logo
ಕನ್ನಡ ಸುದ್ದಿ  /  ಜೀವನಶೈಲಿ  /  ತೊಡೆಯ ಕೊಬ್ಬು ಕರಗಿಸಲು ಈ ಸುಲಭ ಯೋಗ ಭಂಗಿಗಳನ್ನು ಪ್ರಯತ್ನಿಸಿ

ತೊಡೆಯ ಕೊಬ್ಬು ಕರಗಿಸಲು ಈ ಸುಲಭ ಯೋಗ ಭಂಗಿಗಳನ್ನು ಪ್ರಯತ್ನಿಸಿ

Jayaraj HT Kannada

Jul 19, 2024 06:17 PM IST

google News

ತೊಡೆಯ ಕೊಬ್ಬು ಕರಗಿಸಲು ಈ ಸುಲಭ ಯೋಗ ಭಂಗಿಗಳನ್ನು ಪ್ರಯತ್ನಿಸಿ

    • ಇಂದು ಬಹುತೇಕ ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಜಿಮ್, ಡಯೆಟ್, ವ್ಯಾಯಾಮ ಇತ್ಯಾದಿಗಳತ್ತ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರಿಗೆ ತೊಡೆಯ ಬೊಜ್ಜನ್ನು ಕರಗಿಸುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿದೆ. ಇದಕ್ಕೆಂದೇ ಯೋಗಾಸನದಲ್ಲಿ ಕೆಲವು ಭಂಗಿಗಳಿವೆ. ಈ ಆಸನಗಳನ್ನು ಪ್ರಯತ್ನಿಸಿ, ತೊಡೆಯ ಕೊಬ್ಬನ್ನು ಕರಗಿಸಿ.
ತೊಡೆಯ ಕೊಬ್ಬು ಕರಗಿಸಲು ಈ ಸುಲಭ ಯೋಗ ಭಂಗಿಗಳನ್ನು ಪ್ರಯತ್ನಿಸಿ
ತೊಡೆಯ ಕೊಬ್ಬು ಕರಗಿಸಲು ಈ ಸುಲಭ ಯೋಗ ಭಂಗಿಗಳನ್ನು ಪ್ರಯತ್ನಿಸಿ (Pexel)

ಯೋಗಾಸನವು ಸುಮಾರು 5000 ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡಿತು. ಯೋಗವನ್ನು ಹಲವಾರು ಉಪನಿಷತ್ತುಗಳಲ್ಲಿ ಉಲ್ಲೇಖಿಸಲಾಗಿದೆ. ಯೋಗವು ಆಧ್ಯಾತ್ಮಿಕ ಶಿಸ್ತಾಗಿದ್ದು, ಇದು ಮನಸ್ಸು ಮತ್ತು ದೇಹದ ನಡುವೆ ಸಮತೋಲನ ತರುವಲ್ಲಿ ವ್ಯಕ್ತಿಗೆ ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಯೋಗವು ಬಹಳ ಜನಪ್ರಿಯವಾಗಿದ್ದು, ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿದೆ. ಜನಸಾಮಾನ್ಯರಿಂದ ಹಿಡಿದು ಹಾಲಿವುಡ್ ಸೆಲೆಬ್ರಿಟಿಗಳು ಕೂಡ ಯೋಗಾಭ್ಯಾಸ ಮಾಡುತ್ತಿದ್ದಾರೆ. ಇದು ದೇಹವನ್ನು ಫಿಟ್ ಆಗಿರಿಸುವಲ್ಲಿ ಸಹಕಾರಿಯಾಗಿದೆ.

ಯೋಗಾಸನದಿಂದ ಅನೇಕ ಪ್ರಯೋಜನಗಳಿದ್ದು, ದೇಹವನ್ನು ಫಿಟ್ ಆಗಿರಿಸಲು ಈ ಅಭ್ಯಾಸವನ್ನು ಮಾಡಲಾಗುತ್ತದೆ. ಹಲವಾರು ರೀತಿಯ ಯೋಗ ಭಂಗಿಗಳಿದ್ದು, ಯೋಗದ ಪ್ರತಿಯೊಂದು ಆಸನವು ದೇಹದಲ್ಲಿರುವ ವಿವಿಧ ಅಂಗಾಂಗಗಳಿಗೆ ಶಕ್ತಿಯನ್ನು ತುಂಬುತ್ತದೆ. ಅದರಲ್ಲಿ ತೊಡೆಯ ಕೊಬ್ಬನ್ನು ಕರಗಿಸಲು ಕೂಡ ಯೋಗ ಭಂಗಿಯಿದೆ. ತೊಡೆಯ ಕೊಬ್ಬನ್ನು ಕರಗಿಸಲು ಪ್ರಯತ್ನಿಸುತ್ತಿರುವವರು ಇಲ್ಲಿ ಕೆಳಗೆ ತಿಳಿಸಲಾಗಿರುವ ಯೋಗ ಭಂಗಿಗಳನ್ನು ಪ್ರಯತ್ನಿಸಬಹುದು. ಇದರಿಂದ ಸ್ನಾಯುಗಳು ಬಲಗೊಂಡು, ಕ್ಯಾಲರಿಗಳನ್ನು ಬರ್ನ್ ಮಾಡುವಲ್ಲಿ ಸಹಕಾರಿಯಾಗಿದೆ.

