logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತವೆ ಈ ಪಾನೀಯಗಳು; ಆಯುರ್ವೇದದಲ್ಲೂ ಇದಕ್ಕಿದೆ ಮಹತ್ವ

Health Tips: ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತವೆ ಈ ಪಾನೀಯಗಳು; ಆಯುರ್ವೇದದಲ್ಲೂ ಇದಕ್ಕಿದೆ ಮಹತ್ವ

HT Kannada Desk HT Kannada

Mar 25, 2024 02:40 PM IST

google News

ದೇಹದಲ್ಲಿ ಶೇಖರಣೆ ಆಗುವ ಕೊಬ್ಬು ಕರಗಿಸಲು ಸಹಾಯ ಮಾಡುವ ಜ್ಯೂಸ್‌ಗಳು

  • Health Tips: ಮಾರುಕಟ್ಟೆಯಲ್ಲಿ ಲಭ್ಯವಿರುವ ಸಂಸ್ಕರಿಸಿದ ಆಹಾರಗಳು ದೇಹಕ್ಕೆ ಎಂದಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಆಸೆಯಿಂದ ಇದನ್ನು ಸೇವಿಸಿ, ನಂತರ ದೇಹದಲ್ಲಿ ಶೇಖರಣೆ ಆಗುವ ಕೊಬ್ಬನ್ನು ಕರಗಿಸಲು ಜನರು ಹರಸಾಹಸ ಪಡುತ್ತಾರೆ. ಈ ರೀತಿ ದೇಹದಲ್ಲಿ ಶೇಖರಣೆಯಾಗುವ ವಿಷಕಾರಿ ಅಂಶವನ್ನು ತೆಗೆದು ಹಾಕಲು ಈ ಪಾನೀಯಗಳು ಸಹಾಯ ಮಾಡುತ್ತದೆ.

ದೇಹದಲ್ಲಿ ಶೇಖರಣೆ ಆಗುವ ಕೊಬ್ಬು ಕರಗಿಸಲು ಸಹಾಯ ಮಾಡುವ ಜ್ಯೂಸ್‌ಗಳು
ದೇಹದಲ್ಲಿ ಶೇಖರಣೆ ಆಗುವ ಕೊಬ್ಬು ಕರಗಿಸಲು ಸಹಾಯ ಮಾಡುವ ಜ್ಯೂಸ್‌ಗಳು (PC: Unsplash)

Health Tips: ಬಿಡುವಿಲ್ಲದ ಜೀವನ ಶೈಲಿಯ ನಡುವೆ ಆರೋಗ್ಯಕರ ಆಹಾರವನ್ನು ಮನೆಯಲ್ಲೇ ತಯಾರಿಸಲು ಬಹುತೇಕರಿಗೆ ಸಮಯವಾಗಲಿ, ತಾಳ್ಮೆಯಾಗಲಿ ಇರುವುದಿಲ್ಲ. ಹೀಗಾಗಿ ಜಂಕ್‌ ಫುಡ್‌ಗಳನ್ನು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಈ ಜಂಕ್‌ ಫುಡ್‌ಗಳು ಆ ಕ್ಷಣಕ್ಕೆ ನಿಮ್ಮ ಹೊಟ್ಟೆ ತುಂಬಿಸಿದರೂ ಇದರಿಂದ ದೇಹದ ಆರೋಗ್ಯಕ್ಕೆ ಯಾವುದೇ ರೀತಿಯ ಲಾಭವಿಲ್ಲ. ಇದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ . ಹೀಗಾಗಿ ಇಂಥ ವಿಷಕಾರಿ ಪದಾರ್ಥಗಳನ್ನು ಸೇವಿಸಿದಾಗ ದೇಹದಲ್ಲಿ ಯಾವುದೇ ವಿಷದ ಅಂಶ ಇಲ್ಲದಂತೆ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಪಾನೀಯಗಳನ್ನು ಸೇವಿಸಬೇಕು ಎಂಬುದಕ್ಕೆ ಮಾಹಿತಿ ಇಲ್ಲಿದೆ.

1. ಬೂದು ಕುಂಬಳಕಾಯಿ ಜ್ಯೂಸ್

ಆರ್ಯುವೇದದ ಪ್ರಕಾರ ಬೂದು ಕುಂಬಳಕಾಯಿಗೆ, ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವ ಗುಣವಿದೆ ಎಂದು ಹೇಳಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬೂದು ಕುಂಬಳಕಾಯಿ ರಸವನ್ನು ಕುಡಿಯುವದರಿಂದ ಮಲಬದ್ಧತೆ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಅಲ್ಲದೇ ದೇಹದಿಂದ ಅನಗತ್ಯ ತ್ಯಾಜ್ಯವನ್ನು ಬಿಡುಗಡೆ ಮಾಡಲು ಬೂದು ಕುಂಬಳಕಾಯಿ ಸಹಾಯ ಮಾಡುತ್ತದೆ. ಇದರಲ್ಲಿ ಅಡಗಿರುವ ವಿಟಮಿನ್ ಸಿ, ಬಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನೀಷಿಯಂ ಹಾಗೂ ಪೊಟ್ಯಾಷಿಯಂ ಅಂಶವು ದೇಹಕ್ಕೆ ಅಗಾಧ ಪ್ರಮಾಣದ ಲಾಭವನ್ನು ನೀಡುತ್ತದೆ. ತೂಕ ಇಳಿಕೆ ಮಾಡಬೇಕು ಎಂದುಕೊಂಡವರೂ ಕೂಡ ಇದರ ರಸವನ್ನು ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂದು ಆರ್ಯುವೇದ ಹೇಳುತ್ತದೆ.

