Heat Stroke: ಶಾಖಾಘಾತ ಎಂದರೇನು? ಇದಕ್ಕೆ ಕಾರಣಗಳು, ಲಕ್ಷಣಗಳು ಹಾಗೂ ತಡೆಗಟ್ಟುವ ಮಾರ್ಗ; ಈ ಕುರಿತ ತಜ್ಞರ ಸಲಹೆ ಇಲ್ಲಿದೆ
Apr 17, 2023 06:15 PM IST
ಮುಂಬೈನಲ್ಲಿ ನಿನ್ನೆ (ಏಪ್ರಿಲ್ 16) ನಡೆದ ʼಮಹಾರಾಷ್ಟ್ರ ಭೂಷಣ್ ಪ್ರಶಸ್ತಿʼ ಪ್ರದಾನ ಸಮಾರಂಭ ಸೇರಿದ್ದ ಜನಸ್ತೋಮ
- Heat Stroke: ಮುಂಬೈನಲ್ಲಿ ನಿನ್ನೆ (ಏಪ್ರಿಲ್ 16) ನಡೆದ ʼಮಹಾರಾಷ್ಟ್ರ ಭೂಷಣ್ ಪ್ರಶಸ್ತಿʼ ಪ್ರದಾನ ಸಮಾರಂಭದಲ್ಲಿ ಶಾಖಾಘಾತದಿಂದ 11 ಮಂದಿ ಮೃತಪಟ್ಟಿದ್ದು, 50 ಮಂದಿ ಆಸ್ಪತ್ರೆ ಸೇರಿದ್ದಾರೆ. ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಾಗಾದರೆ ಏನಿದು ಶಾಖಾಘಾತ? ಇದಕ್ಕೆ ಕಾರಣಗಳೇನು, ಲಕ್ಷಣಗಳು ಹಾಗೂ ತಡೆಗಟ್ಟುವಿಕೆಯ ಬಗ್ಗೆ ತಜ್ಞರ ಮಾಹಿತಿ ಇಲ್ಲಿದೆ.
ನಿರ್ಜಲೀಕರಣ, ತಲೆತಿರುಗುವಿಕೆ, ವಾಕರಿಕೆ ಮತ್ತು ಎದೆನೋವಿನಂತಹ ಸಮಸ್ಯೆಯಿಂದ 11 ಮಂದಿ ಮೃತಪಟ್ಟಿದ್ದರೆ, 50 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮುಂಬೈನ ಖರಗ್‌ಪುರದಲ್ಲಿ ನಡೆದ ʼಮಹಾರಾಷ್ಟ್ರ ಭೂಷಣ್ ಪ್ರಶಸ್ತಿʼ ಪ್ರದಾನ ಸಮಾರಂಭದ ವೇಳೆ ನಡೆದಿತ್ತು. ಈ ಘಟನೆ ರಾಷ್ಟ್ರದಾದ್ಯಂತ ಸದ್ದು ಮಾಡಿದೆ. ಭಾನುವಾರ ನಡೆದ ಈ ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆ ವೇಳೆಗೆ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಈ ವೇಳೆಯಲ್ಲಿ ಶಾಖಾಘಾತ ತಡೆಯಲಾಗದೆ ಜನರು ಅಸ್ವಸ್ಥತರಾಗಿದ್ದರು. ಸುಮಾರು 600ರಷ್ಟು ಮಂದಿ ಅತಿಯಾದ ಬಿಸಿಲಿನ ಶಾಖದಿಂದ ತತ್ತರಿಸಿದ್ದರು. ಆಸ್ಪತ್ರೆಗೆ ಸೇರಿದವರಲ್ಲಿ ಹಲವರು ತೀವ್ರ ಅಸ್ವಸ್ಥರಾಗಿದ್ದಾರೆ. ಹಲವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು, ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತ ಇಂತಹ ಗಂಭೀರ ಸಮಸ್ಯೆಗಳು ಕಾಣಿಸುತ್ತಿವೆ. ಇದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಬಹುದು ಎನ್ನಲಾಗುತ್ತಿದೆ. ಇದರಲ್ಲಿ ಹೆಚ್ಚಿನವರು ವಯಸ್ಸಾದ ಮಹಿಳೆಯರು ಎಂಬುದು ವರದಿಯಾಗಿದೆ.
ಏನಿದು ಶಾಖಾಘಾತ?
ಸೂರ್ಯನ ಹೊಡೆತ ಅಥವಾ ಶಾಖಾಘಾತ ಒಂದು ಗಂಭೀರ ವೈದ್ಯಕೀಯ ಸಮಸ್ಯೆಯಾಗಿದ್ದು, ದೇಹವು ಅತಿಯಾದ ತಾಪಕ್ಕೆ ಸಿಲುಕುವುದು ಹಾಗೂ ತಕ್ಷಣಕ್ಕೆ ದೇಹತಾಪ ತಣ್ಣಗಾಗಲು ಸಾಧ್ಯವೇ ಆಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ಜೀವಕ್ಕೆ ಉಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ತಕ್ಷಣಕ್ಕೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು.
