Benefits of Banana: ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಬಾಳೆಹಣ್ಣು: ಇದರ ಲಾಭ ಅರಿತವರೇ ಜಾಣರು
Jul 10, 2024 11:58 AM IST
ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಬಾಳೆಹಣ್ಣು
Benefits of Banana: ಬಾಳೆಹಣ್ಣುಗಳು ಬಹಳ ರುಚಿಕರವಾಗಿರುವುದು ಮಾತ್ರವಲ್ಲದೇ ಇದರಲ್ಲಿ ಅಗಾಧ ಪ್ರಮಾಣದ ಆರೋಗ್ಯ ಲಾಭ ಕೂಡ ಅಡಗಿರುತ್ತದೆ . ಹೀಗಾಗಿ ನಿತ್ಯ ಬಾಳೆಹಣ್ಣು ಸೇವನೆಯಿಂದ ಒಬ್ಬ ಮನುಷ್ಯನಿಗೆ ಎಷ್ಟೆಲ್ಲ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ .
Benefits of Banana: ಅತ್ಯಂತ ಸುಲಭವಾಗಿ ಎಲ್ಲರಿಗೂ ಲಭ್ಯವಿರುವ ಹಣ್ಣು ಎಂದರೆ ಬಾಳೆ ಹಣ್ಣು. ಈ ಹಣ್ಣನ್ನು ಖರೀದಿಸೋಕೆ ನೀವು ಹಣ್ಣಿನ ಅಂಗಡಿಗೆ ತೆರಳಬೇಕು ಎಂದೇನಿಲ್ಲ. ಸಣ್ಣ ಕಿರಾಣಿ ಅಂಗಡಿಯಲ್ಲಿ ಕೂಡ ಬಾಳೆಹಣ್ಣು ನಿಮಗೆ ಸಿಕ್ಕಿಬಿಡುತ್ತದೆ. ಸುಲಭವಾಗಿ ಸಿಗುತ್ತೆ ಅಂತಾ ಬಾಳೆಹಣ್ಣಿನಿಂದ ಇರುವ ಆರೋಗ್ಯ ಭಾಗ್ಯವನ್ನು ಯಾರೂ ಮರೆಯುವಂತಿಲ್ಲ. ಏಷ್ಯಾದ ಆಗ್ನೇಯ ಮೂಲದಿಂದ ಬಂದ ಈ ಬಾಳೆ ಹಣ್ಣು ತನ್ನ ಪ್ರಯೋಜನಗಳ ಮೂಲಕ ಇದೀಗ ಬಹುತೇಕ ಎಲ್ಲಾ ಕಡೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಹಣ್ಣು ಎನಿಸಿದೆ. ಆರೋಗ್ಯದ ಕಡೆಗೆ ಹೆಚ್ಚು ಲಕ್ಷ್ಯ ನೀಡಿ ಪ್ರತಿನಿತ್ಯ ಹಣ್ಣುಗಳ ಸೇವನೆ ಮಾಡುವವರ ಪೈಕಿ ನೀವೂ ಒಬ್ಬರಾಗಿದ್ದರೆ ಖಂಡಿತ ನೀವು ಬಾಳೆ ಹಣ್ಣನ್ನು ನಿಮ್ಮ ಡಯಟ್ನೊಂದಿಗೆ ಸೇರಿಸಿಕೊಳ್ಳಬಹುದಾಗಿದೆ.
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ B6, ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಮತ್ತು ಫೈಟೋನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿದೆ. ಬಾಳೆಹಣ್ಣುಗಳಲ್ಲಿ ಸಮತೋಲಿತ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ನೀರು, ಫೈಬರ್ ಹಾಗೂ ಆಂಟಿ ಆಕ್ಸಿಡಂಟ್ ಹಾಗೂ ಪ್ರೊಟೀನ್ ಅಂಶಗಳಿವೆ. ಅಲ್ಲದೇ ಈ ಹಣ್ಣಿನಲ್ಲಿ ಯಾವುದೇ ಕೊಬ್ಬಿನಂಶ ಇರುವುದಿಲ್ಲ.
