Child Care Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಜೋಪಾನ: ಪುಟ್ಟ ಮಗುವಿರಲಿ, ಶಾಲೆಗೆ ಹೋಗುವ ಮಕ್ಕಳಿರಲಿ, ಈ 5 ಸಲಹೆಗಳು ಸದಾ ನೆನಪಿರಲಿ
Jun 09, 2024 06:00 AM IST
ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಜೋಪಾನ
- Tips For Children During The Rainy Seasons: ಮೊದಲ ಮಳೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಿರಿಯರು, ಹಿರಿಯರೆನ್ನದೆ ಬಹುತೇಕರು ಮಳೆ ಬಂದೊಡನೆ ಖುಷಿಯಿಂದ ನೆಗೆಯುತ್ತಾ ಸಂಭ್ರಮಿಸುತ್ತಾರೆ. ಹಾಗಂತ ಮಳೆಗಾಲದಲ್ಲಿ ರೋಗ-ರುಜಿನಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತದೆ. ಅದರಲ್ಲೂ ವಿಶೇಷವಾಗಿ ಈ ಋತುವಿನಲ್ಲಿ ಶಿಶುಗಳ ಆರೋಗ್ಯದ ಕಾಳಜಿ ವಹಿಸುವುದು ಬಹಳ ಮುಖ್ಯ.
Tips For Children During The Rainy Seasons: ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದ ಹಲವೆಡೆ ಮಳೆ (Karnataka Rains) ಯಾಗುತ್ತಿದೆ. ಈ ನಡುವೆ ಈ ಬಾರಿ ಮುಂಗಾರು (Monsoon Rain) ಸಕಾಲದಲ್ಲೇ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಬಿಸಿಲಿನಿಂದ ಬೇಸತ್ತಿದ್ದ ಜನರು ಕೊಂಚ ನೆಮ್ಮದಿಯಾಗಿದ್ದಾರೆ. ಬಾ ಮಳೆಯೇ.. ಎಂದು ಖುಷಿಯಿಂದ ಕುಣಿಯುತ್ತಿದ್ದಾರೆ. ಅದರಲ್ಲೂ ಮೊದಲ ಮಳೆ ಅಂದರೆ ಅದೊಂಥರಾ ರೋಮಾಂಚನ. ಮೊದಲ ಮನೆಯಲ್ಲಿ ನೆನೆಯುವುದೇ ಆನಂದ ಅನುಭವ. ಆದರೆ, ಮಳೆಗಾಲ ಬಂತೆಂದರೆ ಅಷ್ಟೇ ಜಾಗರೂಕತೆ ವಹಿಸುವುದು ಕೂಡ ಬಹಳ ಮುಖ್ಯ. ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳು ವಕ್ಕರಿಸುವುದು ಮಳೆಗಾಲದಲ್ಲಿಯೇ. ಹೀಗಾಗಿ ಈ ಸಮಯದಲ್ಲಿ ನೀವು ಮಗುವಿನ ಆರೋಗ್ಯ ಕಾಪಾಡುವುದು ಬಹಳ ಮುಖ್ಯ.