2. ಸೆಲರಿ ಸೊಪ್ಪಿನ ಜ್ಯೂಸ್

ಆಯುರ್ವೇದಲ್ಲಿ ಸೆಲರಿ ಸಸ್ಯಕ್ಕೂ ಸಾಕಷ್ಟು ಮಹತ್ವವಿದೆ. ಇವುಗಳು ಮೂತ್ರಪಿಂಡ ಹಾಗೂ ಯಕೃತ್ತಿನಲ್ಲಿ ಸೇರಿಕೊಂಡ ವಿಷಕಾರಿ ಅಂಶವನ್ನು ತೆಗೆದು ಹಾಕುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇವುಗಳಲ್ಲಿ ಆಂಟಿಆಕ್ಸಿಡಂಟ್ ಪ್ರಮಾಣ ಕೂಡಾ ಜಾಸ್ತಿಯಾಗಿರುತ್ತದೆ. ಅಲ್ಲದೇ ಜೀರ್ಣಾಂಗ ಹಾಗೂ ಕರುಳಿನಿಂದ ಸೇರಿಕೊಂಡ ವಿಷಕಾರಿ ಅಂಶವನ್ನು ಕೂಡಾ ನಿರ್ಮೂಲನೆ ಮಾಡುತ್ತದೆ.

3. ಸೌತೆಕಾಯಿ ಜ್ಯೂಸ್

ಸೌತೆಕಾಯಿಗೆ ಕೂಡಾ ಆರ್ಯುವೇದದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಇವುಗಳಲ್ಲಿರುವ ವಿಟಮಿನ್‌ಗಳು, ಖನಿಜಗಳು ಹಾಗೂ ರೋಗ ನಿರೋಧಕ ಅಂಶವು ದೇಹಕ್ಕೆ ಒಳ್ಳೆಯದು. ಅಲ್ಲದೇ ಸೌತೆಕಾಯಿಯು ನೈಸರ್ಗಿಕ ಮೂತ್ರವರ್ಧಕಗಳಾಗಿವೆ. ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ಯಕೃತ್ತು, ಮೂತ್ರಪಿಂಡ ಹಾಗೂ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

4. ಕೊತ್ತಂಬರಿ ಸೊಪ್ಪಿನ ಜ್ಯೂಸ್

ಕೊತ್ತಂಬರಿ ಸೊಪ್ಪು ಕೂಡ ದೇಹದಲ್ಲಿನ ವಿಷಕಾರಿ ಅಂಶಗಳನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಿದೆ. ಇವುಗಳಲ್ಲಿ ವಿಟಮಿನ್ ಎ ಹಾಗೂ ಕೆ ಅಂಶ ಸಮೃದ್ಧವಾಗಿರುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಕೊತ್ತಂಬರಿ ಸೊಪ್ಪು ಸಹಕಾರಿಯಾಗಿದೆ. ಇವುಗಳಲ್ಲಿ ಆಂಟಿ ಆಕ್ಸಿಡಂಟ್ ಪ್ರಮಾಣ ಕೂಡ ಅಗಾಧ ಪ್ರಮಾಣದಲ್ಲಿ ಅಡಕವಾಗಿದೆ. ಪಿತ್ತರಸದ ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತದೆ. ಕೊತ್ತಂಬರಿ ಸೊಪ್ಪಿನ ಜ್ಯೂಸ್ ತಯಾರಿಸುವ ಮುನ್ನ ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ ತೊಳೆಯುವುದನ್ನು ಮರೆಯಬೇಡಿ.

5. ಬಾಳೆ ಕಾಂಡದ ರಸ

ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಹಾಕುವುದರಲ್ಲಿ ಬಾಳೆ ಗಿಡದ ಕಾಂಡ ಕೂಡ ಸಹಾಯ ಮಾಡುತ್ತದೆ. ಅಲ್ಲದೇ ತೂಕ ಇಳಿಕೆ ಮಾಡಬೇಕು ಎಂದುಕೊಂಡವರು ಕೂಡ ಇದನ್ನು ಬಳಕೆ ಮಾಡಬಹುದಾಗಿದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಇದರ ಜ್ಯೂಸ್ ಸೇವನೆ ಮಾಡಬಹುದಾಗಿದೆ. ಬಾಳೆ ಗಿಡದ ಕಾಂಡದ ರಸವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಹದಲ್ಲಿನ ವಿಷಕಾರಿ ಅಂಶವನ್ನು ತೆಗೆದು ಹಾಕುವುದರ ಜೊತೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಸಹ ಕಡಿಮೆ ಮಾಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