logo
ಕನ್ನಡ ಸುದ್ದಿ  /  ಜೀವನಶೈಲಿ  /  Home Gardening: ಮನೆಯ ಸುತ್ತ ಹಾವುಗಳು ಸುಳಿಯದಂತೆ ಮಾಡಲು ಈ ಸಸ್ಯಗಳನ್ನು ಬೆಳೆಸಿ; ನೆಮ್ಮದಿಯಾಗಿರಿ

Home Gardening: ಮನೆಯ ಸುತ್ತ ಹಾವುಗಳು ಸುಳಿಯದಂತೆ ಮಾಡಲು ಈ ಸಸ್ಯಗಳನ್ನು ಬೆಳೆಸಿ; ನೆಮ್ಮದಿಯಾಗಿರಿ

Reshma HT Kannada

Jun 11, 2023 11:00 AM IST

google News

ಮನೆಯ ಸುತ್ತ ಹಾವು ಬರದಂತೆ ತಡೆಯಲು ಈ ಸಸ್ಯಗಳನ್ನು ಬೆಳೆಸಿ

    • Snake Repellent Plants: ಬೇಸಿಗೆ ಹಾಗೂ ಮಳೆಗಾಲದಲ್ಲಿ ಮನೆಯ ಪರಿಸರದಲ್ಲಿ ಹಾವುಗಳು ಸುಳಿಯುವುದು ಸಾಮಾನ್ಯ. ಯಾವಾಗ ಯಾವ ಮೂಲೆಯಿಂದ ಹಾವುಗಳು ಬರುತ್ತವೋ ಎಂದು ಭಯ ಪಡುತ್ತೇವೆ ಆದರೆ ಮನೆಯ ಬಳಿ ಈ ಸಸ್ಯಗಳನ್ನು ಬೆಳೆಸುವ ಮೂಲಕ ಹಾವುಗಳು ಬಾರದಂತೆ ತಡೆಯಬಹುದು. ಅಂತಹ ಸಸ್ಯಗಳು ಯಾವುವು ನೋಡಿ. 
ಮನೆಯ ಸುತ್ತ ಹಾವು ಬರದಂತೆ ತಡೆಯಲು ಈ ಸಸ್ಯಗಳನ್ನು ಬೆಳೆಸಿ
ಮನೆಯ ಸುತ್ತ ಹಾವು ಬರದಂತೆ ತಡೆಯಲು ಈ ಸಸ್ಯಗಳನ್ನು ಬೆಳೆಸಿ

ಬೇಸಿಗೆಗಾಲವಿರಲಿ, ಮಳೆಗಾಲವಿರಲಿ ಮನೆಯ ಸುತ್ತಲೂ ಹಾವುಗಳು ಸುಳಿಯುವುದು ಸಹಜ. ಅದರಲ್ಲೂ ಅವುಗಳಿಗೆ ನೆಲೆಸಲು ಸೂಕ್ತ ಜಾಗ ಸಿಕ್ಕರೆ ಅಲ್ಲೇ ಠಿಕಾಣಿ ಹೂಡಿ ಬಿಡುತ್ತವೆ. ಕೆಲವೊಮ್ಮೆ ಹಾವುಗಳ ಇರುವುದು ಅರಿವಿಗೂ ಬರುವುದಿಲ್ಲ. ಹಾಗಂತ ಹಾವುಗಳನ್ನು ಮನೆಯಲ್ಲಿ ಇರಿಸಿಕೊಳ್ಳಲೂ ಸಾಧ್ಯವಿಲ್ಲ. ಕೆಲವರು ಮನೆಯ ಸುತ್ತ ಹಾವುಗಳ ಬರದಂತೆ ತಡೆಯಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಆದರೂ ಸಾಧ್ಯವಾಗಿರುವುದಿಲ್ಲ.

ಆದರೆ ಮನೆಯ ಗಾರ್ಡನ್‌ನಲ್ಲಿ ಹಾವುಗಳನ್ನು ಓಡಿಸುವ ಗಿಡಗಳನ್ನು ನೆಡುವ ಮೂಲಕ ಭಯದಿಂದ ದೂರವಾಗಬಹುದು.

