logo
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರಲು ದೇಹದಂಡಿಸಬೇಕು ಅಂತೇನಿಲ್ಲ; ದೈನಂದಿನ ದಿನಚರಿಯಲ್ಲಿ ಈ ಸರಳ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸಾಕು

ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರಲು ದೇಹದಂಡಿಸಬೇಕು ಅಂತೇನಿಲ್ಲ; ದೈನಂದಿನ ದಿನಚರಿಯಲ್ಲಿ ಈ ಸರಳ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸಾಕು

Reshma HT Kannada

Jul 15, 2024 04:41 PM IST

google News

ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರಲು ದೇಹದಂಡಿಸಬೇಕು ಅಂತೇನಿಲ್ಲ; ದೈನಂದಿನ ದಿನಚರಿಯಲ್ಲಿ ಈ ಸರಳ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸಾಕು

    • ವಾಕಿಂಗ್‌ ಮಾಡುವುದು, ಮೆಟ್ಟಿಲು ಹತ್ತುವುದು, ಸಾಮಾಜಿಕವಾಗಿ ಜನರೊಂದಿಗೆ ಬೆರೆಯುವುದು, ಸ್ಟ್ರೆಂಚಿಂಗ್‌ ಮಾಡುವುದು, ನೀರು ಕುಡಿಯುವುದು ಮತ್ತು ಸಮಾಧಾನದಿಂದ ಇರುವುದು ಇಂತಹ ಸರಳ ಅಭ್ಯಾಸಗಳು ನಮ್ಮಲ್ಲಿ ಆಲಸ್ಯ, ಏಕಾಗ್ರತೆಯ ಕೊರತೆ ಹಾಗೂ ಹೇಳಿಕೊಳ್ಳಲಾಗದ ನೋವುಗಳಿಗೆ ಉಪಶಮನ ನೀಡುತ್ತವೆ.
ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರಲು ದೇಹದಂಡಿಸಬೇಕು ಅಂತೇನಿಲ್ಲ; ದೈನಂದಿನ ದಿನಚರಿಯಲ್ಲಿ ಈ ಸರಳ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸಾಕು
ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರಲು ದೇಹದಂಡಿಸಬೇಕು ಅಂತೇನಿಲ್ಲ; ದೈನಂದಿನ ದಿನಚರಿಯಲ್ಲಿ ಈ ಸರಳ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸಾಕು

ಫಿಟ್‌ ಆಗಿರೋದು ಆಕ್ಟಿವ್‌ ಆಗಿರೋದು ಈಗಿನ ಕಾಲದಲ್ಲಿ ಒಂಥರಾ ಸಾಹಸವೇ ಸರಿ. ಇತ್ತೀಚಿನ ದಿನಗಳಲ್ಲಿ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಹದಗೆಡುತ್ತಿದೆ. ದೈಹಿಕ ಚಟುವಟಿಕೆ ಇಲ್ಲದೇ ಇರುವುದು, ಸಾಮಾಜಿಕವಾಗಿ ಬೆರೆಯದೇ ಇರುವುದು ಜಡಜೀವನಶೈಲಿಗೆ ಕಾರಣವಾಗಿದೆ. ಹಾಗಂತ ಇದಕ್ಕಾಗಿ ನಾವು ಇನ್ನೇನೋ ಸಾಹಸ ಮಾಡಬೇಕು ಅಂತೇನಿಲ್ಲ. ವಾಕಿಂಗ್‌ ಮಾಡುವುದು, ಬೆಟ್ಟ ಹತ್ತುವುದು, ಸಾಮಾಜಿಕವಾಗಿ ಬೆರೆಯುವುದು ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಾಕು. ನಮ್ಮ ಆರೋಗ್ಯ ಹಾಗೂ ಯೋಗಕ್ಷೇಮ ತನ್ನಿಂತಾನೇ ಸುಧಾರಿಸುತ್ತದೆ. ಈ ಸಣ್ಣಪುಟ್ಟ ಕಾರ್ಯಗಳು ಅಸಂಖ್ಯಾತ ಸಮಸ್ಯೆಗಳಿಂದ ನಮ್ಮ ರಕ್ಷಿಸುತ್ತದೆ. ಜಡಜೀವನಶೈಲಿ ಒಂಟಿತನದ ಪ್ರತಿಕೂಲ ಪರಿಣಾಮಗಳ ವಿರುದ್ಧ ಇದು ಹೋರಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಲು ಕಾರಣಗಳು ಹಲವಿವೆ. ವರ್ಕ್‌ ಫ್ರಂ ಹೋಮ್‌, ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗಿರುವುದು ದೇಹವನ್ನು ಜಡವಾಗಿಸುತ್ತದೆ. ಅಂತಹ ಸಂದರ್ಭದಲ್ಲಿ ಜಡಜೀವನಶೈಲಿಯು ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯರಕ್ತನಾಳದ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಇದು ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳು ನಿರೂಪಿಸಿವೆ. ದಿ ಲ್ಯಾನ್ಸೆಟ್ ಮತ್ತು JAMA ಸೈಕಿಯಾಟ್ರಿಯಂತಹ ನಿಯತಕಾಲಿಕಗಳಲ್ಲಿ ಪ್ರಕಟವಾದ ಅಧ್ಯಯನಗಳು ಸಾಮಾಜಿಕವಾಗಿ ಬೆರೆಯದೇ ಇರುವುದು ಹೆಚ್ಚಿನ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ಅರಿವಿನ ಕುಸಿತ ಮತ್ತು ಅಕಾಲಿಕ ಮರಣಕ್ಕೆ ಸಂಬಂಧಿಸಿದೆ ಎಂದು ಒತ್ತಿಹೇಳುತ್ತದೆ. ಈ ಎಲ್ಲವನ್ನೂ ಎದುರಿಸಿ ಆರೋಗ್ಯ ಕಾಪಾಡಿಕೊಂಡು ಫಿಟ್‌ ಆಗಿರಲು ನಮ್ಮ ದೈನಂದಿಕ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಾಕು.

