ಅರಿಸಿನ ಪುಡಿ vs ಹಸಿ ಅರಿಸಿನ ಗೆಡ್ಡೆ, ಇದರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ಇದರ ಪ್ರಯೋಜನಗಳೇನು ತಿಳಿಯಿರಿ
Feb 18, 2024 03:48 PM IST
ಅರಿಸಿನ ಪುಡಿ vs ಹಸಿ ಅರಿಸಿನ ಗೆಡ್ಡೆ, ಇದರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ
- ಭಾರತೀಯ ಆರೋಗ್ಯ ಪದ್ಧತಿಯಲ್ಲಿ ಅರಿಸಿನಕ್ಕೆ ಬಹಳ ಪ್ರಾಶಸ್ತ್ಯವಿದೆ. ಇದು ಅಡುಗೆಗೆ ರುಚಿ ನೀಡುವುದು ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳಿಂದಲೂ ಮಹತ್ವ ಪಡೆದಿದೆ. ಆದರೆ ಅರಿಸಿನ ಪುಡಿ vs ಹಸಿ ಅರಿಸಿನ ಗೆಡ್ಡೆ ಅಂತ ಬಂದಾಗ ಯಾವುದು ಆರೋಗ್ಯಕ್ಕೆ ಉತ್ತಮ, ಇದರ ಪ್ರಯೋಜನವೇನು ಎಂಬುದನ್ನು ತಿಳಿಯಿರಿ.
ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅರಿಸಿನಕ್ಕೆ ಬಹಳ ಮಹತ್ವವಿದೆ. ನಮ್ಮ ಅಡುಗೆಮನೆಯಲ್ಲಿ ಅರಿಸಿನ ಇಲ್ಲದೇ ಯಾವುದೇ ಅಡುಗೆ ತಯಾರಾಗಲು ಸಾಧ್ಯವಿಲ್ಲ ಎನ್ನಬಹುದು. ಇದು ಅಡುಗೆಗೆ ಬಣ್ಣ ನೀಡುವುದು ಹಾಗೂ ಖಾದ್ಯಗಳ ಘಮ ಹೆಚ್ಚಿಸುವುದು ಮಾತ್ರವಲ್ಲ, ಹಲವು ಬಗೆಯ ವೈದ್ಯಕೀಯ ಪ್ರಯೋಜನಗಳನ್ನೂ ಹೊಂದಿದೆ. ಅರಿಶಿನ ಪುಡಿಯನ್ನು ಕರ್ಕುಮಾ ಲಾಂಗಾ ಸಸ್ಯದ ಮೂಲದಿಂದ ಪಡೆಯಲಾಗುತ್ತದೆ. ಅರಿಶಿನ ಪುಡಿಗೆ ಸಾಕಷ್ಟು ಬೇಡಿಕೆ ಇದ್ದರೂ ಕಚ್ಚಾ ಅರಿಸಿನ ಗೆಡ್ಡೆ ಅಥವಾ ಕೊಂಬಿಗೆ ಅಷ್ಟೊಂದು ಜನಪ್ರಿಯತೆ ಇಲ್ಲ. ಅರಿಶಿನ ಕೊಂಬಿನ ಬಳಕೆಗೂ ಕಡಿಮೆ. ಹಾಗಾದರೆ ಅರಿಶಿನದ ಬೇರು ಹಾಗೂ ಅರಿಸಿನ ಪುಡಿಯ ವ್ಯತ್ಯಾಸ, ಇವುಗಳಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ತಿಳಿಯಿರಿ.
ಅರಿಸಿನ ಪುಡಿ
ಅರಿಶಿನ ಪುಡಿಯನ್ನು ಅರಿಸಿನ ಕೊಂಬು ಅಥವಾ ಗೆಡ್ಡೆಯನ್ನು ಒಣಗಿಸಿ ತಯಾರಿಸಲಾಗುತ್ತದೆ. ಇದು ನುಣ್ಣನೆಯ ಪುಡಿಯಾಗಿದ್ದು, ಸ್ವಲ್ಪ ಕಟುವಾದ ಸುವಾಸನೆ ಹೊಂದಿರುತ್ತದೆ. ಇದು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ದೇಹದಲ್ಲಿ ಉರಿಯೂತವು ಹೃದ್ರೋಗ, ಕ್ಯಾನ್ಸರ್ ಹಾಗೂ ಅಲ್ಝೈಮರ್‌ನಂತಹ ದೀರ್ಘಕಾಲದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿರುತ್ತದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಸಂಯುಕ್ತವಿದ್ದು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡಬಹುದು.
