logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಉಲ್ಬಣವಾಗಬಹುದು ಕೀಲುನೋವಿನ ಸಮಸ್ಯೆ; ಸಂಧಿವಾತ ನಿರ್ವಹಿಸಲು ಮಾನ್ಸೂನ್‌ನಲ್ಲಿ ಹೀಗಿರಲಿ ನಿಮ್ಮ ದಿನಚರಿ

ಮಳೆಗಾಲದಲ್ಲಿ ಉಲ್ಬಣವಾಗಬಹುದು ಕೀಲುನೋವಿನ ಸಮಸ್ಯೆ; ಸಂಧಿವಾತ ನಿರ್ವಹಿಸಲು ಮಾನ್ಸೂನ್‌ನಲ್ಲಿ ಹೀಗಿರಲಿ ನಿಮ್ಮ ದಿನಚರಿ

Reshma HT Kannada

Jul 02, 2024 04:12 PM IST

google News

ಮಾನ್ಸೂನ್‌ನಲ್ಲಿ ಹೆಚ್ಚಬಹುದು ಕೀಲುನೋವಿನ ಸಮಸ್ಯೆ; ಮಳೆಗಾಲದಲ್ಲಿ ಸಂಧಿವಾತದ ತೊಂದರೆ ನಿರ್ವಹಿಸಲು ಈ ಕ್ರಮ ಪಾಲಿಸಿ

    • ವಯಸ್ಸಾದಂತೆ ಮಾತ್ರವಲ್ಲ, ಮಳೆಗಾಲದಲ್ಲೂ ಸಂಧಿವಾತ ಸಮಸ್ಯೆ ಉಲ್ಬಣವಾಗುತ್ತದೆ. ಸಾಮಾನ್ಯವಾಗಿ ಇದು ನೋವು, ಬಿಗಿತ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಮಾನ್ಸೂನ್‌ ಸೀಸನ್‌ನಲ್ಲಿ ಸಂಧಿವಾತ ಸಮಸ್ಯೆ ಹೆಚ್ಚಲು ಕಾರಣವೇನು, ಇದರ ನಿವಾರಣೆಗೆ ಪರಿಹಾರಗಳೇನು ಎಂಬ ವಿವರ ಇಲ್ಲಿದೆ. (ಬರಹ: ಪ್ರಿಯಾಂಕ ಗೌಡ)
ಮಾನ್ಸೂನ್‌ನಲ್ಲಿ ಹೆಚ್ಚಬಹುದು ಕೀಲುನೋವಿನ ಸಮಸ್ಯೆ; ಮಳೆಗಾಲದಲ್ಲಿ ಸಂಧಿವಾತದ ತೊಂದರೆ ನಿರ್ವಹಿಸಲು ಈ ಕ್ರಮ ಪಾಲಿಸಿ
ಮಾನ್ಸೂನ್‌ನಲ್ಲಿ ಹೆಚ್ಚಬಹುದು ಕೀಲುನೋವಿನ ಸಮಸ್ಯೆ; ಮಳೆಗಾಲದಲ್ಲಿ ಸಂಧಿವಾತದ ತೊಂದರೆ ನಿರ್ವಹಿಸಲು ಈ ಕ್ರಮ ಪಾಲಿಸಿ

ಈ ವರ್ಷ ಮಾರ್ಚ್ ನಂತರ ಬಿಸಿಲಿನ ತೀವ್ರತೆ ಹೆಚ್ಚಿದ್ದ ಕಾರಣ ಜನರು ಮಳೆಗಾಗಿ ಹಾತೊರೆಯುತ್ತಿದ್ದರು. ಮಳೆಗಾಲ ಯಾವಾಗ ಬರುತ್ತೋ ಅಂತ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಬಹುತೇಕ ಮಂದಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರೆ, ಕೆಲವರು ಅದರಲ್ಲೂ ಸಂಧಿವಾತದಿಂದ ಬಳಲುತ್ತಿರುವವರು ಮಳೆಗಾಲ ಬರುತ್ತದೆ ಎಂದರೆ ಹೆದರುತ್ತಾರೆ. ಅದಕ್ಕೆ ಕಾರಣ ಕೀಲು ನೋವು ಹೆಚ್ಚಾಗುತ್ತದೆ ಎಂಬ ಭಯ. ಮಾನ್ಸೂನ್‌ನಲ್ಲಿ ಆರ್ದ್ರತೆ ಮಟ್ಟ ಹೆಚ್ಚಿರುವುದರಿಂದ, ಜನರು ವ್ಯಾಯಾಮ, ದೈಹಿಕ ಚಟುವಟಿಕೆಯನ್ನು ನಿಲ್ಲಿಸುತ್ತಾರೆ. ಹೀಗಾಗಿ ಮಳೆಗಾಲದಲ್ಲಿ ಸಂಧಿವಾತದಿಂದ ಉಂಟಾಗುವ ನೋವು ಉಲ್ಬಣಗೊಳ್ಳಬಹುದು.

