logo
ಕನ್ನಡ ಸುದ್ದಿ  /  ಜೀವನಶೈಲಿ  /  ಪಿತ್ತಕೋಶದಲ್ಲಿನ ಕಲ್ಲನ್ನು ನೈಸರ್ಗಿಕವಾಗಿ ಕರಗಿಸಲು ಸಾಧ್ಯವೇ, ಇದರ ನಿವಾರಣೆಗೆ ಯಾವ ಆಹಾರ ಸೇವಿಸಬೇಕು; ಇಲ್ಲಿದೆ ತಜ್ಞರ ಸಲಹೆ

ಪಿತ್ತಕೋಶದಲ್ಲಿನ ಕಲ್ಲನ್ನು ನೈಸರ್ಗಿಕವಾಗಿ ಕರಗಿಸಲು ಸಾಧ್ಯವೇ, ಇದರ ನಿವಾರಣೆಗೆ ಯಾವ ಆಹಾರ ಸೇವಿಸಬೇಕು; ಇಲ್ಲಿದೆ ತಜ್ಞರ ಸಲಹೆ

Reshma HT Kannada

Oct 07, 2024 02:41 PM IST

google News

ಪಿತ್ತಕೋಶದಲ್ಲಿನ ಕಲ್ಲನ್ನು ನೈಸರ್ಗಿಕವಾಗಿ ಕರಗಿಸಲು ಸಾಧ್ಯವೇ?

    • ಮೂತ್ರಕೋಶದ ಕಲ್ಲು ಅಥವಾ ಕಿಡ್ನಿ ಸ್ಟೋನ್ ಬಗ್ಗೆ ನೀವು ಕೇಳಿರಬಹುದು. ಆದರೆ ಇದರಂತೆ ಪಿತ್ತಕೋಶದಲ್ಲೂ ಕಲ್ಲಾಗುತ್ತದೆ. ಇದನ್ನು ಗಾಲ್‌ಬ್ಲಾಡರ್ ಸ್ಟೋನ್ ಎಂದು ಕರೆಯುತ್ತಾರೆ. ಕಿಡ್ನಿ ಸ್ಟೋನ್ ಹಾಗೂ ಗಾಲ್‌ಸ್ಟೋನ್ ಎರಡೂ ಸಾಮಾನ್ಯವಾಗಿ ಒಂದೇ ರೀತಿಯದ್ದು. ಇದನ್ನು ನೈರ್ಸಗಿಕವಾಗಿ ಕರಗಿಸಬಹುದೇ, ನಿವಾರಣೆಗೆ ಯಾವ ಆಹಾರ ಸೇವಿಸಬೇಕು ಇಲ್ಲಿದೆ ಉತ್ತರ.
ಪಿತ್ತಕೋಶದಲ್ಲಿನ ಕಲ್ಲನ್ನು ನೈಸರ್ಗಿಕವಾಗಿ ಕರಗಿಸಲು ಸಾಧ್ಯವೇ?
ಪಿತ್ತಕೋಶದಲ್ಲಿನ ಕಲ್ಲನ್ನು ನೈಸರ್ಗಿಕವಾಗಿ ಕರಗಿಸಲು ಸಾಧ್ಯವೇ? (PC: Canva)

ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿರುವುದು ಸುಳ್ಳಲ್ಲ. ನೀರು ಕುಡಿಯುವುದಕ್ಕೂ ಸಮಯವಿಲ್ಲದ ಈ ಕಾಲದಲ್ಲಿ ಒಂದಿಲ್ಲೊಂದು ಕಾಯಿಲೆಗಳು ಕಾಡುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವು ಪುರುಷರು ಹಾಗೂ ಮಹಿಳೆಯರು ಪಿತ್ತಕೋಶ ಹಾಗೂ ಮೂತ್ರಕೋಶದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರು ಇದರ ನಿವಾರಣೆಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟರೆ, ಇನ್ನೂ ಕೆಲವರು ಲೇಸರ್ ಚಿಕಿತ್ಸೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಹಾಗಾದರೆ ಇದನ್ನು ನೈಸರ್ಗಿಕವಾಗಿ ಪರಿಹರಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಿಮ್ಮನ್ನೂ ಕಾಡಬಹುದು. ಈ ಪೌಷ್ಟಿಕ ತಜ್ಞರ ಉತ್ತರ ಇಲ್ಲಿದೆ.

ಏನಿದು ಪಿತ್ತಕೋಶದ ಕಲ್ಲು 

ಕೊಲೆಲಿಥಿಯಾಸಿಸ್ ಎಂದೂ ಕರೆಯಲ್ಪಡುವ ಪಿತ್ತಕೋಶದ ಕಲ್ಲುಗಳು ನೋವು ಉಂಟು ಮಾಡಬಹುದು, ಇದರಿಂದ ನಿಮ್ಮ ದೈನಂದಿನ ದಿನಚರಿಗೂ ಕಷ್ಟವಾಗಬಹುದು. ಇದಕ್ಕೆ ಶಸ್ತ್ರಚಿಕಿತ್ಸೆಯಿಂದಲೇ ಪರಿಹಾರ ಎಂಬ ಮಾತು ಇದೆಯಾದರೂ ಪೌಷ್ಟಿಕ ತಜ್ಞರ ಪ್ರಕಾರ ಡಯೆಟ್ ಹಾಗೂ ನ್ಯೂಟ್ರಿಷನ್‌ಗಳಿಂದಲೂ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದರ ಬಗ್ಗೆ ಪೌಷ್ಟಿಕ ತಜ್ಞರು ನೀಡಿರುವ ಸಲಹೆ ಇಲ್ಲಿದೆ.

‘ಆಹಾರ ಮತ್ತು ಸರಿಯಾದ ಪೋಷಣೆಯ ಮೂಲಕ ಪಿತ್ತಕೋಶ ಹಾಗೂ ಮೂತ್ರಕೋಶದ ಕಲ್ಲುಗಳನ್ನು ತೊಡೆದುಹಾಕಲು ಸಾಧ್ಯವಿದೆ. ಆದರೆ ಪ್ರಕರಣವು ತೀವ್ರ ಸ್ವರೂಪ ಪಡೆದಿರಬಾರದು ಹಾಗೂ ಸಮಸ್ಯೆ ಸಂಕೀರ್ಣವಾಗಿರಬಾರದು. ಜೊತೆಗೆ ಮೂತ್ರಕೋಶ ಹಾಗೂ ಪಿತ್ತಕೋಶದಲ್ಲಿ ಕಲ್ಲು ಹೊಂದಿರುವ ವ್ಯಕ್ತಿಯು ಯಾವುದೇ ರೀತಿಯ ಚಯಾಪಚಯ ಸಮಸ್ಯೆಯಿಂದ ಬಳಲುತ್ತಿರಬಾರದು. ಸ್ಥಿರವಾದ ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳೊಂದಿಗೆ ಬಹಳ ದಿನಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮುಂದೂಡಲು ಸಾಧ್ಯವಿದೆ ಎಂದು ಕ್ಲಿನಿಕಲ್ ಡಯೆಟಿಷಿಯನ್ ರಿಧಿಮಾ ಗುಪ್ತಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೂತ್ರಕೋಶ, ಪಿತ್ತಕೋಶದ ಕಲ್ಲು ನಿವಾರಿಸುವ ಆಹಾರಗಳು

‘ಆರೋಗ್ಯಕರ ಆಹಾರ ಸೇವನೆ, ದೈಹಿಕ ಚಟುವಟಿಕೆ, ನಿದ್ರೆ ಹಾಗೂ ಒತ್ತಡ ನಿರ್ವಹಣೆ ಸೇರಿದಂತೆ ಸಮಗ್ರ ವಿಧಾನವು ಈ ಕಾಳಜಿಗೆ ಪ್ರಮುಖ ಪರಿಹಾರವಾಗಿದೆ. ಪಿತ್ತಕೋಶ ಅಥವಾ ಮೂತ್ರಕೋಶದ ಕಲ್ಲು ತೊಡೆದು ಹಾಕಲು ನೆರವಾಗುವ ಕೆಲವು ಆಹಾರಗಳಿವೆ. ಅಂತಹ ಆಹಾರಗಳು ಯಾವುದು ನೋಡಿ.

