ಎಲ್ಲರ ಕಣ್ಣು ನನ್ನ ಮೇಲಿವೆ ಅಂತ ನಿಮಗೂ ಅನ್ನಿಸ್ತಿದ್ಯಾ? ಇದನ್ನೇ ಸ್ಪಾಟ್‌ಲೈಟ್ ಸಿಂಡ್ರೋಮ್ ಅನ್ನೋದು; ಹೊರಬರಲು ಇಲ್ಲಿದೆ ಟಿಪ್ಸ್ -ಯುವ ಮನ
Mar 04, 2024 07:52 AM IST
ಯುವ ಮನ ಅಂಕಣ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್
- ಡಾ ರೂಪಾ ರಾವ್: ಕೆಲವರಿಗೆ ಎಲ್ಲರೂ ತಮ್ಮನ್ನು ಗಮನಿಸುತ್ತಿದ್ದಾರೆ, ತನ್ನಿಂದ ಏನಾದರೂ ತಪ್ಪಾದೀತು ಎನ್ನುವ ಹಿಂಜರಿಕೆ ಕಾಡುತ್ತಿರುತ್ತದೆ. ಸ್ಪಾಟ್ ಲೈಟ್ ಸಿಂಡ್ರೋಮ್ ಎನ್ನುವ ಈ ಸಮಸ್ಯೆ ಕುರಿತು ‘ಯುವ ಮನ’ ಅಂಕಣದಲ್ಲಿ ವಿವರಿಸಿದ್ದಾರೆ ಬೆಂಗಳೂರಿನ ಆಪ್ತ ಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್.
ಪ್ರಶ್ನೆ: ಮೇಡಮ್ ನನಗೆ 22 ವರ್ಷ. ಮೊದಲಿನಿಂದಲೂ ನಾನು ಹೊರಗೆ ಹೋಗುವಾಗ ಎಲ್ಲರ ಕಣ್ಣುಗಳು ನನ್ನ ಮೇಲಿವೆ ಎಂದು ಭಾಸವಾಗುತ್ತಿರುತ್ತದೆ. ಅದು ನನ್ನನ್ನು ತುಂಬಾ ಕಂಗಾಲಾಗಿಸಿಬಿಟ್ಟಿದೆ. ನಾನೇನೋ ಸೆಲೆಬ್ರಿಟಿಯಾಗಿರುವಂತಹ ವಿಚಿತ್ರ ಭಾವನೆ. ಆದರೆ ನಾನು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿ. ನನ್ನ ಮೇಲೆ ಎಲ್ಲರ ಗಮನದ ಕೇಂದ್ರವಾಗುವ ಬಗ್ಗೆ ಭಯ ಉಂಟಾಗುತ್ತಿದೆ. ಈ ಯೋಚನೆಯಿಂದಾಗಿ ನಾನು ಹೊರಗೆ ಹೋಗಲು ಹಿಂಜರಿಯುತ್ತೇನೆ. ಸಾರ್ವಜನಿಕವಾಗಿ ನಾನು ನಿರಾಳವಾಗಿ ಹೊರಗಡೆ ಹೋಗಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಿಂತೆ ಭಯ ಇಲ್ಲದೆ ಓಡಾಡಬೇಕು. ಈ ಸಮಸ್ಯೆಯನ್ನು ಎದುರಿಸುವ ಕುರಿತು ಯಾವುದಾದರೂ ಸಲಹೆ ಕೊಡ್ತಿರಾ?
ಉತ್ತರ: ನೀವು ಹೇಳಿದ ಸಮಸ್ಯೆಯ ಪ್ರಕಾರ ಇದು ಲೈಮ್ ಲೈಟ್ ಸಿಂಡ್ರೋಮ್ ಅಥವಾ ಸ್ಪಾಟ್ ಲೈಟ್ ಸಿಂಡ್ರೋಮ್ (Spotlight Syndrome) ಇರಬಹುದು ಎನಿಸುತ್ತದೆ. ಏನಿದು ಸ್ಪಾಟ್ ಲೈಟ್ ಸಿಂಡ್ರೋಮ್? ತಿಳಿಯೋಣ ಬನ್ನಿ. ಸ್ಪಾಟ್ ಲೈಟ್ ಸಿಂಡ್ರೋಮ್ ಎಂದರೆ ನೀವು ಹೇಳಿದ ಹಾಗೆಯೇ ನಾನು ಎಲ್ಲರ ಕೇಂದ್ರ ಬಿಂದು, ನನ್ನನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎಂಬ ಎಚ್ಚರ. ಇದು ಸಾಮಾನ್ಯವಾಗಿ ಹದಿಹರೆಯದವರಲ್ಲಿ ಜಾಸ್ತಿ ಇರುತ್ತದೆ. ವಯಸ್ಸಾಗುತ್ತಾ ಈ ಮನಃಸ್ಥಿತಿ ಕಡಿಮೆ ಆಗುತ್ತಾ ಹೋಗುತ್ತದೆ. ಏಕೆ ಹದಿಹರೆಯದಲ್ಲಿ ಇದು ಜಾಸ್ತಿ ಎಂದು ಕೇಳಿದರೆ ಇಲ್ಲೊಂದು ಹೊಸ ಪದ ಹೇಳುವೆ. ಹದಿಹರೆಯ ಹಾಗೂ ಅದರ ನಂತರದ ಒಂದೆರೆಡು ವರ್ಷಗಳಲ್ಲಿ 'ಇಗೊ ಸೆಂಟ್ರಿಕ್ ಬಯಾಸ್' ಹೆಚ್ಚು ಇರುತ್ತದೆ.
