logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ನವಜಾತ ಶಿಶುವಿನ ಆರೋಗ್ಯ, ಆರೈಕೆಗೆ ಸಂಬಂಧಿಸಿ ಪೋಷಕರಿಗೆ ಇಲ್ಲಿದೆ ಒಂದಿಷ್ಟು ಟಿಪ್ಸ್‌

Parenting: ನವಜಾತ ಶಿಶುವಿನ ಆರೋಗ್ಯ, ಆರೈಕೆಗೆ ಸಂಬಂಧಿಸಿ ಪೋಷಕರಿಗೆ ಇಲ್ಲಿದೆ ಒಂದಿಷ್ಟು ಟಿಪ್ಸ್‌

HT Kannada Desk HT Kannada

Mar 14, 2023 07:18 PM IST

google News

ಹಸುಗೂಸು

    • Parenting: ಮೊದಲ ಬಾರಿ ಮಗು ಪಡೆದ ಪೋಷಕರಲ್ಲಿ ಆನಂದದ ಬಗ್ಗೆ ಮಗುವಿನ ಲಾಲನೆ, ಪಾಲನೆಯ ಕುರಿತು ಜಿಜ್ಞಾಸೆಯೂ ಇರುತ್ತದೆ. ಈ ಜಿಜ್ಞಾಸೆಗಳನ್ನು ಹೋಗಲಾಡಿಸಲು ಇಲ್ಲಿದೆ ಕೆಲವೊಂದು ಟಿಪ್ಸ್‌.
ಹಸುಗೂಸು
ಹಸುಗೂಸು

ಮೊದಲ ಮಗುವಿನ ಆಗಮನ ಪ್ರತಿ ತಂದೆ-ತಾಯಿಗಳ ಮನದಲ್ಲೂ ಹೇಳಲಾಗದ ಹರುಷವನ್ನು ಹುಟ್ಟುಹಾಕುತ್ತದೆ. ಕಂದಮ್ಮನನ್ನು ಮೊದಲ ಬಾರಿಗೆ ಕೈಯಲ್ಲಿ ಹಿಡಿದಾಗ ಆಗುವ ಆನಂದ ಹೇಳತೀರದು.

ಆದರೆ ಈ ಸಂತಸದೊಂದಿಗೆ ಅದಕ್ಕೆ ತಿನ್ನಿಸುವುದು, ಆಹಾರಕ್ರಮ, ನಿದ್ದೆ ಮಾಡಿಸುವುದು, ಸ್ನಾನ ಮಾಡಿಸುವುದು, ಅದರ ಕಾಳಜಿ ಮಾಡುವುದು ಇಂತಹ ಸವಾಲಿನ ಕೆಲಸಗಳೂ ಜೊತೆಯಾಗುತ್ತವೆ. ಆದರೆ ಅವು ಮರೆಯಲಾಗದ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ. ಮೊದಲ ಮಗುವಿನ ಜನನದ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯ ಕುರಿತು ಹಲವು ಪೋಷಕರಲ್ಲಿ ಜಿಜ್ಞಾಸೆ ಇರುತ್ತದೆ. ಮಗುವಿನ ಕಾಳಜಿಯ ವಿಷಯಕ್ಕೆ ಬಂದಾಗ ಮೊದಲು ನೈಮರ್ಲ್ಯದ ಬಗ್ಗೆ ಗಮನ ಹರಿಸಬೇಕು.

ಈ ವಿಷಯಕ್ಕೆ ಸಂಬಂಧಿಸಿ ನಮ್ಮ ಹಿರಿಯರು, ವೈದ್ಯರು, ಅಂತರ್ಜಾಲದ ಮೂಲಕ ಸಾವಿರಾರು ಮಾಹಿತಿಗಳು ಲಭ್ಯವಾಗಬಹುದು. ಆದರೂ ಕೆಲವೊಮ್ಮೆ ನವಜಾತ ಶಿಶುವಿನ ವಿಷಯದಲ್ಲಿ ನಾವು ಎಚ್ಚರ ತಪ್ಪುತ್ತೇವೆ.

ನವಜಾತ ಶಿಶುಗಳ ಆರೈಕೆ ವಿಷಯದ ಬೇಕು, ಬೇಡಗಳ ಬಗ್ಗೆ ಕಿನು ಸಂಸ್ಥೆಯ ಸಹ ಸಂಸ್ಥಾಪಕಿ, ಮಕ್ಕಳ ನೈರ್ಮಲ್ಯ ತಜ್ಞೆ ನಿಕಿತಾ ಕೊಹ್ಲಿ ಹಿಂದೂಸ್ತಾನ್‌ ಟೈಮ್ಸ್‌ಗೆ ಒಂದಿಷ್ಟು ಮಾಹಿತಿ ತಿಳಿಸಿದ್ದಾರೆ.

