ಚಿಕ್ಕದಾದರೂ ಅಗಾಧ ಪೋಷಕಾಂಶಗಳ ಆಗರ ಕುಂಬಳಕಾಯಿ ಬೀಜ; ಇದರ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು
Aug 12, 2024 06:30 AM IST
ಚಿಕ್ಕ ಬೀಜವಾದರೂ ಅಗಾಧ ಪೋಷಕಾಂಶ ಹೊಂದಿದೆ ಕುಂಬಳಕಾಯಿ ಬೀಜಗಳು; ನಿಮ್ಮ ಡಯಟ್‌ನಲ್ಲಿ ಹೀಗೆ ಸುಲಭವಾಗಿ ಸೇರಿಸಿಕೊಳ್ಳಿ
- Pumpkin Seeds Benefits: ಕುಂಬಳಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಒಳ್ಳೆಯ ನಿದ್ದೆಗೂ ಸಹಕಾರಿಯಾಗಿದೆ. ಈ ಚಿಕ್ಕ ಬೀಜಗಳನ್ನು ನಿಮ್ಮ ನಿತ್ಯದ ಡಯಟ್‌ನಲ್ಲಿ ಈ ರೀತಿಯಾಗಿ ಸೇರಿಸಿಕೊಳ್ಳುವುದರ ಮೂಲಕ ಆರೋಗ್ಯದ ಅದ್ಭುತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ (ಬರಹ: ಅರ್ಚನಾ ವಿ. ಭಟ್)
ನೀವು ಚಿಕ್ಕವರಿರುವಾಗ ಕುಂಬಳಕಾಯಿಯ ಬೀಜವನ್ನು ಸುಲಿದು ತಿಂದ ನೆನಪಿರಬಹುದು. ಆ ಚಿಕ್ಕ ಬೀಜಗಳು ಅದೆಷ್ಟು ರುಚಿಯಾಗಿರುತ್ತಿದ್ದವು ಅಲ್ಲವೇ? ಶಾಲೆಯಿಂದ ಮನೆಗೆ ಮರಳಿದ ನಂತರ ಅಥವಾ ರಜಾ ದಿನಗಳಲ್ಲಿ ಒಣಗಿಸಿದ ಬೀಜವನ್ನು ಸುಲಿದು ತಿನ್ನುವುದು ಬಹಳ ಸಂತೋಷವನ್ನು ಕೊಡುತ್ತಿತ್ತು. ಕುಂಬಳಕಾಯಿಯ ಆ ಚಿಕ್ಕ ಬೀಜದಲ್ಲಿ ಅಗಾಧ ಪೋಷಕಾಂಶಗಳು ಅಡಗಿವೆ. ಆರೋಗ್ಯಕ್ಕೆ ಉತ್ತಮವಾದ ಆ (Pumpkin Seeds) ಬೀಜಗಳು ಇಂದು ರೆಡಿ ಟು ಈಟ್ ಪ್ಯಾಕೆಟ್‌ಗಳಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುತ್ತಿವೆ. ಹುರಿದ ಬೀಜಗಳನ್ನು ಸ್ನಾಕ್ಸ್, ಸಲಾಡ್, ಸ್ಮೂಥಿ, ಲಡ್ಡು, ಭರ್ಫಿ ಮುಂತಾದವುಗಳಲ್ಲಿ ಕಾಣಬಹುದಾಗಿದೆ. ಅತ್ಯಂತ ರುಚಿಯಾದ ಕುಂಬಳಕಾಯಿ ಬೀಜಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಸೂಕ್ಷ್ಮ ಪೋಷಕಾಂಶಗಳಿರುವ ಈ ಬೀಜಗಳು ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸಬಲ್ಲವು, ಹೃದಯದ ಆರೋಗ್ಯ ಕಾಪಾಡಬಲ್ಲದು. ಪಂಪ್ಕಿನ್ ಸೀಡ್ಸ್ ಎಂದೂ ಕರೆಯಲ್ಪಡುವ ಕುಂಬಳಕಾಯಿ ಬೀಜಗಳು ಮೆಗ್ನೇಸಿಯಂ, ಝಿಂಕ್, ಆಂಟಿಒಕ್ಸಿಡೆಂಟ್ ಮತ್ತು ಇತರ ಅಗತ್ಯ ಜೀವಸತ್ವ ಹಾಗೂ ಖನಿಜಗಳಿಂದ ಸಮೃದ್ಧವಾಗಿದೆ. ಆದರೆ ಅವುಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ ಮಿತವಾಗಿ ಸೇವಿಸಬೇಕು. ಕುಂಬಳಕಾಯಿ ಬೀಜಗಳು ಉರಿಯೂತ ನಿವಾರಕವಾಗಿದೆ. ಅದು ಲಿವರ್, ಮೂತ್ರಕೋಶ, ಕರುಳು ಮತ್ತು ಕೀಲುಗಳ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜದ ಪ್ರಯೋಜನಗಳು
1) ಪೋಷಕಾಂಶಗಳ ಆಗರ: ಕುಂಬಳಕಾಯಿ ಬೀಜವು ಮ್ಯಾಗ್ನೇಸಿಯಂ, ಕಬ್ಬಿಣ, ಝಿಂಕ್ ಮತ್ತು ತಾಮ್ರಗಳಂತಹ ದೇಹಕ್ಕೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಹೊಂದಿದೆ.
2) ಹೃದಯದ ಆರೋಗ್ಯ: ಮ್ಯಾಗ್ನೇಸಿಯಂನ ಪ್ರಮಾಣವು ಅಧಿಕವಾಗಿರುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಕುಂಬಳಕಾಯಿ ಬೀಜವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕಾರ್ಡಿಯೋವೆಸ್ಕ್ಯುಲರ್ ಖಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
3) ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಕುಂಬಳಕಾಯಿ ಬೀಜಗಳಲ್ಲಿರುವ ಝಿಂಕ್ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ದೇಹಕ್ಕೆ ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ.
4) ಉರಿಯೂತ ನಿವಾರಕ: ಆಂಟಿಒಕ್ಸಿಡೆಂಟ್‌ನಿಂದ ಕೂಡಿರುವ ಕುಂಬಳಕಾಯಿ ಬೀಜವು ಉರಿಯೂತ ನಿವಾರಕವೂ ಆಗಿದೆ.
5) ಪ್ರೊಸ್ಟೇಟ್ ಆರೋಗ್ಯ ಕಾಪಾಡುತ್ತದೆ: ಅಧ್ಯಯನಗಳ ಪ್ರಕಾರ ಕುಂಬಳಕಾಯಿ ಬೀಜದಲ್ಲಿರುವ ಪೋಷಕಾಂಶಗಳ ಸಂಯುಕ್ತಗಳು ಪ್ರೊಸ್ಟೇಟ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಇದು ಪ್ರೊಸ್ಟೇಟ್‌ನ ಹಿಗ್ಗುವಿಕೆಯನ್ನು ತಡೆಯಲು ಸಹಾಯಮಾಡುತ್ತದೆ ಎಂದು ಸೂಚಿಸಿದೆ.
6) ನಿದ್ರೆಗೆ ನೆರವು: ಕುಂಬಳಕಾಯಿ ಬೀಜದಲ್ಲಿರುವ ಟ್ರಿಪ್ಟೊಫಾನ್ ಒಂದು ಅಮಿನೋ ಆಸಿಡ್ ಆಗಿದೆ. ಇದು ಉತ್ತಮ ನಿದ್ರೆ ಮತ್ತು ಮೂಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
7) ನಾರಿನಾಂಶದಿಂದ ಕೂಡಿದೆ: ಹೆಚ್ಚಿನ ನಾರಿನಾಂಶದಿಂದ ಕೂಡಿರುವ ಈ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ ಮತ್ತು ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
8) ಆರೋಗ್ಯಕರ ಕೊಬ್ಬು: ಕುಂಬಳಕಾಯಿ ಬೀಜವು ಫ್ಯಾಟಿ ಆಸಿಡ್‌ಗಳಂತಹ ಆರೋಗ್ಯಕರ ಕೊಬ್ಬಿನ ಮೂಲವಾಗಿದೆ. ಅದು ಮಿದುಳು ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