ಹೌದು, ಈ ಋತುವಿನಲ್ಲಿ ನೀರಿನಿಂದ ಹರಡುವ ಸೋಂಕುಗಳು ಹೆಚ್ಚುತ್ತವೆ. ಹೀಗಾಗಿ ನಿಮ್ಮ ಮಗು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲ ಬಾರಿಗೆ ಪೋಷಕರಾಗಿದ್ದರೆ, ನಿಮ್ಮ ಮಗುವನ್ನು ಮಳೆಗಾಲದಲ್ಲಿ ಬರುವ ರೋಗಗಳಿಂದ ರಕ್ಷಿಸಲು ನೀವು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಮಳೆಯಿಂದ ಸೂಕ್ತ ರಕ್ಷಣೆ ಕೊಡಿ
ಹೊರಗೆ ಹೋಗುವಾಗ ಮಕ್ಕಳಿಗೆ ಕೊಡೆ, ರೈನ್‌ಕೋಟ್‌ಗಳು ಮತ್ತು ಮಳೆಗಾಲದಲ್ಲಿ ಬಳಸುವ ಬೂಟ್‌ಗಳನ್ನು ಉಪಯೋಗಿಸಿ. ಇದರಿಂದ ನಿಮ್ಮ ಮಕ್ಕಳನ್ನು ವರ್ಷವಿಡೀ ಸುರಕ್ಷಿತವಾಗಿರಿಸಬಹುದು. ಮಳೆಗಾಲದಲ್ಲಿ ದಿನಂಪ್ರತಿ ಸುರಿಯುವ ಮಳೆಯಿಂದ ಚಳಿಯ ವಾತಾವರಣ ಉಂಟಾಗುತ್ತದೆ. ಹೀಗಾಗಿ ಮಕ್ಕಳನ್ನು ಬೆಚ್ಚಗಿರಿಸಲು ಆದಷ್ಚು ಹತ್ತಿಯಿಂದ ಮಾಡಲಾದ ಉಡುಪು, ಜಾಕೆಟ್ ಅನ್ನು ಧರಿಸಿ. ಅಲ್ಲದೆ, ಮಗುವಿನ ಬಟ್ಟೆ ಸಂಪೂರ್ಣವಾಗಿ ಒಣಗಿದ್ದರೆ ಮಾತ್ರ ಅದನ್ನು ಬಳಸಬೇಕು. ಯಾಕೆಂದರೆ, ಮಳೆಗಾಲದಲ್ಲಿ ಬಟ್ಟೆ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಶಿಲೀಂಧ್ರ ರೋಗಗಳಿಗೆ ಕಾರಣವಾಗಬಹುದು.
ಒದ್ದೆ ಬಟ್ಟೆಗಳನ್ನು ಧರಿಸದಿರಿ
ಮಳೆಗಾಲದಲ್ಲಿ, ನಿಮ್ಮ ಮಗುವಿಗೆ ಒದ್ದೆಯಾದ ಡೈಪರ್‌ಗಳನ್ನು ಹೆಚ್ಚು ಹೊತ್ತು ಧರಿಸಲು ಬಿಡಬೇಡಿ. ಇತರ ಋತುಗಳಿಗಿಂತ ಮಳೆಗಾಲದಲ್ಲಿ ಮಕ್ಕಳು ಹೆಚ್ಚು ಮೂತ್ರ ವಿಸರ್ಜಿಸುತ್ತಾರೆ. ಹೀಗಾಗಿ ಡೈಪರ್ ಬಳಸುತ್ತಿದ್ದರೆ ಗಮನಿಸಿ, ಬದಲಿಸುತ್ತಿರಿ. ಇಲ್ಲದಿದ್ದಲ್ಲಿ ಇದು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಬಟ್ಟೆ ಸ್ವಲ್ಪ ಒದ್ದೆಯಾಗಿದ್ದರೂ ಚರ್ಮದ ದದ್ದುಗಳು ಉಂಟಾಗಬಹುದು. ನಿಮ್ಮ ಮಗುವಿಗೆ ಬಳಸಿರುವ ಬಟ್ಟೆ ಅಥವಾ ಡೈಪರ್ ಒದ್ದೆಯಾಗಿದ್ದರೆ ತಕ್ಷಣ ಅದನ್ನು ಬದಲಾಯಿಸಲು ಮರೆಯದಿರಿ.
ಅನಾರೋಗ್ಯದ ಆರಂಭಿಕ ಹಂತದಲ್ಲೇ ಇರಲಿ ಎಚ್ಚರ
ಮಳೆಗಾಲದಲ್ಲಿ ಜ್ವರ, ಶೀತ, ಸೀನುವಿಕೆ ಮತ್ತು ಇತರ ರೋಗಲಕ್ಷಣಗಳು ಹರಡುವುದು ಸಾಮಾನ್ಯ. ಹೀಗಾಗಿ ಆರಂಭದಲ್ಲೇ ರೋಗಲಕ್ಷಣಗಳನ್ನು ಗುರುತಿಸಿ, ಶೀಘ್ರ ವೈದ್ಯರನ್ನು ಸಂಪರ್ಕಿಸಿ. ಅನಾರೋಗ್ಯದ ಆರಂಭಿಕ ಹಂತದಲ್ಲಿರುವಾಗಲೇ ಹೋರಾಡಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.
