logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಅತಿಯಾದ ಉಪ್ಪು ಸೇವಿಸುತ್ತಿದ್ದೀರ? ನಿಮ್ಮ ಲೈಂಗಿಕ ಜೀವನಕ್ಕೆ ಸಮಸ್ಯೆ ತರಬಹುದು ಎಚ್ಚರಿಕೆ!

Health Tips: ಅತಿಯಾದ ಉಪ್ಪು ಸೇವಿಸುತ್ತಿದ್ದೀರ? ನಿಮ್ಮ ಲೈಂಗಿಕ ಜೀವನಕ್ಕೆ ಸಮಸ್ಯೆ ತರಬಹುದು ಎಚ್ಚರಿಕೆ!

HT Kannada Desk HT Kannada

Mar 13, 2024 10:05 PM IST

google News

ಅತಿಯಾದ ಉಪ್ಪು ಸೇವನೆಯಿಂದ ಲೈಂಗಿಕ ಜೀವನಕ್ಕೆ ಸಮಸ್ಯೆ

  • Health Tips: ನೀವು ಅಡುಗೆ ಮಾಡುವಾಗ ಆಹಾರ ಸೇವಿಸುವಾಗ ಎಷ್ಟು ಪ್ರಮಾಣದ ಉಪ್ಪನ್ನು ಬಳಸುತ್ತೀರಿ ಎನ್ನುವುದು ನಿಮ್ಮ ಲೈಂಗಿಕ ಜೀವನದ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಉಪ್ಪಿಗೂ ಲೈಂಗಿಕ ಕ್ರಿಯೆಗೂ ಏನು ಸಂಬಂಧ..? ಇಲ್ಲಿದೆ ಮಾಹಿತಿ

ಅತಿಯಾದ ಉಪ್ಪು ಸೇವನೆಯಿಂದ ಲೈಂಗಿಕ ಜೀವನಕ್ಕೆ ಸಮಸ್ಯೆ
ಅತಿಯಾದ ಉಪ್ಪು ಸೇವನೆಯಿಂದ ಲೈಂಗಿಕ ಜೀವನಕ್ಕೆ ಸಮಸ್ಯೆ

Health Tips: ನೀವು ಏನನ್ನು ಸೇವಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ ಎನ್ನುವುದು ಈಗಾಗಲೇ ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಆದರೆ ಎಂದಾದರೂ ನೀವು ಸೇವಿಸುವ ಉಪ್ಪು ನಿಮ್ಮ ಲೈಂಗಿಕ ಜೀವನವನ್ನು ನಿರ್ಧರಿಸುತ್ತದೆ ಎಂದು ಎಂದಾದರೂ ಯೋಚಿಸಿದ್ದೀರೇ..? ಉಪ್ಪು ಹಾಗೂ ನಿಮ್ಮ ಲೈಂಗಿಕ ಜೀವನದ ನಡುವೆ ಒಂದು ಸಂಬಂಧವಿದೆ.

ಅತಿಯಾದ ಉಪ್ಪು ಸೇವನೆಯು ನಿಮ್ಮ ಲೈಂಗಿಕ ಜೀವನವನ್ನು ಹಾಳುಗೆಡವುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿ ನೀವು ಆಹಾರದಲ್ಲಿ ಉಪ್ಪು ಕಡಿಮೆ ಮಾಡಿದಂತೆಲ್ಲ ಲೈಂಗಿಕ ಜೀವನದಲ್ಲಿ ಹೆಚ್ಚು ಸುಖವನ್ನು ಅನುಭವಿಸುತ್ತೀರಿ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಅತಿಯಾದ ಉಪ್ಪು ಸೇವನೆಯು ನಿಮ್ಮ ಲೈಂಗಿಕ ಜೀವನವನ್ನು ಯಾವ ರೀತಿಯಲ್ಲಿ ಹಾಳು ಮಾಡುತ್ತದೆ ಎಂಬುದನ್ನು ನೋಡೋಣ.

ಅತಿಯಾದ ಉಪ್ಪು ಸೇವನೆ ನಿಮ್ಮ ಲೈಂಗಿಕ ಜೀವನವನ್ನು ಹೇಗೆ ಹಾಳು ಮಾಡುತ್ತದೆ..?

