ಕಬ್ಬಿನಹಾಲಿನಿಂದ ತಾಳೆಯವರೆಗೆ: ಬೆಲ್ಲದಲ್ಲಿ ಎಷ್ಟು ವಿಧ? ವೈವಿಧ್ಯಮಯ ಬೆಲ್ಲಗಳಿಂದ ಆರೋಗ್ಯಕ್ಕೂ ಇದೆ ಹಲವು ಪ್ರಯೋಜನಗಳು
Jul 13, 2024 05:54 PM IST
ಕಬ್ಬಿನಹಾಲಿನಿಂದ ತಾಳೆ: ಯಾವೆಲ್ಲಾ ರೀತಿಯ ಬೆಲ್ಲಗಳಿವೆ ಗೊತ್ತೆ? ವೈವಿಧ್ಯಮಯ ಬೆಲ್ಲಗಳಿಂದ ಆರೋಗ್ಯಕ್ಕೂ ಇದೆ ಹಲವು ಪ್ರಯೋಜನಗಳು
- ಸಕ್ಕರೆಗೆ ಪರ್ಯಾಯ ಸಿಹಿ ಪದಾರ್ಥವೆಂದರೆ ಅದು ಬೆಲ್ಲ. ಸಕ್ಕರೆ ಆರೋಗ್ಯಕ್ಕೆ ಅಪಾಯ ಎಂದು ಹಲವರು ಹೇಳುತ್ತಾರೆ. ಆದರೆ, ಸಿಹಿ ಪದಾರ್ಥವನ್ನು ಹೊಂದಿರುವ ಬೆಲ್ಲವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೇವಲ ಕಬ್ಬಿನಿಂದ ಮಾಡಲಾಗುವ ಬೆಲ್ಲ ಮಾತ್ರವಲ್ಲ, ಬೇರೆ ರೀತಿಯ ಬೆಲ್ಲಗಳೂ ಲಭ್ಯವಿದೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ: ಪ್ರಿಯಾಂಕಾ)
ಬೆಲ್ಲವು ಭಾರತ, ಆಗ್ನೇಯ ಏಷ್ಯಾ, ಮಧ್ಯ ಅಮೆರಿಕ, ಬ್ರೆಜಿಲ್ ಮತ್ತು ಆಫ್ರಿಕಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಿಹಿ ಪದಾರ್ಥ. ಇದು ಕಬ್ಬಿನ ರಸದ ಸಾಂದ್ರೀಕೃತ ಉತ್ಪನ್ನವಾಗಿದ್ದು, ಚಿನ್ನದ ಬಣ್ಣದಿಂದ ಗಾಢ ಕಂದು ಬಣ್ಣದವರೆಗೂ ಇರುತ್ತದೆ. ಬೆಲ್ಲವು ಸಂಸ್ಕರಿಸದ ಸಕ್ಕರೆಯ ಒಂದು ರೂಪವಾಗಿದ್ದು, ಇದನ್ನು ಭಾರತದಲ್ಲಿ ಕಬ್ಬಿನ ರಸ ಅಥವಾ ಇತರ ಸಸ್ಯಮೂಲಗಳಿಂದ ತಯಾರಿಸಲಾಗುತ್ತದೆ. ಬೆಲ್ಲದಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿರುವ ಕಾರಣ, ಸಕ್ಕರೆಗಿಂತ ಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೇವಲ ಕಬ್ಬಿನ ಹಾಲಿನಿಂದ ತಯಾರಿಸುವ ಬೆಲ್ಲ ಮಾತ್ರವಲ್ಲ, ಬೇರೆ-ಬೇರೆ ರೀತಿಯ ಬೆಲ್ಲ ಲಭ್ಯವಿದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಯಾವೆಲ್ಲಾ ಬೆಲ್ಲ ಇವೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ:
ಕಬ್ಬಿನ ಬೆಲ್ಲ
ಅತ್ಯಂತ ಜನಪ್ರಿಯವಾಗಿರುವ ಬೆಲ್ಲ ಇದಾಗಿದೆ. ಕಬ್ಬಿನ ರಸವನ್ನು ಗಟ್ಟಿಯಾಗುವವರೆಗೆ ಕುದಿಸಿ ಬೆಲ್ಲವನ್ನು ತಯಾರಿಸಲಾಗುತ್ತದೆ. ಕಬ್ಬಿನ ಗುಣಮಟ್ಟ ಮತ್ತು ಸಂಸ್ಕರಣಾ ವಿಧಾನವನ್ನು ಅವಲಂಬಿಸಿ ಇದರ ಬಣ್ಣವು ಗೋಲ್ಡನ್ ಬ್ರೌನ್‌ನಿಂದ ಗಾಢ ಕಂದು ಬಣ್ಣದವರೆಗೆ ಇರುತ್ತದೆ. ಕಬ್ಬಿನಿಂದ ತಯಾರಿಸುವ ಬೆಲ್ಲವು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯವನ್ನು ಬೆಂಬಲಿಸುವ ಗುಣಲಕ್ಷಣವನ್ನು ಹೊಂದಿದೆ. ಅಲ್ಲದೆ, ರಕ್ತ ಪರಿಚಲನೆ ಸುಧಾರಿಸುವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಖನಿಜಗಳನ್ನು ಕೂಡ ಒದಗಿಸುತ್ತದೆ.