ತೊಡೆಯ ಕೊಬ್ಬನ್ನು ಕರಗಿಸುವ 9 ಯೋಗ ಭಂಗಿಗಳು ಇಲ್ಲಿವೆ

1. ವೀರಭದ್ರಾಸನ (ಯೋಧರ ಭಂಗಿ)

ಯೋಧರಂತೆ ಶಕ್ತಿ ಹಾಗೂ ಧೈರ್ಯವನ್ನು ನೀಡುವಂತಹ ಆಸನವೇ ವೀರಭದ್ರಾಸನ. ಈ ಭಂಗಿಯು ಮುಖ್ಯವಾಗಿ ಕೈಗಳು, ಭುಜ, ತೊಡೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಸಹಕಾರಿ. ದೇಹದಲ್ಲಿ ಸಮತೋಲನ ಸುಧಾರಿಸುವುದು ಮತ್ತು ಶಕ್ತಿ ಹೆಚ್ಚಿಸುವಲ್ಲಿ ಈ ಭಂಗಿ ಸಹಕಾರಿಯಾಗಿದೆ. ಸೋಂಬೇರಿಗಳ ಥರ ಇರುವವರಿಗೆ ಮತ್ತು ಕುಳಿತು ಕೆಲಸ ಮಾಡುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಹಾಗೆಯೇ ಇದು ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಂಗಿಯನ್ನು ಪ್ರಯತ್ನಿಸುವ ವಿಧಾನ

ನಿಂತಲ್ಲೇ ನಿಮ್ಮ ತೋಳುಗಳನ್ನು ನೆಲಕ್ಕೆ ಸಮಾನಾಂತರವಾಗಿ ವಿಸ್ತರಿಸಿ ಮತ್ತು ನಿಮ್ಮ ಒಂದು ಕಾಲನ್ನು ಮುಂಭಾಗಕ್ಕೆ ಮೊಣಕಾಲಿನ ಭಾಗದಿಂದ ಬಾಗಿಸಿ. ನಿಮ್ಮ ಹಿಂಬದಿಯನ್ನು ನೇರವಾಗಿ ಇರಿಸಿ. ಎರಡೂ ಕೈಗಳನ್ನೂ ಮಧ್ಯಕ್ಕೆ ನೇರವಾಗಿ ಇರಿಸಿ. ತಲೆಯನ್ನು ನೇರವಾಗಿಸಿಕೊಂಡು ಬಲ ಅಥವಾ ಮುಂಭಾಗಕ್ಕೆ ನೋಡಿ.

2. ನೌಕಾಸನ

ಈ ಭಂಗಿಯು ನೌಕೆ ಅಂದರೆ ದೋಣಿಯ ರೀತಿಯಲ್ಲಿ ದೇಹವನ್ನು ದಂಡಿಸುವಂತಹ ಆಸನವಾಗಿದೆ. ಮುಖ್ಯವಾಗಿ ಮಹಿಳೆಯರು ಈ ಆಸನವನ್ನು ಮಾಡುವುದರಿಂದ ಋತುಚಕ್ರದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸೊಂಟ ಮತ್ತು ತೊಡೆಯ ಸುತ್ತಲೂ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

ಈ ಭಂಗಿಯನ್ನು ಪ್ರಯತ್ನಿಸುವುದು ಹೇಗೆ?