ಮುಂಬೈನ ಮೆಡಿಕವರ್ ಆಸ್ಪತ್ರೆಯ ಇಂಟರ್‌ನಲ್ ಮೆಡಿಸಿನ್ ವಿಭಾಗದ ತಜ್ಞರಾದ ಡಾ. ನಿಖಿಲ್ ವಾರ್ಗೆ ಅವರು ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ʼತೀವ್ರ ಬಿಸಿಲಿತ ತಾಪಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶಾಖಾಘಾತ ಉಂಟಾಗಬಹುದು. ವಿಶೇಷವಾಗಿ ಆರ್ದ್ರತೆಯ ಪ್ರಮಾಣದ ಹೆಚ್ಚಳದಿಂದ ಈ ಸಮಸ್ಯೆ ಎದುರಾಗಬಹುದು. ಇದರಿಂದ ಹಲವು ರೀತಿಯ ದೈಹಿಕ ತೊಂದರೆಗಳು, ನಿರ್ಜಲೀಕರಣದ ಜೊತೆಗೆ ಪ್ರಾಣಕ್ಕೂ ಕುತ್ತು ಬರಬಹುದುʼ ಎನ್ನುತ್ತಾರೆ.
ಅವರ ಪ್ರಕಾರ, ಶಾಖಾಘಾತದ ಪ್ರಮಾಣವನ್ನು ಹೆಚ್ಚಿಸುವ ಇತರ ಅಂಶಗಳು ಹೀಗಿವೆ:
* ಕೆಲವು ಔಷಧಿಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು.
* ವಯೋಮಾನ (ಮಕ್ಕಳು ಹಾಗೂ ವಯಸ್ಸಾದವರು ಹೆಚ್ಚು ಶಾಖಾಘಾತಕ್ಕೆ ಒಳಗಾಗುತ್ತಾರೆ).
* ಮದ್ಯಪಾನ ಸೇವನೆಯೂ ಕಾರಣವಾಗಬಹುದು.
* ಶಾಖವನ್ನು ಹಿಡಿದಿಟ್ಟುಕೊಳ್ಳುವ ಬಿಗಿ ಹಾಗೂ ದಪ್ಪನೆಯ ಬಟ್ಟೆ ಧರಿಸುವುದು.
ಇದರ ಲಕ್ಷಣಗಳ ಬಗ್ಗೆ ವಿವರಿಸುವ ಡಾ. ನಿಖಿಲ್ ʼಶಾಖಾಘಾತವು ದೇಹಾರೋಗ್ಯದ ಮೇಲೆ ತ್ವರಿತ ಪರಿಣಾಮವನ್ನು ಉಂಟುಮಾಡಬಹುದು ಮತ್ತು ಇದನ್ನು ತಕ್ಷಣಕ್ಕೆ ಗುರುತಿಸುವುದು ಹಾಗೂ ತಕ್ಷಣವೇ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಮುಖ್ಯವಾಗುತ್ತದೆʼ ಎನ್ನುತ್ತಾರೆ.
ಶಾಖಾಘಾತದ ಕೆಲವು ರೋಗಲಕ್ಷಣಗಳು
* ದೇಹ ಉಷ್ಣಾಂಶದಲ್ಲಿನ ಏರುಗತಿ (103 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಏರಿಕೆಯಾಗುವುದು)
* ಹೃದಯ ಬಡಿತದಲ್ಲಿನ ಏರಿಳಿತ
* ಉಸಿರಾಟದ ಲಯದಲ್ಲಿ ಏರಿಳಿತ
* ತಲೆನೋವು
* ವಾಕರಿಕೆ ಮತ್ತು ವಾಂತಿ
* ತಲೆ ತಿರುಗುವಿಕೆ
* ಅಪಸ್ಮಾರ
* ಪ್ರಜ್ಞೆ ತಪ್ಪುವುದು
ಶಾಖಾಘಾತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟು ದೇಹ ತಂಪಾಗಿರುವಂತೆ ನೋಡಿಕೊಳ್ಳುವುದು ಹಾಗೂ ನಿರ್ಜಲೀಕರಣವನ್ನು ತಪ್ಪಿಸುವುದು ಬಹಳ ಅವಶ್ಯವಾಗಿದೆ. ಇದರೊಂದಿಗೆ ಈ ಕ್ರಮಗಳನ್ನು ಅನುಸರಿಸಲು ಸಲಹೆ ನೀಡುತ್ತಾರೆ ನಿಖಿಲ್.
* ತೀವ್ರವಾದ ಬಿಸಿಲು ಇರುವಾಗ ಹಾಗೂ ಮಧ್ಯಾಹ್ನದ ಸಮಯದಲ್ಲಿ ಸಾಧ್ಯವಾದಷ್ಟು ಒಳಾಂಗಣ ಪ್ರದೇಶದಲ್ಲೇ ಇರಲು ಪ್ರಯತ್ನಿಸಿ.
