Oralu Chitranna Recipe: ತಿಂದವರೇ ಬಲ್ಲರು ಒರಳು ಚಿತ್ರಾನ್ನದ ರುಚಿಯ...ನಿಮಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ..ರೆಸಿಪಿ ನೋಡಿ
Jan 04, 2023 09:05 PM IST
ಒರಳು ಚಿತ್ರಾನ್ನ ರೆಸಿಪಿ
- ಚಿತ್ರಾನ್ನ, ಬಹಳ ಜನರ ಫೇವರೆಟ್ ತಿಂಡಿ. ಅದರಲ್ಲೂ ಹಿಂದಿನ ಕಾಲದಂತೆ ಒರಳಿನಲ್ಲಿ ಮಸಾಲೆ ರುಬ್ಬಿ ಮಾಡಿದ ಚಿತ್ರಾನ್ನ ಎಂದರೆ ಎಲ್ಲರೂ ಒಂದೆರಡು ತುತ್ತು ಹೆಚ್ಚಿಗೆ ತಿನ್ನುವುದರಲ್ಲಿ ಅನುಮಾನವೇ ಇಲ್ಲ. ಇದರ ರುಚಿಯೇ ಬಹಳ ವಿಭಿನ್ನ.
ಹಿಂದಿನ ಕಾಲದಲ್ಲಿ ಈಗಿನಂತೆ ಎಲ್ಲರ ಮನೆಯಲ್ಲೂ ಮಿಕ್ಸಿ ಇರುತ್ತಿರಲಿಲ್ಲ. ಆಗ ಒರಳು ಕಲ್ಲಿನಲ್ಲಿ ಕೆಲವೊಂದು ಸಾಮಗ್ರಿಗಳನ್ನು ರುಬ್ಬಿ ಚಿತ್ರಾನ್ನವನ್ನು ತಯಾರಿಸುತ್ತಿದ್ದರು. ಆದ್ದರಿಂದ ಇದಕ್ಕೆ ಒರಳು ಚಿತ್ರಾನ್ನ ಎಂದು ಕರೆಯುತ್ತಾರೆ. ಇದನ್ನು ಹಬ್ಬ ಹರಿದಿನಗಳಲ್ಲಿ ಕೂಡಾ ತಯಾರಿಸಬಹುದು. ಒರಳು ಚಿತ್ರಾನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
ಅಕ್ಕಿ - 2 ಕಪ್
ತೆಂಗಿನ ತುರಿ - 1 ಕಪ್
ಹುಣಿಸೆ ಹಣ್ಣು - ಚಿಕ್ಕ ನಿಂಬೆಕಾಯಿ ಗಾತ್ರದ್ದು
ಹಸಿಮೆಣಸಿನಕಾಯಿ - 3
ಜೀರ್ಗೆ - 1 ಟೀ ಸ್ಪೂನ್
ಬೆಲ್ಲ - ಒಂದು ಇಂಚು
ಕೊತ್ತಂಬರಿ ಸೊಪ್ಪು - 1/2 ಕಟ್ಟು
ಸಾಸಿವೆ - ಒಗ್ಗರಣೆಗೆ
ಕಡ್ಲೆ ಬೇಳೆ - ಒಗ್ಗರಣೆಗೆ
ಉದ್ದಿನ ಬೇಳೆ - ಒಗ್ಗರಣೆಗೆ
ಕಡ್ಲೆಕಾಯಿ ಬೀಜ - ಒಗ್ಗರಣೆಗೆ
ಹಿಂಗು - ಚಿಟಿಕೆ
ಅರಿಶಿನ - ಚಿಟಿಕೆ
ಕರಿಬೇವು - 2 ಎಸಳು
ಒಣಮೆಣಸಿನಕಾಯಿ
ಎಣ್ಣೆ - ಒಗ್ಗರಣೆಗೆ - 4
ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು, ಅಗತ್ಯಕ್ಕೆ ತಕ್ಕಷ್ಟು ನೀರು, ಒಂದೆರಡು ಚಮಚ ಎಣ್ಣೆ ಸೇರಿಸಿ ಉದುರಾಗಿ ಅನ್ನ ತಯಾರಿಸಿಕೊಳ್ಳಿ.
ತೆಂಗಿನ ತುರಿ, ನೆನೆಸಿದ ಹುಣೆಸೆ ಹಣ್ಣು, ಹಸಿಮೆಣಸಿನಕಾಯಿ, ಚಿಟಿಕೆ ಹಿಂಗು, ಜೀರ್ಗೆ, ಬೆಲ್ಲ, ಕೊತ್ತಂಬರಿ ಸೊಪ್ಪು ಸೇರಿಸಿ ನೀರು ಸೇರಿಸದಂತೆ ಒರಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ ( ಸಣ್ಣ ಉರಿ ಇರಲಿ).
ನಂತರ ಕಡ್ಲೆಕಾಯಿ ಬೀಜ ಸೇರಿಸಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಹಿಂಗು, ಅರಿಶಿನ, ಕರಿಬೇವು , ಒಣಮೆಣಸಿನಕಾಯಿ ಸೇರಿಸಿ ಕೆಲವು ಸೆಕೆಂಡ್‌ಗಳ ಕಾಲ ಹುರಿಯಿರಿ.
ನಂತರ ಗ್ರೈಂಡ್ ಮಾಡಿಕೊಂಡ ಮಿಶ್ರಣವನ್ನು ಒಗ್ಗರಣೆಯೊಂದಿಗೆ ಸೇರಿಸಿ ಉಪ್ಪು ಅಡ್ಜೆಸ್ಟ್ ಮಾಡಿ ಕಡಿಮೆ ಉರಿ ಇರಿಸಿ ಮಿಕ್ಸ್ ಮಾಡಿ.
ಮಿಶ್ರಣದಿಂದ ಎಣ್ಣೆ ಬಿಡುತ್ತಿದ್ದಂತೆ ಸ್ಟೋವ್ ಆಫ್ ಮಾಡಿ.
ಅನ್ನದೊಂದಿಗೆ ಈ ಮಿಶ್ರಣವನ್ನು ಸೇರಿಸಿ ಎಲ್ಲಾ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ, ಸರ್ವ್ ಮಾಡಿ.
ಗಮನಿಸಿ: ನಿಮ್ಮ ಮನೆಯಲ್ಲಿ ಒರಲು ಕಲ್ಲು ಇಲ್ಲದಿದ್ದರೆ ಮಿಕ್ಸಿಯಲ್ಲೇ ಗ್ರೈಂಡ್ ಮಾಡಿಕೊಳ್ಳಬಹುದು.
ಈ ರೆಸಿಪಿಗೆ ಅನ್ನ ಉದುರಾಗಿರಬೇಕು, ಆದ್ದರಿಂದ ಅನ್ನ ತಯಾರಿಸುವಾಗ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ.
ವಿಭಾಗ