ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ವಾ, ಹೆಚ್ಚು ತಿಂದರೆ ತೂಕ ಹೆಚ್ಚಾಗುತ್ತಾ? ಪ್ರತಿದಿನ ಈ ಪ್ರಮಾಣ ಆರೋಗ್ಯಕರ
Jul 18, 2024 04:07 PM IST
ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ವಾ, ಹೆಚ್ಚು ತಿಂದರೆ ತೂಕ ಹೆಚ್ಚಾಗುತ್ತಾ?
- ನಿತ್ಯ ಜಿಮ್‌ಗೆ ಹೋಗುವವರು, ಫಿಟ್‌ಸೆಸ್ ಹಾಗೂ ಡಯಟ್ ಬಗ್ಗೆ ಅತೀವ ಕಾಳಜಿ ಇರುವವರು ಸಕ್ಕರೆ ಸೇವಿಸಬಾರದು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಸಕ್ಕರೆ ಆರೋಗ್ಯಕ್ಕೆ ತೀರಾ ಕೆಟ್ಟದು ಎಂದು ಹೇಳುವವರಿದ್ದಾರೆ. ಹಾಗಿದ್ದರೆ, ಎಷ್ಟು ಪ್ರಮಾಣದ ಸೇವನೆ ಸುರಕ್ಷಿತ ಎಂಬುದನ್ನು ತಿಳಿಯಿರಿ.
ಸಿಹಿ ಇಷ್ಟಪಡುವವರು ಸಕ್ಕರೆಯನ್ನು ವಿವಿಧ ಖಾದ್ಯಗಳಲ್ಲಿ ಸೇವಿಸುತ್ತಾರೆ. ಬಹುತೇಕ ಸೆಲೆಬ್ರಿಟಿಗಳು, ಫಿಟ್‌ನೆಸ್ ಇಷ್ಟಪಡುವವರು ಹಾಗೂ ಡಯಟ್ ಪಾಲನೆ ಮಾಡುವವರು ಸಕ್ಕರೆಯಿಂದ ದೂರವಿರುವ ಬಗ್ಗೆ ನೀವು ಕೇಳಿರುತ್ತೀರಿ. ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಶುಗರ್ ಸೇವಿಸಿದರೆ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ವಾದ. ಹೀಗಾಗಿ ಆರೋಗ್ಯ ಮತ್ತು ಫಿಟ್‌ನೆಸ್ ಎಂಬ ವಿಚಾರ ಬಂದಾಗ ಸಕ್ಕರೆಯು ವ್ಯಾಪಕ ಚರ್ಚೆಯ ವಿಷಯವಾಗುತ್ತದೆ. ತೂಕ ಹೆಚ್ಚಳವಾಗುವುದರ ಬಗ್ಗೆ ಕಾಳಜಿ ಇರುವವರು ಈಗೀಗ ಸಕ್ಕರೆಯಿಂದ ದೂರ ಉಳಿಯುತ್ತಾರೆ. ಹೀಗಾಗಿ ಸಕ್ಕರೆ ಸೇವನೆ ಕುರಿತ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಿದ್ದರೆ ಸಕ್ಕರೆ ಸೇವನೆ ನಿಜಕ್ಕೂ ಕೆಟ್ಟದ್ದಾ? ಅದು ಒಟ್ಟಾರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾ?... ಹೀಗೆ ಹಲವು ಪ್ರಶ್ನೆಗಳು ನಿಮ್ಮ ಮುಂದೆಯೂ ಇರಬಹುದು.
ಹಾಗಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು ಹಾಗೂ ಸಕ್ಕರೆ ಸೇವನೆ ಕಡಿಮೆ ಮಾಡಿದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಸಕ್ಕರೆ ತಿಂದರೆ ತೂಕ ಹೆಚ್ಚಾಗುತ್ತಾ?
ಸಕ್ಕರೆಯು ತೂಕ ಹೆಚ್ಚಾಗಲು ಕಾರಣವಾಗುವುದು ಸತ್ಯ ಎನ್ನುತ್ತವೆ ಕೆಲವು ಅಧ್ಯಯನಗಳು. ಮಧುಮೇಹ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಹೆಚ್ಚಿನ ಸಕ್ಕರೆ ಸೇವನೆ ಮತ್ತು ಕ್ಯಾಲರಿ ಸೇವನೆಯ ಹೆಚ್ಚಳಕ್ಕೆ ಪರಸ್ಪರ ಸಂಬಂಧವಿದೆ. ಸಂಸ್ಕರಿತ ಆಹಾರಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಏಕೆಂದರೆ ಸಿಹಿಯ ಅಂಶವು ಆಹಾರದ ರುಚಿ ಹೆಚ್ಚಿಸುತ್ತದೆ. ಇದು ಕ್ಯಾಲರಿ ಅಂಶವನ್ನು ಹೆಚ್ಚಿಸುವುದಲ್ಲದೆ, ರುಚಿಯ ಕಾರಣದಿಂಗಿ ಹೆಚ್ಚು ಆಹಾರ ಸೇವನೆಗೆ ಪ್ರಚೋದನೆ ನೀಡುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಸಕ್ಕರೆ ಇರುವುದರಿಂದ ಹೆಚ್ಚಿನ ಕ್ಯಾಲರಿ ಸೇವನೆಗೆ ಕಾರಣವಾಗಬಹುದು. ಒಂದು ವೇಳೆ ನೀವು ಹಿತ-ಮಿತವಾಗಿ ಸೇವಿಸಿದರೂ ತೂಕ ಹೆಚ್ಚಾಗಬಹುದು.