ದೇಹದಲ್ಲಿ ಸಕ್ಕರೆ ಅಂಶವನ್ನು ಸುಧಾರಿಸುತ್ತದೆ
ಬಾಳೆಹಣ್ಣುಗಳಲ್ಲಿ ಫೈಬರ್ ಅಂಶ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇದು ನೀರಿನೊಂದಿಗೆ ಸೇರಿಕೊಂಡು ಜೆಲ್ನ ರೀತಿಯಲ್ಲಿ ಬದಲಾಗುತ್ತದೆ. ಇದೇ ಕಾರಣಕ್ಕೆ ಬಾಳೆ ಹಣ್ಣುಗಳು ಸ್ಪಾಂಜ್ ರೀತಿಯಲ್ಲಿ ಇರುತ್ತದೆ . ಬಾಳೆ ಹಣ್ಣಿನಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸರಿದೂಗಿಸಲು ಸಹಾಯಕಾರಿಯಾಗಿದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಬಾಳೆಹಣ್ಣುಗಳಲ್ಲಿ ಇರುವ ಡಯಟರಿ ಫೈಬರ್ ಅಂಶವು ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಆರೋಗ್ಯ ಲಾಭವನ್ನು ತಂದುಕೊಡುತ್ತದೆ. ಇದರಲ್ಲಿ ಜೀರ್ಣಕ್ರಿಯೆ ಸುಧಾರಣೆ ಕೂಡ ಒಂದು. ಇದು ಮಾತ್ರವಲ್ಲದೇ ಬಾಳೆಹಣ್ಣುಗಳಲ್ಲಿ ಇರುವ ಪೆಕ್ಟಿನ್ ಅಂಶವು ಕರುಳಿನ ಕ್ಯಾನ್ಸರ್ನ ವಿರುದ್ಧ ನಮ್ಮನ್ನು ಕಾಪಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಕೆಯ ಮೇಲೆ ಬಾಳೆ ಹಣ್ಣು ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಇದುವರೆಗೆ ಯಾವುದೇ ಅಧ್ಯಯನಗಳು ಹೇಳಿಲ್ಲ. ಆದರೆ ಬಾಳೆಹಣ್ಣಿನಲ್ಲಿ ಅಡಕವಾಗಿರುವ ಸಾಕಷ್ಟು ಅಂಶಗಳು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಇದು ಮಾತ್ರವಲ್ಲದೇ ಬಾಳೆ ಹಣ್ಣುಗಳಲ್ಲಿ ಕ್ಯಾಲೊರಿ ಪ್ರಮಾಣ ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಬಾಳೆ ಹಣ್ಣಿನಲ್ಲಿ 100 ಕ್ಯಾಲೋರಿ ಇರಬಹುದು ಎಂದು ಅಂದಾಜಿಸಬಹುದಾಗಿದೆ. ಆದರೆ ಇವುಗಳು ಕೂಡ ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುತ್ತದೆ.
ಹೃದಯದ ಆರೋಗ್ಯಕ್ಕೂ ಒಳ್ಳೆಯದು
ಬಾಳೆಹಣ್ಣುಗಳಲ್ಲಿ ಅಡಕವಾಗಿರುವ ಪೋಟ್ಯಾಷಿಯಂ ಅಂಶವು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೂ ರಕ್ತದೊತ್ತಡ ನಿವಾರಣೆಗೆ ಬಾಳೆ ಹಣ್ಣು ಸಹಕಾರಿಯಾಗಿದೆ. ಒಂದು ಸಾಮಾನ್ಯ ಗಾತ್ರದ ಬಾಳೆಹಣ್ಣು ದೇಹಕ್ಕೆ ಬೇಕಾದ 10 ಪ್ರತಿಶತ ಪೊಟ್ಯಾಷಿಯಂನ್ನು ಒದಗಿಸುತ್ತದೆ. ಪೊಟ್ಯಾಷಿಯಂ ಅಗಾಧ ಪ್ರಮಾಣದಲ್ಲಿ ಇರುವ ಆಹಾರಗಳ ಸೇವನೆಯಿಂದ ದೇಹದಲ್ಲಿ ರಕ್ತದೊತ್ತಡ ಸಮತೋಲಿತ ಪ್ರಮಾಣದಲ್ಲಿ ಇರುತ್ತದೆ. 2017ರಲ್ಲಿ ನಡೆಸಲಾದ ಅಧ್ಯಯನವೊಂದು ಪೊಟ್ಯಾಷಿಯಂ ಅಂಶವು ಮನುಷ್ಯನಿಗೆ ಹೃದಯಾಘಾತದ ಅಪಾಯವನ್ನು 27 ಪ್ರತಿಶತ ಕಮ್ಮಿ ಮಾಡುತ್ತದೆ ಎಂದು ತಿಳಿದುಬಂದಿದೆ.
ಆಂಟಿ ಆಕ್ಸಿಡೆಂಟ್
ಎಲ್ಲಾ ರೀತಿಯ ತರಕಾರಿ ಹಾಗೂ ಹಣ್ಣುಗಳಲ್ಲಿ ಆಂಟಿ ಆಕ್ಸಿಡಂಟ್ಗಳು ಇದ್ದೇ ಇರುತ್ತದೆ. ಹೀಗಾಗಿ ಬಾಳೆಹಣ್ಣುಗಳಲ್ಲಿಯೂ ನೀವು ಆಂಟಿ ಆಕ್ಸಿಡಂಟ್ಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಬಾಳೆಹಣ್ಣುಗಳಲ್ಲಿ ಇರುವ ಫ್ಲೇವನಾಯ್ಡ್ಸ್ ಹಾಗೂ ಅಮೈನ್ಗಳು ಸೇರಿದಂತೆ ಇನ್ನೂ ಅನೇಕ ಅಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.