logo
ಕನ್ನಡ ಸುದ್ದಿ  /  ಜೀವನಶೈಲಿ  /  ಒಗ್ಗರಣೆಯ ಘಮ ಹೆಚ್ಚಿಸುವ ಬೆಳ್ಳುಳ್ಳಿಯಿಂದ ದೇಹಕ್ಕಾಗುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ

ಒಗ್ಗರಣೆಯ ಘಮ ಹೆಚ್ಚಿಸುವ ಬೆಳ್ಳುಳ್ಳಿಯಿಂದ ದೇಹಕ್ಕಾಗುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ

Reshma HT Kannada

Apr 09, 2024 07:00 PM IST

google News

ಬೆಳ್ಳುಳ್ಳಿಯಿಂದ ದೇಹಕ್ಕಿರುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ

    • ಹಸಿ ಬೆಳ್ಳುಳ್ಳಿ ವಾಸನೆ ಹಲವರಿಗೆ ಹಿಡಿಸುವುದಿಲ್ಲ, ಬೆಳ್ಳುಳ್ಳಿ ಒಗ್ಗರಣೆ ಹಾಕಿದರಷ್ಟೇ ಪರಿಮಳ ಎಂದುಕೊಳ್ಳುತ್ತಾರೆ. ಆದರೆ ಹೀಗೆ ಮೂಗು ಮುರಿಯುವ ಬೆಳ್ಳುಳ್ಳಿ ವಾಸನೆಯಿಂದ ಸಿಗುವ ಪ್ರಯೋಜನಗಳನ್ನು ಕೇಳಿದರೆ ನೀವು ಇನ್ನೆಂದೂ ಅದನ್ನು ಕಡೆಗಣಿಸುವುದಿಲ್ಲ.
ಬೆಳ್ಳುಳ್ಳಿಯಿಂದ ದೇಹಕ್ಕಿರುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ
ಬೆಳ್ಳುಳ್ಳಿಯಿಂದ ದೇಹಕ್ಕಿರುವ ಪ್ರಯೋಜನ ಕೇಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ

ಬೆಳ್ಳುಳ್ಳಿ ವಾಸನೆ ಹೇಗಿರುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಗುಲಾಬಿ ಹೂವಿನಂತಹ ಸುವಾಸನೆಯಂತೂ ಬೆಳ್ಳುಳ್ಳಿಗಿಲ್ಲ. ಆದರೆ ಬೆಳ್ಳುಳ್ಳಿಯನ್ನು ನಾವು ಹೆಚ್ಚಾಗಿ ದಿನನಿತ್ಯ ಬಳಕೆ ಮಾಡುವ ಕಾರಣ ಇದರ ವಾಸನೆ ಘಾಟು ಎನಿಸಿದರೂ ಮೂಗಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಬೆಳ್ಳುಳ್ಳಿಯ ವಾಸನೆಯು ನಿಮಗೆ ಉತ್ತಮ ನಿದ್ರೆಯನ್ನು ತಂದುಕೊಡಬಲ್ಲದು ಎಂದರೆ ನೀವು ನಂಬುತ್ತೀರಾ..? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಸುಖ ನಿದ್ರೆ ಜಾರಬಹುದು..! ಬೆಳ್ಳುಳ್ಳಿಯಲ್ಲಿರುವ ವಿಟಮಿನ್ ಬಿ 1 ಅಂಶವು ನಿದ್ರೆಯ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಿಳಿದು ಬಂದಿದೆ.