ಮಗುವಿನ ಬಟ್ಟೆಯನ್ನು ಪ್ರತ್ಯೇಕವಾಗಿ ವಾಶ್‌ ಮಾಡಿ

ಮಾಡಬಹುದು

* ಮಕ್ಕಳ ಬಟ್ಟೆ ಒಗೆಯಲೆಂದೇ ಇರುವ ಸೌಮ್ಯರೂಪದ ಡಿಟರ್ಜೆಂಟ್‌ಗಳನ್ನು ಬಳಸಿ. ಈ ಡಿಟರ್ಜೆಂಟ್‌ಗಳು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುತ್ತವೆ, ಅಲ್ಲದೆ ಇದು ಮಗುವಿನ ಸೂಕ್ಷ್ಮ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಿಲ್ಲ.

* ಗ್ಲಿಸರಿನ್‌ ಅಂಶ ಇರುವ ಡಿಟರ್ಜೆಂಟ್‌ಗಳನ್ನು ಬಳಸಿ, ಇದು ಬಟ್ಟೆಗಳಿಗೆ ಉತ್ತಮ. ಇದು ನಿಮ್ಮ ಕೈ ಹಾಗೂ ಮಗುವಿನ ಚರ್ಮಕ್ಕೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ.

* ಮನೆಯವರೆಲ್ಲರ ಜೊತೆಯಲ್ಲೇ ಮಗುವಿನ ಬಟ್ಟೆ ಒಗೆಯಬೇಡಿ. ಅವುಗಳನ್ನು ಪ್ರತ್ಯೇಕವಾಗಿ ವಾಶ್‌ ಮಾಡಿ. ಇದರಿಂದ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಹರಡುವ ಸಾಧ್ಯತೆಯನ್ನು ತಡೆಯಬಹುದು.

ಮಾಡಬಾರದು

* ಫ್ಯಾಬ್ರಿಕ್‌ ಸಾಫ್ಟ್‌ನರ್‌ಗಳನ್ನು ಬಳಸಬೇಡಿ. ಇದು ಮಗುವಿನ ಚರ್ಮದ ಕಿರಿಕಿರಿಗೆ ಕಾರಣವಾಗಬಹುದು.

* ಬ್ಲೀಚಿಂಗ್‌ ಪೌಡರ್‌ ಬಳಕೆ ಬೇಡ. ಇದು ಬಟ್ಟೆ ಬಣ್ಣ ಬಿಡಲು ಕಾರಣವಾಗಬಹುದು, ಅಲ್ಲದೆ ಮಗುವಿನ ಚರ್ಮಕ್ಕೂ ಒಳ್ಳೆಯದಲ್ಲ.

ಸ್ನಾನದ ಬಳಿಕ ಮಾಯಿಶ್ಚರೈಸರ್‌ ಬಳಸಿ

ಮಾಡಬಹುದು

* ಸ್ನಾನದ ಬಳಿಕ ಮಗುವಿನ ಚರ್ಮಕ್ಕೆ ಸೌಮ್ಯ ಗುಣವಿರುವ ಮಾಯಿಶ್ಚರೈಸರ್‌ ಬಳಸಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ ಮಾತ್ರವಲ್ಲ, ಒಣ ಚರ್ಮದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು.

* ಸ್ನಾನದ ಮನೆಯಿಂದ ಹೊರತಂದ ತಕ್ಷಣವೇ ಚೆನ್ನಾಗಿ ಮೈ ಒರೆಸಿ ಮಾಯಿಶ್ಚರೈಸರ್‌ ಬಳಸಬೇಕು. ಇದರಿಂದ ತೇವಾಂಶವನ್ನು ಚರ್ಮದಲ್ಲಿ ಲಾಕ್‌ ಮಾಡಲು ಸಹಾಯ ಮಾಡಿದಂತಾಗುತ್ತದೆ.

* ಎದೆಹಾಲು ಅಥವಾ ಬಾಟಲಿ ಹಾಲು ನೀಡುವುದು ಅವಶ್ಯ, ಇದರಿಂದ ದೇಹದಲ್ಲಿ ನೀರಿನಂಶ ತುಂಬಿರುತ್ತದೆ, ನಿರ್ಜಲೀಕರಣದ ಸಮಸ್ಯೆ ಕಾಡುವುದಿಲ್ಲ.

ಮಾಡಬೇಡಿ:

ಪರಿಮಳಯುಕ್ತ ಮಾಯಿಶ್ಚರೈಸರ್‌ಗಳನ್ನು ಮಕ್ಕಳಿಗೆ ತ್ವಚೆಗೆ ಬಳಸಬೇಡಿ. ಇದರಿಂದ ಚರ್ಮದ ಕಿರಿಕಿರಿ ದದ್ದು ಉಂಟಾಗುವ ಸಾಧ್ಯತೆ ಹೆಚ್ಚು.

