logo
ಕನ್ನಡ ಸುದ್ದಿ  /  ಜೀವನಶೈಲಿ  /  Onion Pakoda Recipe: ಈ ಚಳಿಗೆ ಈರುಳ್ಳಿ ಬಜ್ಜಿ ತಿನ್ನದಿದ್ರೆ ಹೇಗೆ? ಕೆಲವೇ ನಿಮಿಷಗಳಲ್ಲಿ ಮಾಡಿ ಗರಿಗರಿ ರುಚಿಕರ ಈರುಳ್ಳಿ ಪಕೋಡ

Onion Pakoda Recipe: ಈ ಚಳಿಗೆ ಈರುಳ್ಳಿ ಬಜ್ಜಿ ತಿನ್ನದಿದ್ರೆ ಹೇಗೆ? ಕೆಲವೇ ನಿಮಿಷಗಳಲ್ಲಿ ಮಾಡಿ ಗರಿಗರಿ ರುಚಿಕರ ಈರುಳ್ಳಿ ಪಕೋಡ

Praveen Chandra B HT Kannada

Dec 01, 2024 06:23 PM IST

google News

ಈರುಳ್ಳಿ ಪಕೋಡ ರೆಸಿಪಿ

    • Onion Pakoda Recipe: ಈ ಚಳಿಗೆ ಬಿಸಿಬಿಸಿ ಗರಿಗರಿ ರುಚಿಕರ ಪಕೋಡ ಮಾಡಬೇಕೆಂದುಕೊಳ್ಳುವವರು ಸುಲಭವಾಗಿ ಈರುಳ್ಳಿ ಬಜ್ಜಿ (ಈರುಳ್ಳಿ ಪಕೋಡ, ನೀರುಳ್ಳಿ ಬಜೆ) ಮಾಡಬಹುದು. ಇದನ್ನು ಮಾಡಲು ಹೆಚ್ಚು ಸಮಯ ಬೇಕಿಲ್ಲ. ಕರ್ನಾಟಕ ಶೈಲಿಯಲ್ಲಿ ಆನಿಯನ್‌ ಪಕೋಡ ಮಾಡೋದು ಹೇಗೆ ಎಂದು ತಿಳಿಯಿರಿ.
ಈರುಳ್ಳಿ ಪಕೋಡ ರೆಸಿಪಿ
ಈರುಳ್ಳಿ ಪಕೋಡ ರೆಸಿಪಿ (HT Kannada)

Onion Pakoda Recipe: ಬೆಂಗಳೂರು, ಮೈಸೂರು, ಮಡಿಕೇರಿ, ಹಾಸನ ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಚಳಿ ಹೆಚ್ಚಾಗಿದೆ. ಸೂರ್ಯ ರಜೆ ಹಾಕಿದ್ದಾನ ಅನ್ನೋ ವಾತಾವರಣ ಇದೆ. ಇಂತಹ ಚಳಿಗೆ ಬಿಸಿಬಿಸಿ ಏನಾದರೂ ಬೇಕೆಂದು ಹುಡುಕುವವರಿಗೆ ಈರುಳ್ಳಿ ಪಕೋಡ ಅತ್ಯುತ್ತಮ ಆಯ್ಕೆ. ಮಕ್ಕಳಂತೂ ಈ ಪಕೋಡವನ್ನು ನಿಮಗೆ ಉಳಿಸದೆ ತಿನ್ನಬಹುದು ಜಾಗೃತೆ. ಹೀಗಾಗಿ, ಪಕೋಡ ಮಾಡುವಾಗ ಒಂದೆರಡು ಈರುಳ್ಳಿ ಹೆಚ್ಚು ಹಾಕಿಕೊಂಡರೆ ನಿಮಗೆ ಉಳಿದೀತು. ಸಂಜೆಯ ಸ್ನ್ಯಾಕ್ಸ್‌ ರೀತಿ ಅಥವಾ ಊಟದ ಜತೆಗೆ ಸೈಡ್ಸ್‌ ಆಗಿಯೂ ಈ ಪಕೋಡ ತಿನ್ನಬಹುದು. ಈರುಳ್ಳಿ ಪಕೋಡ ಮಾಡುವುದು ಅತ್ಯಂತ ಸುಲಭ. ಇದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಸುಲಭವಾಗಿ ಈರುಳ್ಳಿ ಬಜ್ಜಿ ಮಾಡಬಹುದು. ಮಂಗಳೂರು ಕಡೆ ಇದಕ್ಕೆ ಈರುಳ್ಳಿ ಬಜ್ಜಿ ಅಥವಾ ನೀರುಳ್ಳಿ ಬಜೆ ಎನ್ನುತ್ತಾರೆ. ಬೆಂಗಳೂರು, ಮೈಸೂರು ಮುಂತಾದ ಕಡೆ ಪಕೋಡ ಎನ್ನುತ್ತಾರೆ. ಹೋಟೆಲ್‌ನಲ್ಲಿರುವ ಸಿಗುವ ಪಕೋಡ ಅಷ್ಟೇನೂ ಟೇಸ್ಟ್‌ ಇರೋದಿಲ್ಲ. ಏಕೆಂದರೆ ಇರೋಬರೋ ಎಣ್ಣೆಯಲ್ಲಿ ಮೆಣಸಿನ ಕಾಯಿ ಬಜ್ಜಿ, ಆಲೂಗಡ್ಡೆ ಬಜ್ಜಿ ಎಲ್ಲದಕ್ಕೂ ಒಂದೇ ಹಿಟ್ಟು ಹಾಕಿ ಅದರಲ್ಲಿಯೇ ಈರುಳ್ಳಿ ಪಕೋಡ ಮಾಡುತ್ತಾರೆ. ಬನ್ನಿ ಈ ಚಳಿಗೆ ರುಚಿಕರ ಈರುಳ್ಳಿ ಪಕೋಡ ಹೇಗೆ ಮಾಡುವುದು ಎಂದು ತಿಳಿಯೋಣ. ನೆನಪಿಡಿ ಇಲ್ಲಿ ಈರುಳ್ಳಿಗೆ ಮಸಾಲ ಅಥವಾ ಹಿಟ್ಟು ಹೆಚ್ಚು ಹೊತ್ತು ಇಡಲು ಇಲ್ಲ. ತಕ್ಷಣ ಮಿಶ್ರ ಮಾಡಿ ತಕ್ಷಣ ಮಾಡುವಂತಹ ರೆಸಿಪಿ ಇದಾಗಿದೆ.