ʼಎಲ್ಲಾ ಜಾತಿಯ ಹಾವುಗಳನ್ನು ದೂರವಿಡಲು ಯಾವುದೇ ಮ್ಯಾಜಿಕ್‌ ಸಸ್ಯಗಳಿಲ್ಲ. ವಿಭಿನ್ನ ಸಸ್ಯಗಳು ವಿಭಿನ್ನ ಗುಣವನ್ನು ಹೊಂದಿವೆ. ಅದರಲ್ಲಿ ಕೆಲವು ಸಸ್ಯಗಳು ಹಾವಿನ ವಿರೋಧಿ ಆಗಿರಬಹುದು. ಅವು ಹಾವುಗಳನ್ನು ಮನೆಯ ಸುತ್ತ ಸುಳಿಯದಂತೆ ಮಾಡಬಹುದು. ಆದರೆ ನಿಮ್ಮ ಮನೆಯ ಸುತ್ತ ಯಾವ ಜಾತಿ ಹಾವು ಬರುತ್ತದೆ ಎಂಬುದರ ಮೇಲೆ ಸಸ್ಯಗಳ ಪರಿಣಾಮಕಾರಿ ಹೌದೋ, ಅಲ್ಲವೋ ಎಂಬುದು ನಿರ್ಧರಿತವಾಗುತ್ತದೆʼ ಎನ್ನುತ್ತಾರೆ ತಜ್ಞರು.

ಹಾಗಾದರೆ ಹಾವು ನಿವಾರಕ ಸಸ್ಯಗಳು ಯಾವುವು, ಮುಂದೆ ಓದಿ.

ಸ್ನೇಕ್‌ ಪ್ಲಾಂಟ್‌

ಅತ್ತೆಯ ನಾಲಿಗೆ ಎಂದೂ ಕರೆಯಲ್ಪಡುವ ಸ್ನೇಕ್‌ ಪ್ಲಾಂಟ್‌ ಹಾವು ನಿವಾರಕ ಸಸ್ಯವಾಗಿದೆ. ಸಾಮಾನ್ಯವಾಗಿ ಮನೆ, ಕಚೇರಿಗಳಲ್ಲಿ ಶೋ ಪ್ಲಾಂಟ್‌ ಆಗಿ ಇದನ್ನು ನೆಡಲಾಗುತ್ತದೆ. ಇದು ಹಾವಿನ ಮೈಚರ್ಮದಂತೆ ಕಾಂಡಗಳನ್ನು ಹೊಂದಿರುವ ಕಾರಣದಿಂದ ಇದಕ್ಕೆ ಈ ಹೆಸರು ನೀಡಲಾಗಿದೆ. ಇದರ ಹಿಂದೆ ಪೌರಾಣಿಕ ಕಥೆಯೂ ಇದೆ. ಹಾವುಗಳು ಈ ಸಸ್ಯಗಳಿಗೆ ಹೆದರಿ ಆ ಪರಿಸರದಲ್ಲಿ ಸುಳಿಯುವುದಿಲ್ಲ.

ಹಾಲಿ ಗಿಡ

ಹಾಲಿಗಿಡಗಳಿಗೆ ಹಾವು ಹೆದರುತ್ತವೆ. ಈ ಗಿಡವು ಕೆಂಪು ಹಣ್ಣುಗಳು ಮತ್ತು ಉದ್ದನೆಯ ಎಲೆಗಳನ್ನು ಹೊಂದಿರುತ್ತವೆ. ಈ ಸಸ್ಯಗಳ ಮೇಲ್ಮೈ ಮುಳ್ಳಿನಿಂದ ಕೂಡಿದ್ದು ಹಾವುಗಳು ಹತ್ತಿರ ಬರಲು ಹೆದರುತ್ತವೆ. ಹಾವುಗಳು ಮನೆಯ ಸುತ್ತ ಸುಳಿಯದಂತೆ ಮಾಡಲು ಹಾಲಿ ಗಿಡದ ಎಲೆಯನ್ನು ಹರಡಬಹುದು.

ಸೇವಂತಿ (ಕ್ರಿಸಾಂಥೆಮಮ್ಸ್)

ಸೇವಂತಿ ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಕೈದೋಟದ ಅಂದ ಹೆಚ್ಚುವುದು ಮಾತ್ರವಲ್ಲ, ಇವು ಹಾವು ಕೂಡ ಸುಳಿಯದಂತೆ ನೋಡಿಕೊಳ್ಳುತ್ತವೆ. ಈ ಸಸ್ಯಗಳಲ್ಲಿ ಪೈರೆಥ್ರಮ್‌ ಎಂಬ ರಾಸಾಯನಿಕ ಅಂಶವಿದ್ದು, ಇದು ಹಾವುಗಳನ್ನು ದೂರ ಓಡಿಸುತ್ತವೆ. ಈ ರಾಸಾಯನಿಕವನ್ನು ಕೇವಲ ಹಾವು ಓಡಿಸಲು ಮಾತ್ರವಲ್ಲ, ಇವುಗಳನ್ನು ಬೆಳೆಗಳ ಮೇಲೆ ಸಿಂಪಡಿಸುವ ಮೂಲಕ ಹುಳಗಳು, ಇರುವೆಗಳನ್ನು ದೂರ ಓಡಿಸಬಹುದು.