* ಅತಿಯಾದ ಮಾಯಿಶ್ಚರೈಸರ್‌ ಬಳಕೆಯೂ ಉತ್ತಮವಲ್ಲ. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಹೋಗಿ ಸಮಸ್ಯೆ ಉಂಟು ಮಾಡಬಹುದು.

ಮಗುವಿನ ತಲೆ ಮತ್ತು ನೆತ್ತಿಗೆ ಮಸಾಜ್ ಮಾಡಿ

ಮಾಡಲು ತೊಂದರೆ ಇಲ್ಲ

* ನಿಧಾನಕ್ಕೆ, ವೃತ್ತಾಕಾರದ ಚಲನೆಯಲ್ಲಿ ಮಗುವಿನ ನೆತ್ತಿಯನ್ನು ಮಸಾಜ್‌ ಮಾಡಿ. ಇದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ನೆತ್ತಿಯ ಭಾಗಕ್ಕೆ ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

* ಸೌಮ್ಯ ಗುಣವುಳ್ಳ ಬೇಬಿ ಎಣ್ಣೆ ಅಥವಾ ತೆಂಗಿನೆಣ್ಣೆ ಬಳಸಿ. ಇದರಿಂದ ಮಗುವಿನ ನೆತ್ತಿಯನ್ನು ನಯಗೊಳಿಸಲು ಹಾಗೂ ಮಸಾಜ್‌ ಮಾಡಲು ಸುಲಭವಾಗುತ್ತದೆ.

* ಮಗುವಿನ ನೆತ್ತಿಯ ಅತಿ ಸೂಕ್ಷ್ಮವಾಗಿರುವ ಕಾರಣ ಸಮಯ ತೆಗೆದುಕೊಂಡು ಸೌಮ್ಯವಾಗಿ ಮಸಾಜ್‌ ಮಾಡಿ.

ಮಾಡದಿರಿ

ಮಸಾಜ್‌ ಮಾಡುವಾಗ ಮಗುವಿನ ನೆತ್ತಿಯ ಮೇಲೆ ಒತ್ತಡ ಹಾಕಬೇಡಿ. ಇದರಿಂದ ನೋವು ಹಾಗೂ ಸಮಸ್ಯೆಗಳು ಉಂಟಾಗಬಹುದು. ಪರಿಮಳದ ಎಣ್ಣೆಯನ್ನು ಬಳಸಬೇಡಿ.

ಬೇಬಿ ಟ್ರಾವೆಲ್‌ ಕಿಟ್‌ ಜೊತೆಗಿರಲಿ

ಮಾಡಬಹುದು:

* ಪುಟ್ಟ ಮಗುವಿನೊಂದಿಗೆ ಪ್ರವಾಸಕ್ಕೆ ಹೊರಡುವ ಮೊದಲು ಸಾಕಷ್ಟು ಡೈಪರ್‌ ಹಾಗೂ ಟಿಶ್ಯೂಗಳನ್ನು ಜೊತೆಗೆ ಇರಿಸಿಕೊಳ್ಳಿ. 2,3 ಜೊತೆ ಬಟ್ಟೆಗಳನ್ನು ಬ್ಯಾಗ್‌ನಲ್ಲಿರಿಸಿಕೊಳ್ಳಿ.

* ಬ್ಯಾಂಡೆಜ್‌, ನಂಜುನಿರೋಧಕಗಳು, ಹಸುಗೂಸಿನ ನೋವು ನಿವಾರಕ ಬಾಮ್‌ಗಳು ಇಂತಹವನ್ನು ಜೊತೆಯಲ್ಲಿ ಇರಿಸಿಕೊಳ್ಳಿ.

* ಮಗುವಿಗೆ ಬೇಕಿರುವ ಆಹಾರ ಪದಾರ್ಥಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಳ್ಳಿ.

ಮಾಡಬೇಡಿ

* ವಿದೇಶಿ ಪ್ರವಾಸಕ್ಕೆ ಹೋಗುವುದಾದರೆ ಮಗುವಿನ ಜನನ ಪ್ರಮಾಣ ಪತ್ರ, ಪಾಸ್‌ಪಾರ್ಟ್‌ನಂತಹ ಅಗತ್ಯ ಡಾಕ್ಯುಮೆಂಟ್‌ಗಳನ್ನು ಇರಿಸಿಕೊಳ್ಳಲು ಮರೆಯಬೇಡಿ.

* ಸಿಕ್ಕಾಪಟ್ಟೆ ಗೊಂಬೆಗಳು, ಆಟಿಕೆಗಳನ್ನು ಬ್ಯಾಗ್‌ನಲ್ಲಿ ತುಂಬಬೇಡಿ. ಇದರಿಂದ ಅಗತ್ಯ ಇರುವುದನ್ನು ಇರಿಸಿಕೊಳ್ಳಲು ಜಾಗವಿಲ್ಲದೇ ಇರಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