ಆಪಲ್ ಸೈಡರ್ ವಿನೆಗರ್: ಇದು ದೇಹವನ್ನು ಶುದ್ಧೀಕರಿಸುತ್ತದೆ. ಹೈಪೋಕ್ಲೋರಿಡ್ರಿಯಾ ಕೊಲೆಲಿಥಿಯಾಸಿಸ್‌ಗೆ ಒಂದು ಪ್ರಮುಖ ಕಾರಣವಾಗಿದೆ. ಆಪಲ್ ಸೈಡರ್ ವಿನೆಗರ್ ಆಮ್ಲದ ಮಟ್ಟವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ, ಹೀಗಾಗಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಸೇಬುಹಣ್ಣಿನ ಜ್ಯೂಸ್‌: ಸೇಬುಹಣ್ಣಿನ ಜ್ಯೂಸ್ ಕೂಡ ಪಿತ್ತಕೋಶ ಹಾಗೂ ಮೂತ್ರಕೋಶದ ಕಲ್ಲುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಾಲ್ಕರಿಂದ ಐದು ದಿನಗಳವರೆಗೆ ಒಂದು ಲೋಟ ಸೇಬಿನ ರಸವನ್ನು ಕುಡಿಯುವುದರಿಂದ ಕಲ್ಲು ನಿವಾರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪಲ್ಲೆಹೂ: ಪಲ್ಲೆಹೂವು (Artichoke) ಮತ್ತೊಂದು ಸೂಪರ್‌ಫುಡ್ ಆಗಿದ್ದು ಅದು ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್-ಮಾದರಿಯ ಪಿತ್ತಗಲ್ಲುಗಳ ವಿಸರ್ಜನೆಯನ್ನು ಉತ್ತೇಜಿಸುತ್ತದೆ. 12 ವಾರಗಳ ಕಾಲ ಇದನ್ನು ಸೇವಿಸುವುದರಿಂದ ಪಿತ್ತಕೋಶದ ಕಲ್ಲು ಕರಗುತ್ತದೆ ಎಂದು ಹೇಳಲಾಗುತ್ತದೆ.

ಪಿತ್ತಕೋಶ ಹಾಗೂ ಮೂತ್ರಕೋಶದಲ್ಲಿ ಕಲ್ಲು ಇದ್ದರೆ ಪ್ರಾಥಮಿಕ ಹಂತದಲ್ಲಿ ಆ ವ್ಯಕ್ತಿಯ ದಿನವಿಡೀ ಸೇಬುಹಣ್ಣಿನ ರಸ ಸೇವಿಸಬೇಕು. ಸಂಜೆ ಹೊತ್ತಿಗೆ ನಿಂಬೆರಸದೊಂದಿಗೆ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಸೇವಿಸಬೇಕು. ಆದರೆ ಮಧುಮೇಹದಂತಹ ಸಮಸ್ಯೆ ಇರುವವರು ಇದನ್ನು ಸೇವಿಸುವ ಮೊದಲು ತಜ್ಞರಿಂದ ಸಲಹೆ ಪಡೆಯಬೇಕು.

ಹರಳೆಣ್ಣೆ: ರಿಧಿಮಾ ಅವರ ಪ್ರಕಾರ ಹರಳೆಣ್ಣೆಯು ಪಿತ್ತಕೋಶ ಕಲ್ಲ ಕರಗಿಸುವ ಒಂದು ನೈಸರ್ಗಿಕ ವಿಧಾನವಾಗಿದೆ. ಹರಳೆಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಬಟ್ಟೆಯನ್ನು ಅದ್ದಿ, ಆ ಬಟ್ಟೆಯು ಬೆಚ್ಚಗಿರುವಾಗಲೇ ಹೊಟ್ಟೆಯ ಮೇಲೆ ಇರಿಸಿದರೆ ನೋವು ಕಡಿಮೆಯಾಗಿ, ಕಲ್ಲು ಕರಗಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ.