ನೀವು ತಿನ್ನುವ ಆಹಾರಕ್ಕೆ ಹೆಚ್ಚುವರಿಯಾಗಿ ಉಪ್ಪನ್ನು ಹಾಕಿಕೊಳ್ಳುವ ಅಭ್ಯಾಸ ನಿಮಗಿದ್ದರೆ ನಿಮ್ಮ ಲೈಂಗಿಕ ಜೀವನ ತೃಪ್ತಿದಾಯಕವಾಗಿರಲು ಸಾಧ್ಯವೇ ಇಲ್ಲ. ಜರ್ನಲ್ ಆಫ್ ಸೆಕ್ಷುವಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಯಾರು ಹೆಚ್ಚು ಉಪ್ಪು ಸೇವನೆ ಮಾಡುತ್ತಾರೋ ಅವರಿಗೆ ನಿಮಿರುವಿಕೆ ಪ್ರಕ್ರಿಯೆ ದುರ್ಬಲವಾಗಿರುತ್ತದೆ ಎಂದು ತಿಳಿಸಲಾಗಿದೆ.

1. ಅಧಿಕ ರಕ್ತದೊತ್ತಡ

ಅತಿಯಾದ ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಇದು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ವಿವಿಧ ಅಂಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರಿಗೆ ಶಿಶ್ನ ನಿಮಿರುವಿಕೆಯಲ್ಲಿ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಇನ್ನು ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಕಡಿಮೆ ಆಸಕ್ತಿ ಹೊಂದಿರುತ್ತಾರೆ ಎನ್ನಲಾಗಿದೆ.

2.ಅಪಧಮನಿಗಳಲ್ಲಿ ಒತ್ತಡ

ರಕ್ತನಾಳಗಳಿಗೆ ಬೇಕಾದಷ್ಟು ವಿಸ್ತರಿಸಲು ಹಾಗೂ ಸಂಕುಚನಗೊಳ್ಳಲು ಕಷ್ಟವಾದಾಗ ಅಪಧಮನಿಗಳಲ್ಲಿ ಬಿಗಿತ ಉಂಟಾಗುತ್ತದೆ. ಲೈಂಗಿಕ ಕ್ರಿಯೆ ಸರಾಗವಾಗಿ ನಡೆಯಬೇಕು ಎಂದರೆ ರಕ್ತನಾಳಗಳು ಸೂಕ್ತವಾದ ರಕ್ತದ ಹರಿವನ್ನು ಹೊಂದಿರಬೇಕು. ದಿ ಜರ್ನಲ್ ಆಫ್ ಕ್ಲಿನಿಕಲ್ ಹೈಪರ್ಟೆನ್ಶ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚಿನ ಉಪ್ಪು ಸೇವನೆಯಿಂದ ಅಪಧಮನಿಗಳಲ್ಲಿ ಬಿಗಿತ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಇದು ಪರೋಕ್ಷವಾಗಿ ಲೈಂಗಿಕ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

3. ಎಂಡೋಥೀಲಿಯಲ್ ಕ್ರಿಯೆಯಲ್ಲಿ ಏರುಪೇರು

ನೈಟ್ರಿಕ್ ಆಕ್ಸೈಡ್ ಬಿಡುಗಡೆ ಆಗಬೇಕು ಎಂದರೆ ಎಂಡೋಥೀಲಿಯಲ್ ಸರಿಯಾಗಿ ಕಾರ್ಯ ನಿರ್ವಹಿಸುವುದು ನಿರ್ಣಾಯಕವಾಗಿರುತ್ತದೆ. ಇದು ರಕ್ತನಾಳಗಳು ವಿಶ್ರಾಂತಿ ಮಾಡಲು ಹಾಗೂ ರಕ್ತದ ಹರಿವು ಸುಧಾರಿಸಲು ಸಹಕಾರಿಯಾಗಿದೆ. ಅತಿಯಾಗಿ ಉಪ್ಪು ಸೇವನೆ ಮಾಡುವವರಲ್ಲಿ ಎಂಡೋಥೀಲಿಯಲ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಎಂಡೋಥೀಲಿಯಲ್ ಅಸರ್ಮಪಕ ಕ್ರಿಯೆಯು ಲೈಂಗಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.

ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದುವುದು ಹೇಗೆ..?

ಹೆಚ್ಚು ಉಪ್ಪು ಸೇವನೆಯಿಂದ ನಿಮ್ಮ ಲೈಂಗಿಕ ಜೀವನ ಹಾಳಾಗುತ್ತದೆ ಎಂಬುದು ಸತ್ಯವಾಗಿದ್ದರೂ ಸಹ ಲೈಂಗಿಕ ಜೀವನ ಸಮರ್ಪಕವಾಗದೇ ಇರಲು ಕೇವಲ ಇದೊಂದೇ ಕಾರಣ ಕೂಡ ಅಲ್ಲ. ನಿಮಗೆ ಸಂಗಾತಿಯೊಂದಿಗೆ ಆರೋಗ್ಯಕರ ಲೈಂಗಿಕ ಜೀವನ ಬೇಕು ಎಂದುಕೊಂಡಿದ್ದರೆ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಲೇಬೇಕಿದೆ.

ಸಂವಹನ : ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ.

ಆರೋಗ್ಯಕರ ಜೀವನಶೈಲಿ : ಹಣ್ಣುಗಳು, ತರಕಾರಿಗಳು, ಧಾನ್ಯಗಳಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇಂತಹ ಸಮತೋಲಿತ ಆಹಾರ ಸೇವನೆಯಿಂದ ನಿಮ್ಮ ಲೈಂಗಿಕ ಜೀವನ ಕೂಡ ಚೆನ್ನಾಗಿ ಇರಲಿದೆ. ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮದ ಮೂಲಕ ನೀವು ಲೈಂಗಿಕ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದಾಗಿದೆ.

ಒತ್ತಡ ಬೇಡ : ಒತ್ತಡ ಮನಸ್ಥಿತಿಯು ಲೈಂಗಿಕ ಜೀವನವನ್ನು ಹಾಳುಗೆಡವಬಹುದು. ಹೀಗಾಗಿ ಪ್ರಾಣಾಯಾಮ. ಯೋಗವನ್ನು ರೂಢಿಸಿಕೊಳ್ಳಿ. ಇದರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತದೆ.

ನಿದ್ರೆ: ಒಳ್ಳೆಯ ನಿದ್ರೆ ಕೂಡಾ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತಮ ನಿದ್ರೆಯನ್ನು ಕಾಪಾಡಿಕೊಳ್ಳಿ.

ಸಂಗಾತಿಯ ಬಗ್ಗೆ ಧನಾತ್ಮಕ ಭಾವನೆ : ಉತ್ತಮ ಲೈಂಗಿಕ ಜೀವನಕ್ಕಾಗಿ ನಿಮ್ಮ ಸಂಗಾತಿಯ ಮೇಲೆ ಪ್ರೀತಿ ಹಾಗೂ ಅವರ ಬಗ್ಗೆ ಧನಾತ್ಮಕ ಭಾವನೆ ಹೊಂದುವುದು ಕೂಡಾ ಅತ್ಯವಶ್ಯಕವಾಗಿದೆ.

ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನವಿರಲಿ: ಹಾರ್ಮೋನುಗಳ ಅಸಮತೋಲನ ಹಾಗೂ ಆರೋಗ್ಯ ಸಮಸ್ಯೆಗಳಿಂದ ಲೈಂಗಿಕ ಜೀವನ ಹಾಳಾಗಬಹುದು. ಹೀಗಾಗಿ ಇವುಗಳನ್ನು ಸರಿಪಡಿಸಿಕೊಳ್ಳಲು ವೈದ್ಯಕೀಯ ಸಲಹೆ ಪಡೆದುಕೊಳ್ಳಿ.

ಧೂಮಪಾನ ಹಾಗೂ ಮದ್ಯಪಾನ ತ್ಯಜಿಸಿ : ಆರೋಗ್ಯಕರ ಲೈಂಗಿಕ ಕ್ರಿಯೆಯನ್ನು ಹೊಂದಲು ದುಶ್ಚಟಗಳಿಂದ ದೂರವಿರಬೇಕು. ಧೂಮಪಾನ ಹಾಗೂ ಮದ್ಯಪಾನವನ್ನು ತ್ಯಜಿಸುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