ಮೈದಾ ಬಳಸದೆ ತಯಾರಿಸಿ ಟೇಸ್ಟಿ ಪಿಜ್ಜಾ ಪರೋಟ: ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್ ಆಹಾರ
Nov 06, 2024 01:28 PM IST
ಮೈದಾ ಬಳಸದೆ ತಯಾರಿಸಿ ಟೇಸ್ಟಿ ಪಿಜ್ಜಾ ಪರೋಟ: ಮಕ್ಕಳ ಲಂಚ್ ಬಾಕ್ಸ್‌ಗೂ ಬೆಸ್ಟ್ ಆಹಾರ
- ಪಿಜ್ಜಾ ಅಂದ್ರೆ ಮಕ್ಕಳು ಬಹಳ ಇಷ್ಟಪಟ್ಟು ತಿಂತಾರೆ. ಮೈದಾದಿಂದ ತಯಾರಿಸಲಾಗುವ ಈ ಆಹಾರ ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಆದರೆ, ಮೈದಾ ಬಳಸದೆ ಪಿಜ್ಜಾ ಪರೋಟವನ್ನು ತಯಾರಿಸಬಹುದು. ಮಕ್ಕಳ ಊಟದ ಬಾಕ್ಸ್‌ಗೆ ಏನು ಮಾಡುವುದು ಎಂದು ಯೋಚನೆಯಲ್ಲಿದ್ದರೆ ಈ ರೀತಿ ವಿಭಿನ್ನವಾದ ಖಾದ್ಯವನ್ನು ತಯಾರಿಸಬಹುದು.
ಪಿಜ್ಜಾ ಅಂದ್ರೆ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಮಕ್ಕಳಂತೂ ಬಹಳ ಇಷ್ಟಪಟ್ಟು ತಿಂತಾರೆ. ಇದನ್ನು ಮೈದಾ ಹಿಟ್ಟು ಮತ್ತು ಅತಿಯಾದ ಚೀಸ್‌ನಂತಹ ಅನಾರೋಗ್ಯಕರ ಆಹಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಆದರೆ, ಕೆಲವು ಟ್ವಿಸ್ಟ್‌ಗಳೊಂದಿಗೆ ಈ ಖಾದ್ಯವನ್ನು ಆರೋಗ್ಯಕರ ಮತ್ತು ಹೆಚ್ಚು ಪೌಷ್ಟಿಕಾಂಶದ ಆಯ್ಕೆಯಾಗಿ ಪರಿವರ್ತಿಸಬಹುದು. ಮೈದಾ ಬಳಸದೆ ಪಿಜ್ಜಾ ಪರೋಟವನ್ನು ತಯಾರಿಸಬಹುದು. ಮಕ್ಕಳ ಊಟದ ಬಾಕ್ಸ್‌ಗೆ ಏನು ಮಾಡುವುದು ಎಂದು ಯೋಚನೆಯಲ್ಲಿದ್ದರೆ ಈ ರೀತಿ ವಿಭಿನ್ನವಾದ ಖಾದ್ಯವನ್ನು ತಯಾರಿಸಬಹುದು.
ಪಿಜ್ಜಾ ಪರೋಟ ಎಂದರೇನು?
ಪಿಜ್ಜಾ ಪರೋಟ ಒಂದು ವಿಶಿಷ್ಟವಾದ ಭಕ್ಷ್ಯವಾಗಿದೆ. ಇದು ತುಂಬಾನೇ ಸರಳವಾದ, ಸುವಾಸನೆಯ ಭಕ್ಷ್ಯವಾಗಿದೆ. ಇದು ಬಹಳ ತ್ವರಿತವಾಗಿ ತಯಾರಿಸಬಹುದಾಗಿದೆ. ಪಿಜ್ಜಾ ಮತ್ತು ಪರೋಟ ಎರಡೂ ಚಪ್ಪಟೆ ರೊಟ್ಟಿಗಳಾಗಿದ್ದರೂ, ಅವು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿವೆ. ಪಿಜ್ಜಾವನ್ನು ಸಾಮಾನ್ಯವಾಗಿ ಮೈದಾ ಹಿಟ್ಟು, ಯೀಸ್ಟ್ ಮತ್ತು ನೀರು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಟೊಮೆಟೊ ಸಾಸ್, ಚೀಸ್ ಮತ್ತು ವಿವಿಧ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇನ್ನೊಂದು ಬಗೆಯ ಪರೋಟವು ಸಂಪೂರ್ಣ ಗೋಧಿ ಹಿಟ್ಟಿಗೆ ನೀರು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬೆಣ್ಣೆ ಅಥವಾ ತುಪ್ಪದೊಂದಿಗೆ ಬಡಿಸಲಾಗುತ್ತದೆ. ಜತೆಗೆ ವಿವಿಧ ಪದಾರ್ಥಗಳೊಂದಿಗೆ ತುಂಬಬಹುದು.
ಮೈದಾ ಇಲ್ಲದೆ ಪಿಜ್ಜಾ ಪರೋಟ ಮಾಡುವುದು ಹೇಗೆ?
ಮೊದಲಿಗೆ ಗೋಧಿ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಪಾತಿ ತಯಾರಿಸಿ. ಇನ್ನೊಂದೆಡೆ ಮಿಶ್ರ ತರಕಾರಿಗಳನ್ನು ಸಣ್ಣಗೆ ಕತ್ತರಿಸಿ ಬಾಣಲೆಯಲ್ಲಿ ಹಾಕಿ ಮೃದುವಾಗುವವರೆಗೆ ಹುರಿಯಿರಿ. ಚಪಾತಿಯ ಒಂದು ಬದಿಯಲ್ಲಿ ಪಿಜ್ಜಾ ಸಾಸ್ ಅನ್ನು ಸಮವಾಗಿ ಹರಡಿ. ಅದರ ಮೇಲೆ ಹುರಿದ ತರಕಾರಿಗಳು ಮತ್ತು ತುರಿದ ಚೀಸ್ ಅನ್ನು ಹಾಕಿ. ಇದರ ಮೇಲೆ ಇನ್ನೊಂದು ಚಪಾತಿ ಇರಿಸಿ ಅಂಚುಗಳನ್ನು ಫೋರ್ಕ್‌ನಿಂದ ಒತ್ತಬೇಕು. ನಂತರ ತವಾವನ್ನು ಸ್ಟೌವ್ ಮೇಲಿಟ್ಟು ಬಿಸಿ ಮಾಡಿ. ಈ ಪರೋಟವನ್ನು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಎರಡೂ ಬದಿಗಳಲ್ಲಿ ಬೇಯಿಸಿ. ಪರೋಟವನ್ನು ತ್ರಿಕೋನಾಕಾರದ ಹೋಳುಗಳಾಗಿ ಕತ್ತರಿಸಿ, ಲಂಚ್ ಬಾಕ್ಸ್‌ನಲ್ಲಿ ನೀಟಾಗಿ ಪ್ಯಾಕ್ ಮಾಡಿ. ಅಥವಾ ಬೆಳಗ್ಗಿನ ಉಪಹಾರಕ್ಕೂ ತಿನ್ನಲು ಇದು ಅತ್ಯುತ್ತಮವಾಗಿದೆ.
ಪರಿಪೂರ್ಣವಾದ ಪಿಜ್ಜಾ ಪರೋಟವನ್ನು ತಯಾರಿಸಲು ಸಲಹೆಗಳು: ಪಿಜ್ಜಾ ಪರೋಟವನ್ನು ತಯಾರಿಸಲು ತಾಜಾ ಪದಾರ್ಥಗಳನ್ನು ಬಳಸಿ. ತಾಜಾ ತರಕಾರಿಗಳು ಮತ್ತು ಉತ್ತಮ ಗುಣಮಟ್ಟದ ಚೀಸ್ ಅನ್ನು ಬಳಸಿ. ಪರೋಟಗೆ ಇವೆಲ್ಲವನ್ನು ಅತಿಯಾಗಿ ತುಂಬಿಸಬೇಡಿ. ಏಕೆಂದರೆ ಅದನ್ನು ಮುಚ್ಚಲು ಮತ್ತು ಬೇಯಿಸಲು ಕಷ್ಟವಾಗಬಹುದು. ಪರೋಟ ಗರಿಗರಿಯಾಗಿ ಬರಲು ಮಧ್ಯಮ ಉರಿಯಲ್ಲಿ ಬೇಯಿಸಿ. ಅಲ್ಲದೆ ಪರೋಟಗೆ ವಿವಿಧ ಬಗೆಯ ತರಕಾರಿಗಳು, ಮಸಾಲೆಗಳನ್ನು ಸೇರಿಸಬಹುದು. ಅದರ ವಿಶಿಷ್ಟ ಸುವಾಸನೆ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿರುವುದರಿಂದ ಪಿಜ್ಜಾ ಪರೋಟವು ಆರೋಗ್ಯಕರ ಮತ್ತು ರುಚಿಕರವಾದ ಊಟಕ್ಕೆ ಅದ್ಭುತವಾದ ಆಯ್ಕೆಯಾಗಿದೆ.
ವಿಭಾಗ