ಈ ಭಂಗಿಯನ್ನು ಮಾಡಲು ನೆಲದ ಮೇಲೆ ಕುಳಿತುಕೊಂಡು, ಸ್ವಲ್ಪ ಹಿಂದಕ್ಕೆ ಬಾಗಿ. ನಿಮ್ಮ ಕಾಲುಗಳನ್ನು ಮೇಲಕ್ಕೆತ್ತಿ, ವಿ-ಆಕಾರವನ್ನು ರಚಿಸಿ. ನೆಲಕ್ಕೆ ಸಮಾನಾಂತರವಾಗಿ ನಿಮ್ಮ ತೋಳುಗಳನ್ನು ಮುಂದಕ್ಕೆ ವಿಸ್ತರಿಸಿ. ಬೆನ್ನುಮೂಳೆಯನ್ನು ನೇರವಾಗಿ ಇರಿಸಿ.

3. ಉತ್ಕಟಾಸನ (ಕುರ್ಚಿ ಭಂಗಿ)

ಕುರ್ಚಿಯ ಭಂಗಿ ಅಥವಾ ಸಂಸ್ಕೃತದಲ್ಲಿ ಇದನ್ನು ಉತ್ಕಟಾಸನ ಎಂದು ಕರೆಯಲಾಗುತ್ತದೆ. ಇದು ಕಾಲು ಬಲಪಡಿಸುವ ಭಂಗಿಯಾಗಿದ್ದು, ದೇಹದಲ್ಲಿ ತೀವ್ರತೆ ಮತ್ತು ಶಾಖವನ್ನು ನಿರ್ಮಿಸುತ್ತದೆ. ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ತೊಡೆ ಮತ್ತು ಚತುರ್ಭುಜಗಳನ್ನು ಬಲಪಡಿಸುತ್ತದೆ. ಈ ಭಂಗಿಯು ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ.

ಈ ಭಂಗಿಯನ್ನು ಪ್ರಯತ್ನಿಸುವುದು ಹೇಗೆ?

ಪಾದಗಳನ್ನು ಒಟ್ಟಿಗೆ ನಿಲ್ಲಿಸಿ, ಮೊಣಕಾಲುಗಳನ್ನು ಬಾಗಿಸಿ ಮತ್ತು ಕುರ್ಚಿಯಲ್ಲಿ ಕುಳಿತಂತೆ ಸೊಂಟವನ್ನು ತಗ್ಗಿಸಿ. ನಿಮ್ಮ ತೋಳುಗಳನ್ನು ಮೇಲಕ್ಕೆ ವಿಸ್ತರಿಸಿ. ಹೀಲ್ಸ್ ಮತ್ತು ಬೆನ್ನುಮೂಳೆಯಲ್ಲಿ ತೂಕವನ್ನು ನೇರವಾಗಿ ಇರಿಸಿ.

4. ತ್ರಿಕೋನ ಭಂಗಿ (ತ್ರಿಕೋನಾಸನ)

ತ್ರಿಕೋನ ಭಂಗಿಯು ತೊಡೆಗಳನ್ನು ಬಲಪಡಿಸುತ್ತದೆ ಮತ್ತು ಇದು ತೊಡೆಗಳ ಕೊಬ್ಬನ್ನು ಕರಗಿಸಿ, ತೆಳ್ಳಗೆ ಕಾಣುವಂತೆ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಬೆನ್ನುನೋವು ನಿವಾರಿಸುವಲ್ಲಿಯೂ ಉಪಯುಕ್ತವಾಗಿದೆ. ಇದು ಸೊಂಟ ಮತ್ತು ಎದೆಯ ಜಾಗದಲ್ಲಿನ ಸ್ನಾಯುಗಳನ್ನು ಬಲಪಡಿಸಲು ಸಹ ಸಹಕಾರಿಯಾಗಿದೆ.

ಹೀಗೆ ಮಾಡಿ

ಪಾದಗಳನ್ನು ಅಗಲಕ್ಕೆ ಚಾಚಿ ನೆಲಕ್ಕೆ ಸಮಾನಾಂತರವಾಗಿ ತೋಳುಗಳನ್ನು ಚಾಚಿ. ಆಳವಾಗಿ ಉಸಿರು ತೆಗೆದುಕೊಳ್ಳುತ್ತಾ ನಿಮ್ಮ ದೇಹವನ್ನು ಬಲಭಾಗಕ್ಕೆ ಮತ್ತು ಸೊಂಟದಿಂದ ಕೆಳಕ್ಕೆ ಬಗ್ಗಿಸಿ, ನಿಮ್ಮ ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲಕ್ಕೆ ತೆಗೆದುಕೊಳ್ಳಿ. ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ. ನಿಮ್ಮ ಬಲಗೈಯನ್ನು ನಿಮ್ಮ ಪಾದದ ಮೇಲೆ ಇರಿಸಿ, ನಿಮ್ಮ ಎಡಗೈಯನ್ನು ಮೇಲಕ್ಕೆ ಇರಿಸಿ.

