logo
ಕನ್ನಡ ಸುದ್ದಿ  /  ಜೀವನಶೈಲಿ  /  ಅರಶಿನ ಹಾಲಿನಿಂದ ಶುಂಠಿ ಚಹಾದವರೆಗೆ: ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವ ಬದಲು ಈ ಪಾನೀಯಗಳನ್ನು ಸೇವಿಸಿ

ಅರಶಿನ ಹಾಲಿನಿಂದ ಶುಂಠಿ ಚಹಾದವರೆಗೆ: ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವ ಬದಲು ಈ ಪಾನೀಯಗಳನ್ನು ಸೇವಿಸಿ

Priyanka Gowda HT Kannada

Sep 30, 2024 06:11 PM IST

google News

ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವ ಬದಲು ಈ ಪಾನೀಯಗಳನ್ನು ಸೇವಿಸಿ.

  • ಆರೋಗ್ಯಕರ ಪಾನೀಯದಿಂದ ನಿಮ್ಮ ದಿನವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೀರಾ? ನೈಸರ್ಗಿಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅರಿಶಿನ ಹಾಲಿನಿಂದ ಶುಂಠಿ ಚಹಾದವರೆಗೆ ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವಿಸಿ.

ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವ ಬದಲು ಈ ಪಾನೀಯಗಳನ್ನು ಸೇವಿಸಿ.
ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವ ಬದಲು ಈ ಪಾನೀಯಗಳನ್ನು ಸೇವಿಸಿ. (Pinterest)

ಬೆಳಗೆದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ನಿಮಗಿದೆಯಾ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅನೇಕ ದುಷ್ಪರಿಣಾಮಗಳು ಎದುರಾಗುತ್ತವೆ ಎಂದು ತಿಳಿದಿದ್ದರೂ ಕಾಫಿ ಸೇವನೆ ಬಿಡಲು ಕಷ್ಟವಾಗುತ್ತಿದೆಯೇ? ಕಾಫಿ ಬದಲಿಗೆ ಆರೋಗ್ಯಕರ ಪಾನೀಯಗಳನ್ನು ಪ್ರಯತ್ನಿಸಬಹುದು. ಅಧ್ಯಯನಗಳ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ದೇಹದ ಕಾರ್ಟಿಸೋಲ್ ಮಟ್ಟವನ್ನು ಅಡ್ಡಿಪಡಿಸಬಹುದು. ಇದು ಆತಂಕ ಮತ್ತು ಹೆದರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಆರೋಗ್ಯಕರ ಪಾನೀಯಗಳ ಸೇವನೆ ಮಾಡುವ ಮೂಲಕ ಬೆಳಗ್ಗಿನ ದಿನಚರಿಯನ್ನು ಪ್ರಾರಂಭಿಸಬಹುದು. ಅರಿಶಿನ ಹಾಲಿನಿಂದ ಶುಂಠಿ ಚಹಾದವರೆಗೆ ಬೆಳಗ್ಗೆ ಈ ಪಾನೀಯಗಳನ್ನು ಸೇವಿಸುವುದರಿಂದ ಚರ್ಮ ಹಾಗೂ ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಬೆಳಗ್ಗೆ ಕಾಫಿ ಬದಲಿಗೆ ಈ ಪಾನೀಯಗಳನ್ನು ಪ್ರಯತ್ನಿಸಿ

1) ಅರಿಶಿನ ಹಾಲು: ಅರಿಶಿನವು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಚರ್ಮದ ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಹೊಳಪನ್ನು ಉತ್ತೇಜಿಸುತ್ತದೆ.

ಅರಶಿನ ಹಾಲು ತಯಾರಿಸಲು ಬೇಕಾಗುವ ಪದಾರ್ಥಗಳು: ಹಾಲು- 1 ಕಪ್, ಅರಿಶಿನ ಪುಡಿ- 1/2 ಟೀಚಮಚ, ಕರಿಮೆಣಸು- ಸಣ್ಣ ಚಿಟಿಕೆ, ಜೇನು (ಬೇಕಿದ್ದರೆ).

ಮಾಡುವ ವಿಧಾನ: ಬಾಣಲೆಯಲ್ಲಿ ಹಾಲನ್ನು ಬಿಸಿ ಮಾಡಿ. ಅದಕ್ಕೆ ಅರಿಶಿನ ಪುಡಿ ಮತ್ತು ಕರಿಮೆಣಸು ಬೆರೆಸಿ. ಬೇಕಿದ್ದಲ್ಲಿ ಸಿಹಿಗಾಗಿ ಜೇನುತುಪ್ಪವನ್ನು ಸೇರಿಸಿ ಸೇವಿಸಬಹುದು.

2) ಅಲೋವೆರಾ ಜ್ಯೂಸ್: ಅಲೋವೆರಾ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ನೈಸರ್ಗಿಕ ಹೊಳಪಿಗೆ ಪ್ರಯೋಜನಕಾರಿಯಾಗಿದೆ.