ಆಹಾರಗಳಿಗೆ ಸಕ್ಕರೆ ಸೇರಿಸಿದಾಗ ಅದರ ಪರಿಮಳ ಮತ್ತು ರುಚಿ ಹೆಚ್ಚಾಗುತ್ತದೆ. ಪರಿಣಾಮ ಸಹಜವಾಗಿ ಹೆಚ್ಚಿನ ಕ್ಯಾಲರಿ ದೇಹ ಸೇರುತ್ತದೆ. ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಸಕ್ಕರೆಯನ್ನು ಪ್ರತ್ಯೇಕವಾಗಿ ಸೇವಿಸಿದಾಗ, ಜನರ ಕ್ಯಾಲರಿ ಸೇವನೆಯಲ್ಲಿ ಗಮನಾರ್ಹ ಏರಿಕೆ ಕಾಣಿಸುವುದಿಲ್ಲ ಎಂದು ತೋರಿಸಿದೆ.
ಸಕ್ಕರೆ ತಿಂದ ತಕ್ಷಣ ಕೊಬ್ಬು ಹೆಚ್ಚುವುದಿಲ್ಲ
ವಾಸ್ತವದಲ್ಲಿ, ಸಕ್ಕರೆ ಸೇವಿಸಿದಂತೆಲ್ಲಾ ಕೊಬ್ಬು ಹೆಚ್ಚಾಗುವುದಿಲ್ಲ. ಹೆಚ್ಚು ಸಕ್ಕರೆ ಇರುವ ಆಹಾರ ಸೇವಿಸುವ ವ್ಯಕ್ತಿಗಳು ಕೂಡಾ ತೂಕ ಕಡಿಮೆ ಮಾಡಿಕೊಳ್ಳಬಹುದು. ಹೇಗೆಂದರೆ ಅದಕ್ಕೆ ಸೂಕ್ತ ರೀತಿಯಲ್ಲಿ ಕ್ಯಾಲರಿ ನಿರ್ವಹಣೆ ಮಾಡಬೇಕು. ಸಕ್ಕರೆ ಪ್ರಮಾಣ ಹೆಚ್ಚಿದರೂ ಕ್ಯಾಲರಿ ಕಡಿಮೆಯಾಗಬೇಕು.
ಅಧ್ಯಯನವೊಂದರಲ್ಲಿ ಭಾಗವಹಿಸಿದವರು ಹೆಚ್ಚು ಸಕ್ಕರೆ ಇರುವ ಆಹಾರವನ್ನು ಸೇವಿಸಿ ನೋಡಿದ್ದಾರೆ. ಆದರೆ ಅವರು ಕ್ಯಾಲರಿ ಇರುವ ಆಹಾರವನ್ನು ನಿರ್ಬಂಧಿಸಿದರು. ಹೀಗಾಗಿ ಆರು ವಾರಗಳ ಅವಧಿಯಲ್ಲಿ ಅವರು ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದೇಹದ ತೂಕವನ್ನು ನಿರ್ಧರಿಸುವಲ್ಲಿ ಒಟ್ಟಾರೆ ಕ್ಯಾಲರಿಯ ಸಮತೋಲನ ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ.
ಹಾಗಿದ್ದರೆ ನಿತ್ಯ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು
ಸಕ್ಕರೆ ಸೇವನೆಯಿಂದ ದಪ್ಪ ಆಗದಿದ್ದರೂ, ಅದನ್ನು ಮಿತವಾಗಿ ಸೇವಿಸುವುದು ತುಂಬಾ ಮುಖ್ಯ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಆಹಾರ ಮತ್ತು ಪಾನೀಯಗಳಿಗೆ ಸೇರಿಸಲಾಗಿರುವ ಫ್ರೀ ಶುಗರ್ ಸಹಿತ ದೈನಂದಿನ ಕ್ಯಾಲರಿಗಳ ಸೇವನೆಯು 5 ಶೇಕಡವನ್ನು ಮೀರಬಾರದು. ಇದರರ್ಥ ಜನರು ಪ್ರತಿದಿನ 30 ಗ್ರಾಂಗಿಂತ ಹೆಚ್ಚು ಸಕ್ಕರೆ ಅಂಶವನ್ನು ಹೊಟ್ಟೆಗಿಳಿಸದಿರುವುದು ಒಳಿತು. ಅಂದರೆ ಸುಮಾರು 7 ಟೀ ಸ್ಪೂನ್‌ಗಿಂತ ಕಡಿಮೆಯಾಗಬೇಕು. ಈ ಪ್ರಮಾಣದಲ್ಲಿ ನೀವು ಸೇವಿಸುವ ಸಿದ್ಧ ಆಹಾರಗಳಲ್ಲಿರುವ ಸಕ್ಕರೆ ಅಂಶ ಕೂಡಾ ಸೇರಿದೆ. ಕೇವಲ ಸಕ್ಕರೆಯನ್ನು ಲೆಕ್ಕ ಹಾಕುವುದಾದರೆ ದಿನಕ್ಕೆ 4 ಚಮಚಕ್ಕಿಂತ ಕಡಿಮೆ ಸಕ್ಕರೆ ದೇಹ ಸೇರಿದರೆ ಒಳ್ಳೆಯದು.
ಇನ್ನಷ್ಟು ಆರೋಗ್ಯ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಡೆಂಗ್ಯೂ, ಚಿಕುನ್ಗುನ್ಯಾ ನಡುವೆ ಬೆಂಗಳೂರಲ್ಲಿ ಇಲಿ ಜ್ವರ ಹರಡುವ ಭೀತಿ; ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