Health Benefits: ಹಾಲಿಗೆ ತುಪ್ಪ ಸೇರಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ, ಇದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಾಗುತ್ತೆ ನೋಡಿ
Nov 24, 2023 07:30 AM IST
Health Benefits: ಹಾಲಿಗೆ ತುಪ್ಪ ಸೇರಿಸಿ ಕುಡಿಯಿರಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
- Health Tips: ಹಾಲು ಮತ್ತು ತುಪ್ಪ ಸೇರಿಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಜೀರ್ಣಾಂಗದ ಸಮಸ್ಯೆ ದೂರಮಾಡುತ್ತದೆ.
ಹಾಲು ಮತ್ತು ತುಪ್ಪದ ಇವೆರಡರ ಆರೋಗ್ಯ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅವೆರಡನ್ನೂ ಸೇರಿಸಿ ಕುಡಿದಾಗ ಅದು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದೊಂದು ಉತ್ತಮ ಆರೋಗ್ಯಕರ ಪಾನೀಯವೂ ಹೌದು. ಹಾಲು ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಖನಿಜಗಳನ್ನು ಮತ್ತು ವಿಟಮಿನ್ ಎ, ಡಿ, ಬಿ-6, ಇ ಮತ್ತು ಕೆ ಜೀವಸತ್ವಗಳನ್ನು ಹೊಂದಿದೆ. ಹಾಲಿನಲ್ಲಿರುವ ಕೊಬ್ಬಿನಾಂಶವು ಹಸು ಅಥವಾ ಎಮ್ಮೆಗಳಂತಹ ಮೂಲವನ್ನು ಅವಲಂಬಿಸಿರುತ್ತದೆ. ಹಾಗಾಗಿ ಅದರಲ್ಲಿಯ ಕೊಬ್ಬಿನಾಂಶವು ಬದಲಾಗುತ್ತದೆ. ತುಪ್ಪವು ಉತ್ತಮ ಕೊಬ್ಬಿನ ಮೂಲವಾಗಿದೆ. ಅದರಲ್ಲಿ ಕರಗಬಲ್ಲ ವಿಟಮಿನ್‌ಗಳಾದ ಎ, ಡಿ, ಇ, ಮತ್ತು ಕೆ ಅನ್ನು ಹೊಂದಿದೆ. ಮೊಸರನ್ನು ಕಡೆದು ಬಂದ ಬೆಣ್ಣೆಯಿಂದ ತಯಾರಿಸಿದ ತುಪ್ಪ ಮತ್ತು ದೇಸಿ ಹಸುವಿನ ಹಾಲು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ.
ಚರ್ಮ ಮತ್ತು ಕೂದಲಿಗಿದೆ ಭಾರಿ ಪ್ರಯೋಜನ
ಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಚರ್ಮ ಮತ್ತು ಕೂದಲು ಶುಷ್ಕವಾಗಿ ಬಣ್ಣ ಕಳೆದುಕೊಳ್ಳುತ್ತದೆ. ಹಾಲು ಮತ್ತು ತುಪ್ಪವು ಉತ್ತಮ ಮಾಯಶ್ಚರೈಸರ್ ಆಗಿದೆ. ಅದು ಚರ್ಮ ಮತ್ತು ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಸಹಕಾರಿಯಾಗಿದೆ. ಅರಿಶಿನದ ಹಾಲಿಗೆ ತುಪ್ಪ ಬೆರೆಸಿ ಕುಡಿಯಲು ಹೇಳಲಾಗುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ಚರ್ಮದ ಮೇಲಿರುವ ಕಲೆ, ಮೊಡವೆಗಳನ್ನು ದೂರಮಾಡುತ್ತದೆ.