ಸೊಳ್ಳೆಗಳನ್ನು ನಿಗ್ರಹಿಸಿ
ಸೊಳ್ಳೆ ಕಡಿತವು ನವಜಾತ ಶಿಶುವಿನಲ್ಲಿ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಅಥವಾ ಮೈಯಲ್ಲಿ ಕೆಂಪು ಊತ ಉಂಟಾಗಬಹುದು. ನಿಮ್ಮ ಮಗುವಿನ ತೊಟ್ಟಿಲಿಗೆ ಸೊಳ್ಳೆ ಪರದೆಯನ್ನು ಅಳವಡಿಸಿ. ಮಗು ಚೆನ್ನಾಗಿ ನಿದ್ರಿಸುತ್ತಿದೆಯೇ ಎಂದು ಗಮನಿಸುತ್ತಿರಿ. ಮುಖ್ಯವಾಗಿ ಮುಸ್ಸಂಜೆ ಸಮಯದಲ್ಲಿ ಮಗುವಿಗೆ ಸಂಪೂರ್ಣವಾಗಿ ಮುಚ್ಚಿದ ಉಡುಪುಗಳನ್ನು ಧರಿಸಿ. ಕಿಟಕಿ, ಬಾಗಿಲುಗಳನ್ನು ಮುಚ್ಚಿರಿ. ನೀವು ನೈಸರ್ಗಿಕ ಸೊಳ್ಳೆ ನಿವಾರಕವನ್ನು ಹೊಂದಿದ್ದರೆ, ಅದನ್ನು ಬಳಸಬಹುದು. ಮಳೆಗಾಲ ಶುರುವಾಯಿತು ಅಂದರೆ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಮನೆಯ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಿ.
ಮಗುವಿಗೆ ಯಾವಾಗ ಸ್ನಾನ ಮಾಡಿಸಬೇಕು?
ಮಳೆಗಾಲದಲ್ಲಿ ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ ಅಗತ್ಯವಿಲ್ಲ. ಯಾಕೆಂದರೆ ಮಗು ದಿನದ ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುತ್ತದೆ. ನಿಮ್ಮ ಮಗುವಿಗೆ ಪ್ರತಿ ವಾರ ಎರಡರಿಂದ ಮೂರು ಬಾರಿ ಸ್ನಾನ ಮಾಡಿಸದರೆ ಸಾಕು. ಒಂದು ವೇಳೆ ಹೊರಗೆ ಹೋಗಿದ್ದರೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಬೇಕು.
ಮಳೆಗಾಲ ಅಂದ್ರೆ ಬಹುತೇಕರಿಗೆ ಬಾಲ್ಯದ ನೆನಪುಗಳು ಕಾಡುತ್ತವೆ. ಮಳೆಯಲ್ಲಿ ಆಟವಾಡುವುದು, ಕಾಗದದ ದೋಣಿಗಳನ್ನು ಮಾಡಿ ನೀರಿನಲ್ಲಿ ಬಿಡುವುದು. ಗುಡುಗು-ಮಿಂಚು ಬಂದಾಗ ಬಚ್ಚಿಟ್ಟುಕೊಳ್ಳುವುದು ಇತ್ಯಾದಿ. ಇಂಥ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗುವುದು ಕೂಡ ತುಸು ಹೆಚ್ಚೇ. ಅದರಲ್ಲೂ ವಿಶೇಷವಾಗಿ ಶಿಶುಗಳ ಆರೈಕೆಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ. ಮೇಲೆ ತಿಳಿಸಿದ ಸೂಚನೆಗಳನ್ನು ಸರಿಯಾಗಿ ಪಾಲಿಸಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಇರಲಿ.