logo
ಕನ್ನಡ ಸುದ್ದಿ  /  ಜೀವನಶೈಲಿ  /  High Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಿಸುವ ಅನಾರೋಗ್ಯಕರ ಆಹಾರಕ್ರಮಗಳಿವು; ಇವುಗಳನ್ನು ತ್ಯಜಿಸುವುದು ಅವಶ್ಯ

High Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಿಸುವ ಅನಾರೋಗ್ಯಕರ ಆಹಾರಕ್ರಮಗಳಿವು; ಇವುಗಳನ್ನು ತ್ಯಜಿಸುವುದು ಅವಶ್ಯ

Reshma HT Kannada

Apr 17, 2023 02:50 PM IST

google News

ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿಸುವ ಆಹಾರ ಪದಾರ್ಥಗಳು

    • High Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಅಧಿಕವಾಗುವುದರಿಂದ ಹೃದಯ ಸಂಬಂಧೀ ಸಮಸ್ಯೆಗಳು, ಪಾರ್ಶ್ವವಾಯು ಹಾಗೂ ಮಧುಮೇಹದಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಮ್ಮ ದೈನಂದಿನ ಕ್ರಮದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಹೀಗಿವೆ.
ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿಸುವ ಆಹಾರ ಪದಾರ್ಥಗಳು
ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿಸುವ ಆಹಾರ ಪದಾರ್ಥಗಳು

ಜಡ ಜೀವನಶೈಲಿಯು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಅಸರ್ಮಕ ಆಹಾರಕ್ರಮಗಳೊಂದಿಗೆ ಕೂಡ ಸಂಯೋಜಿಸಲ್ಪಟ್ಟಿದೆ. ಇದರಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು.

ಉಪ್ಪಿನಾಂಶ ಹಾಗೂ ಸಕ್ಕರೆಯ ಪ್ರಮಾಣ ಅಧಿಕವಿರುವ ಆಹಾರ ಕೂಡ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಯಾವುದೇ ವ್ಯಾಯಾಮವಿಲ್ಲದೆ ದಿನವಿಡಿ ಕುಳಿತಿರುವುದು, ಕೊಬ್ಬಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯು ಹೃದ್ರೋಗ, ಮಧುಮೇಹ, ಯಕೃತ್ತಿನಲ್ಲಿ ಕೊಬ್ಬಿನಾಂಶ ಸಂಗ್ರಹವಾಗುವುದು ಹಾಗೂ ಇತರ ಮಾರಣಾಂತಿಕ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿವೆ ಎಂಬುದನ್ನು ನಾವು ಇತ್ತೀಚಿನ ವರದಿಗಳಲ್ಲಿ ನೋಡಿದ್ದೇವೆ. 

ವೇಗದ ಜೀವನಶೈಲಿಯಲ್ಲಿ ಸಂಸ್ಕರಿತ ಆಹಾರ ಸೇವನೆಯ ಪ್ರಮಾಣವೂ ಹೆಚ್ಚಿದೆ. ಈ ನಡುವೆ ಊಟದ ನಡುವೆ ಅನಾರೋಗ್ಯಕರ ಹಾಗೂ ಅಜಾಗರೂಕತೆಯಿಂದ ತಿನ್ನುವುದು ಕೂಡ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಲು ಕಾರಣವಾಗಬಹುದು.

ಪೌಷ್ಟಿಕ ತಜ್ಞೆ ಅವಂತಿ ದೇಶಪಾಂಡೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ಗಳ ಪ್ರಮಾಣ ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

ಬೇಕರಿ ಉತ್ಪನ್ನಗಳ ಸೇವನೆ

ಬಿಸ್ಕತ್ತು, ಕೇಕ್‌ಗಳು, ಪೇಸ್ಟ್ರಿ, ಪಫ್‌, ಕ್ರೀಮ್‌ರೋಲ್‌ನಂತಹ ಬೇಕರಿ ಉತ್ಪನ್ನಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅಂಶ ಹೆಚ್ಚಲು ಕಾರಣವಾಗಬಹುದು. ಈ ಖಾದ್ಯಗಳನ್ನು ವನಸ್ಪತಿ ಅಥವಾ ಮಾರ್ಗರೀನ್‌ನಂತಹ ಸಸ್ಯಜನ್ಯ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಟ್ರಾನ್ಸ್‌ ಕೊಬ್ಬಿನಾಂಶದ ಪ್ರಮಾಣ ಹೆಚ್ಚಿರುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ ಹೆಚ್ಚುವಂತೆ ಮಾಡುತ್ತದೆ.

