logo
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿ ಹಬ್ಬಕ್ಕೆ ಓಡಾಡಿ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆಯಾ: ಇಲ್ಲಿದೆ ಸಿಂಪಲ್ ಮನೆಮದ್ದು, ಟ್ರೈ ಮಾಡಿ ನೋಡಿ

ದೀಪಾವಳಿ ಹಬ್ಬಕ್ಕೆ ಓಡಾಡಿ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆಯಾ: ಇಲ್ಲಿದೆ ಸಿಂಪಲ್ ಮನೆಮದ್ದು, ಟ್ರೈ ಮಾಡಿ ನೋಡಿ

Priyanka Gowda HT Kannada

Nov 04, 2024 03:12 PM IST

google News

ದೀಪಾವಳಿ ಹಬ್ಬಕ್ಕೆ ಓಡಾಡಿ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆಯಾ: ಇಲ್ಲಿದೆ ಸಿಂಪಲ್ ಮನೆಮದ್ದು, ಟ್ರೈ ಮಾಡಿ ನೋಡಿ

    • ದೀಪಾವಳಿಗೆ ಮನೆಯಲ್ಲಾ ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಬಹಳ ಶ್ರಮವಹಿಸಲಾಗುತ್ತದೆ. ನಿರಂತರ ಓಡಾಟದಿಂದ ದೇಹ ದಣಿದು ಆಯಾಸವುಂಟಾಗುತ್ತದೆ. ಆಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕಾಲುನೋವು ತುಸು ಹೆಚ್ಚು ನೋವನ್ನು ತರುತ್ತದೆ. ಇದಕ್ಕೆ ಮನೆಯಲ್ಲೇ ಆರೈಕೆ ಮಾಡಿಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ದೀಪಾವಳಿ ಹಬ್ಬಕ್ಕೆ ಓಡಾಡಿ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆಯಾ: ಇಲ್ಲಿದೆ ಸಿಂಪಲ್ ಮನೆಮದ್ದು, ಟ್ರೈ ಮಾಡಿ ನೋಡಿ
ದೀಪಾವಳಿ ಹಬ್ಬಕ್ಕೆ ಓಡಾಡಿ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆಯಾ: ಇಲ್ಲಿದೆ ಸಿಂಪಲ್ ಮನೆಮದ್ದು, ಟ್ರೈ ಮಾಡಿ ನೋಡಿ (PC: HT File Photo)

ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲರ ಮನೆಯಲ್ಲೂ ಬಹಳ ಸಂಭ್ರಮದಿಂದ ಆಚರಿಸಲಾಗಿದೆ. ಅದಕ್ಕಾಗಿ ಮಹಿಳೆಯರು ವಾರದ ಮೊದಲೇ ಮನೆಯ ಮೂಲೆ ಮೂಲೆಯನ್ನು ಶುಚಿಗೊಳಿಸಿ ಹಬ್ಬವನ್ನು ಚೆನ್ನಾಗಿ ಮಾಡಿದ್ದಾರೆ. ಹಬ್ಬದ ಆಚರಣೆಗೆ ಗಂಟೆಗಟ್ಟಲೆ ನಿಂತು ವೈವಿಧ್ಯಮಯ ಅಡುಗೆಗಳನ್ನು ಮಾಡಿ ದಣಿದಿದ್ದಾರೆ. ಅತಿಯಾದ ಕೆಲಸ ಮತ್ತು ಓಡಾಟದಿಂದ ಕಾಲುಗಳಲ್ಲಿ ನೋವು, ಆಯಾಸದಿಂದ ಅವರು ಬಳಲುವುದು ಸಾಮಾನ್ಯ. ಅದರಲ್ಲೂ ಕೆಲವರು ಹಿಮ್ಮಡಿ ನೋವು, ಮೊಣಕಾಲಿನ ತೀವ್ರ ನೋವಿನಿಂದ ಬಹಳ ಚಿಂತೆಗೊಳಗಾಗಿದ್ದಾರೆ. ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡಲೂ ಆಗದೇ ಆರೋಗ್ಯದ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅಂತಹವರು ಏನು ಮಾಡಬೇಕೆಂದು ತಿಳಿಯದೇ ಕಷ್ಟ ಪಡುತ್ತಿದ್ದರೆ ಅವರಿಗೆ ಇಲ್ಲಿದೆ ಉತ್ತಮ ಮನೆಮದ್ದು. ಮನೆಯಲ್ಲೇ ಮಾಡಿಕೊಳ್ಳಬಹುದಾದ ಸುಲಭದ ಉಪಚಾರಗಳು ಇಲ್ಲಿವೆ. ಈ ರೀತಿ ಮಾಡುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ ಮತ್ತು ಆಯಾಸವೂ ದೂರವಾಗುತ್ತದೆ.

ನೋವು ಮತ್ತು ಆಯಾಸ ದೂರ ಮಾಡುವ ಮನೆಮದ್ದುಗಳು

ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಇಡಿ: ಪಾದದ ಸ್ನಾಯುಗಳಿಗೆ ಅತಿಯಾದ ಒತ್ತಡದಿಂದ ಅವು ಊದಿಕೊಂಡಿರುತ್ತವೆ. ಅದಕ್ಕೆ ವಿಶ್ರಾಂತಿಯನ್ನು ನೀಡುವುದು ಅಗತ್ಯವಾಗಿದೆ. ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ. ಈಗ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಇಡಿ. ಕನಿಷ್ಠ 20 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಆ ನೀರಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರಕುತ್ತದೆ. ಪಾದಗಳ ನೋವು ಕಡಿಮೆಯಾಗುತ್ತದೆ.

ಮಸಾಜ್‌ ಮಾಡಿಕೊಳ್ಳಿ: ಕಾಲು ಮತ್ತು ಪಾದಗಳ ನೋವಿಗೆ ರಕ್ತ ಪರಿಚಲನೆಯಲ್ಲಾದ ಅಡಚಣೆಯೂ ಕಾರಣವಾಗಿರಬಹುದು. ಇದನ್ನು ಗುಣಪಡಿಸಲು ಮಸಾಜ್‌ ಉತ್ತಮವಾಗಿದೆ. ಬಾದಾಮಿ, ಸಾಸಿವೆ ಅಥವಾ ಎಳ್ಳೆಣ್ಣೆ ಬಳಸಿ ಮಸಾಜ್‌ ಮಾಡಿಕೊಳ್ಳಿ. ಇದು ನಿಮ್ಮ ಪಾದ ಮತ್ತು ಕಾಲುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.

ಶಾಖ ನೀಡಿ: ಕಾಲು ನೋವಿಗೆ ಇನ್ನೊಂದು ಬೆಸ್ಟ್‌ ಪರಿಹಾರವೆಂದರೆ ಶಾಖ ನೀಡುವುದು. ನೀವು ಪಾದ ಮತ್ತು ಕಾಲುಗಳ ಭಾಗದಲ್ಲಿ ತೀವ್ರ ನೋವು ಅನುಭವಿಸುತ್ತಿದ್ದರೆ ಆ ಜಾಗದಲ್ಲಿ ಹಾಟ್‌ ಪ್ಯಾಡ್‌ ಬಳಸಿ ಶಾಖ ನೀಡಿ. ಹೀಗೆ ಮಾಡುವುದರಿಂದ ಪಾದಗಳು ಊದಿಕೊಂಡಿರುವುದು ಕಡಿಮೆಯಾಗುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತದೆ.

ಕಾಲುಗಳನ್ನು ಮೇಲಕ್ಕೆತ್ತಿ: ದಿನವಿಡೀ ನಿಂತು ಕೆಲಸ ಮಾಡುವುದರಿಂದ ಹೃದಯವು ರಕ್ತಪರಿಚಲನೆಯನ್ನು ಮಾಡಲು ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕಾಲುಗಳಲ್ಲಿ ನೋವಿದ್ದರೆ ಕಾಲುಗಳನ್ನು ಮೇಲಕ್ಕೆತ್ತುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಇದನ್ನು ಮಾಡಲು ಮೊದಲಿಗೆ ನೆಲದ ಮೇಲೆ ಒಂದು ಮ್ಯಾಟ್‌ ಹಾಕಿಕೊಳ್ಳಿ. ಅದರ ಮೇಲೆ ಮಲಗಿ .ನಿಮ್ಮ ಪಾದಗಳನ್ನು ಸ್ವಲ್ಪ ಮೇಲಕ್ಕೆತ್ತಿ ಗೋಡೆಗೆ ಚಾಚಿ ಮಲಗಿ ಅಥವಾ ಕಾಲುಗಳ ಕೆಳಗೆ ಒಂದು ತಲೆದಿಂಬನ್ನು ಇಡಿ. ಹೀಗೆ ಮಾಡುವುದರಿಂದ ರಕ್ತಪರಿಚಲನೆ ಸುಧಾರಿಸಿ, ನೋವು ಕಡಿಮೆಯಾಗುತ್ತದೆ.

ಈ ಮನೆಮದ್ದುಗಳಿಂದಲೂ ನಿಮ್ಮ ಕಾಲು ನೋವು ಕಡಿಮೆಯಾಗಿಲ್ಲ ಎಂದಾದರೆ ನಿಮಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಿ. ನೀವು ಖಂಡಿತ ವೈದ್ಯರ ಬಳಿ ಹೋಗಿ ಸಮಾಲೋಚಿಸುವುದು ಉತ್ತಮ. ನಿಮ್ಮ ಕಾಲುನೋವಿಗೆ ಸೂಕ್ತ ಔಷಧ ಪಡೆದುಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