ಆರೋಗ್ಯವಾಗಿ ಫಿಟ್‌ ಆಗಿರಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ 

ವಾಕಿಂಗ್‌: ನಮ್ಮ ಆರೋಗ್ಯ ಸುಧಾರಿಸಲು ಸರಳ ಹಾಗೂ ಶಕ್ತಿಯುತ ಮಾರ್ಗ ಇದಾಗಿದೆ. ಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ನಿಯಮಿತವಾದ ವೇಗದ ನಡಿಗೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ವಾಕಿಂಗ್ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ, ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಮೆಟ್ಟಿಲು ಹತ್ತುವುದು: ಮನೆ ಅಥವಾ ಕಚೇರಿಯಲ್ಲಿ ಲಿಫ್ಟ್‌ ಅಥವಾ ಎಸ್ಕಲೇಟರ್‌, ಎಲಿವೇಟರ್‌ ಬದಲು ಮೆಟ್ಟಿಲು ಹತ್ತುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಒಟ್ಟಾರೆ ದೇಹದ ಫಿಟ್ನೆಸ್‌ ಮೇಲೆ ತುಂಬಾನೇ ಉತ್ತಮ ಪರಿಣಾಮ ಬೀರುತ್ತದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನ ಸಂಶೋಧನೆಯು ಮೆಟ್ಟಿಲು ಹತ್ತುವುದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ. ಹೆಚ್ಚುವರಿ ಸಮಯ ಅಥವಾ ಸಲಕರಣೆಗಳ ಅಗತ್ಯವಿಲ್ಲದೆ ನಿಮ್ಮ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಯನ್ನು ವೃದ್ಧಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ.

ಸಾಮಾಜಿಕವಾಗಿ ಬೆರೆಯುವುದು: ನಿಯಮಿತ ಸಾಮಾಜಿಕ ಸಂವಹನಗಳು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅತ್ಯಗತ್ಯ. ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳೊಂದಿಗೆ ತೊಡಗಿಸಿಕೊಳ್ಳುವುದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅರಿವಿನ ಕಾರ್ಯವನ್ನು ಹೆಚ್ಚಿಸುತ್ತದೆ. ದೀರ್ಘಾವಧಿಯ ಸಂತೋಷ ಮತ್ತು ಆರೋಗ್ಯದಲ್ಲಿ ಬಲವಾದ ಸಾಮಾಜಿಕ ಸಂಪರ್ಕಗಳು ಪ್ರಮುಖ ಅಂಶವಾಗಿದೆ ಎಂದು ಸಂಶೋಧನೆ ಹೇಳುತ್ತದೆ.

ಸ್ಟ್ರೆಚಿಂಗ್: ಪ್ರತಿದಿನ ನಿಯಮಿತವಾಗಿ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದು ನಮ್ಯತೆಯನ್ನು ಸುಧಾರಿಸುತ್ತದೆ. ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ತಜ್ಞರು ಶಿಫಾರಸು ಮಾಡಿದಂತೆ ಸ್ಟ್ರೆಚಿಂಗ್ ವ್ಯಾಯಾಮಗಳು ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಭಂಗಿಯನ್ನು ಸುಧಾರಿಸುತ್ತದೆ ಮತ್ತು ಬೆನ್ನು ನೋವನ್ನು ನಿವಾರಿಸುತ್ತದೆ.

ನೀರು ಕುಡಿಯುವುದು: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹವನ್ನು ಹೈಡ್ರೇಟ್‌ ಆಗಿರಿಸಿಕೊಳ್ಳುವುದು ಬಹಳ ಮುಖ್ಯ. ಇದರಿಂದ ಜೀರ್ಣಕ್ರಿಯೆಯು ವೃದ್ಧಿಸುತ್ತದೆ. ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ. ಸಾಕಷ್ಟು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ದೇಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಮೈಂಡ್‌ಫುಲ್‌ನೆಸ್‌: ಧ್ಯಾನ, ದೀರ್ಘವಾದ ಉಸಿರಾಟ ಇಂತಹ ಅಭ್ಯಾಸಗಳು ದೇಹ ಹಾಗೂ ಮನಸ್ಸು ಎರಡಕ್ಕೂ ತುಂಬಾ ಅವಶ್ಯ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸೈಕಲಾಜಿಕಲ್ ಸೈನ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯು ಸಾವಧಾನತೆಯ ಅಭ್ಯಾಸಗಳು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ ಎಂದು ತೋರಿಸುತ್ತದೆ.

ನೋಡಿದ್ರಲ್ಲ ತಮ್ಮ ದೈನಂದಿನ ಜೀವನದಲ್ಲಿ ನಾವು ಅನುಸರಿಸುವ ಈ ಅಭ್ಯಾಸಗಳೇ ನಮ್ಮನ್ನು ಆಕ್ಟಿವ್‌ ಆಗಿರುವಂತೆ ಮಾಡುತ್ತದೆ, ಮಾನಸಿಕವಾಗಿ ಹಾಗೂ ದೈಹಿಕ ನಾವು ಫಿಟ್‌ ಆಗಿರಲು ಈ ಅಭ್ಯಾಸಗಳಿಗಿಂತ ಉತ್ತಮವಾದದ್ದು ಇನ್ನೊಂದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