ಅಂದರೆ ಸ್ವಕೇಂದ್ರಿತ ನಿಲುವು. ನೀವು ಚಿಕ್ಕ ಮಕ್ಕಳ ಜೊತೆ ಮಾತಾಡಿ ನೋಡಿ ಅವರ ಮಾತು ಅವರ ಸುತ್ತಲೇ ಇರುತ್ತದೆ. ಹದಿಹರೆಯದವರಲ್ಲಿ 25 ವರ್ಷದವರೆಗೂ ಇದೇ ಇಗೋ ಸೆಂಟ್ರಿಕ್ ಬಯಾಸ್ ಅನ್ನು ನೀವು ಕಾಣಬಹುದು. ಇದಕ್ಕೆ ಕಾರಣ ಮಿದುಳಿನ ಬೆಳವಣಿಗೆ. ಅಂದರೆ ಮಿದುಳಿನಲ್ಲಿ ತಾರ್ಕಿಕ ಮತ್ತು ಸಮಂಜಸ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವ ಭಾವದ ಬೆಳವಣಿಗೆಯು 25 ವರ್ಷಕ್ಕೆ ಮುಗಿಯುತ್ತದೆ. ಆದ್ದರಿಂದಲೇ ದುಡುಕು, ದಿಢೀರ್ ಎಂದು ತೀರ್ಮಾನಕ್ಕೆ ಬರುವುದು, ಜಗಳ ಆಕ್ರೋಶ , ಕ್ರೋಧ, ಪ್ರೀತಿ, ಬ್ರೇಕಪ್ ಎಲ್ಲವೂ ಈ ವಯೋಮಾನದವರಲ್ಲಿಯೇ ಹೆಚ್ಚು.
ಸ್ಪಾಟ್‌ಲೈಟ್ ಸಿಂಡ್ರೋಮ್‌ಗೆ ಕಾರಣಗಳಲ್ಲಿ ಕೆಳಗಿನವುಗಳು ಯಾವುದಾದರೂ ಇರಬಹುದು.
1) ಪರಿಪೂರ್ಣರಾಗುವ ತುಡಿತ: ನಾನು ನೋಡುವವರ ಕಣ್ಣಿಗೆ ಪರಿಪೂರ್ಣನಾಗಿರಬೇಕು. ಆದರೆ ನಾನು ಪರಿಪೂರ್ಣನಲ್ಲ ಎನ್ನುವ ಮನೋಭಾವ. ಉದಾಹರಣೆಗೆ ನಿಮ್ಮ ಬಟ್ಟೆ ಅಥವ ಕೂದಲು ಸರಿ ಮಾಡಿಕೊಳ್ಳುವುದು, ಮಾತಾಡುವಾಗ ತೀರಾ ಪಾಲೀಶ್ಡ್ ಆಗಿ ಮಾತಾಡಲು ಪ್ರಯತ್ನಿಸುವುದು.
2) ರೋಲ್ ಮಾಡೆಲ್/ ಫೇಮಸ್ ಎಂಬ ಭ್ರಮೆ: ಬಹುತೇಕ ಹದಿಹರೆಯದಲ್ಲಿ ಬರುವ ಯೋಚನೆ ಇದು .ಹಾಗಾಗಿಯೇ ಹದಿವಯಸಿನಲ್ಲಿ ಉಪದೇಶ ಮಾಡುವ ರೀಲ್‌ಗಳನ್ನು ಮಾಡುವುದು ಜಾಸ್ತಿ. ಲೋಕದ ವಾಸ್ತವಗಳ ಬಗ್ಗೆ ಯಥಾರ್ಥವಾಗಿ ತಿಳಿಯದಿರುವಾಗ ಈ ರೀತಿ ಭ್ರಮೆ ಇರುತ್ತದೆ.
3) ಇತರರ ಅಭಿಪ್ರಾಯಕ್ಕೆ ಹೆಚ್ಚು ಒತ್ತು: ತನ್ನ ಬಗ್ಗೆ ಇತರರು ಏನು ಹೇಳುತ್ತಾರೆ ಎನ್ನುವುದಕ್ಕೆ ಹೆಚ್ಚು ಒತ್ತು ಕೊಡುವುದು.
4) ಸ್ವಂತ ಅಭಿಪ್ರಾಯದ ಮೇಲೆ ನಂಬಿಕೆ ಕಡಿಮೆ: ಇಂಥವರು ಸ್ವಂತ ನಿರ್ಧಾರ ತೆಗೆದುಕೊಳ್ಳುವಾಗಲೂ ಇತರರು ಏನು ತಿಳಿದುಕೊಳ್ಳುತ್ತಾರೋ ಎಂದು ಯೋಚಿಸುತ್ತಾರೆ.