5. ಸೇತು ಬಂಧಾಸನ

ಸೇತು ಎಂದರೆ ಸೇತುವೆ ಎಂದರ್ಥ. ಶರೀರವನ್ನು ಸೇತುವೆ ಅಥವಾ ಕಮಾನಿನಂತೆ ಬಾಗಿಸುವುದಕ್ಕೆ ಸೇತು ಬಂಧಾಸನ ಅಥವಾ ಸೇತುವೆ ಭಂಗಿ ಎಂದು ಕರೆಯಲಾಗುತ್ತದೆ. ಈ ಆಸನ ಮಾಡುವುದರಿಂದ ಬೆನ್ನಿನ ಭಾಗ ಹಿಗ್ಗಲ್ಪಡುವುದು. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು, ಉಸಿರಾಟದ ತೊಂದರೆ, ಥೈರಾಯ್ಡ್‌ ಸಮಸ್ಯೆ, ಗೊರಕೆ ಸಮಸ್ಯೆ, ಗೂನು ಬೆನ್ನು ಇತ್ಯಾದಿ ಸಮಸ್ಯೆ ಇರುವವರಿಗೆ ಈ ಆಸನ ಉತ್ತಮ.

ಈ ಅಭ್ಯಾಸವನ್ನು ಪ್ರಯತ್ನಿಸುವುದು ಹೇಗೆ

ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ಬಲ ಕೈನಿಂದ ಬಲಗಾಲಿನ ಮಣಿಕಟ್ಟನ್ನ್ನು ಹಾಗೂ ಎಡಗೈನಿಂದ ಎಡಗಾಲಿನ ಮಣಿಕಟ್ಟನ್ನು ಹಿಡಿಯಬೇಕು. ನಂತರ ನಿಧಾನವಾಗಿ ಸೊಂಟವನ್ನು ಮೇಲಕ್ಕೆ ಎತ್ತಬೇಕು.

6. ಏಕಪಾದ ರಾಜಕಪೋತಾಸನ (ಪಾರಿವಾಳದ ಭಂಗಿ)

ಪಾರಿವಾಳದ ಭಂಗಿ ಅಥವಾ ಏಕಪಾದ ರಾಜಕಪೋತಾಸನ ಭಂಗಿಯು ನಿಮ್ಮ ಮಂಡಿರಜ್ಜುಗಳು ಮತ್ತು ಒಳ ತೊಡೆಗಳನ್ನು ಹಿಗ್ಗಿಸಲು ಸಹಾಯಕವಾಗಿದೆ. ಈ ಭಂಗಿಯು ಕಾಲುಗಳಲ್ಲಿ ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬೆನ್ನು ನೋವನ್ನು ಕಡಿಮೆ ಮಾಡುವಲ್ಲಿ ಈ ಭಂಗಿ ಸಹಾಯಕವಾಗಿದೆ.

ಇದನ್ನು ಹೇಗೆ ನಿರ್ವಹಿಸುವುದು

ಕುಳಿತುಕೊಂಡು ಎಡಗಾಲನ್ನು ಸ್ವಲ್ಪ ಬೆಂಡ್ ಮಾಡುತ್ತಾ ಮುಂದೆ ಇಟ್ಟುಕೊಳ್ಳಿ. ನಂತರ ಬಲಗಾಲನ್ನು ಹಿಂದಕ್ಕೆ ಕೆಳಮುಖವಾಗಿ ಇರಿಸಿ. ಸೊಂಟದ ಭಾಗವನ್ನು ನೇರವಾಗಿ ಇರಿಸಿ. ಎರಡೂ ಕೈಗಳನ್ನು ಮುಂಭಾಗ ಇಟ್ಟು ಮೊಣಕೈಗಳನ್ನು ನೆಲಕ್ಕೊತ್ತಿ. ನಂತರ ಬೆನ್ನಿನ ಭಾಗ ನೇರ ಮಾಡಿಕೊಂಡು ಕೈಗಳನ್ನು ಕೆಳಕ್ಕೆ ಇರಿಸಿ.