ಈರುಳ್ಳಿ ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಈರುಳ್ಳಿ ಪಕೋಡ ಮಾಡುವ ವಿಧಾನ

  1. ಈರುಳ್ಳಿ- ದೊಡ್ಡ ಗಾತ್ರದ್ದು ಆಗಿದ್ದರೆ 5, ಚಿಕ್ಕ ಗಾತ್ರದ್ದು ಆದರೆ ಎಂಟು ಹತ್ತು ಇರಲಿ. ಈಗ ಈರುಳ್ಳಿ ದರ ಸ್ವಲ್ಪ ದುಬಾರಿ. ಅಜೆಸ್ಟ್‌ ಮಾಡಿಕೊಳ್ಳಿ. ಈರುಳ್ಳಿಯನ್ನು ಉದ್ದಗೆ ತೆಳ್ಳಗೆಯೂ ಅಲ್ಲದಂತೆ, ಹೆಚ್ಚು ದಪ್ಪಗೆಯೂ ಇರುದಂತೆ ಸ್ಲೈಸ್‌ ಸ್ಲೈಸ್‌ ಕತ್ತರಿಸಿ ಇಟ್ಟುಕೊಳ್ಳಿ.ಕತ್ತರಿಸಿದ ಈರುಳ್ಳಿಯನ್ನು ಒಂದು ಬೌಲ್‌ನಲ್ಲಿ ಹಾಕಿ. ಕತ್ತರಿಸಿದ ಈರುಳ್ಳಿಯನ್ನು ಕೈಯಲ್ಲಿ ತುಸು ಹಿಸುಕಿ ಎಲ್ಲಾ ಈರುಳ್ಳಿ ಪೀಸ್‌ಗಳು ಬಿಡಿಸಿಕೊಳ್ಳುವಂತೆ ಮಾಡಿ.
  2. ಅರ್ಧ ಇಂಚಿನಷ್ಟು ಶುಂಠಿಯನ್ನು ಸಣ್ಣದಾಗಿ ಕತ್ತರಿಸಿ ಇದೇ ಬೌಲ್‌ಗೆ ಹಾಕಿ.
  3. ಸ್ವಲ್ಪ ಕರಿಬೇವಿನ ಸೊಪ್ಪು ಸಣ್ಣದಾಗಿ ಕತ್ತರಿಸಿ. ಅದನ್ನು ಈರುಳ್ಳಿ ಜತೆ ಸೇರಿಸಿ.
  4. ಜೀರಿಗೆ ಅಥವಾ ಓಂಕಾಳು ಒಂದು ಚಮಚದಷ್ಟು ಹಾಕಿ. ಇದ ಗ್ಯಾಸ್ಟ್ರಿಕ್‌ ಸಮಸ್ಯೆಗೂ ಒಳ್ಳೆಯದು.
  5. ಅರ್ಧ ಚಮಚದಷ್ಟು ಮೆಣಸಿನ ಪುಡಿ ಹಾಕಿ. ನೀವು ಹೆಚ್ಚು ಖಾರ ಬಯಸುವವರಾದರೆ ಒಂದು ಚಮಚ ಮೆಣಸಿನ ಪುಡಿ ಹಾಕಿ. ಚಳಿಗೆ ತುಂಬಾ ಖಾರ ತಿನ್ನೋದು ಒಳ್ಳೆಯದಲ್ವಂತೆ.
  6. ಸ್ವಲ್ಪ ಇಂಗು ಸೇರಿಸಿ. ತಪ್ಪಿ ಜಾಸ್ತಿ ಸೇರಿಸಲು ಹೋಗಬೇಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ. ಹೆಚ್ಚು ಬೇಡ.
  7. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ರುಚಿಗೆ ತಕ್ಕಷ್ಟು ಅಂದರೆ ಎಷ್ಟು ಎಂದು ಕೇಳುವವರಿಗಾಗಿ "ಪುಟ್ಟ ಸ್ಪೂನ್‌ನಲ್ಲಿ ಅರ್ಧ ಚಮಚಕ್ಕಿಂತ ಸ್ವಲ್ಪ ಕಡಿಮೆ ಹಾಕಿದರೆ ಸಾಕು".