ಸೂಕ್ಷ್ಮ ಜೀವಿಗಳ ನಾಶ

ಇದು ಮಾತ್ರವಲ್ಲ..! ಬೆಳ್ಳುಳ್ಳಿ ಹೊರಸೂಸುವ ಘಾಟು ವಾಸನೆಯು ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಮೂಲಕ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ನಾವು ಬೆಳ್ಳುಳ್ಳಿಯನ್ನು ಕತ್ತರಿಸಿದಾಗ ಅದು ಹೊರಸೂಸುವ ವಾಸನೆಯು ಬೆಳ್ಳುಳ್ಳಿ ಗಿಡದ ರಕ್ಷಣಾ ಕಾರ್ಯ ವಿಧಾನವಾಗಿದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ರಾಸಾಯನಿಕವು ಗಾಳಿಯೊಂದಿಗೆ ಸೇರಿ ಈ ವಾಸನೆಯನ್ನು ಹೊರ ಹಾಕುತ್ತದೆ. ಈ ವಾಸನೆಯು ಸೋಂಕಿಗೆ ಕಾರಣವಾಗಬಲ್ಲ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ .

ನೀವು ಮಲಗುವ ಹಾಸಿಗೆಯು ಜೇಡ, ನೊಣ, ಸೊಳ್ಳೆ ಸೇರಿದಂತೆ ಇತರೆ ಕೀಟಗಳಿಗೂ ವಾಸಸ್ಥಾನವಾಗಿರಬಾರದು. ಹೀಗಾಗಿ ಇವುಗಳಿಂದ ಪಾರಾಗಬೇಕು ಎಂದುಕೊಂಡಿದ್ದರೆ ಖಂಡಿತವಾಗಿ ನಿಮಗೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಿಂದ ಹೊರಬರುವ ವಾಸನೆಯು ಕರೆಯದೇ ಬರುವ ಈ ಅತಿಥಿಗಳನ್ನು ಹೊಡೆದೋಡಿಸುವ ಸಾಮರ್ಥ್ಯ ಹೊಂದಿದೆ. ಯಾವುದೇ ಕೀಟಗಳಿಗೆ ಬೆಳ್ಳುಳ್ಳಿಯ ಘಮವನ್ನು ತಡೆದುಕೊಳ್ಳುವಂಥಾ ಶಕ್ತಿ ಇರುವುದಿಲ್ಲ. ಈ ವಾಸನೆಯು ಕೀಟಗಳಿಗೆ ವಿಷಕಾರಿಯಾಗಿದೆ. ಹೀಗಾಗಿ ಮಲಗುವಾಗ ನಿಮ್ಮ ಹತ್ತಿರ ಬೆಳ್ಳುಳ್ಳಿ ಇರಿಸಿಕೊಳ್ಳುವುದು ಒಳ್ಳೆಯದು..!

ಸಾಕು ಪ್ರಾಣಿಗಳಿಂದ ದೂರವಿರಿಸಿ

ಆದರೆ ನೀವು ಗಮನಿಸಬೇಕಾದ ಇನ್ನೊಂದು ವಿಚಾರ ಏನೆಂದರೆ ಕೇವಲ ಕೀಟಗಳಿಗೆ ಮಾತ್ರವಲ್ಲ ನೀವು ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೂ ಬೆಳ್ಳುಳ್ಳಿ ವಾಸನೆ ಒಳ್ಳೆಯದಲ್ಲ. ನೀವು ಮಲಗುವ ಕೋಣೆಯಲ್ಲಿ ನಿಮ್ಮ ನಾಯಿ ಹಾಗೂ ಬೆಕ್ಕು ಕೂಡ ಇರುತ್ತದೆ ಎಂದರೆ ಬೆಳ್ಳುಳ್ಳಿ ಬಳಕೆ ಬೇಡ. ಸಾಕು ಪ್ರಾಣಿಗಳು ಇವುಗಳನ್ನು ತಿನ್ನುವುದರಿಂದಲೂ ಸಮಸ್ಯೆಗಳು ಎದುರಾಗುತ್ತದೆ.

ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಈ ಸಮಯದಲ್ಲಿ ಸೊಳ್ಳೆಯ ಕಾಟ ಹೆಚ್ಚಿರುತ್ತದೆ. ಹೀಗಾಗಿ ಸಂಜೆ ವೇಳೆಗೆ ನೀವು ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಇದನ್ನು ನಿಮ್ಮ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಬಚಾವಾಗಬಹುದಾಗಿದೆ.