ಅರಿಶಿನ ಪುಡಿಯ ಪ್ರಯೋಜನಗಳು
ಅರಿಸಿನ ಪುಡಿಯನ್ನು ಬಹುತೇಕ ಎಲ್ಲಾ ರೀತಿಯ ಸಾಂಬಾರ್, ಸಾರುಗಳಿಗೆ ಬಳಸಲಾಗುತ್ತದೆ. ಸಸ್ಯಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳಿಗೆ ಅರಿಸಿನ ಸೇರಿಸಿದರಷ್ಟೇ ರುಚಿ. ಇದರಿಂದ ಕಷಾಯ, ಟೀ ಕೂಡ ಮಾಡುತ್ತಾರೆ. ಕೇಕ್, ಮಫಿನ್ ಹಾಗೂ ಸ್ಮೂಢಿಗಳಲ್ಲೂ ಅರಿಸಿನವನ್ನು ಬಳಸುತ್ತಾರೆ.
ಅರಿಸಿನ ಹಸಿ ಗೆಡ್ಡೆ
ಅರಿಸಿನ ಪುಡಿ ಹಾಗೂ ಅರಿಸಿನ ಹಸಿ ಗೆಡ್ಡೆ ಎರಡೂ ಒಂದೇ ಪದಾರ್ಥದ ಎರಡು ರೂಪಗಳು. ಅರಿಸಿನ ಬೇರು, ಅರಿಸಿನ ಗೆಡ್ಡೆ, ಅರಿಸಿನ ಕೊಂಬು, ಕಚ್ಚಾ ಅರಿಸಿನ ಗೆಡ್ಡೆ ಎಂದೆಲ್ಲಾ ಕರೆಯುತ್ತಾರೆ. ಇದರಲ್ಲಿ ಕರ್ಕ್ಯುಮಿನ್ ಅಂಶ ಸಮೃದ್ಧವಾಗಿರುತ್ತದೆ. ಹಾಗಾಗಿ ಇದು ಹಲವು ಬಗೆಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ. ಹಸಿ ಅರಿಸಿನವು ದೇಹದಲ್ಲಿ ಉರಿಯೂತ ಕಡಿಮೆ ಮಾಡುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಸುವ ಜೊತೆಗೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನೂ ನೀಡುತ್ತದೆ. ಜೊತೆಗೆ ಇದು ಕರುಳಿನ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ. ಹೊಟ್ಟೆಯುಬ್ಬರ ನಿವಾರಣೆಗೂ ಅರಿಸಿನವೇ ಮದ್ದು.
ಹಸಿ ಅರಿಸಿನ ಗೆಡ್ಡೆಯ ಪ್ರಯೋಜನಗಳು
ಕಚ್ಚಾ ಅರಿಸಿನವನ್ನು ಬಳಸುವುದು ಕೊಂಚ ಕಷ್ಟವಾಗಬಹುದು. ಆದರೆ ಇದನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಬಹುದು. ಗೋಲ್ಡನ್ ಮಿಲ್ಕ್ ತಯಾರಿಕೆಯಲ್ಲಿ ಸಾಮಾನ್ಯವಾಗಿ ಹಸಿ ಅರಿಸಿನವನ್ನು ಬಳಸುತ್ತಾರೆ. ಇದು ಹಾಲು, ಅರಿಸಿನದ ಬೇರು, ತುಪ್ಪ ಹಾಗೂ ಬೆಲ್ಲವನ್ನು ಬಳಸಿ ತಯಾರಿಸುವ ಖಾದ್ಯವಾಗಿದೆ.
ನೋಡಿದ್ರಲ್ಲ ಅರಿಸಿನ ಪುಡಿ ಹಾಗೂ ಹಸಿ ಅರಿಸಿನ ಗೆಡ್ಡೆ ಈ ಎರಡೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಅರಿಸಿನ ಪುಡಿ ಬಳಕೆಗೆ ಸುಲಭವಾದರೂ ಕೂಡ ಹಸಿ ಅರಿಸಿನ ಗೆಡ್ಡೆಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