ ನಂತರ, ಆರೋಗ್ಯದ ದೃಷ್ಟಿಯಿಂದ ಯಾವಾಗ ಹಣ್ಣು ತಿನ್ನೋದು ಉತ್ತಮ?
- ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಹಣ್ಣು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹಣ್ಣಿನಲ್ಲಿ ನಾರಿನಾಂಶ ಹಾಗೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಇರುವ ಕಾರಣ ಹಣ್ಣು ತಿನ್ನುವುದು ಅವಶ್ಯ. ಆದರೆ ಊಟಕ್ಕೂ ಮೊದಲು ತಿನ್ನಬೇಕಾ ಅಥವಾ ನಂತರ ತಿನ್ನುವುದು ಒಳ್ಳೆಯದಾ ಎನ್ನುವ ಗೊಂದಲ ಹಲವರಲ್ಲಿದೆ. ಈ ಗೊಂದಲಗಳಿಗೆ ಇಲ್ಲಿದೆ ತಜ್ಞರ ಉತ್ತರ.
ನಮ್ಮ ದೇಹದ ಹಲವು ಸಮಸ್ಯೆಗಳಿಗೆ ಪ್ರತಿದಿನ ಹಣ್ಣು ತಿನ್ನುವುದು ಪರಿಹಾರ. ಹಣ್ಣಿನಲ್ಲಿ ನಾರಿನಾಂಶ, ವಿಟಮಿನ್, ಕ್ಯಾಲ್ಸಿಯುಂ ಸೇರಿದಂತೆ ಅಗತ್ಯ ಪೋಷಕಾಂಶಗಳಿರುತ್ತವೆ. ಆ ಕಾರಣಕ್ಕೆ ಆಯಾ ಋತುಮಾನದಲ್ಲಿ ಸಿಗುವ ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು. ಸಮತೋಲಿತ ಆಹಾರದಲ್ಲಿ ಹಣ್ಣು, ತರಕಾರಿ ಯಾವಾಗಲೂ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಪೌಷ್ಟಿಕ ತಜ್ಞರ ಸಲಹೆ.
ಕೆಲವರಿಗೆ ಪ್ರತಿದಿನ ಹಣ್ಣು ತಿನ್ನುವ ಅಭ್ಯಾಸವಿರುತ್ತದೆ. ಆದರೆ ತಜ್ಞರ ಪ್ರಕಾರ ಯಾವಾಗ ಯಾವಾಗಲೋ ಹಣ್ಣು ತಿನ್ನುವ ಬದಲು ಒಂದು ನಿರ್ದಿಷ್ಟ ಸಮಯದಲ್ಲಿ ತಿನ್ನುವುದು ಬಹಳ ಮುಖ್ಯ. ಇದರಿಂದ ದೇಹವು ಹಣ್ಣಿನಲ್ಲಿರುವ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಬಹುತೇಕರು ಊಟದ ನಂತರ ಹಣ್ಣು ತಿಂದರೆ, ಕೆಲವರು ಊಟಕ್ಕೆ ಮೊದಲು ಹಣ್ಣು ತಿನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಯಾವುದು ಬೆಸ್ಟ್. ಊಟದ ಮೊದಲು ಹಣ್ಣು ತಿನ್ನುವುದು ಹೆಚ್ಚು ಪ್ರಯೋಜನಕಾರಿಯೋ ಅಥವಾ ಊಟ ನಂತರ ಹಣ್ಣು ತಿಂದರೆ ಉತ್ತಮನೋ ಎನ್ನುವ ಗೊಂದಲ ಈಗ ನಿಮ್ಮ ಮನದಲ್ಲೂ ಮೂಡಿರಬಹುದು. ಈ ಪ್ರಶ್ನೆಗೆ ತಜ್ಞರು ನೀಡಿದ ಉತ್ತರ ಇಲ್ಲಿದೆ.
ಹಣ್ಣುಗಳನ್ನ ಯಾಕೆ ತಿನ್ನಬೇಕು?
