logo
ಕನ್ನಡ ಸುದ್ದಿ  /  ಜೀವನಶೈಲಿ  /  Obesity: ಯುವಜನತೆಯನ್ನು ಕಾಡುವ ಸ್ಥೂಲಕಾಯ ಮಧುಮೇಹ; ಸಕ್ಕರೆ ಕಾಯಿಲೆ, ಬೊಜ್ಜು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

Obesity: ಯುವಜನತೆಯನ್ನು ಕಾಡುವ ಸ್ಥೂಲಕಾಯ ಮಧುಮೇಹ; ಸಕ್ಕರೆ ಕಾಯಿಲೆ, ಬೊಜ್ಜು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

Praveen Chandra B HT Kannada

Jun 10, 2024 08:00 PM IST

google News

Obesity: ಯುವಜನತೆಯನ್ನು ಕಾಡುವ ಸ್ಥೂಲಕಾಯ ಮಧುಮೇಹ

    • Diabetes and obesity: ಇಂದಿನ ಆಹಾರ ಪದ್ಧತಿ, ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಸ್ಥೂಲಕಾಯ (ಬೊಜ್ಜು) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಹೊಂದಿರುವ ಬಹುತೇಕರು ಹೃದ್ರೋಗ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಯುವಜನತೆಯನ್ನೂ ಈ ಸಮಸ್ಯೆ ಬಿಡದೆ ಕಾಡುತ್ತಿರುವುದು ಕಳವಳ ಮೂಡಿಸಿದೆ. ಇದರ ತೊಡಕುಗಳು ಮತ್ತು ನಿಯಂತ್ರಿಸುವ ಬಗ್ಗೆ ಇಲ್ಲಿದೆ ಮಾಹಿತಿ..
Obesity: ಯುವಜನತೆಯನ್ನು ಕಾಡುವ ಸ್ಥೂಲಕಾಯ ಮಧುಮೇಹ
Obesity: ಯುವಜನತೆಯನ್ನು ಕಾಡುವ ಸ್ಥೂಲಕಾಯ ಮಧುಮೇಹ

ಅದೊಂದು ಕಾಲವಿತ್ತು, ಮಧುಮೇಹ ಎಂದರೆ ಕೇವಲ ಸಿರಿವಂತರ ಕಾಯಿಲೆ ಎಂದೇ ಕುಖ್ಯಾತಿ ಪಡೆದಿತ್ತು. ಆದರೀಗ ಕಾಲ ಬದಲಾದಂತೆ, ಮಧುಮೇಹವು ಶ್ರೀಮಂತರನ್ನು ಮಾತ್ರವಲ್ಲದೆ ಮಧ್ಯಮ-ಬಡ ವರ್ಗದವರನ್ನೂ ಬಿಡದೆ ಕಾಡಿಸುತ್ತಿದೆ. ಇಂದಿನ ಆಹಾರ ಪದ್ಧತಿ, ಜೀವನ ಶೈಲಿ, ಒತ್ತಡದ ಬದುಕಿನಿಂದ ಬಹುತೇಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯುವಜನತೆ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಹೊಂದಿರುವ ಬಹುತೇಕರು ಹೃದ್ರೋಗ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ.

ಜೀವನ ಅನ್ನೋದು ಬಹಳ ಅಮೂಲ್ಯವಾದದ್ದು. ನೀವು ಸ್ಥೂಲಕಾಯ ಮತ್ತು ಮಧುಮೇಹದಿಂದ ಬಳಲುತ್ತಿದ್ದರೆ ಅದನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕು. ಹೀಗಾಗಿ ನಿಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿದಿನ ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮಾಡಬೇಕು. ಮಧುಮೇಹ ಮತ್ತು ಸ್ಥೂಲಕಾಯತೆಯು ಜಾಗತಿಕವಾಗಿ ಹೆಚ್ಚುತ್ತಿರುವ ಕಾಯಿಲೆಯಾಗಿದೆ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹ ಮತ್ತು ಬೊಜ್ಜಿನ ಇತ್ತೀಚಿನ ತೊಡಕುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೋವಿಡ್-19 ನಿಂದ ಹೆಚ್ಚಿದ ಅಪಾಯ

ಕೋವಿಡ್-19 ಸಾಂಕ್ರಾಮಿಕ ರೋಗವು ಮಧುಮೇಹ ಮತ್ತು ಬೊಜ್ಜು ಹೊಂದಿರುವ ವ್ಯಕ್ತಿಗಳ ದುರ್ಬಲತೆಯನ್ನು ಎತ್ತಿ ತೋರಿಸಿದೆ. ಈ ಅಪಾಯವನ್ನು ತಗ್ಗಿಸಲು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು. ಇದೀಗ ಕೋವಿಡ್ ಅಪಾಯ ಇಲ್ಲದಿದ್ದರೂ ಜಾಗರೂಕತೆ ವಹಿಸಬೇಕಾದುದು ಬಹಳ ಮುಖ್ಯ.

ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್

ಮಧುಮೇಹ ಮತ್ತು ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಈ ಸಮಸ್ಯೆಯು ವೇಗವಾಗಿ ಬೆಳೆಯುತ್ತಿದೆ. ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಈ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದು ಉರಿಯೂತ ಅಥವಾ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು. ಇದನ್ನು ಪರಿಹರಿಸಲು ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ತೂಕ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿ. ಹಾಗೆಯೇ ರಕ್ತ ಪರೀಕ್ಷೆಗಳ ಮೂಲಕ ಯಕೃತ್ತಿನ ಕ್ರಿಯೆಯ ನಿಯಮಿತ ಮೇಲ್ವಿಚಾರಣೆ ಮಾಡುತ್ತಿರಿ.