ಪೋಷಕಾಂಶಗಳ ಖಜಾನೆ
ಹಾಲು ಮತ್ತು ತುಪ್ಪದ ಸಂಯೋಜನೆಯು ಉತ್ತಮ ಪೌಷ್ಠಿಕಾಂಶದ ಮೂಲವಾಗಿದೆ. ಹಾಲು ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಖನಿಜಗಳನ್ನು ಮತ್ತು ವಿಟಮಿನ್ ಎ, ಡಿ, ಬಿ-6, ಇ ಮತ್ತು ಕೆ ಜೀವಸತ್ವಗಳನ್ನು ಹೊಂದಿದ್ದರೆ, ತುಪ್ಪವು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. ತುಪ್ಪವು ಸ್ಯಾಚುರೇಟೆಡ್ ಮತ್ತು ಮೊನೊಸ್ಯಾಚುರೇಟೆಡ್ ಕೊಬ್ಬುಗಳ ಜೊತೆಗೆ ಕರಗಬಲ್ಲ ಜೀವಸತ್ವಗಳಾದ ಎ, ಡಿ, ಇ ಮತ್ತು ಕೆ ಹೊಂದಿದೆ. ಇವೆರಡನ್ನು ಸೇರಿಸಿ ಕುಡಿದಾಗ ಆ ಎಲ್ಲಾ ಪೋಷಕಾಂಶಗಳು ನಮ್ಮ ದೇಹವನ್ನು ಸೇರುತ್ತದೆ. ಉತ್ತಮ ಆರೋಗ್ಯ ನೀಡುತ್ತದೆ.
ಎಲುಬಿನ ಆರೋಗ್ಯ ಕಾಪಾಡುತ್ತದೆ
ಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಗಟ್ಟಿಮುಟ್ಟಾದ ಮೂಳೆ ಮತ್ತು ಹಲ್ಲುಗಳಿಗೆ ಇದು ಅಗತ್ಯ. ವಿಟಮಿನ್ ಡಿ ಹೊಂದಿರುವ ತುಪ್ಪದೊಂದಿಗೆ ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಾಲನ್ನು ಸೇರಿಸಿದಾಗ, ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಮಹತ್ವದ ಪಾತ್ರ ವಹಿಸುತ್ತದೆ. ತುಪ್ಪವು ಉತ್ತಮ ಲೂಬ್ರಿಕಂಟ್ ಆಗಿದೆ. ಅದು ಕೀಲುಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಹಾಲು ಅದ್ಭುತವಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹಾಲು ಮತ್ತು ತುಪ್ಪ ಎರಡೂ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ. ದೇಸಿ ತುಪ್ಪವು ಜೀರ್ಣಾಂಗದಿಂದ ಕಲ್ಮಶಗಳನ್ನು ಹೊರಹಾಕಲು, ದೇಹದ ರಕ್ಷಣೆಯನ್ನು ಬಲಪಡಿಸಲು ಮತ್ತು ನೈಸರ್ಗಿಕವಾಗಿ ದೇಹಕ್ಕೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ. ತುಪ್ಪವು ನೈಸರ್ಗಿಕ ವಿರೇಚಕವೂ ಹೌದು. ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಕರುಳಿನಿಂದ. ತುಪ್ಪ ಮತ್ತು ಹಾಲು ಎರಡೂ ಕರುಳಿಗೆ ಉತ್ತಮವಾದ ಕಾರಣ ಅವುಗಳ ಮಿಶ್ರಣವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮವಾಗಿದೆ.
ತೂಕ ಇಳಿಕೆಯಲ್ಲಿ ಸಹಕಾರಿ
ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು ಹಲವರ ತಪ್ಪು ತಿಳುವಳಿಕೆ. ಮಿತವಾಗಿ ಸೇವಿಸಿದಾಗ ಅದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ತುಂಬಿರುವ ಅನುಭವ ನೀಡಿ, ಅತಿಯಾಗಿ ತಿನ್ನುವ ಬಯಕೆ ಕಡಿಮೆಯಾಗುವಂತೆ ಮಾಡುತ್ತದೆ. ಹಾಲಿನಲ್ಲಿರುವ ಪ್ರೋಟೀನ್‌ನೊಂದಿಗೆ ಸೇರಿಸಿದಾಗ ತೃಪ್ತಿ ನೀಡುವ ಪೌಷ್ಠಿಕ ಪಾನೀಯವಾಗಬಲ್ಲದು.
ಇದನ್ನೂ ಓದಿ:ಪನೀರ್ ಅಥವಾ ಮೊಟ್ಟೆ, ತೂಕ ಇಳಿಸುವ ಡಯಟ್ ಪ್ಲ್ಯಾನ್‌ನಲ್ಲಿ ಯಾವುದು ಉತ್ತಮ ಆಯ್ಕೆ?
