Health Tips: ಮಧುಮೇಹಿಗಳು ಮಾವಿನ ಹಣ್ಣು ಸೇವಿಸಬಹುದೇ, ಬೇಡವೇ; ವೈದ್ಯರು ಹೇಳುವುದೇನು ?
Mar 23, 2024 02:25 PM IST
ಮಧುಮೇಹಿಗಳು 1-2 ಮಾವಿನ ಹಣ್ಣು ಸೇವಿಸಬಹುದು. ಆದರೆ ಅದಕ್ಕಿಂತ ಹೆಚ್ಚಾದರೆ ಆರೋಗ್ಯಕ್ಕೆ ಸಮಸ್ಯೆ ಉಂಟಾಗಲಿದೆ.
Health Tips: ಮಾವಿನ ಹಣ್ಣು ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಹಳ ಇಷ್ಟ? ಆದರೆ ಮಧುಮೇಹಿಗಳು ಮಾವಿನ ಹಣ್ಣು ಸೇವಿಸಲು ಮಾತ್ರ ಭಯ ಪಡುತ್ತಾರೆ. ಮಧುಮೇಹದಿಂದ ಬಳಲುತ್ತಿರುವವರು ಮಾವಿನ ಹಣ್ಣು ಸೇವವಿಸಬಹುದೇ, ಇಲ್ಲವೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
Health Tips: ಬೇಸಿಗೆ ಎಂದಾಕ್ಷಣ ಮೊದಲು ನೆನಪಾಗುವುದೇ ಮಾವಿನ ಹಣ್ಣುಗಳು. ಮಾವಿನ ಹಣ್ಣಿನ ಸುವಾಸನೆ ಮೂಗಿಗೆ ಬಡಿದರೆ ಸಾಕು ಅದನ್ನು ಒಂದಲ್ಲ, ಎರಡಲ್ಲ ತೃಪ್ತಿಯಾಗುವಷ್ಟು ತಿನ್ನಬೇಕು ಎನಿಸುತ್ತದೆ. ಆದರೆ ಮಧುಮೇಹಿಗಳು ಮಾತ್ರ ಮಾವಿನ ಹಣ್ಣು ಸೇವನೆ ಮಾಡಲು ಹಿಂದು ಮುಂದು ನೋಡುತ್ತಾರೆ.
ಮಾವಿನಹಣ್ಣಿನಲ್ಲಿರುವ ಸಕ್ಕರೆ ಪ್ರಮಾಣವು ಮಧುಮೇಹದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬ ಭಯ ಅನೇಕರಿಗೆ ಇರುತ್ತದೆ. ಹೀಗಾಗಿ ಮಾವಿನ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಹುದೇ..? ಸೇವಿಸಿದರೂ ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಅನೇಕರಿಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಮಧುಮೇಹಿಗಳ ಮಾವಿನ ಹಣ್ಣಿನ ಸೇವನೆಯ ಕುರಿತಂತೆ ಮಾಹಿತಿ ಇಲ್ಲಿದೆ ನೋಡಿ.
ಪೋಷಕಾಂಶಗಳ ಆಗರ ಹಣ್ಣುಗಳ ರಾಜ
ಮಾವಿನ ಹಣ್ಣುಗಳು ಅಗಾಧ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತವೆ ಅದರ ಜೊತೆ ಭಾರೀ ಪ್ರಮಾಣದ ಕ್ಯಾಲೋರಿ ಕೂಡ ಈ ಹಣ್ಣಿನಲ್ಲಿದೆ. ಒಂದು ಮಾವಿನ ಹಣ್ಣಿನ ಸೇವನೆಯಿಂದ ದೇಹಕ್ಕೆ 100 ಕ್ಯಾಲೋರಿ ಹೋಗುತ್ತದೆ. ಇದರಲ್ಲಿ 3 ಗ್ರಾಂ ಫೈಬರ್ ಅಂಶ ಇರುತ್ತದೆ. ಇವುಗಳನ್ನು ಹೊರತುಪಡಿಸಿ ವಿಟಮಿನ್ ಎ , ವಿಟಮಿನ್ ಬಿ 6, ಇ ಹಾಗೂ ಕೆ ಸತ್ವ ಇರುತ್ತದೆ. ಇದನ್ನು ಹೊರತುಪಡಿಸಿ ಮಾವಿನ ಹಣ್ಣಿನಲ್ಲಿ ಪೊಟ್ಯಾಷಿಯಂ, ಮೆಗ್ನಿಷಿಯಂ ಹಾಗೂ ಪೊಲೇಟ್ ಅಂಶ ಸಮೃದ್ಧವಾಗಿರುತ್ತದೆ.