ಕೆಲವೊಮ್ಮೆ ಚಿಕ್ಕದಾದ ಚೂಪಾದ ವಸ್ತು ಚರ್ಮದ ಒಳಗೆ ಸೇರಿ ಬಿಡುತ್ತದೆ. ಇದು ತೆಗೆದು ಹಾಕುವುದು ಸಹ ಕಷ್ಟದ ಕೆಲಸ. ಆದರೆ ಬೆಳ್ಳುಳ್ಳಿಯ ಸಹಾಯದಿಂದ ನೀವು ನಿಮ್ಮ ಚರ್ಮಕ್ಕೆ ಚುಚ್ಚಿಕೊಂಡಿರುವ ಚಿಕ್ಕದಾದ ಚೂಪಾದ ವಸ್ತುಗಳನ್ನು ತೆಗೆದು ಹಾಕಬಹುದಾಗಿದೆ. ಒಂದು ಬೆಳ್ಳುಳ್ಳಿಯನ್ನು ಕತ್ತರಿಸಿಕೊಳ್ಳಿ. ನಿಮ್ಮ ಚರ್ಮಕ್ಕೆ ಚೂಪಾದ ವಸ್ತು ಚುಚ್ಚಿಕೊಂಡ ಜಾಗಕ್ಕೆ ಲೇಪಿಸಿ. ಬಳಿಕ ಬ್ಯಾಂಡೇಜ್ ಸುತ್ತಿಕೊಳ್ಳಿ. ನಿಮಗೆ ಕೊಂಚ ಉರಿದ ಅನುಭವವಾಗಬಹುದು. ಆದರೆ ಕೆಲವು ಸಮಯದ ಬಳಿಕ ಇದು ಚೂಪಾದ ವಸ್ತುವನ್ನು ಚರ್ಮದಿಂದ ಹೊರಬರುವಂತೆ ಮಾಡಿರುತ್ತದೆ. ಇದರಿಂದ ನೀವು ಸುಲಭವಾಗಿ ಅದನ್ನು ತೆಗೆದು ಹಾಕಲು ಸಾಧ್ಯವಿದೆ.

ಕೂದಲಿಗೂ ಉತ್ತಮ

ಕೂದಲಿನ ಆರೈಕೆಯ ವಿಚಾರದಲ್ಲಿಯೂ ಬೆಳ್ಳುಳ್ಳಿ ಉತ್ತಮ ಆಯ್ಕೆಯಾಗಿದೆ. ನಿಮಗೆ ಅತಿಯಾಗಿ ಕೂದಲು ಉದುರುತ್ತಿದ್ದರೆ ನೀವು ಬೆಳ್ಳುಳ್ಳಿ ಬಳಕೆ ಮಾಡಬಹುದು. ದಿನಕ್ಕೆ ಮೂರು ಕೂದಲು ಉದುರುವುದು ಸಾಮನ್ಯ ಪ್ರಕ್ರಿಯೆಯಾಗಿದೆ. ಆದರೆ ಇದಕ್ಕಿಂತ ಜಾಸ್ತಿ ಕೂದಲು ಉದುರುವುದು ಒಳ್ಳೆಯದಲ್ಲ. ನೀವು ಸಾಮಾನ್ಯಕ್ಕಿಂತ ಜಾಸ್ತಿ ಕೂದಲನ್ನು ಕಳೆದುಕೊಳ್ಳುತ್ತಿದ್ದೀರಾ ಎಂಬು ಪರೀಕ್ಷಿಸಲು ನೀವು ಈ ರೀತಿ ಮಾಡಬೇಕು :