ಖರ್ಜೂರದ ಬೆಲ್ಲ (ನೋಲೆನ್ ಗುರ್)
ಈ ಬಗೆಯ ಬೆಲ್ಲವನ್ನು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಭಾಗಗಳಲ್ಲಿ ಪ್ರಧಾನವಾಗಿ ತಯಾರಿಸಲಾಗುತ್ತದೆ. ಇದನ್ನು ಚಳಿಗಾಲದಲ್ಲಿ ಕೊಯ್ಲು ಮಾಡಲಾಗುತ್ತದೆ. ಇದರ ಸುವಾಸನೆ ಅಗಾಧವಾದದ್ದು. ಇದನ್ನು ರಸಗುಲ್ಲಾದಂತಹ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಖರ್ಜೂರ ಬೆಲ್ಲವು ಕಬ್ಬಿಣ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ತಡೆಗಟ್ಟಲು ಪ್ರಯೋಜನಕಾರಿಯಾಗಿದೆ. ಇದು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಜೊತೆಗೆ ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿದೆ. ಒಟ್ಟಾರೆ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿಯಾಗಿದೆ.
ತೆಂಗಿನಕಾಯಿ ಬೆಲ್ಲ
ತೆಂಗಿನಕಾಯಿ ಬೆಲ್ಲವು ಕೇರಳ, ಲಕ್ಷದ್ವೀಪ ಮತ್ತು ತಮಿಳುನಾಡಿನಂತಹ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ವಿಶಿಷ್ಟವಾದ ರುಚಿಯನ್ನು ಹೊಂದಿದ್ದು, ಮಧುಮೇಹಿಗಳಿಗೆ ಅತ್ಯಂತ ಸುರಕ್ಷಿತವಾಗಿದೆ. ಇದನ್ನು ಹೆಚ್ಚಾಗಿ ಪ್ರಾದೇಶಿಕ ಸಿಹಿ-ತಿಂಡಿಗಳು ಮತ್ತು ಭಕ್ಷ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ತೆಂಗಿನ ಬೆಲ್ಲವು ವಿಟಮಿನ್‌ಗಳು (ವಿಶೇಷವಾಗಿ ಬಿ ಜೀವಸತ್ವಗಳು) ಮತ್ತು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತುವಿನಂತಹ ಖನಿಜಗಳಿಂದ ತುಂಬಿದೆ.
ತಾಳೆ ಬೆಲ್ಲ
ತಾಳೆ ಹಣ್ಣಿನ ರಸದಿಂದ ಹೊರತೆಗೆದು ಮಾಡಲಾಗುವ ಬೆಲ್ಲವು ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಜನಪ್ರಿಯವಾಗಿದೆ. ಪಾನೀಯಗಳು, ಸಿಹಿ-ತಿಂಡಿಗಳು ಹಾಗೂ ಖಾರದ ಭಕ್ಷ್ಯಗಳಿಗೂ ಇದನ್ನು ಬಳಸಲಾಗುತ್ತದೆ. ಕರಾವಳಿಯಲ್ಲಿ ಇದನ್ನು ವಿಶೇಷವಾಗಿ ಬಾಣಂತಿಯರಿಗೆ ಕೊಡಲಾಗುತ್ತದೆ. ಬಾಣಂತಿಯರಿಗೆ ಮಾಡುವ ಬಾಣಂತಿ ಮದ್ದಿಗೆ ಈ ಬೆಲ್ಲ ಬಹಳ ಅಗತ್ಯವಾಗಿ ಬೇಕಾಗುತ್ತದೆ. ಇದನ್ನು ಓಲೆ ಬೆಲ್ಲ ಅಂತಾ ಇಲ್ಲಿ ಕರೆಯಲಾಗುತ್ತದೆ. ಈ ಬೆಲ್ಲವು ಇದರ ಆರೋಗ್ಯ ಪ್ರಯೋಜನಗಳು ಮತ್ತು ವಿಶಿಷ್ಟ ರುಚಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ವಿಟಮಿನ್ ಬಿ, ಮೆಗ್ನೀಸಿಯಮ್ ಮತ್ತು ಜೀವಸತ್ವಗಳು ಮತ್ತು ಖನಿಜಗಳ ಅಂಶವನ್ನು ಒಳಗೊಂಡಿದೆ. ಕಬ್ಬಿನ ಬೆಲ್ಲಕ್ಕೆ ಹೋಲಿಸಿದರೆ ತಾಳೆ ಬೆಲ್ಲ ಆರೋಗ್ಯಕ್ಕೆ ಇನ್ನೂ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಕಾರಿಯಾಗಿದೆ.
ವಿಭಾಗ