  8. ಮೇಲೆ ಹೇಳಿದಂತೆ ಎಲ್ಲಾ ಐಟಂ ಹಾಕಿದ ಬಳಿಕ ಕೈಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರ ಮಾಡಿ. ಉಪ್ಪು, ಖಾರ ಸರಿಯಾಗಿ ಸೇರಲು ಇದು ನೆರವಾಗುತ್ತದೆ.
  9. ಇದಕ್ಕೆ ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಅರ್ಧ ಕಪ್‌ನಷ್ಟು ಕಡಲೆ ಹಿಟ್ಟು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ನೆನಪಿಡಿ ನೀರು ಹಾಕಲು ಇಲ್ಲ. ಚೆನ್ನಾಗಿ ಮಿಶ್ರ ಮಾಡಿ. ಇವುಗಳನ್ನು ಸ್ವಲ್ಪಸ್ವಲ್ಪವೇ ಹಾಕಿ ಮಿಶ್ರ ಮಾಡುತ್ತ ಇರಿ. ಈರುಳ್ಳಿಗೆ ಚೆನ್ನಾಗಿ ಅಂಟಿಕೊಳ್ಳವಷ್ಟು ಹಿಟ್ಟು ಸಾಕು. ತುಂಬಾ ಜಾಸ್ತಿ ಹಾಕಬೇಡಿ. ಮೆಣಸಿನಕಾಯಿ ಬಜ್ಜಿಗೆ ಹಾಕುವಷ್ಟು ಹಿಟ್ಟು ಅಂಟಿಕೊಳ್ಳುವುದು ಬೇಡ. ಹಿಟ್ಟಿನಲ್ಲಿ ಈರುಳ್ಳಿ ಬಣ್ಣಹೊರಗೆ ಕಂಡರೆ ಆತಂಕಪಡಬೇಡಿ.
  10. ಹೆಚ್ಚು ತಡಮಾಡಬೇಡಿ. ಈ ರೀತಿ ಚೆನ್ನಾಗಿ ಮಿಕ್ಸ್‌ ಮಾಡಿದ ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಬಾಣಲೆಗೆ ಸ್ವಲ್ಪ ಸ್ವಲ್ಪವೇ ಈರುಳ್ಳಿ ಮಿಶ್ರಣವನ್ನು ಹಾಕಿ. ಹೆಚ್ಚು ಬೆಂಕಿ ಇಡಬೇಡಿ. ಬೇಗ ಕಪ್ಪಾಗಿ ಬಿಡುತ್ತದೆ. ಮಂದ ಬೆಂಕಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿ.

ರುಚಿಕರ ಈರುಳ್ಳಿ ಬಜ್ಜಿ ರೆಡಿ.

ಬೇರೆ ಪಕೋಡ ರೆಸಿಪಿ ಬೇಕೆ? ಈ ಮುಂದಿನ ಲಿಂಕ್‌ಗಳನ್ನು ಗಮನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