History of Eating Meat: ಮನುಷ್ಯ ಮಾಂಸಾಹಾರ ಸೇವನೆ ಆರಂಭಿಸಿದ್ದು ಯಾವಾಗ? ಮಾಂಸ ಆಹಾರಕ್ರಮದ ಭಾಗವಾಗಿದ್ದು ಹೇಗೆ?
Sep 14, 2022 10:42 PM IST
ಮಾಂಸ ಆಹಾರಕ್ರಮದ ಭಾಗವಾಗಿದ್ದು ಹೇಗೆ?
- ಮಾಂಸಾಹಾರ ಸೇವನೆ ಯಾವಾಗದಿಂದ ಆರಂಭವಾಯ್ತು? ಪ್ರಾಣಿಗಳು ತಿನ್ನುತ್ತವೆ ಸರಿ, ಆದರೆ ಮನುಷ್ಯರು ಯಾವಾಗದಿಂದ ಮಾಂಸ ತಿನ್ನಲು ಶುರುವಿಟ್ಟುಕೊಂಡರು ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಮಾಂಸ ತಿನ್ನುವ ಕಲ್ಪನೆ ಹುಟ್ಟಿದ್ದು ಯಾವಾಗ ಮತ್ತು ಹೇಗೆ ಎನ್ನುವ ಸ್ವಾರಸ್ಯಕರ ಸಂಗತಿಗಳನ್ನು ಈಗ ತಿಳಿಯೋಣ.
ಇತ್ತೀಚೆಗೆ ಹೆಚ್ಚು ಚರ್ಚೆಗೆ ಬಂದ ವಿಷಯ; ಮಾಂಸಾಹಾರ. ರಾಜ್ಯದಲ್ಲಿ ಆಗಾಗ ಮಾಂಸಾಹಾರದ ಬಗೆಗಿನ ಚರ್ಚೆ ಮುನ್ನೆಲೆಗೆ ಬರುತ್ತದೆ. ಇದು ಒಂದು ಆಹಾರ ಕ್ರಮ. ಆದರೆ, ಇದರೊಂದಿಗೆ ರಾಜಕೀಯ ಬೆರೆತು, ಅದರೊಂದಿಗೆ ಧಾರ್ಮಿಕ ವಿಚಾರಗಳು ಕೂಡಾ ಥಳಕು ಹಾಕಿಕೊಂಡಿವೆ. ಈ ನಡುವೆ ಆಹಾರಕ್ರಮ ಅವರವರ ಆಯ್ಕೆ. ಇದಕ್ಕೆ ಯಾರೂ ಮೂಗುದಾರ ಹಾಕುವ ಹಾಗಿಲ್ಲ ಎಂದು ಹಲವರು ವಾದ ಮಾಡುತ್ತಾರೆ. ಹಾಗಿದ್ರೆ ಈ ಮಾಂಸಾಹಾರ ಸೇವನೆ ಯಾವಾಗದಿಂದ ಆರಂಭವಾಯ್ತು? ಪ್ರಾಣಿಗಳು ತಿನ್ನುತ್ತವೆ ಸರಿ, ಆದರೆ ಮನುಷ್ಯರು ಯಾವಾಗದಿಂದ ಮಾಂಸ ತಿನ್ನಲು ಶುರುವಿಟ್ಟುಕೊಂಡರು ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಮಾಂಸ ತಿನ್ನುವ ಕಲ್ಪನೆ ಹುಟ್ಟಿದ್ದು ಯಾವಾಗ ಮತ್ತು ಹೇಗೆ ಎನ್ನುವ ಸ್ವಾರಸ್ಯಕರ ಸಂಗತಿಗಳನ್ನು ಈಗ ತಿಳಿಯೋಣ.
ಮಾಂಸ ತಿನ್ನಬೇಕಾದ ಸಂದರ್ಭ ಹೇಗೆ ಸೃಷ್ಟಿಯಾಯ್ತು?