ಡಯಾಬಿಟಿಕ್ ರೆಟಿನೋಪತಿ ಮತ್ತು ದೃಷ್ಟಿ ನಷ್ಟ

ಮಧುಮೇಹವು ಕಣ್ಣುಗಳಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ಡಯಾಬಿಟಿಕ್ ರೆಟಿನೋಪತಿ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಇದಕ್ಕೆ ಆದಷ್ಟು ಬೇಗ ಚಿಕಿತ್ಸೆ ನೀಡದೆ ಹೋದಲ್ಲಿ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ದೃಷ್ಟಿಗೆ ಸಂಬಂಧಿಸಿದ ತೊಡಕುಗಳನ್ನು ತಡೆಗಟ್ಟಲು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ.

ಹೃದಯರಕ್ತನಾಳದ ತೊಡಕುಗಳು

ಮಧುಮೇಹ ಮತ್ತು ಸ್ಥೂಲಕಾಯತೆಯು ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯ ಸೇರಿದಂತೆ ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಈ ಅಪಾಯಗಳನ್ನು ತಗ್ಗಿಸಲು ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಇತರ ಅಪಾಯಕಾರಿ ಅಂಶಗಳ ನಿರ್ವಹಣೆ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.

ನರ ಹಾನಿ

ಮಧುಮೇಹವು ನರರೋಗಕ್ಕೆ ಕಾರಣವಾಗಬಹುದು. ಇದು ನೋವು, ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆಯ ಅನುಭವವಾಗಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಪಾದದ ಹುಣ್ಣುಗಳು, ಸೋಂಕುಗಳು ಮತ್ತು ಅಂಗಚ್ಛೇದನೆಗೆ ಕಾರಣವಾಗಬಹುದು. ನರ ಹಾನಿಗೆ ಸಂಬಂಧಪಟ್ಟಂತೆ ಯಾವುದೇ ಗುಣಲಕ್ಷಣಗಳು ಕಂಡುಬಂದರೆ ತ್ವರಿತ ಚಿಕಿತ್ಸೆಯನ್ನು ಪಡೆಯಿರಿ.

ಮಧುಮೇಹ ಮತ್ತು ಬೊಜ್ಜಿನ ತೊಡಕುಗಳನ್ನು ಪರಿಹರಿಸಲು ಇಲ್ಲಿದೆ ಸಲಹೆ

1. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ

ಪ್ರತಿನಿತ್ಯ ಸಮತೋಲಿತ, ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ನಡಿಗೆ, ಈಜು ಅಥವಾ ಯೋಗ, ವ್ಯಾಯಾಮದಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸಾಧ್ಯವಾದಷ್ಟು ಒತ್ತಡ ನಿರ್ವಹಣೆಗೆ ಆದ್ಯತೆ ನೀಡಿ. ಚೆನ್ನಾಗಿ ನಿದ್ದೆ ಮಾಡಿ.

2. ನಿಮ್ಮ ಆರೋಗ್ಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರಿ

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ, ತೂಕ ಮತ್ತು ಇತರೆ ಸಮಸ್ಯೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ಆಗಾಗ ತಜ್ಞ ವೈದ್ಯರೊಂದಿಗೆ ಸಂಪರ್ಕದಲ್ಲಿರಿ. ವೈದ್ಯರು ಹೇಳಿದ ಔಷಧಿಗಳು, ಇನ್ಸುಲಿನ್ ಅನ್ನು ತೆಗೆದುಕೊಳ್ಳಿ. ಕಣ್ಣಿನ ಪರೀಕ್ಷೆ, ಕಾಲು ತಪಾಸಣೆ ಮತ್ತು ರಕ್ತ ಪರೀಕ್ಷೆಗಳು ಸೇರಿದಂತೆ ಎಲ್ಲವುದರ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿರಿ.

3. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ

ಮಧುಮೇಹ ಮತ್ತು ಬೊಜ್ಜು ನಿರ್ವಹಣೆ ಕುರಿತು ಇತ್ತೀಚಿನ ಸಂಶೋಧನೆ ಮತ್ತು ಶಿಫಾರಸುಗಳ ಬಗ್ಗೆ ತಿಳಿದುಕೊಳ್ಳುತ್ತಿರಿ. ಸಂಭಾವ್ಯ ತೊಡಕುಗಳ ಬಗ್ಗೆ ಎಚ್ಚರವಿರಲಿ. ನಿಮ್ಮ ಆರೋಗ್ಯ ಬಗ್ಗೆ ನೀವೇ ಜಾಗರೂಕತೆ ವಹಿಸಿ. ನಿಮ್ಮ ಆರೋಗ್ಯಕ್ಕಾಗಿ ಕುಟುಂಬ ಮತ್ತು ಸ್ನೇಹಿತರ ಸಹಾಯವನ್ನು ಪಡೆದುಕೊಳ್ಳಿ.

ಒಟ್ಟಿನಲ್ಲಿ ಮಧುಮೇಹ ಮತ್ತು ಬೊಜ್ಜಿನ ಇತ್ತೀಚಿನ ತೊಡಕುಗಳನ್ನು ತಪ್ಪಿಸಲು ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ನೀವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇಂದಿನ ಜೀವನಶೈಲಿಗೆ ಬೊಜ್ಜಿನ ಸಮಸ್ಯೆ ಬರುವುದು ಸಾಮಾನ್ಯ. ಹಾಗಂತ ಇದನ್ನು ಕಡೆಗಣಿಸದೆ ಆದಷ್ಟು ಉತ್ತಮ ಆಹಾರ, ವ್ಯಾಯಾಮ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯವನ್ನು ಕಾಪಾಡಿ.

ಲೇಖನ: ಪ್ರಿಯಾಂಕ ಗೌಡ

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