7. ಉಷ್ಟ್ರಾಸನ (ಒಂಟೆ ಭಂಗಿ)

ಒಂಟೆ ಭಂಗಿ ಅಥವಾ ಉಷ್ಟ್ರಾಸನವು ತೊಡೆ, ಹೊಟ್ಟೆ ಮತ್ತು ಎದೆಯ ಮುಂಭಾಗವನ್ನು ವಿಸ್ತರಿಸುತ್ತದೆ. ಬೆನ್ನು ನೋವನ್ನು ನಿವಾರಿಸಲು ಈ ಆಸನ ಸಹಕಾರಿಯಾಗಿದೆ. ಈ ಭಂಗಿಯು ಒಂಟೆಯ ಗೂನು ಭಾಗವನ್ನು ಹೋಲುವುದರಿಂದ ಈ ಹೆಸರು ಬಂದಿದೆ.

ಇದನ್ನು ಅಭ್ಯಾಸ ಮಾಡುಲು ನೀವು ಚಾಪೆಯ ಮೇಲೆ ಮಂಡಿಯೂರಿ, ನಿಮ್ಮ ಬೆನ್ನನ್ನು ಕಮಾನುವಂತೆ ನಿಧಾನವಾಗಿ ಹಿಂದಕ್ಕೆ ಬಾಗಿಸಿ. ನಿಮ್ಮ ಕೈಗಳಿಂದ ಹಿಮ್ಮಡಿಗಳನ್ನು ಹಿಡಿದುಕೊಳ್ಳಿ. ನಿಮ್ಮ ತೊಡೆಗಳನ್ನು ನೆಲಕ್ಕೆ ಲಂಬವಾಗಿ ಇರಿಸಿ. ತಲೆಯನ್ನು ಹಿಂದಕ್ಕೆ ಬಾಗಿಸಿ.

8. ಮಲಾಸನ

ತೊಡೆಗಳು, ಕಾಲುಗಳು ಮತ್ತು ಕೆಳ ಬೆನ್ನನ್ನು ಬಲಪಡಿಸುವುದರ ಜೊತೆಗೆ, ಈ ಭಂಗಿಯು ಸೊಂಟದಲ್ಲಿ ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ.

ಮೊದಲು ಎರಡು ಕೈ ಜೋಡಿಸಿ ನಿಲ್ಲಬೇಕು. ನಂತರ ಕಾಲುಗಳನ್ನು ಅಗಲವಾಗಿ ಹರಡಿ ಮತ್ತು ಪಾದದ ಮೇಲೆ ಭಾರವನ್ನು ಇರಿಸಿ ಕುಳಿತುಕೊಳ್ಳಬೇಕು. ಈ ಆಸನದಲ್ಲಿ ಪಾದವನ್ನು ಯಾವುದೇ ರೀತಿಯಲ್ಲಿ ಚಲಿಸಬಾರದು. ಮೊಣಕಾಲುಗಳು ಸಾಧ್ಯವಾದಷ್ಟು ಅಗಲ ಮಾಡಬೇಕು. ಈ ಆಸನ ಮಾಡಲು ಕಷ್ಟವಾದರೆ ಇದ್ದರೆ ಗೋಡೆಯ ಬೆಂಬಲ ತೆಗೆದುಕೊಳ್ಳಬಹುದು.

9. ವೃಕ್ಷಾಸನ

ಮರದ ಭಂಗಿ ಅಥವಾ ವೃಕ್ಷಾಸನವು ನರಗಳ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗಿದೆ. ದೃಷ್ಟಿಯನ್ನು ಒಂದು ಕಡೆ ನೆಟ್ಟು, ದೇಹವನ್ನು ಬ್ಯಾಲೆನ್ಸ್ ಮಾಡುವುದರಿಂದ ನರಗಳು ಬಲವಾಗುತ್ತವೆ. ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಕಣ್ಣುಗಳ ದೃಷ್ಟಿಗೂ ತುಂಬಾ ಒಳ್ಳೆಯದು. ಹಾಗೆಯೇ ನಿಮ್ಮಲ್ಲಿ ತಾಳ್ಮೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಇದನ್ನು ಅಭ್ಯಾಸ ಮಾಡುವುದು ಹೇಗೆ?

ಮೊದಲಿಗೆ ಸಮಸ್ಥಿತಿಯಲ್ಲಿ ನಿಂತುಕೊಂಡು ಬಲಗಾಲನ್ನು ಮೇಲೆ ತೆಗೆದುಕೊಳ್ಳಿ. ಎಡ ತೊಡೆಯ ಮೂಲಕ್ಕೆ ಬಲ ಹಿಮ್ಮಡಿಯನ್ನು ತಾಗಿಸಿ. ಕಾಲ್ಬೆರಳುಗಳು ಕೆಳಮುಖವಾಗಿರಬೇಕು. ನಂತರ ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆತ್ತಿ, ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖವಾಗಿರಸಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