ಮಾಂಸಾಹಾರ ಸೇವನೆಯು ಮಾನವ ವಿಕಾಸದ ಬಹುದೊಡ್ಡ ತಿರುವು ಎನ್ನುತ್ತಾರೆ ಇತಿಹಾಸಕಾರರು. ಇದು ಯಾವಾಗ ಆರಂಭವಾಯಿತು ಎಂದು ನಿಖರವಾಗಿ ಹೇಳಲು ಸಾಧ್ಯವಾಗದಿದ್ದರೂ, ಸಿಕ್ಕಿರುವ ಕೆಲ ಪುರಾವೆಗಳ ಪ್ರಕಾರ ಮಾಂಸ ಸೇವನೆಯು 2.5 ಮಿಲಿಯನ್ ವರ್ಷಗಳ ಹಿಂದೆಯೇ ಆರಂಭವಾದಂತೆ ತೋರುತ್ತದೆ. ಮಾನವನ ವಿಕಾಸದ ಹಂತದಲ್ಲಿ ಎರಡು ಕಾಲುಗಳ ಮೇಲೆ ನಡೆದ ಮಾನವರನ್ನು 'ಹೋಮಿನಿನ್' ಎಂದು ಕರೆಯಲಾಗುತ್ತದೆ. ಅದೇನೆಂದರೆ, ಹೋಮಿನಿನ್ ಅಂಗರಚನಾಶಾಸ್ತ್ರವು ಇಂದಿನ ಮಾನವ ರೂಪಕ್ಕೆ ಬಹಳ ಸಮೀಪದಲ್ಲಿದೆ.
ಎರಡೂವರೆ ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಸುತ್ತಾಡಿದ ಹೋಮಿನಿನ್‌ಗಳು 32 ಹಲ್ಲುಗಳ ದೊಡ್ಡ ಗಾತ್ರದ ಬಾಯಿ ಹೊಂದಿದ್ದರು. ದವಡೆಗಳು ಕೂಡ ದೊಡ್ಡದಾಗಿದ್ದವು. ದವಡೆಯ ಮೂಲೆಗಳಲ್ಲಿ ನಾಲ್ಕು ಚೂಪಾದ ಹಲ್ಲುಗಳಿದ್ದವು. ಈ ಹಲ್ಲುಗಳು ಬೇಟೆಯಾಡಲು ಮತ್ತು ಮಾಂಸವನ್ನು ತಿನ್ನಲು ಪ್ರಮುಖ ಆಯುಧದಂತಿತ್ತು ಎಂದು ಕೆಲವು ಸಂಶೋಧನೆಗಳು ಹೇಳಿವೆ. ಅಲ್ಲಿಯವರೆಗೂ ಹಣ್ಣು, ಎಲೆಗಳು ಹಾಗೂ ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ ನಮ್ಮ ಪೂರ್ವಜರು, ಆ ಬಳಿಕ ದಿಢೀರನೆ ಮಾಂಸಾಹಾರವನ್ನು ತಿನ್ನಲು ಶುರುವಿಟ್ಟುಕೊಂಡರು.
ಆ ಬರ ಹೊಸ ದಾರಿ ತೋರಿತು...