ಇಷ್ಟೆಲ್ಲಾ ಪೋಷಕಾಂಶಗಳಿಂದ ಸಮೃದ್ಧವಾದ ಮಾವಿನ ಹಣ್ಣುಗಳನ್ನು ಮಧುಮೇಹಿಗಳು ತಿನ್ನಬೇಕೇ ಬೇಡವೇ ಎಂಬ ಪ್ರಶ್ನೆ ಬಹುತೇಕರ ಮನದಲ್ಲಿ ಹರಿದಾಡುತ್ತಲೇ ಇರುತ್ತದೆ. ಮಾವಿನ ಹಣ್ಣಿನಲ್ಲಿ ಫ್ರುಕ್ಟೋಸ್ ಹಾಗೂ ಗ್ಲುಕೋಸ್ ಪ್ರಮಾಣ ಇರುತ್ತದೆ. ಗ್ಲುಕೋಸ್, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಒಮ್ಮೆಲೆ ಜಾಸ್ತಿ ಮಾಡುತ್ತದೆ. ಆದರೆ ಮಾವಿನ ಹಣ್ಣಿನಲ್ಲಿ ಗ್ಲುಕೋಸ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಫೈಬರ್ ಅಂಶ ಹೆಚ್ಚು
ಮಾವಿನ ಹಣ್ಣಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿರುತ್ತದೆ. ಇದು ಮಧುಮೇಹಿಗಳಿಗೆ ಹಾಗೂ ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವವರಿಗೆ ಒಳ್ಳೆಯದು ಎನ್ನಲಾಗಿದೆ. ಸಂಜೆ 5 ಗಂಟೆಗೂ ಮುನ್ನ ನೀವು ದಿನಕ್ಕೆ ಒಂದು ಮಾವಿನ ಹಣ್ಣನ್ನು ಸೇವನೆ ಮಾಡಿದರೆ ಸಕ್ಕರೆಯಂಶಯುಕ್ತ ಆಹಾರವನ್ನು ತಿನ್ನಬೇಕು ಎನ್ನುವ ನಿಮ್ಮ ಬಯಕೆ ಕೂಡ ಕಡಿಮೆಯಾಗುತ್ತದೆ. ಹಾಗೂ ದೇಹದ ಸಕ್ಕರೆ ಅಂಶಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ ಎನ್ನಲಾಗಿದೆ.
ಆದರೆ ಮಾವಿನ ಹಣ್ಣುಗಳು ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಮಧುಮೇಹಿಗಳು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮಾವಿನ ಹಣ್ಣನ್ನು ಸೇವಿಸಬೇಕು. ವೈದ್ಯರು ದಿನನಿತ್ಯ ನಿಮಗೆ ಎಷ್ಟು ಕ್ಯಾಲೋರಿ ಸೇವನೆ ಮಾಡಲು ನಿಮಗೆ ಸೂಚನೆ ನೀಡಿದ್ದಾರೆ ಎಂಬುದನ್ನು ಆಧರಿಸಿ ನೀವು ಎಷ್ಟು ಮಾವಿನ ಹಣ್ಣನ್ನು ಸೇವನೆ ಮಾಡಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ. ಮಧುಮೇಹಿಗಳು ದಿನಕ್ಕೆ ಅರ್ಧ ಇಲ್ಲವೇ ಒಂದು ಮಾವಿನ ಹಣ್ಣನ್ನು ಸೇವಿಸಬಹುದಾಗಿದೆ.
ಹೆಚ್ಚು ಮಾವಿನ ಹಣ್ಣು ಸೇವಿಸುವುದು ಬೇಡ
ಟೈಪ್ 2 ಡಯಾಬಿಟೀಸ್ ಹೊಂದಿರುವವರು ರಕ್ತದಲ್ಲಿ ಈಗಾಗಲೇ ಸಕ್ಕರೆ ಮಟ್ಟ ಅತ್ಯಧಿಕವಾಗಿ ಹೊಂದಿರುತ್ತಾರೆ. ಇವರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾವಿನ ಹಣ್ಣನ್ನು ಸೇವನೆ ಮಾಡಬಹುದಾಗಿದೆ. ನೀವು ಹೆಚ್ಚು ಮಾವಿನ ಹಣ್ಣು ಸೇವಿಸಿದರೆ ನಿಮ್ಮ ದೇಹದಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಪ್ರಮಾಣ ಎರಡೂ ಇನ್ನಷ್ಟು ಹೆಚ್ಚಾಗಲಿದೆ ಅಲ್ಲದೇ ಕೊಬ್ಬಿನ ಪ್ರಮಾಣ ಕೂಡ ಏರಿಕೆಯಾಗುತ್ತದೆ. ಹೆಚ್ಚುವರಿ ಸಂಗ್ರಹವಾದ ಕೊಬ್ಬಿನಿಂದ ನಿಮಗೆ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಪಾರ್ಶ್ವವಾಯು ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಕಾರ್ಬೋಹೈಡ್ರೇಟ್‌ಗಳು, ಸಕ್ಕರೆಯಂಶಯುಕ್ತ ಪಾನೀಯಗಳು ಹಾಗೂ ಸಂಸ್ಕರಿಸಿದ ಆಹಾರಗಳಿಗೆ ಹೋಲಿಕೆ ಮಾಡಿದರೆ ಮಧುಮೇಹಿಗಳಿಗೆ ಮಾವಿನ ಹಣ್ಣು ಉತ್ತಮ ಆಯ್ಕೆಯಾಗಿದೆ. ಇವುಗಳಲ್ಲಿ ಫೈಬರ್ ಅಂಶ ಹಾಗೂ ಪ್ರೊಟೀನ್ ಸಮೃದ್ಧವಾಗಿರುತ್ತದೆ. ಮಾವಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವಿದ್ದರೂ ಸಹ ಇದು ಸಂಸ್ಕರಿಸಿದ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಮಧುಮೇಹಿಗಳು ನಿಮ್ಮ ವೈದ್ಯರಿಂದ ಸಲಹೆಯನ್ನು ಪಡೆದು ಮಾವಿನ ಹಣ್ಣನ್ನು ತಿನ್ನಬಹುದು.