ಸಂಧಿವಾತವು ಕೀಲುಗಳ ಉರಿಯೂತ, ನೋವನ್ನು ಉಂಟುಮಾಡುತ್ತದೆ. ಇದರಿಂದ ದೈನಂದಿನ ಚಟುವಟಿಕೆಗಳಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಮಳೆಗಾಲದ ವೇಳೆ ಹೆಚ್ಚಿನ ಜನರು ಸಂಧಿವಾತದ ನೋವನ್ನು ಅನುಭವಿಸುತ್ತಾರೆ. ಆದರೆ, ಮಳೆಗಾಲದ ಈ ಸಮಯದಲ್ಲಿ ಸಂಧಿವಾತ ನೋವನ್ನು ನಿರ್ವಹಿಸಲು ಸೂಕ್ತ ಮಾರ್ಗಗಳಂತೂ ಖಂಡಿತ ಇದೆ.

ಮಳೆಗಾಲದಲ್ಲಿ ಸಂಧಿವಾತ ಉಲ್ಬಣಗೊಳ್ಳಲು ಕಾರಣ?

ಮಳೆಗಾಲದ ಋತುವಿನಲ್ಲಿ ಹೆಚ್ಚಿನ ಆರ್ದ್ರತೆಯ ಕಾರಣ ದೈಹಿಕ ಅಂಗಾಂಶಗಳಲ್ಲಿ ಹೆಚ್ಚುವರಿ ದ್ರವದ ಶೇಖರಣೆಗೆ ಕಾರಣವಾಗುತ್ತದೆ. ಮುಖ್ಯವಾಗಿ ಕೀಲುಗಳ ಸುತ್ತಲೂ, ಇದು ಕೀಲುನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಳೆಗಾಲದಲ್ಲಿ ಬದಲಾದ ವಾತಾವರಣದಿಂದಾಗಿ ಉರಿಯೂತವನ್ನು ಉಂಟುಮಾಡಬಹುದು. ಇದರಿಂದಾಗಿ ಸಂಧಿವಾತ ಸಮಸ್ಯೆ ಉಂಟಾಗಬಹುದು. ಕೀಲುಗಳ ಚಲನಶೀಲತೆಯು ಈ ಸಮಯದಲ್ಲಿ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ನಿಶ್ಚಲತೆ, ಸ್ನಾಯು ದೌರ್ಬಲ್ಯ ಮತ್ತು ಜಂಟಿ ಅಸ್ವಸ್ಥತೆಗೆ ಕಾರಣವಾಗಬಹುದು.