ನಿಖರವಾಗಿ 2.5 ಮಿಲಿಯನ್ ವರ್ಷಗಳ ಹಿಂದೆ, ಭೂಮಿಯು ಅನಿರೀಕ್ಷಿತವಾಗಿ ಬೆಚ್ಚಗಾಯಿತು. ಹವಾಮಾನ ಬದಲಾವಣೆಯಿಂದಾಗಿ ಅರಣ್ಯ ಪ್ರದೇಶ ಕಡಿಮೆಯಾಯ್ತು. ಹಸಿರು ಕಣ್ಮರೆಯಾಯಿತು. ಭೂಮಿ ಮರುಭೂಮಿಯಾಗಿ ಮಾರ್ಪಟ್ಟಿತು. ಅಲ್ಲಿಯವರೆಗೆ ಹಸಿರ ಪರಿಸರದಲ್ಲಿ ಕೈಗೆ ಸಿಕ್ಕ ಹಣ್ಣು ಹಂಪಲು, ಗೆಡ್ಡೆ ಗೆಣಸು ಹಾಗೂ ಎಲೆಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಆದಿ ಮಾನವರಿಗೆ ಈಗ ‘ಹಸಿವು’ ಶುರುವಾಯ್ತು. ಆ ಹಿಂದೆ ಸಿಗುತ್ತಿದ್ದ ಹಣ್ಣು ಹಂಪಲು ಕೈಗೆ ಸಿಗಲಿಲ್ಲ. ಆ ಹಸಿವು ಹೊಸ ಕಲ್ಪನೆಗೆ ಜನ್ಮ ನೀಡಿತು. ಬದುಕಲು ಹೊಸ ಶಕ್ತಿ ಬೇಕು ಎಂದು ಅವರೆಲ್ಲರಿಗೂ ಅನಿಸಿತು. ಅವರು ಗುಂಪುಗಳಲ್ಲಿ ವಾಸಿಸಲು ಕಲಿತರು. ಆಹಾರಕ್ಕಾಗಿ ಬೇಟೆಯಾಡಲು ಪ್ರಾರಂಭಿಸಿದರು. ಜೀಬ್ರಾಗಳಂತಹ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ತಿನ್ನಲು ಆರಂಭಿಸಿದರು.
ಆದರೆ, ಇದೇ ವಿಚಾರವಾಗಿ ಇನ್ನೊಂದು ವಾದವಿದೆ. ಇನ್ನು ಕೆಲವರು ಹೇಳುವಂತೆ ಅವರಿಗೆ ಆಗ ಬೇಟೆಯಾಡುವುದು ಗೊತ್ತಿರಲಿಲ್ಲ. ಹೀಗಾಗಿ ಸತ್ತ ಪ್ರಾಣಿಗಳ ಶವದ ಮಾಂಸವನ್ನು ಕಿತ್ತು ತಿನ್ನುತ್ತಿದ್ದರು ಎಂದು ಇನ್ನೂ ಕೆಲವರ ವಾದ. ಕ್ರಮೇಣ ಅವರ ಆಹಾರ ಶೈಲಿಯಲ್ಲಿ ಬದಲಾವಣೆಯಾಯಿತು. ಮಾಂಸಾಹಾರ ರುಚಿಯಾಗಿರುತ್ತದೆ ಎಂದು ಅವರಿಗನಿಸಿತು. ಆ ಬಳಿಕ ಅದನ್ನೇ ಹೆಚ್ಚಾಗಿ ತಿನ್ನಲು ಆರಂಭಿಸಿದರು. 40 ಸಾವಿರ ವರ್ಷಗಳ ಹಿಂದೆ ವಾಸಿಸುತ್ತಿದ್ದ ನಿಯಾಂಡರ್ತಲ್(Neanderthals)ಗಳು ಸೇವಿಸುವ ಆಹಾರದಲ್ಲಿ 70% ಮಾಂಸವೇ ಇತ್ತು ಎಂದು ಕೆಲವು ಅಧ್ಯಯನಗಳು ಸ್ಪಷ್ಟಪಡಿಸಿವೆ. ಅವರೇ ಹೆಚ್ಚು ಪ್ರಮಾಣದಲ್ಲಿ ಬೆಂಕಿಯನ್ನು ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಸುಟ್ಟ ನಂತರ ಮಾಂಸವನ್ನು ತಿನ್ನುವುದು ಅವರಿಂದ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಪ್ರತಿನಿತ್ಯ ಮಾಂಸಾಹಾರ ಸೇವಿಸುವುದು ಅವರ ಜೀವನಶೈಲಿಯ ಭಾಗವಾಯಿತು ಎಂದು ಇತಿಹಾಸಕಾರರು ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.