5) ಕೀಳರಿಮೆ ಅಥವಾ ಮೇಲರಿಮೆ: ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದರಿಂದ ತಮ್ಮ ಸಾಮರ್ಥ್ಯದ ಬಗ್ಗೆ ಕೀಳರಿಮೆ ಅಥವಾ ಮೇಲರಿಮೆಯಿಂದ ಬಳಲುತ್ತಾರೆ.
ಸ್ಪಾಟ್‌ಲೈಟ್ ಸಿಂಡ್ರೋಮ್ ಪ್ರಯೋಗ
ಒಂದು ಕಾಲೇಜಿನ ಒಂದಷ್ಟು ವಿದ್ಯಾರ್ಥಿಗಳಿಗೆ ಸ್ವಲ್ಪ ವಿಚಿತ್ರವಾದ ಟೀ ಶರ್ಟ್ ಅನ್ನು ಧರಿಸುವಂತೆ ಹೇಳಿದರು, ನಂತರ ಇದನ್ನು ಎಷ್ಟು ಜನ ಗಮನಿಸಬಹುದೆಂಬ ಅಂದಾಜು ಕೇಳಿದರು. ಆ ವಿದ್ಯಾರ್ಥಿಗಳು ತಮ್ಮೆಲ್ಲಾ ಸಹಪಾಠಿಗಳು ಇದನ್ನು ಗಮನಿಸುತ್ತಾರೆ ಎಂದರು. ವಾಸ್ತವದಲ್ಲಿ ಕೇವಲ ಶೇ 25 ರಷ್ಟು ಜನರು ಮಾತ್ರ ಗಮನಿಸಿದ್ದರು. ಇದರಿಂದ ಗೊತ್ತಾಗುವುದೇನೆಂದರೆ ಸ್ಪಾಟ್ ಲೈಟ್ ಸಿಂಡ್ರೋಮ್ ಸಾಮಾನ್ಯ. ನಿಮಗಿರುವ ಈ ಸಿಂಡ್ರೋಮ್‌ನಿಂದ ಸುಲಭವಾಗಿ ಹೊರಬರಬಹುದು.
ಇದರಿಂದ ಹೊರಬರಬೇಕು ಅಂದರೆ ಇತರರನ್ನು ಗಮನಿಸುತ್ತಿರಬೇಕು. ಆಗ ನಮಗೆ ನಮ್ಮ ಮೇಲಿನ ಅತೀವ ನಿಗಾ ಕಡಿಮೆ ಆಗುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಪರಿಪೂರ್ಣತೆ ಎಲ್ಲ ಕಾಲದಲ್ಲಿಯೂ ಸಾಧ್ಯವಿಲ್ಲ. ಎಲ್ಲರೂ ಪರಿಪೂರ್ಣರಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಹಳ ಮುಖ್ಯ ಅಂಶವೆಂದರೆ ಜನರಿಗೆ ಅವರವರ ಚಿಂತೆ, ಮಾತು ಯೋಚನೆಯಲ್ಲಿ ಮುಳುಗಿರಲೇ ಸಮಯ ಸಾಲುತ್ತಿಲ್ಲ. ಎಷ್ಟೋ ಸೆಲೆಬ್ರಿಟಿಗಳನ್ನೇ ಜನರು ಕೇರ್ ಮಾಡುವುದಿಲ್ಲ. ಇನ್ನು ನಮ್ಮನ್ನು ಗಮನಿಸಿ ಏನು ಮಾಡುತ್ತಾರೆ ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು.
ಈ ಸ್ಪಾಟ್ ಲೈಟ್ ಸಿಂಡ್ರೋಮ್ ಅತಿಯಾದರೆ ಅದು ‘ಸಾಮಾಜಿಕ ಆತಂಕ’ (Social Anxiety) ಕಾರಣವಾಗಬಹುದು. ಹೊರಗಿನ ಜನರನ್ನು ನೋಡಿದರೆ ಭಯ, ಆತಂಕ ಶುರುವಾಗುವುದು ಸಾಮಾನ್ಯವಾಗಬಹುದು. ಇದರಿಂದ ಸಂಬಂಧ ಹಾಗೂ ವೃತ್ತಿ ಜೀವನಕ್ಕೆ ತೊಂದರೆ ಆಗಬಹುದು. ಆದ್ದರಿಂದ ಇದು ಜಾಸ್ತಿ ಕಾಡಿಸಿದರೆ ಒಮ್ಮೆ ಆಪ್ತ ಸಲಹೆ ಪಡೆಯುವುದು ಒಳ್ಳೆಯದು.
ಇದನ್ನೂ ಓದಿ: ಮದುವೆಯ ನಂತರವೂ ಪ್ರೀತಿ ಉಳಿಯಲು ಈ ಅಂಶಗಳು ತಿಳಿದಿರಬೇಕು
ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990