ಈ ಪ್ರಕ್ರಿಯೆ ಆರಂಭಿಸುವ ಮುನ್ನ ನಿಮ್ಮ ಕೂದಲು ಶುದ್ಧವಾಗಿರಬೇಕು. ಒಣಗಿರಬಾರದು ಹಾಗೂ ಯಾವುದೇ ರೀತಿಯಲ್ಲಿ ಸಿಕ್ಕು ಸಿಕ್ಕಾಗಿರಬಾರದು. ನಿಮ್ಮ ಕೂದಲಿನ ನಡುವೆ ಬೆರಳುಗಳನ್ನು ಹಾಕಿ ನೋಡಿ. ಈಗ ಎಷ್ಟು ಕೂದಲು ಉದುರಿತು ಎಂಬುದನ್ನು ನೋಡಿ. ಪ್ರತಿ ಬಾರಿ ನೀವು ಕೂದಲುಗಳ ನಡುವೆ ಬೆರಳುಗಳನ್ನು ಹಾಕಿ ಹೊರ ತೆಗೆದಾಗ ಮೂರಕ್ಕಿಂತ ಹೆಚ್ಚು ಕೂದಲು ನಿಮ್ಮ ಕೈಗೆ ಬರುತ್ತಿದ್ದರೆ ನೀವು ಬೆಳ್ಳುಳ್ಳಿ ಸಹಾಯವನ್ನು ಪಡೆಯುವ ಸಮಯ ಬಂದಿದೆ ಎಂದೇ ಅರ್ಥ. ಬೆಳ್ಳುಳ್ಳಿಯು ನಿಮ್ಮ ಕೂದಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಯಲ್ಲಿ ಹೆಚ್ಚೆಚ್ಚು ಕೂದಲು ಬೆಳೆಯಲು ಸಹಕಾರಿಯಾಗಿದೆ.

ಬೆಳ್ಳುಳ್ಳಿಯಲ್ಲಿರುವ ಕಾಲಜನ್ ಎಂಬ ಪ್ರೊಟೀನ್ ಅಂಶವು ನಿಮ್ಮ ಕೂದಲುಗಳನ್ನು ಬಲಪಡಿಸುತ್ತದೆ. ಹೆಚ್ಚೆಚ್ಚು ಕಾಲಜನ್‌ಗಳ ಉತ್ಪಾದನೆಯು ಕೂದಲಿನ ಬೆಳವಣಿಗೆಯನ್ನು ಇನ್ನಷ್ಟು ಉತ್ತೇಜಿಸುತ್ತದೆ. ಅಲ್ಲದೇ ಕೂದಲು ಬಿಳಿಯಾಗುವುದನ್ನು ತಡೆಯುವ ಸಾಮರ್ಥ್ಯ ಕೂಡ ಬೆಳ್ಳುಳ್ಳಿಗಿದೆ. ಆದರೆ ನೇರವಾಗಿ ಬೆಳ್ಳುಳ್ಳಿಯನ್ನು ಕೂದಲಿಗೆ ಹಾಕಬೇಡಿ. ಇದರ ಬದಲಾಗಿ ನೀವು ನಿಮ್ಮ ಆಹಾರದಲ್ಲಿ ಹೆಚ್ಚೆಚ್ಚು ಬೆಳ್ಳುಳ್ಳಿಯನ್ನು ಬಳಕೆ ಮಾಡುವ ಮೂಲಕ ಕೂದಲಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.

ಬೆಳ್ಳುಳ್ಳಿಯು ನೀವು ಸೇವಿಸಿದ ಆಹಾರವು ನಿಮ್ಮ ದೇಹಕ್ಕೆ ವಿಷವಾಗುವುದನ್ನು ತಡೆಯುತ್ತದೆ. ಸರಿಯಾಗಿ ಬೇಯಿಸದ ಅಥವಾ ನೀವು ಸೇವಿಸಿದ ಅಹಾರದಲ್ಲಿ ಸೂಕ್ಷ್ಮಾಣು ಜೀವಿಗಳಿದ್ದರೆ ಆಹಾರ ವಿಷವಾಗಿ ಮಾರ್ಪಾಡುತ್ತದೆ. ಇದನ್ನೇ ನಾವು ಫುಡ್ ಪಾಯ್ಸನಿಂಗ್ ಎಂದು ಕರೆಯುತ್ತೇವೆ. ಆದರೆ ಬೆಳ್ಳುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಗುಣಗಳು ದೇಹದಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವ ಮೂಲಕ ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡುತ್ತದೆ.