ಹರಿತವಾದ ಆಯುಧಗಳು
ಸುಮಾರು 2 ದಶಲಕ್ಷ ವರ್ಷಗಳ ಹಿಂದೆ ಮಾಂಸಾಹಾರವು ಪ್ರಾರಂಭವಾಯಿತು ಎಂದು ಹೇಳಲು ಇನ್ನೂ ಕೆಲವು ಪುರಾವೆಗಳಿವೆ. ಪುರಾತತ್ತ್ವ ಶಾಸ್ತ್ರದ ದಾಖಲೆಗಳ ಪ್ರಕಾರ, 'ಹ್ಯಾಂಡಿಮ್ಯಾನ್(Handyman)' ಎಂದು ಕರೆಯಲ್ಪಡುವ 'ಹೋಮೋ ಹ್ಯಾಬಿಲಿಸ್'(Homo Habilis)ಗಳು ಮಾಂಸವನ್ನು ಕತ್ತರಿಸಲು ಕಲ್ಲಿನಿಂದ ಮಾಡಿದ ಹರಿತವಾದ ಚಾಕುಗಳನ್ನು ಬಳಸಿದರು. ಕೀನ್ಯಾದಲ್ಲಿ ನಡೆಸಿದ ಸಂಶೋಧನೆಯು 2 ಮಿಲಿಯನ್ ವರ್ಷಗಳ ಹಿಂದೆ ಇದೇ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ತೋರಿಸಿದೆ. ಈ ಪ್ರದೇಶದಲ್ಲಿನ ಉತ್ಖನನದಲ್ಲಿ ಕಲ್ಲಿನಿಂದ ಮಾಡಿದ ಸಾವಿರಾರು ಆಯುಧಗಳು ಕಂಡುಬಂದಿವೆ. ಅಷ್ಟೇ ಅಲ್ಲ. ಪ್ರಾಣಿಗಳ ಮೂಳೆಗಳಿಂದ ತಯಾರಿಸಿದ ಆಯುಧಗಳೂ ಪತ್ತೆಯಾಗಿವೆ. ನಮ್ಮ ಪೂರ್ವಜರ ದವಡೆಗಳು ಮತ್ತು ಹಲ್ಲುಗಳು ನಮಗಿಂತ ದೊಡ್ಡದಾಗಿದ್ದವು. ಬರಗಾಲದ ಕಾರಣ ಪ್ರಾಣಿಗಳ ಶವಗಳನ್ನು ಹಿಡಿದು ಹರಿತವಾದ ಆಯುಧಗಳಿಂದ ಕತ್ತರಿಸಿ ಮಾಂಸದ ತುಂಡುಗಳನ್ನು ಹಸಿಯಾಗಿಯೇ ತಿನ್ನುತ್ತಿದ್ದರು.
ಆದಿಮಾನವರಿಗೆ ಹೋಲಿಸಿದರೆ ನಮ್ಮ ಮೆದುಳಿನ ಗಾತ್ರ ದೊಡ್ಡದು. ಈ ಮೆದುಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಒಂದು ಟನ್ ಶಕ್ತಿಯ ಅಗತ್ಯವಿದೆ. ನಮ್ಮ ದೇಹದ ಶಕ್ತಿಯ ಸುಮಾರು 20% ಶಕ್ತಿ, ಕೇವಲ ಮೆದುಳಿನ ಕೆಲಸಕ್ಕಾಗಿಯೇ ಬಳಕೆಯಾಗಯತ್ತದೆ. ಹೀಗಾಗಿ ಆದಿ ಮಾನವರು ಈ ಶಕ್ತಿಗಾಗಿ ಮಾಂಸಾಹಾರ ಸೇವಿಸಲು ಆರಂಭಿಸಿದರು ಎಂಬ ವಾದವಿದೆ. ಆ ದಿನಗಳಲ್ಲಿ ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಮಾಂಸವು ಪ್ರಮುಖ ಪಾತ್ರ ವಹಿಸುತ್ತಿತ್ತು ಎಂದು ಹೇಳಲಾಗುತ್ತದೆ. ಮೊದಲೇ ಹೇಳಿದಂತೆ, ಹೋಮಿನಿನ್‌ಗಳು ಹೆಚ್ಚಾಗಿ ಹಣ್ಣುಗಳು, ಎಲೆಗಳು ಮತ್ತು ಗೆಡ್ಡೆಗಳನ್ನು ತಿಂದು ಬದುಕಿದ್ದರು. ಇವು ಬೇಗ ಜೀರ್ಣವಾಗುತ್ತದೆ. ಮಾನವನ ವಿಕಾಸದ ಹಂತದಲ್ಲಿ ಹೊಟ್ಟೆಯ ಗಾತ್ರ ಹೆಚ್ಚಾಗುತ್ತಾ ಬಂದಿದೆ. ಜೀರ್ಣಕ್ರಿಯೆಯಲ್ಲಿಯೂ ಬದಲಾವಣೆಗಳಿವೆ. ಹೀಗಾಗಿ ದೇಹದ ಶಕ್ತಿಗಾಗಿ ಹೆಚ್ಚು ಆಹಾರದ ಅಗತ್ಯವಿತ್ತು. ಮಾಂಸವು ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವಾಗಿದೆ. ಹೀಗಾಗಿ ದೇಹದ ಶಕ್ತಿ ಹೆಚ್ಚಿಸಲು ಮಾಂಸಾಹಾರ ಸೇವನೆ ಹೆಚ್ಚಾಯಿತು ಎಂಬ ವಾದವಿದೆ.
ನೀವು ಮಾಂಸವನ್ನು ಏಕೆ ಇಷ್ಟಪಡುತ್ತೀರಿ?
ಯಾವಾಗ ಬೆಂಕಿ ಹುಟ್ಟಿತೋ, ಆಮೇಲೆ ಮಾಂಸವನ್ನು ಜೀರ್ಣಿಸಿಕೊಳ್ಳುವುದು ಸುಲಭವಾಯಿತು. ಹಸಿ ಮಾಂಸವನ್ನು ಬೆಂಕಿಯಲ್ಲಿ ಬೇಯಿಸಿ ಅಥವಾ ಸುಟ್ಟು ತಿನ್ನಲು ಪ್ರಾರಂಭಿಸಲಾಯ್ತು. ಕ್ರಮೇಣ ಇದರ ಜೀರ್ಣಕ್ರಿಯೆಗೆ ಬೇಕಾದ ಶಕ್ತಿ ಕೂಡಾ ಕಡಿಮೆಯಾಯಿತು. ಬಳಿಕ ಮೆದುಳು ಕೂಡಾ ಚೆನ್ನಾಗಿ ಕೆಲಸ ಮಾಡಿತು. ಈಗ ಮನುಷ್ಯರ ಜೀವನದಲ್ಲಿ ಮಾಂಸಾಹಾರ ಸೇವನೆ ಸಾಮಾನ್ಯ ವಿಷಯವಾಗಿದೆ. ಆ ಕಾಲಕ್ಕೂ ಈ ಕಾಲಕ್ಕೂ ವ್ಯತ್ಯಾಸ ಇಷ್ಟೇ. ಆ ಕಾಲದಲ್ಲಿ ಆಹಾರ ತಿನ್ನುವುದು ಅನಿವಾರ್ಯವಾಗಿದ್ದ ಕಾರಣಕ್ಕೆ ಆದಿಮಾನವರು ಮಾಂಸಾಹಾರ ತಿಂದರು. ಈಗ ನಾವು ಇಷ್ಟಪಟ್ಟು ತಿನ್ನುತ್ತಿದ್ದೇವೆ.
ಆಹಾರ ಕ್ರಮ ಅವರವರ ಇಚ್ಛೆಗೆ ಬಿಟ್ಟಿದ್ದು. ಅನಾದಿಕಾಲದಿಂದಲೂ ಮಾಂಸಾಹಾರ ಸೇವನೆ ಆಹಾರಕ್ರಮದ ಒಂದು ಭಾಗವಾಗಿದೆ. ಇಚ್ಛೆಯಿದ್ದರೆ, ಯಾರಾದರೂ ತಿನ್ನಬಹುದು. ಇಲ್ಲವಾದಲ್ಲಿ ಇಲ್ಲ.
ವಿಭಾಗ