ಜೀರ್ಣಕ್ರಿಯೆ ಸುಧಾರಿಸುತ್ತದೆ
ತುಪ್ಪವು ಉತ್ತಮ ಜೀರ್ಣಕಾರಿ ಎಂದೇ ಹೆಸರುವಾಸಿ. ಇದರಲ್ಲಿರುವ ಬ್ಯುಟರಿಕ್ ಆಮ್ಲವು ಜಿರ್ಣಾಂಗವ್ಯೂಹದ ಆರೋಗ್ಯವನ್ನು ಬೆಂಬಲಿಸುವ ಕೊಬ್ಬಿನಾಮ್ಲವಾಗಿದೆ. ಇದು ಕರುಳಿನ ಬ್ಯಾಕ್ಟೀರಿಯಾ, ಕರುಳಿನ ಕೋಶಗಳು ಮತ್ತು ಉರಿಯೂತದಿಂದ ಆರೋಗ್ಯವನ್ನು ಕಾಪಾಡುತ್ತದೆ. ಹಾಲಿನೊಂದಿಗೆ ತುಪ್ಪ ಸೇವಿಸಿದಾಗ, ತುಪ್ಪವು ಹಾಲಿನ ಜೀರ್ಣಕಾರಿ ಗುಣಗಳನ್ನು ಹೆಚ್ಚಿಸುತ್ತದೆ. ಲ್ಯಾಕ್ಟೋಸ್ ಅಥವಾ ಡೈರಿ ಉತ್ಪನ್ನ ಅಲರ್ಜಿ ಇರುವವರಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
ಎಷ್ಟು ತುಪ್ಪ ತಿನ್ನಬೇಕು?
ಹಾಲು ಮತ್ತು ತುಪ್ಪ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಅವೆರಡೂ ಕ್ಯಾಲೋರಿಗಳಿಂದ ತುಂಬಿರುತ್ತವೆ. ಹಾಗಾಗಿ ದಿನವೊಂದಕ್ಕೆ ತುಪ್ಪವನ್ನು ಒಂದರಿಂದ ಎರಡು ಚಮಚ ಶಿಫಾರಸ್ಸು ಮಾಡಲಾಗುತ್ತದೆ. ಹಾಲು ಕುಡಿಯಲು ನೀಡಿರುವ ಮಾರ್ಗಸೂಚಿಯೆಂದರೆ ವಯಸ್ಕರರು ದಿನವೊಂದಕ್ಕೆ ಎರಡರಿಂದ ಮೂರು ಕಪ್ ಕುಡಿಯಬಹುದು. ಆದರೆ ಈ ಸೂಚಿಯು ಮಹಿಳೆ, ಪುರುಷ, ವಯಸ್ಸು ಮತ್ತು ಆಹಾರಕ್ರಮದ ಮೇಲೆ ಅವಲಂಬಿಸಿದೆ.
ಮುನ್ನೆಚ್ಚರಿಕೆಗಳೇನು?
ಹಾಲು ಮತ್ತು ತುಪ್ಪ ಎಷ್ಟೇ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅವುಗಳನ್ನು ಸೇವಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇ ಬೇಕು. ಮೊದಲನೆಯದಾಗಿ ಹಾಲು ಮತ್ತು ತುಪ್ಪ ಇವೆರಡರಲ್ಲೂ ಲ್ಯಾಕ್ಟೋಸ್ ಇರುವುದರಿಂದ ಅದರ ಅಲರ್ಜಿ ಇರುವವರು ಎಚ್ಚರಿಕೆ ವಹಿಸಬೇಕು. ತೂಕ ನಿರ್ವಹಣೆಯಲ್ಲಿರುವವರು ತುಪ್ಪದ ಕ್ಯಾಲೋರಿ ಗಮನದಲ್ಲಿಟ್ಟುಕೊಂಡಿರಬೇಕು. ಇದು ಮಿತವಾಗಿ ಉತ್ತಮವಾಗಿದೆ. ಅತಿಯಾದ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಕೆಲವು ಆಹಾರಗಳ ನಿರ್ಬಂಧವಿರುವವರು ಅಥವಾ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವವರು, ಓಟ್, ಸೋಯಾ ಅಥವಾ ಬಾದಾಮಿ ಹಾಲಿನಂತಹ ಪರ್ಯಾಯಗಳನ್ನು ರೂಢಿಸಿಕೊಳ್ಳಬೇಕಾಗಬಹುದು.