9) ಮೂಡ್ ನಿಯಂತ್ರಿಸುತ್ತದೆ: ಕುಂಬಳ ಕಾಯಿ ಬೀಜದಲ್ಲಿ ಟ್ರಿಪ್ಟೊಫಾನ್ ಇರುವುದರಿಂದ ಅದು ಮೂಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸಿರೊಟಿನಿನ್ ಅನ್ನು ಉತ್ಪತ್ತಿ ಮಾಡುವ ಅಮಿನೊ ಆಸಿಡ್ ಆಗಿದೆ. ಸಿರೊಟಿನಿನ್ ಮೂಡ್, ಒತ್ತಡಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
10) ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಿಸುತ್ತದೆ: ಕೆಲವು ಅಧ್ಯಯನಗಳ ಪ್ರಕಾರ ಕುಂಬಳಕಾಯಿ ಬೀಜಗಳಲ್ಲಿನ ಸಂಯುಕ್ತಗಳು ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡುತ್ತವೆ. ಹಾಗಾಗಿ ಅದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
11) ಋತುಬಂಧ: ಕುಂಬಳಕಾಯಿ ಬೀಜದಲ್ಲಿರುವ ಫೈಟೊಸ್ಟ್ರೊಜೆನ್‌ಗಳು ಋತುಬಂಧದ ಸಮಯದಲ್ಲಿ ಕಾಣಿಸಿಕೊಳ್ಳುವ ನೋವು ಮುಂತಾದ ಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
12) ಕರುಳಿನಲ್ಲಿರುವ ಪರಾವಲಂಬಿ ಜೀವಿಗಳನ್ನು ಹೊರ ಹಾಕುತ್ತದೆ: ಇದು ಕರುಳಿನಲ್ಲಿರುವ ಪರವಾಲಂಬಿ ಜೀವಿಗಳನ್ನು ಹೊರಹಾಕಲು ಅವಶ್ಯಕವಿರುವ ಸಂಯುಕ್ತಗಳನ್ನು ಹೊಂದಿದೆ. ಅದ್ದರಿಂದ ಕರುಳಿನ ಆರೋಗ್ಯ ಕಾಪಾಡಲು ಇದು ಉತ್ತಮವಾಗಿದೆ.
13) ಮೂಳೆ ಮತ್ತು ಚರ್ಮ: ಮೆಗ್ನೇಸಿಯಂ, ಫಾಸ್ಪರಸ್ ಹಾಗೂ ಇತರ ಖನಿಜಗಳನ್ನು ಹೊಂದಿರುವ ಈ ಬೀಜವು ಮೂಳೆಯನ್ನು ಗಟ್ಟಿಮುಟ್ಟಾಗಿಸುತ್ತದೆ. ಇದರಲ್ಲಿರವು ಆಂಟಿಒಕ್ಸಿಡೆಂಟ್, ವಿಟಮಿನ್ ಇ ಗಳು ಚರ್ಮದ ರಕ್ಷಣೆ ಮಾಡುತ್ತವೆ.
ಕುಂಬಳಕಾಯಿ ಬೀಜಗಳನ್ನು ಆಹಾರದಲ್ಲಿ ಸೇರಿಸುವುದು ಹೇಗೆ?
ಕುಂಬಳಕಾಯಿ ಬೀಜಗಳು ಪೌಷ್ಟಿಕ ಆಹಾರವಾಗಿರುವುದರಿಂದ ಅವುಗಳನ್ನು ನಿಮ್ಮ ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳಬಹುದು. ಅದು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುವುದರಿಂದ ಅವುಗಳನ್ನು ಈ ರೀತಿಯಾಗಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
1) ಕುಂಬಳಕಾಯಿ ಬೀಜಗಳನ್ನು ನೀವು ಇತರ ಡ್ರೈ ನಟ್‌ಗಳಂತೆ ಹಾಗೆಯೇ ನೇರವಾಗಿ ತಿನ್ನಬಹುದು. ಗರಿಗರಿಯಾಗಿ ಟೇಸ್ಟೀಯಾಗಿರುವ ಬೀಜಗಳು ಒಳ್ಳೆಯ ಸ್ನಾಕ್ಸ್ ಕೂಡಾ ಹೌದು.
