ಬಾದಾಮಿ ರಾಗಿ ಉಂಡೆ ಆರೋಗ್ಯಕ್ಕೆ ಒಳ್ಳೆಯದು: ಮಕ್ಕಳು ಇಷ್ಟಪಟ್ಟು ತಿನ್ನುವ ಈ ರೆಸಿಪಿ ಮಾಡುವ ವಿಧಾನ ಸರಳ
Sep 30, 2024 09:26 AM IST
ಬಾದಾಮಿ ರಾಗಿ ಉಂಡೆ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ
- ಮಕ್ಕಳಿಂದ ವೃದ್ಧವರಿಗೆ ಎಲ್ಲರಿಗೂ ಇಷ್ಟವಾಗುವ ಬಾದಾಮಿ ರಾಗಿ ಉಂಡೆ ಆರೋಗ್ಯಕ್ಕೆ ಒಳ್ಳೆಯದು. ಈ ಉಂಡೆಯನ್ನು ಮಾಡುವುದು ಹೇಗೆ, ಅದಕ್ಕೆ ಬೇಕಾಗಿರುವ ಪದಾರ್ಥಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನೀವು ಕೂಡ ಮನೆಯಲ್ಲಿ ಸುಲಭವಾಗಿ ರೆಸಿಪಿಯನ್ನು ಮಾಡಬಹುದು.
ಸಾಮಾನ್ಯವಾಗಿ ಮಕ್ಕಳಿಗೆ ಊಟ ತಿನ್ನಿಸುವುದು ಅಥವಾ ತಿನ್ನುವಂತೆ ಮಾಡುವುದು ತಾಯಿಗೆ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಆದರೆ ಏನಾದರೂ ವೆರೈಟಿ ರೆಸಿಪಿಯನ್ನು ಮಾಡಿದಾಗ ಮಕ್ಕಳು ಅದನ್ನು ಇಷ್ಟಪಡದೆ ಇರಲಾರರು. ಹೀಗಾಗಿ ನೀವೇನಾದರೂ ವೆರೈಟಿ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಸುಲಭವಾಗಿ ಬಾದಾಮಿ ರಾಗಿ ಉಂಡೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಇದು ಆರೋಗ್ಯಕ್ಕೆ ಒಳ್ಳೆಯದು, ಬಾದಾಮಿ ರಾಗಿ ಉಂಡೆ ಮಾಡಲು ಅಡುಗೆ ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳೇ ಸಾಕು. ಹೀಗಾಗಿ ಹೆಚ್ಚು ಖರ್ಚು ಆಗುವುದಿಲ್ಲ. ಬಾದಾಮಿ ರಾಗಿ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು ಹಾಗೂ ರೆಸಿಪಿ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಬಾದಾಮಿ ರಾಗಿ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು
- ಕಾಲ್ ಕಪ್ ಬಾದಾಮಿ
- 1 ಕಪ್ ರಾಗಿ ಪೌಂಡರ್
- ಅರ್ಧ ಕಪ್ ಬೆಲ್ಲ
- ಕಾಲ್ ಕಪ್ ನೀರು
- ಅರ್ಧ ಕಪ್ ತುಪ್ಪ
- ಸ್ವಲ್ಪ ಏಲಕ್ಕಿ ಪುಡಿ
- ಅರ್ಧ ಕಪ್ ಬಿಡಿಸಿಟ್ಟ ಗೋಡಂಬಿ, ದ್ರಾಕ್ಷಿ
- ಸ್ವಲ್ಪ ಕೊಬ್ಬರಿ ತುರಿ
- ಶುಂಠಿ ಪುಡಿ
ಬಾದಾಮಿ ರಾಗಿ ಉಂಡೆ ಮಾಡುವ ವಿಧಾನ
ಮೊದಲು ಬಾದಾಮಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಅದನ್ನು ತಣ್ಣಗಾಗಲು ಬಿಡಿ, ಇದಾದ ಬಳಿಕ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ತವಾವನ್ನ ಸ್ಟೌವ್ ಮೇಲೆ ಇಟ್ಟು ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಬೇಕು, ಅದಕ್ಕೆ 1 ಕಪ್ ರಾಗಿ ಪೌಡರ್ ಹಾಕಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿದುಕೊಳ್ಳಬೇಕು. ಹಸಿ ವಾಸನೆ ಹೋಗಿ ಒಳ್ಳೆ ಪರಿಮಳ ಬರುವವರಿಗೆ ಹುರಿಯಬೇಕು. ನಂತರ ತಣ್ಣಗಾಗಲು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ಮಿಕ್ಸಿಗೆ ಹಾಕಿರುವ ಬಾದಾಮಿ ಪೌಡರ್ ಮತ್ತು ಹುರಿದು ಇಟ್ಟುಕೊಂಡಿರುವ ರಾಗಿ ಪೌಂಡರ್ ಅನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ.
ಮತ್ತೊಂದು ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟುಕೊಂಡು ಅದಕ್ಕೆ ಅರ್ಧ ಕಪ್ ಬೆಲ್ಲವನ್ನು ಹಾಕಿ ಸ್ವಲ್ಪ ನೀರು ಹಾಕಿ ಶುಂಠಿ ಪುಡಿ ಹಾಕಬೇಕು, ಬೆಲ್ಲ ನೀರಿನಲ್ಲಿ ಚೆನ್ನಾಗಿ ಕರಗಬೇಕು. ಪಾಕ ಬರುವವರಿಗೆ ಇಡಬೇಡ, ಬೆಲ್ಲ ಕರಗಿದ ನಂತರ ಕೆಳಕ್ಕೆ ಇಳಿಸಿಕೊಳ್ಳಬೇಕು. ಮತ್ತೆ ಒಗ್ಗರಣೆ ಪಾತ್ರೆಯಲ್ಲಿ ಒಂದು ಚಮಚ ತುಪ್ಪ ಹಾಕಿಕೊಂಡು ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನಂತರ ಬಾದಾಮಿ ಪೌಡರ್, ರಾಗಿ ಪೌಂಡರ್‌ಗೆ ಹುರಿದ ಗೋಡಂಬಿ, ಒಣದ್ರಾಕ್ಷಿಯನ್ನು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬೆಲ್ಲದ ಪಾಕ ನೀರನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಆದ ನಂತರ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಬೇಕು. ನಿಮಗೆ ಇಷ್ಟವಾಗುವ ಸೈಜ್ ಬಾದಾಮಿ ರಾಗಿ ಉಂಡೆಯನ್ನು ಮಾಡಿಕೊಳ್ಳಿ. ಉಂಡೆಗಳು ಆದ ನಂತರ ಒಂದು ಪ್ಲೇಟ್‌ಗೆ ಹಾಕಿಕೊಂಡು ಅದರ ಮೇಲೆ ಸ್ವಲ್ಪ ಕೊಬ್ಬರಿ ತುರಿಯನ್ನು ಹಾಕಿ. ಬಾದಾಮಿ ರಾಗಿ ಉಂಡೆ ಸಿದ್ಧವಾಗುತ್ತದೆ. ಇದನ್ನು ಎರಡು ವಾರಗಳ ವರೆಗೆ ಇಟ್ಟುಕೊಂಡು ನಿಮ್ಮ ಮಕ್ಕಳಿಗೆ ತಿಂಡಿಯಾಗಿ ನೀಡಬಹುದು. ಎಲ್ಲರೂ ಇದನ್ನು ತಿನ್ನಬಹುದು. ಆರೋಗ್ಯಕ್ಕೂ ಒಳ್ಳೆಯದು.