ಬೇಕಾಗುವ ಪದಾರ್ಥಗಳು: ತಾಜಾ ಅಲೋವೆರಾ ಜೆಲ್- 2 ಟೀ ಚಮಚ, ನೀರು- 1 ಕಪ್, ನಿಂಬೆ ರಸ- ಸ್ವಲ್ಪ (ಬೇಕಿದ್ದಲ್ಲಿ ಮಾತ್ರ)

ಮಾಡುವ ವಿಧಾನ: ಅಲೋವೆರಾ ಜೆಲ್ ಅನ್ನು ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದಲ್ಲಿ ನಿಂಬೆ ರಸ ಸೇರಿಸಿ ಕುಡಿಯಬಹುದು.

3) ಸೌತೆಕಾಯಿ-ಪುದೀನಾ ಪಾನೀಯ: ಸೌತೆಕಾಯಿ ಮತ್ತು ಪುದೀನ ಪಾನೀಯ ಸೇವನೆಯಿಂದ ತ್ವಚೆಯ ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಗಳನ್ನು ಕಡಿಮೆಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಕರುಳಿನ ಆರೋಗ್ಯಕ್ಕೂ ಉತ್ತಮ.

ಬೇಕಾಗುವ ಪದಾರ್ಥಗಳು: ಸೌತೆಕಾಯಿ- 1, ಪುದೀನ ಎಲೆಗಳು- ಸ್ವಲ್ಪ, ನೀರು.

ಮಾಡುವ ವಿಧಾನ: ಸೌತೆಕಾಯಿ ಮತ್ತು ಪುದೀನ ಎಲೆಗಳನ್ನು ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿರಿ. ಬಳಿಕ ಸೇವಿಸಬಹುದು.

4) ಬೆಚ್ಚಗಿನ ನಿಂಬೆ ನೀರು: ನಿಂಬೆ ನೀರು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಜೀರ್ಣಾಂಗಗಳ ಶುದ್ಧೀಕರಣವನ್ನು ಉತ್ತೇಜಿಸುತ್ತದೆ.

ಬೇಕಾಗುವ ಪದಾರ್ಥಗಳು: ನಿಂಬೆ ರಸ- ½, ಬೆಚ್ಚಗಿನ ನೀರು- 1 ಕಪ್.

ಮಾಡುವ ವಿಧಾನ: ಒಂದು ಕಪ್ ಬೆಚ್ಚಗಿನ ನೀರಿಗೆ ನಿಂಬೆ ಹಿಂಡಿ, ಚೆನ್ನಾಗಿ ಬೆರೆಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

5) ಶುಂಠಿ ಚಹಾ: ಶುಂಠಿ ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಿಸುತ್ತದೆ. ಕರುಳನ್ನು ಶಮನಗೊಳಿಸುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಬೇಕಾಗುವ ಪದಾರ್ಥಗಳು: ತಾಜಾ ಶುಂಠಿ- 1-2 ಇಂಚು, ನೀರು- 1 ಕಪ್, ಜೇನುತುಪ್ಪ.

ಮಾಡುವ ವಿಧಾನ: ಶುಂಠಿ ಚೂರುಗಳನ್ನು ನೀರಿನಲ್ಲಿ 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಒಂದು ಕಪ್‍ಗೆ ಸುರಿಯಿರಿ. ಬೇಕಿದ್ದರೆ ಜೇನುತುಪ್ಪ ಸೇರಿಸಬಹುದು.

6) ಆಪಲ್ ಸೈಡರ್ ವಿನೆಗರ್ ಪಾನೀಯ: ಆಪಲ್ ಸೈಡರ್ ವಿನೆಗರ್ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಕರುಳಿನ ವಾತಾವರಣವನ್ನು ಬೆಂಬಲಿಸುತ್ತದೆ.

ಬೇಕಾಗುವ ಪದಾರ್ಥಗಳು: ಆಪಲ್ ಸೈಡರ್ ವಿನೆಗರ್- ½ ಟೀ ಚಮಚ, ನೀರು- 1 ಕಪ್, ಜೇನುತುಪ್ಪ (ಬೇಕಿದ್ದರೆ)

ಮಾಡುವ ವಿಧಾನ: ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ. ಬೇಕಿದ್ದರೆ ಜೇನುತುಪ್ಪ ಸೇರಿಸಿ ಕುಡಿಯಬಹುದು.

ಈ ಪಾನೀಯಗಳೊಂದಿಗೆ ನಿಮ್ಮ ದಿನಚರಿಯನ್ನು ಪ್ರಾರಂಭಿಸುವುದರಿಂದ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿರುತ್ತದೆ. ಪ್ರತಿಯೊಂದು ಪಾನೀಯಗಳು ಹೈಡ್ರೇಟಿಂಗ್ ಮುಂತಾದ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ, ತ್ವಚೆಯ ಆರೋಗ್ಯಕ್ಕೆ ಹಾಗೂ ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಪ್ರಯೋಜನಕಾರಿಯಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