2) ಸ್ವಲ್ಪ ಆಲೀವ್ ಎಣ್ಣೆಯಲ್ಲಿ ಕುಂಬಳಕಾಯಿ ಬೀಜಗಳನ್ನು ಹುರಿದು ಅದನ್ನು ನಿಮ್ಮ ಸಲಾಡ್‌ಗಳಲ್ಲಿ ಸೇರಿಸಿ ತಿನ್ನಬಹುದು.
3) ಉತ್ತಮ ಪೋಷಕಾಂಶಗಳಿಂದ ಕೂಡಿರುವ ಕುಂಬಳಕಾಯಿ ಬೀಜಗಳನ್ನು ಮೊಸರು ಅಥವಾ ಓಟ್‌ಮೀಲ್‌ಗಳಲ್ಲಿ ಸೇರಿಸಿ ಸವಿಯಬಹುದು.
4) ನಿಮ್ಮ ಸ್ಮೂಥಿಗೆ ಒಣ ಬೀಜಗಳನ್ನು ಸೇರಿಸಿ ರುಚಿ ಹಾಗೂ ಪೋಷಕಾಂಶಗಳನ್ನು ಹೆಚ್ಚಿಸಿ ತಿನ್ನಬಹುದು.
5) ಬ್ರೆಡ್, ಮಫಿನ್, ಗ್ರಾನೊಲಾ ಬಾರ್ ಗಳಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಿ ಬೇಕ್ ಮಾಡುವುದರಿಂದ ಅವುಗಳ ರುಚಿ ಹೆಚ್ಚಿಸಬಹುದು.
6) ಸಲಾಡ್‌ಗಳನ್ನು ಅಲಂಕರಿಸುವುದರ ಜೊತೆಗೆ ಅದರ ರುಚಿ ಮತ್ತು ಪೌಷ್ಟಿಕಾಂಶವನ್ನು ಹೆಚ್ಚಿಸಲು ಕುಂಬಳಕಾಯಿ ಬೀಜಗಳನ್ನು ಬಳಸಬಹುದು.
7) ಲಡ್ಡು, ಭರ್ಫಿಗಳನ್ನು ಆರೋಗ್ಯಕರ ಸಿಹಿ ತಿನಿಸಾಗಿಸಲು ಕುಂಬಳಕಾಯಿ ಬೀಜಗಳನ್ನು ಅವುಗಳಲ್ಲಿ ಸೇರಿಸಿಕೊಳ್ಳಿ.
8) ಸೌತೆಕಾಯಿ ಮತ್ತು ಕುಂಬಳಕಾಯಿ ಬೀಜ ಸೇರಿಸಿ ಮಾಡಿದ ರಾಯಿತಾ ಅಥವಾ ಮೊಸರು ಬಜ್ಜಿ ನಿಮ್ಮ ಊಟದ ರುಚಿಯನ್ನು ಹೆಚ್ಚಿಸುವುದು ಖಂಡಿತ.
9) ಗುಜರಾತಿ ಪಾಕವಿಧಾನವಾದ ಕಾಕ್ರಾಗಳಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಳ್ಳಬಹುದು. ಕಾಕ್ರಾ ತಿನ್ನುವಾಗ ಮಧ್ಯದಲ್ಲಿ ಸಿಗುವ ಬೀಜಗಳು ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
10) ನೀವು ಭೇಲ್ ಪುರಿ, ಶೇವ್ ಪುರಿಗಳ ಪ್ರಿಯರಾಗಿದ್ದರೆ ಅವುಗಳನ್ನು ತಯಾರಿಸುವಾಗ ಈರುಳ್ಳಿ, ಟೊಮೆಟೊ, ಶೇಂಗಾ, ಸೌತೇಕಾಯಿ, ಮಖಾನಾ, ಮತ್ತು ಮಂಡಕ್ಕಿಯ ಜೊತೆಗೆ ಈ ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಳ್ಳಬಹುದು. ಆಗ ನಿಮ್ಮ ಅಡುಗೆಯ ರುಚಿ ದುಪ್ಪಟ್ಟಾಗುತ್ತದೆ.
ನಿಮ್ಮ ನಿತ್ಯದ ಯಾವುದಾದರೂ ಒಂದು ಅಡುಗೆಯಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಳ್ಳಿ. ರುಚಿ ರುಚಿಯಾಗಿ ತಿನ್ನುವುದರ ಜೊತೆಗೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.