ಕ್ಯಾರೆಟ್ ಜ್ಯೂಸ್ vs ಹಸಿ ಕ್ಯಾರೆಟ್: ಇವೆರಡಲ್ಲಿ ಯಾವುದು ಉತ್ತಮ? ಕ್ಯಾರೆಟ್ ತಿನ್ನುವ ಮೊದಲು ಇದನ್ನು ತಿಳಿದುಕೊಳ್ಳಿ
Oct 09, 2024 06:12 PM IST
ಕ್ಯಾರೆಟ್ ಜ್ಯೂಸ್ ಮತ್ತು ಹಸಿ ಕ್ಯಾರೆಟ್: ಇವೆರಡಲ್ಲಿ ಯಾವುದು ಬೆಸ್ಟ್?
- ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಸಿಗುವ ತರಕಾರಿಗಳಲ್ಲಿ ಕ್ಯಾರೆಟ್ ಕೂಡಾ ಒಂದು. ಕಣ್ಣಿನ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆಯವರೆಗೆ ಕ್ಯಾರೆಟ್ ಪ್ರಯೋಜನಕಾರಿಯಾಗಿದೆ. ಕೆಲವರು ಹಸಿ ಕ್ಯಾರೆಟ್ ತಿಂದರೆ ಇನ್ನು ಕೆಲವರು ಅದರಿಂದ ಜ್ಯೂಸ್ ತಯಾರಿಸಿ ಕುಡಿಯುತ್ತಾರೆ. ಆದರೆ ಪೋಷಕಾಂಶಗಳ ದೃಷ್ಟಿಯಿಂದ ಯಾವುದು ದೇಹಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ? ಇಲ್ಲಿದೆ ಓದಿ.
ಹಸಿ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಹಸಿ ತರಕಾರಿಗಳಲ್ಲಿ ಹೆಚ್ಚಾಗಿ ಸೌತೆಕಾಯಿ, ಕ್ಯಾರೆಟ್, ಟೊಮೆಟೊ ಅತ್ಯಂತ ಜನಪ್ರಿಯವಾಗಿದೆ. ಕ್ಯಾರೆಟ್ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ತರಕಾರಿಯಾಗಿದೆ. ಅದು ಆರೋಗ್ಯವನ್ನು ಕಾಪಾಡುತ್ತದೆ. ಕ್ಯಾರೆಟ್ ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಕೆಲವರು ಹಸಿ ಕ್ಯಾರೆಟ್ ತಿಂದರೆ ಇನ್ನು ಕೆಲವರು ಅದರಿಂದ ಜ್ಯೂಸ್ ತಯಾರಿಸಿ ಕುಡಿಯುತ್ತಾರೆ. ಕೆಲವು ಪ್ರಯೋಜನಗಳು ಹಸಿ ಕ್ಯಾರೆಟ್‌ನಿಂದ ಸಿಕ್ಕರೆ, ಇನ್ನು ಕೆಲವು ಕ್ಯಾರೆಟ್ ಜ್ಯೂಸ್‌ನಿಂದ ಸಿಗುತ್ತವೆ. ಆದ್ದರಿಂದ ಕೆಲವರು ಕ್ಯಾರೆಟ್ ಜ್ಯೂಸ್ ಉತ್ತಮ ಎಂದು ಹೇಳಿದರೆ ಇನ್ನು ಕೆಲವರು ಹಸಿ ಕ್ಯಾರೆಟ್ ತಿನ್ನುವುದು ಬೆಸ್ಟ್ ಎಂದು ಹೇಳುತ್ತಾರೆ. ಯಾವುದು ಬೆಸ್ಟ್ ಎಂದು ಹೇಳುವ ಮೊದಲು ಅವೆರಡರ ಪ್ರಯೋಜನ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಹಸಿ ಕ್ಯಾರೆಟ್ ತಿನ್ನುವುದರಿಂದ ಸಿಗುವ ಪ್ರಯೋಜನಗಳು
ಕ್ಯಾರೆಟ್‌ನಲ್ಲಿ ವಿವಿಧ ಪೋಷಕಾಂಶಗಳು ಕಂಡುಬರುತ್ತವೆ. ಇದು ಪ್ರತಿದಿನ ಸೇವಿಸಬಹುದಾದ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ. ಕ್ಯಾರೆಟ್ ವಿಟಮಿನ್ ಎ ದಿಂದ ಸಮೃದ್ಧವಾಗಿದೆ. ಅದು ಥೈರಾಯ್ಡ್‌ನ ಕಾರ್ಯಗಳಿಗೆ ಸಹಾಯ ಮಾಡುತ್ತವೆ. ಮೊಡವೆಯನ್ನು ತಡೆಯುತ್ತದೆ ಜೊತೆಗೆ ಕ್ಯಾರೆಟ್‌ನಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆ, ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಅನ್ನು ತಡೆಯುತ್ತದೆ. ಇಷ್ಟೇ ಅಲ್ಲದೇ ಕ್ಯಾರೆಟ್ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವಾಗಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಕ್ಯಾರೆಟ್‌ನಲ್ಲಿ ಅಧಿಕವಾಗಿ ಕಂಡುಬರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಲೈಕೋಪಿನ್‌ಗಳು ಸೂರ್ಯನಿಂದ ಹಾನಿಗೊಳಗಾಗುವ ಚರ್ಮವನ್ನು ರಕ್ಷಿಸುತ್ತವೆ. ಇದು ಕಡಿಮೆ ಕ್ಯಾಲೋರಿ ಮತ್ತು ನಾರಿನಾಂಶ ಹೊಂದಿರುವ ತರಕಾರಿಯಾದ್ದರಿಂದ ತೂಕ ನಷ್ಟಕ್ಕೂ ಸಹಕಾರಿಯಾಗಿದೆ.
ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಸಿಗುವ ಪ್ರಯೋಜನಗಳು
ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್, ದಿನವೊಂದಕ್ಕೆ ಬೇಕಾಗುವ ಸುಮಾರು 800 ಪ್ರತಿಶತದಷ್ಟು ವಿಟಮಿನ್ ಎ ಅನ್ನು ನೀಡುತ್ತದೆ. ಕ್ಯಾರೆಟ್ ಜ್ಯೂಸ್ ಹೆಚ್ಚಿನ ಪ್ರಮಾಣದ ಬೀಟಾಕೆರೋಟಿನ್ ಅನ್ನು ಹೊಂದಿದೆ. ಅದು 16 ಮಿಲಿಗ್ರಾಂ ಬೀಟಾಕೆರೋಟಿನ್ ಅನ್ನು ನೀಡುತ್ತದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ಯು ಜೀವಕೋಶಗಳ ಹಾನಿಯನ್ನು ತಡೆಯುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವುದರ ಮೂಲಕ ಕೆಲವು ರೋಗಗಳಿಂದಲೂ ರಕ್ಷಣೆ ಒದಗಿಸುತ್ತದೆ. ಲ್ಯೂಟಿನ್ ಮತ್ತು ಝೀಕ್ಸಾಂಥಿನ್‌ನಂತಹ ಕ್ಯಾರೊಟಿನಾಯ್ಡ್‌ಗಳು ಕಣ್ಣಿನ ಲೆನ್ಸ್ ಮತ್ತು ರೆಟಿನಾವನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಇದು ನೀಲಿ ಕಿರಣಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಹಸಿ ಕ್ಯಾರೆಟ್‌ಗಿಂತ ಕ್ಯಾರೆಟ್ ಜ್ಯೂಸ್‌ನಲ್ಲಿ ಹೆಚ್ಚು ಕೆರೋಟಿನ್‌ಗಳು ಕಂಡುಬರುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಇದು ರಕ್ತದಲ್ಲಿ ಬೀಟಾಕೆರೋಟಿನ್ ಹೆಚ್ಚಾಗಿ ತ್ವಚೆ ಹಳದಿಯಾಗುವಂತೆ ಮಾಡುತ್ತದೆ.
ಹಸಿ ಕ್ಯಾರೆಟ್ ಮತ್ತು ಕ್ಯಾರೆಟ್ ಜ್ಯೂಸ್ ಎರಡೂ ಸಹ ಉತ್ತಮವಾಗಿದೆ. ಆದರೆ ಯಾರಿಗೆ ಎಷ್ಟು ಪೋಷಕಾಂಶಗಳು ಬೇಕು ಎಂಬುದನ್ನು ತಿಳಿದು ಸೇವಿಸಬೇಕು. ಕ್ಯಾರೆಟ್‌ಗಳು ತೂಕ ನಷ್ಟ ಮತ್ತು ಕಡಿಮೆ ಕ್ಯಾಲೋರಿ ಡಯಟ್‌ಗೆ ಬೆಸ್ಟ್ ಎನಿಸಿವೆ. ಇದರಲ್ಲಿ ಪ್ರಮುಖ ಪೋಷಕಾಂಶಗಳು ಮತ್ತು ರುಚಿ ಹೆಚ್ಚಿಸುವ ಗುಣಗಳಿವೆ. ಆದ್ದರಿಂದ ಕ್ಯಾರೆಟ್ ಅನ್ನು ಯಾವುದೇ ರೀತಿಯಲ್ಲಾದರೂ ಸರಿ ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.