ಬಾಯಿಯಿಂದ ಬೆಳ್ಳುಳ್ಳಿ ವಾಸನೆ ಬರದಿರಲು ಹೀಗೆ ಮಾಡಿ

ನಿಮಗೆ ನೇರವಾಗಿ ಬೆಳ್ಳುಳ್ಳಿ ಸೇವನೆ ಮಾಡುವುದು ಹಿಂಸೆ ಎನಿಸಿದರೆ ಸೌತೆಕಾಯಿ, ಟೊಮೆಟೊ ಅಥವಾ ನೀವು ಇಷ್ಟಪಡುವ ಯಾವುದೇ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಸೇವನೆ ಮಾಡಬಹುದಾಗಿದೆ. ಬೆಳ್ಳುಳ್ಳಿ ಸೇವನೆಯಿಂದ ಬಾಯಿಯಿಂದ ಹೊರ ಸೂಸುವ ವಾಸನೆಗೆ ಏನು ಮಾಡುವುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಸಲಾಡ್ ತಯಾರಿಸುವಾಗ ಸ್ವಲ್ಪ ನಿಂಬೆ ರಸವನ್ನು ಹಿಂಡಿಕೊಳ್ಳಿ. ಬೆಳ್ಳುಳ್ಳಿ ಸೇವನೆ ಬಳಿಕ ಹೆಚ್ಚೆಚ್ಚು ನೀರು ಕುಡಿಯಿರಿ.

ಅಮೆರಿಕದಲ್ಲಿ ಬೆಳ್ಳುಳ್ಳಿಯ ಬಗ್ಗೆ ಒಂದು ಅಧ್ಯಯನವನ್ನು ನಡೆಸಲಾಗಿತ್ತು. ಒಂದು ಗುಂಪಿನ ಜನರಿಗೆ ನಿತ್ಯ ಬೆಳ್ಳುಳ್ಳಿ ಸೇವನೆ ಮಾಡುವಂತೆ ಹಾಗೂ ಇನ್ನೊಂದು ಗುಂಪಿನವರಿಗೆ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸದಂತೆ ಸಲಹೆ ನೀಡಲಾಯ್ತು. ಸುಮಾರು 12 ವಾರಗಳ ಬಳಿಕ ಸಮೀಕ್ಷೆ ನಡೆಸಿದಾಗ ದಿನನಿತ್ಯ ಬೆಳ್ಳುಳ್ಳಿ ಸೇವನೆ ಮಾಡುತ್ತಿದವರು ಬೆಳ್ಳುಳ್ಳಿ ಸೇವನೆ ಮಾಡದೇ ಇದ್ದವರಿಗಿಂತ ಶೇ 63 ಕಡಿಮೆ ಶೀತ ಲಕ್ಷಣಗಳನ್ನು ಹೊಂದಿದ್ದರು. ಮೊದಲೆಲ್ಲ ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂದು ಹೇಳುತ್ತಿದ್ದರು. ಇನ್ಮೇಲೆ ನಾವು ದಿನಕ್ಕೊಂದು ಬೆಳ್ಳುಳ್ಳಿ ಸೇವಿಸಿ ಆಸ್ಪತ್ರೆ ಭೇಟಿಯಿಂದ ಪಾರಾಗಬಹುದು ಎಂದು ಹೇಳಬಹುದಲ್ಲವೇ..?

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