ಕಲ್ಲು ಕರಗಲು ಸಹಾಯ ಮಾಡುವ ಅನಾನಸ್ ಹಣ್ಣು

ಅನಾನಸ್ ವಾಸ್ತವವಾಗಿ ಜೈವಿಕ ಸಕ್ರಿಯ ಸಂಯುಕ್ತ ಬ್ರೋಮೆಲಿನ್ ಮತ್ತು ಹೆಚ್ಚಿನ ಆಸ್ಕೋರ್ಬಿಕ್ ಆಮ್ಲದ ಉಪಸ್ಥಿತಿಯಿಂದಾಗಿ ಅಂಗಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಿರಿಕಿರಿ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಉರಿಯೂತ ಕಡಿಮೆಯಾದರೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಡಿಮೆ ಎನ್ನುವುದು ತಜ್ಞರ ಅಭಿಪ್ರಾಯ. ಆದಾಗ್ಯೂ ಮಧುಮೇಹ ಮತ್ತು ದೇಹದಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚು ಹೊಂದಿರುವ ಜನರು ಪೈನಾಪಲ್ ಸೇವಿಸುವ ಮೊದಲ ಎಚ್ಚರ ವಹಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ. ಕೊಲೆಲಿಥಿಯಾಸಿಸ್ ಹೊಂದಿರುವ ಜನರು ಸಂಸ್ಕರಿಸಿದ ಮತ್ತು ಮಸಾಲೆಯುಕ್ತ ಆಹಾರಗಳನ್ನು ತ್ಯಜಿಸಬೇಕು ಮತ್ತು ದೈಹಿಕ ಚಟುವಟಿಕೆ ಮತ್ತು ಕೆಲವು ಯೋಗ ಆಸನಗಳನ್ನು ತಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಸಲಹೆ ನೀಡುತ್ತಾರೆ.

ಮೂತ್ರಕೋಶ, ಪಿತ್ತಕೋಶ ಕಲ್ಲಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲವೇ?

ರಿಧಿಮಾ ಅವರ ಪ್ರಕಾರ ಮೂತ್ರಕೋಶ ಅಥವಾ ಪಿತ್ತಕೋಶದಲ್ಲಿ ಕಲ್ಲು ಇರುವುದು ತಿಳಿದರೆ ಕೂಡಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕಿಂತ ನೈಸರ್ಗಿಕ ವಿಧಾನಗಳು ಮತ್ತು ಆಹಾರ ಕ್ರಮಗಳನ್ನು ಬಳಸಿಕೊಂಡು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದನ್ನು ಉತ್ತಮ ಎಂದು ಸಲಹೆ ನೀಡುತ್ತಾರೆ.

ಹೊಟ್ಟೆಯ ಮೇಲ್ಭಾಗ ಅಥವಾ ಮಧ್ಯಭಾಗಕ್ಕಿಂತ ಕೊಂಚ ಮೇಲ್ಭಾಗದಲ್ಲಿ ನೋವು, ಕಪ್ಪು ಮಲ, ಚರ್ಮದ ಹಳದಿ ಬಣ್ಣ ಮತ್ತು ಕಣ್ಣುಗಳ ಬಿಳಿ ಬಣ್ಣ, ಮತ್ತು ಪಿತ್ತಕೋಶದ ಉರಿಯೂತ, ಹಲವು ಕಲ್ಲುಗಳು, ಕಲ್ಲಿನ ಗಾತ್ರ ದೊಡ್ಡದಿರುವುದು ಇಂತಹ ಸಂದರ್ಭದಲ್ಲಿ ತಡ ಮಾಡದೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು. 7-10 ಮಿಮೀ ದೊಡ್ಡ ಗಾತ್ರದ ಕಲ್ಲು ಇದ್ದರೆ ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂಬುದು ರಿಧಿಮಾ ಅವರ ಸಲಹೆ

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನವನ್ನು ಆಧರಿಸಿದ್ದು. ಯಾವುದೇ ಕಾಯಿಲೆಯ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕಾರಣ ಮೇಲೆ ನೀಡಿರುವ ಸಲಹೆಗಳು ಎಲ್ಲರಿಗೂ ಅನ್ವಯವಾಗಬೇಕು ಎಂದೇನಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ನೀವು ತಜ್ಞರನ್ನು ಸಂಪರ್ಕಿಸಿ, ಅವರಿಂದ ಸೂಕ್ತ ಮಾಹಿತಿ ಪಡೆಯುವುದು ಉತ್ತಮ).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