* ಸಡಿಲವಾಗಿರುವ ಹಾಗೂ ತಿಳಿ ಬಣ್ಣದ ಬಟ್ಟೆ ಧರಿಸಿ.
* ಸಾಕಷ್ಟು ನೀರಿನಾಂಶ ಇರುವ ಆಹಾರ ಸೇವಿಸಿ.
* ತಂಪಾದ ಅಥವಾ ಗಾಳಿಯಾಡುವ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಿರಿ.
* ಫ್ಯಾನ್ ಅಥವಾ ಏಸಿ ಆನ್ ಮಾಡುವ ಮೂಲಕ ತಂಪಾಗಿರಿ.
ನಿಮ್ಮ ಆಪ್ತರಲ್ಲಿ ಯಾರಾದರೂ ಶಾಖಾಘಾತಕ್ಕೆ ಒಳಗಾದರೆ ಅಥವಾ ಒಳಗಾದಂತೆ ಅನ್ನಿಸಿದರೆ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುವುದು ಅವಶ್ಯ ಎನ್ನುತ್ತಾರೆ ಡಾ. ನಿಖಿಲ್ ವಾರ್ಗೆ. ಈ ಕ್ಷಣಕ್ಕೆ ತೆಗೆದುಕೊಳ್ಳಬಹುದಾದ ಕೆಲವು ಚಿಕಿತ್ಸಾ ಕ್ರಮಗಳನ್ನು ನಿಖಿಲ್ ಶಿಫಾರಸು ಮಾಡುವುದು ಹೀಗೆ:
* ತಕ್ಷಣಕ್ಕೆ ವೈದ್ಯರ ಬಳಿ ಕರೆದ್ಯೊಯುವುದು ಅಥವಾ ವೈದ್ಯರನ್ನು ಕರೆಸುವುದು ಅವಶ್ಯ.
* ತಕ್ಷಣಕ್ಕೆ ನೆರಳು ಇರುವ ತಂಪಾದ ಜಾಗಕ್ಕೆ ವ್ಯಕ್ತಿಯನ್ನು ಸಾಗಿಸಬೇಕು.
* ದಪ್ಪದ ಅಥವಾ ಬಿಗಿಯಾದ ಉಡುಪು ಧರಿಸಿದರೆ ತಕ್ಷಣಕ್ಕೆ ಸಡಿಲ ಮಾಡಬೇಕು.
* ಚರ್ಮಕ್ಕೆ ತಣ್ಣೀರು ಎರಚಬೇಕು ಅಥವಾ ಫ್ಯಾನ್ ಗಾಳಿ ತಾಕುವಂತೆ ಮಾಡಬೇಕು.
* ವ್ಯಕ್ತಿಯ ಎಚ್ಚರದಲ್ಲಿದ್ದರೆ ನೀರು ಕುಡಿಸಬೇಕು.
* ವೈದ್ಯರ ಬಳಿ ಹೋಗುವವರೆಗೆ ಉಸಿರಾಟ ಹಾಗೂ ಹೃದಯ ಬಡಿತದ ಮೇಲ್ವಿಚಾರಣೆ ಮಾಡಬೇಕು.
ʼಶಾಖಾಘಾತ ಎಂದರೆ ಗಂಭೀರವಾದ ವೈದ್ಯಕೀಯ ಸಮಸ್ಯೆಯಾಗಿದ್ದು, ಇದಕ್ಕೆ ತಕ್ಷಣಕ್ಕೆ ಚಿಕಿತ್ಸೆ ಕೊಡಿಸಬೇಕು. ನಿಮ್ಮ ಹತ್ತಿರದವರಲ್ಲಿ ಯಾರಾದರೂ ಶಾಖಾಘಾತಕ್ಕೆ ಒಳಗಾದರೆ ತಕ್ಷಣಕ್ಕೆ ವೈದ್ಯರ ಬಳಿ ಕರೆದ್ಯೂಯಬೇಕು ಜೊತೆಗೆ ಅಲ್ಲಿಯವರೆಗೆ ದೇಹ ತಣ್ಣಗಾಗಿರುವಂತೆ ನೋಡಿಕೊಳ್ಳಬೇಕು. ಅತಿಯಾದ ಶಾಖದಿಂದ ದೇಹವನ್ನು ತಂಪಾಗಿರಿಸಿಕೊಳ್ಳುವುದು ಹಾಗೂ ಸಾಕಷ್ಟು ನೀರು ಕುಡಿಯುವುದರಿಂದ ಕೂಡ ಶಾಖಾಘಾತವನ್ನು ತಪ್ಪಿಸಬಹುದುʼ ಎಂದು ಮಾತು ಮುಗಿಸುತ್ತಾರೆ ಡಾ. ನಿಖಿಲ್.
ವಿಭಾಗ