ಆರೋಗ್ಯಕರ ಹಾಗೂ ಸಮತೋಲಿತ ಜೀವನಶೈಲಿಗೆ ಹಣ್ಣು ಬಹಳ ಮುಖ್ಯ. ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇದ್ದು, ಇದರಲ್ಲಿರುವ ನಾರಿನಾಂಶ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶ ಕೂಡ ಸಮೃದ್ಧವಾಗಿರುತ್ತದೆ. ಆಂಟಿಆಕ್ಸಿಡೆಂಟ್ ಅಂಶವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಹಲವಾರು ಪೋಷಕಾಂಶಗಳು ಹಣ್ಣಿನಲ್ಲಿ ಇರುವ ಕಾರಣ ದೇಹಕ್ಕೆ ಅಗತ್ಯ ಶಕ್ತಿ ಒದಗಿಸುತ್ತದೆ. ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಸೇಬು, ದಾಳಿಂಬೆ, ಬಾಳೆಹಣ್ಣು, ಬೆರ್ರಿಗಳು, ಕಿತ್ತಳೆಯಂತಹ ಸಿಟ್ರಸ್ ಅಂಶ ಇರುವ ಹಣ್ಣುಗಳನ್ನ ನಾವು ಪ್ರತಿದಿನ ಹೆಚ್ಚು ಹೆಚ್ಚು ಸೇವಿಸಬೇಕು. ಆರೋಗ್ಯಕರ ತೂಕಕ್ಕಾಗಿ ಕೂಡ ಹಣ್ಣು ತಿನ್ನುವುದು ಬಹಳ ಮುಖ್ಯ.
ಹಣ್ಣು ತಿನ್ನಲು ಯಾವ ಸಮಯ ಬೆಸ್ಟ್
ಆರೋಗ್ಯರ ತಜ್ಞರ ಪ್ರಕಾರ ನಾವು ದಿನದಲ್ಲಿ 2 ಬಾರಿ ಹಣ್ಣು ತಿನ್ನಬೇಕು. ಆಯಾ ಋತುಮಾನಕ್ಕೆ ಸಿಗುವ ಹಣ್ಣುಗಳನ್ನ ಸೇವಿಸಬಹುದು. ಸಾಮಾನ್ಯವಾಗಿ ಹಣ್ಣುಗಳನ್ನು ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು. ಆದರೆ ಊಟಕ್ಕೂ ಮೊದಲು ಸ್ನ್ಯಾಕ್ಸ್ ರೂಪದಲ್ಲಿ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಊಟಕ್ಕೂ ಮೊದಲು ಹಸಿವಾದಾರೆ ಹಣ್ಣು ತಿನ್ನುವುದು ಉತ್ತಮ. ಅದರಲ್ಲೂ ತೂಕ ಇಳಿಸಿಕೊಳ್ಳಲು ಬಯಸುವವರು ಈ ಸಲಹೆಯನ್ನು ತಪ್ಪದೇ ಪಾಲಿಸುವುದು ಉತ್ತಮ. ಹಣ್ಣುಗಳಲ್ಲಿ ನಾರಿನಾಂಶ ಸಮೃದ್ಧವಾಗಿರುವ ಕಾರಣ ಜೀರ್ಣಕ್ರಿಯೆ ನಿಧಾನವಾಗಿ ಆಗುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇಡುತ್ತದೆ. ಇದರಿಂದ ಊಟದ ಸಮಯದಲ್ಲಿ ನಾವು ಹೆಚ್ಚು ಕ್ಯಾಲೊರಿ ಸೇವನೆಯನ್ನು ತಡೆಯಬಹುದು.
ಊಟಕ್ಕೂ ಮೊದಲು ಹಣ್ಣುಗಳನ್ನು ಸೇವಿಸುವುದರಿಂದ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.ಹಣ್ಣುಗಳಲ್ಲಿ ಸಕ್ಕರೆಯ ಅಂಶವಿರುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಆದ್ದರಿಂದ ಊಟದ ನಂತರ ಹಣ್ಣುಗಳನ್ನು ಸೇವಿಸುವುದಕ್ಕೆ ಹೋಲಿಸಿದರೆ ಊಟಕ್ಕೆ ಮೊದಲು ಸೇವಿಸುವುದರಿಂದ ಪೋಷಕಾಂಶಗಳು ಹೆಚ್ಚು ಪ್ರಮಾಣದಲ್ಲಿ ದೇಹವನ್ನು ಸೇರುತ್ತದೆ ಮತ್ತು ಇದು ಉತ್ತಮವಾಗಿ ಜೀರ್ಣವಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ.)
ವಿಭಾಗ