ಮಳೆಗಾಲದಲ್ಲಿ ಸಂಧಿವಾತ ಸಮಸ್ಯೆ ನಿರ್ವಹಣೆಗೆ ಸಲಹೆ

ಒಳಾಂಗಣ ವ್ಯಾಯಾಮ ಮಾಡಿ: ಕೀಲು ನೋವನ್ನು ತಡೆಗಟ್ಟಲು ಪ್ರತಿದಿನ ವ್ಯಾಯಾಮ ಮಾಡಬೇಕು. ಈ ಸಮಸ್ಯೆಗಳನ್ನು ನಿವಾರಿಸಲು ಒಳಾಂಗಣ ಜಾಗದಲ್ಲೇ ವಾಕಿಂಗ್ ಮಾಡಿ ಅಥವಾ ಫಿಟ್‌ನೆಸ್ ತಜ್ಞರ ಮಾರ್ಗದರ್ಶನದಲ್ಲಿ ಜಿಮ್ ಅಥವಾ ಯೋಗ ಮಾಡಿ. ವ್ಯಾಯಾಮವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೂಕ್ತವಾದ ಬೂಟುಗಳನ್ನು ಧರಿಸಿ: ಅತಿಯಾದ ತೇವಾಂಶದಿಂದ ಕೀಲುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ. ಇದ್ಕಕಾಗಿ ನೀವು ಜಲನಿರೋಧಕ (ವಾಟರ್‌ ಪ್ರೂಫ್‌) ಬೂಟುಗಳನ್ನು ಆರಿಸುವ ಮೂಲಕ ಪಾದಗಳು ಒದ್ದೆಯಾಗದಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ಹೊರಗೆ ಹೋದಾಗ ತಪ್ಪದೇ ಕೊಡೆ ತೆಗೆದುಕೊಂಡು ಹೋಗಿ. ನೀವು ಒದ್ದೆಯಾಗದಂತೆ ನೋಡಿಕೊಳ್ಳಿ. ಒದ್ದೆಯಾದ ಪ್ರದೇಶಗಳಲ್ಲಿ ದೀರ್ಘಕಾಲ ನಿಲ್ಲದಿರಿ.

ಶಾಖ ಮತ್ತು ಶೀತ ಚಿಕಿತ್ಸೆ: ಬೆಚ್ಚಗಿನ ನೀರಿಗೆ ಬಟ್ಟೆಯನ್ನು ಅದ್ದಿ, ಅದರಿಂದ ಮೈಯನ್ನು ಒತ್ತಿಕೊಳ್ಳುವುದು, ಹೀಟಿಂಗ್ ಪ್ಯಾಡ್ ಬಳಸುವುದು (ಹೀಟಿಂಗ್ ಪ್ಯಾಡ್ ದೇಹದ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಚಿಕಿತ್ಸೆ ಪಡೆಯುತ್ತಿರುವ ಪ್ರದೇಶದ ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ, ಇದು ನೋವು ನಿವಾರಣೆಗೆ ಕೊಡುಗೆ ನೀಡುತ್ತದೆ) ಹಾಗೂ ಬೆಚ್ಚಗಿನ ಸ್ನಾನ ಮಾಡುವುದರಿಂದ ಸಂಧಿವಾತದ ನೋವಿಗೆ ಪರಿಹಾರ ಪಡೆಯಬಹುದು. ಇದಲ್ಲದೆ, ಐಸ್‌ಪ್ಯಾಕ್‌ಗಳನ್ನು ಬಳಸುವುದರಿಂದ ಕೀಲುಗಳ ಉರಿಯೂತ ಮತ್ತು ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೂ, ಸಂಧಿವಾತಕ್ಕೆ ಬಿಸಿ ಮತ್ತು ಶೀತ ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ. ನಿಮ್ಮ ಕೀಲುಗಳನ್ನು ಮೃದುವಾಗಿ ಮತ್ತು ಕನಿಷ್ಠ ಒತ್ತಡದಲ್ಲಿ ಮಸಾಜ್ ಮಾಡಿ. ಮಸಾಜ್ ಮಾಡುವ ಮುನ್ನ ನಿಮ್ಮ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಸಾಕಷ್ಟು ನೀರು ಕುಡಿಯುವುದು ಮತ್ತು ಆರೋಗ್ಯಕರ ಆಹಾರ ಸೇವಿಸುವುದು: ಮಳೆಗಾಲದಲ್ಲಿ ನಿರ್ಜಲೀಕರಣವು ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕೀಲುಗಳನ್ನು ನಯಗೊಳಿಸಲು ಸಾಕಷ್ಟು ನೀರು ಕುಡಿಯಿರಿ. ಉರಿಯೂತವನ್ನು ಕಡಿಮೆ ಮಾಡುವ ಮತ್ತು ಮೂಳೆ ಅಥವಾ ಗಂಟಿನ ಆರೋಗ್ಯವನ್ನು ಸುಧಾರಿಸುವ ಮೀನು, ವಾಲ್‌ನಟ್ಸ್ ಮತ್ತು ಅಗಸೆ ಬೀಜಗಳಂತಹ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