ಚೆಂಡು ಹೂ

ಚೆಂಡು ಹೂವುಗಳು ಗಾಢ ಪರಿಮಳವನ್ನು ಹೊಂದಿರುತ್ತವೆ. ಆ ಪರಿಮಳವು ಹಾವುಗಳಿಗೆ ಭಯ ಹುಟ್ಟಿಸುತ್ತವೆ. ಅಲ್ಲದೆ ಮನೆಯ ಸುತ್ತಲೂ ಹಾವುಗಳು ಸುಳಿಯದಂತೆ ನೋಡಿಕೊಳ್ಳುತ್ತವೆ.

ವರ್ಮ್‌ವುಡ್‌ ಸಸ್ಯ

ವಿಶಾಲವಾದ ಉದ್ಯಾನದಲ್ಲಿ ಹಾವುಗಳು ಸುಲಭವಾಗಿ ಅವಿತುಕೊಳ್ಳಬಹುದು. ಆ ಕಾರಣಕ್ಕೆ ಉದ್ಯಾನದಲ್ಲಿ ತಪ್ಪದೇ ವರ್ಮ್‌ವುಡ್‌ ಸಸ್ಯ ಬೆಳೆಸಬೇಕು. ಈ ಸಸ್ಯದ ಪರಿಮಳಕ್ಕೆ ಹಾವುಗಳು ಆ ಪರಿಸರ ಸುತ್ತಲೂ ಸುಳಿಯಲು ಭಯ ಪಡುತ್ತವೆ. ಎರಡರಿಂದ ಮೂರು ಅಡಿ ಎತ್ತರ ಬೆಳೆಸುವ ಈ ಸಸ್ಯಗಳು ಜೇನುನೊಣಗಳು ಮನೆಯ ಬಳಿ ಸುಳಿಯುವುದನ್ನೂ ತಪ್ಪಿಸುತ್ತವೆ.

ಬಾಸಿಲಿಕಾ (ಬಾಸಿಲ್‌)

ತುಳಸಿ ಜಾತಿಯ ಈ ಸಸ್ಯವನ್ನು ಕೆಲವು ಪಾನೀಯಗಳು ಹಾಗೂ ಖಾದ್ಯಗಳ ತಯಾರಿಕೆಗೂ ಬಳಸುತ್ತಾರೆ. ಇದು ವಿಶಿಷ್ಟ ಪರಿಮಳವನ್ನು ಹೊಂದಿದೆ. ಇದರ ಪರಿಮಳವನ್ನು ಹಾವುಗಳು ತಡೆಯುವುದಿಲ್ಲ. ಆ ಕಾರಣಕ್ಕೆ ಅವು ಸುತ್ತೆಲ್ಲೂ ಸುಳಿಯುವುದಿಲ್ಲ.

ಬೆಳ್ಳುಳ್ಳಿ ಗಿಡ

ಮನೆಯ ಹಿತ್ತಲು ಅಥವಾ ಎದುರಿನ ಗಾರ್ಡನ್‌ನಲ್ಲಿ ಬೆಳ್ಳುಳ್ಳಿ ಗಿಡಗಳನ್ನು ಬೆಳೆಸುವುದರಿಂದ ಹಾವುಗಳು ಬರುವುದಿಲ್ಲ. ಬೆಳ್ಳುಳ್ಳಿಯ ಪರಿಮಳ ಹಾವುಗಳಿಗೆ ಅಲರ್ಜಿ. ಬೆಳ್ಳುಳ್ಳಿ ಬೆಳೆಯುವುದರಿಂದ ಒಗ್ಗರಣೆಗೆ ಮಾತ್ರವಲ್ಲ, ಹಾವು ಓಡಿಸಲು ಸಾಧ್ಯ.

ನಿಂಬೆಹಲ್ಲು

ನಿಂಬೆಹಲ್ಲಿನ ಪರಿಮಳವು ಹಾವುಗಳನ್ನು ದೂರ ಮಾಡುತ್ತದೆ. ಇದು ಕೂಡ ಭಿನ್ನ ಘಮವನ್ನು ಹೊಂದಿದ್ದು, ಹಾವುಗಳನ್ನು ದೂರ ಮಾಡಲು ಉತ್ತಮವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