ಫ್ರೋಜನ್‌ ಫುಡ್‌ 

ಫ್ರೋಜನ್‌ ಮಾಂಸಗಳಾದ ಸಾಸೇಜ್‌ಗಳು, ಸಲಾಮಿ, ಬರ್ಗರ್‌ ಪ್ಯಾಟಿಸ್‌ ಇತ್ಯಾದಿಗಳನ್ನು ಹೊಗೆ ಅಥವಾ ಅಧಿಕ ಉಪ್ಪಿನಾಂಶ, ರಾಸಾಯನಿಕ ಸಂರಕ್ಷಕಗಳನ್ನು ಸೇರಿಸುವ ಮೂಲಕ ಸಂರಕ್ಷಿಸಲಾಗುತ್ತದೆ. ಈ ಪದಾರ್ಥಗಳು ಕೇವಲ ಕೆಟ್ಟ ಕೊಲೆಸ್ಟ್ರಾಲ್‌ ಮಾತ್ರವಲ್ಲ, ಕಾರ್ಸಿನೋಜೆನಿಕ್‌ ಕೂಡ ಆಗಿರುತ್ತವೆ. ಈ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.

ಸ್ನ್ಯಾಕ್ಸ್‌ ರೂಪದಲ್ಲಿ ಫಾಸ್ಟ್‌ಫುಡ್‌ ಸೇವನೆ

ಭಾಜಿ, ಸಮೋಸಾದಂತಹ ಭಾರತೀಯ ತಿಂಡಿಗಳಿಂದ ಹಿಡಿದು ಪಿಝ್ಜಾ, ಬರ್ಗರ್‌ನಂತಹ ಪಾಶ್ಚಾತ್ಯ ಫಾಸ್ಟ್‌ಫುಡ್‌ಗಳವರೆಗೆ ಇವುಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅಂಶ ಅಧಿಕವಾಗಿರುತ್ತದೆ. ಇವುಗಳಲ್ಲಿ ಸ್ಯಾಚುರೇಟೆಡ್‌ ಕೊಬ್ಬಿನ ಅಂಶಗಳೂ ಅಧಿಕವಾಗಿರುತ್ತದೆ. ಕೆಲವೊಂದು ಎಣ್ಣೆ ಪದಾರ್ಥಗಳು, ಕೊಬ್ಬಿನಾಂಶ ಹೆಚ್ಚಿರುವ ಪದಾರ್ಥಗಳು, ಕಾರ್ಬೋಹೈಡ್ರೇಟ್‌ ಅಂಶ ಹೆಚ್ಚಿರುವ ಪದಾರ್ಥಗಳು ಮತ್ತು ನಾರಿನಾಂಶ ಕಡಿಮೆ ಇರುವ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇವು ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸುವುದು ಮಾತ್ರವಲ್ಲ ಬೊಜ್ಜು, ಮಧುಮೇಹ ಹಾಗೂ ಪಿಸಿಒಎಸ್‌ನಂತಹ ಸಮಸ್ಯೆ ಹೆಚ್ಚಲು ಕಾರಣವಾಗಬಹುದು.

ಕಡಿಮೆ ಪ್ರಮಾಣದಲ್ಲಿ ಹಣ್ಣು ತರಕಾರಿ ಸೇವನೆ

ಹಣ್ಣು ಹಾಗೂ ತರಕಾರಿಗಳಲ್ಲಿ ನಾರಿನಾಂಶ ಹೆಚ್ಚಿದ್ದು ಇವು ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತವೆ. ಜೊತೆಗೆ ದೇಹಕ್ಕೆ ಉತ್ತಮ ಎನ್ನಿಸುವ ಕೊಬ್ಬಿನಾಂಶದ ಪ್ರಮಾಣ ಹೆಚ್ಚಲು ನೆರವಾಗುತ್ತವೆ. ಇದರೊಂದಿಗೆ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿವೆ. ಇವು ದೇಹದಿಂದ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತವೆ ಮತ್ತು ಯಕೃತ್ತು, ಕರುಳು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳನ್ನು ಶುದ್ಧೀಕರಿಸುತ್ತವೆ.

ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳು

ಪೊಟ್ಟಣದಲ್ಲಿರುವ ಹಣ್ಣಿನ ರಸಗಳು, ಫ್ರಕ್ಟೋಸ್ ಅಂಶ ಹೆಚ್ಚಿರುವ ಕಾರ್ನ್ ಸಿರಪ್ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸಬಹುದು. ಬಿಳಿಬ್ರೆಡ್‌ ಅಥವಾ ಸಿಹಿತಿಂಡಿಗಳ ಕೊಬ್ಬಿನಾಂಶ ಕಡಿಮೆ ಇದ್ದರೂ ಸಿಹಿಯ ಅಂಶ ಹೆಚ್ಚಿರುತ್ತದೆ. ಈ ಸಿಹಿ ಅಂಶ ದೇಹದಲ್ಲಿ ಕೊಬ್ಬಿನಾಂಶವಾಗಿ ಪರಿವರ್ತನೆಯಾಗುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಲು ಕಾರಣವಾಗಬಹುದು.

ಇದರೊಂದಿಗೆ ಸಂಸ್ಕರಿತ ಆಹಾರ ಪದಾರ್ಥಗಳ ಸೇವನೆ, ಕರಗುವ ನಾರಿನಂಶದ ಪ್ರಮಾಣ ಕಡಿಮೆ ಇರುವ ಆಹಾರ ಪದಾರ್ಥಗಳು ಕೂಡ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸಬಹುದು. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