ಡೈರಿ ಬರೆದು ದಿನ ಆರಂಭಿಸಿದರೆ ಆವರಿಸುತ್ತೆ ನೆಮ್ಮದಿಯ ಭಾವ; ಸಂಸಾರ, ಸಂಬಂಧಗಳ ಎಷ್ಟೋ ಸಮಸ್ಯೆಗಳನ್ನೂ ಇದು ಸುಲಭವಾಗಿ ಸಾಲ್ವ್ ಮಾಡುತ್ತೆ ಕಣ್ರೀ
Sep 09, 2024 12:27 PM IST
ಸಂಸಾರ, ಸಂಬಂಧಗಳ ಎಷ್ಟೋ ಸಮಸ್ಯೆಗಳನ್ನೂ ಇದು ಸುಲಭವಾಗಿ ಸಾಲ್ವ್ ಮಾಡುತ್ತೆ ಡೈರಿ ಬರವಣಿಗೆ. (ಸಾಂಕೇತಿಕ ಚಿತ್ರ)
Morning Journaling; ನಿತ್ಯ ಬದುಕಿನಲ್ಲಿ ಡೈರಿ ಬರೆಯುವುದು ಬಹಳ ಮುಖ್ಯ ಎನ್ನುತ್ತಾರೆ ಪರಿಣತರು. ಡೈರಿ ಬರೆದು ದಿನ ಆರಂಭಿಸಿದರೆ ನೆಮ್ಮದಿಯ ಭಾವ ಆವರಿಸುತ್ತೆ. ಸಂಸಾರ, ಸಂಬಂಧಗಳ ಎಷ್ಟೋ ಸಮಸ್ಯೆಗಳನ್ನೂ ಇದು ಸುಲಭವಾಗಿ ಸಾಲ್ವ್ ಮಾಡುತ್ತೆ ಎಂದು ಹೇಳುತ್ತಾರೆ. ಏನಿದು ಇಲ್ಲಿದೆ ವಿವರ.
ನಿತ್ಯದ ಸೂರ್ಯೋದಯ ಆಯಾ ದಿನದ ಆರಂಭಕ್ಕೆ ಮುನ್ನೋಟ ಒದಗಿಸುವಂತಹ ಹೊತ್ತು. ಪ್ರತಿ ಮುಂಜಾನೆ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದೇನೂ ಇಲ್ಲ. ಕೆಲವರು ಲವಲವಿಕೆಯಿಂದ ಹೊಸ ದಿನವನ್ನು ಸ್ವಾಗತಿಸಬಹುದು. ಇನ್ನು ಅನೇಕರು ಮಿಶ್ರಭಾವದಿಂದ ದಿನ ಶುರುಮಾಡಬಹುದು. ಇನ್ನ ಕೆಲವರು ಉದಾಸೀನದಿಂದ ದಿನ ಶುರು ಮಾಡಬಹುದು. ಅದೆಲ್ಲ ಏನೇ ಇದ್ದರೂ ದಿನವನ್ನು, ದಿನದ ವಿದ್ಯಮಾನಗಳನ್ನು ಎದುರಿಸುವುದಕ್ಕೆ ನಾವು ಸನ್ನದ್ಧರಾಗಬೇಕು. ಬೆಳಗ್ಗೆ ಸಮಾಧಾನದಿಂದ ಹೊಸ ಹುಮ್ಮಸ್ಸಿನೊಂದಿಗೆ ದಿನ ಶುರು ಮಾಡಬೇಕು.
ಮನಸ್ಸು ಮತ್ತು ಶರೀರಕ್ಕೆ ನವಚೈತನ್ಯ ತುಂಬಲು ಕೆಲವರು ವಾಕ್ ಮಾಡುತ್ತಾರೆ. ಸೈಕ್ಲಿಂಗ್, ಸ್ವಿಮ್ಮಿಂಗ್, ಯೋಗ ಹೀಗೆ ಹಲವು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಧ್ಯಾನ ಮಾಡ್ತಾರೆ. ತಮ್ಮದೇ ಆದ ಚಿಂತನೆಗಳನ್ನು ರೂಪಿಸಿಕೊಳ್ಳಲು ಒಂಟಿಯಾಗಿರುತ್ತಾರೆ. ಆಲೋಚನೆಗಳನ್ನು ತಮ್ಮ ಡೈರಿಯಲ್ಲಿ ಬರೆದು ನಂತರ ದಿನಚರಿ ಶುರುಮಾಡುತ್ತಾರೆ. ಇದಕ್ಕೆ ಇಂಗ್ಲಿಷ್‌ನಲ್ಲಿ ಮಾರ್ನಿಂಗ್ ಜರ್ನಲ್ ಎಂದು ಹೇಳುವುದುಂಟು. ಅದರ ಪ್ರಯೋಜನಗಳು ಹಲವು.
ಬೆಳಗ್ಗೆ ಡೈರಿ ಬರೆಯುವುದು ಮತ್ತು ಅದರ ಪ್ರಯೋಜನ
ಮಾರ್ನಿಂಗ್ ಜರ್ನಲಿಂಗ್ ಅಥವಾ ಬೆಳಗ್ಗೆ ಡೈರಿ ಬರೆಯುವುದು ಎಂದರೆ, ದಿನದ ಪ್ರಾರಂಭದಲ್ಲಿ ನಿಮ್ಮ ಆಲೋಚನೆಗಳು, ಗುರಿಗಳು ಮತ್ತು ಮನಸ್ಸಿನ ಬಾವನೆಗಳನ್ನು ಬರೆಯುವ ಅಭ್ಯಾಸ. ಈ ಸರಳ ಅಭ್ಯಾಸವು ದಿನ ಶುರು ಮಾಡುವುದಕ್ಕೆ ಧನಾತ್ಮಕ ಭಾವವನ್ನು ಹೊಂದಿಸಲು ನೆರವಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ಕೆಲವು ನಿಮಿಷ ಡೈರಿ ಬರೆದರೆ ಅದರಿಂದ, ಋಣಾತ್ಮಕ ಭಾವ, ಹಲವು ಪ್ರಯೋಜನಗಳಿವೆ.
1) ದುಃಖ ಭಾವದಿಂದ ಹೊರಬರುವುದು
ನಮ್ಮೊಳಗೆ ದುಃಖ, ಹತಾಶೆ, ನಷ್ಟ ಮತ್ತು ಆ ಭಾವಗಳ ಹೊರೆಯನ್ನು ಹೊತ್ತಾಗ, ಪ್ರತಿದಿನ ಬೆಳಿಗ್ಗೆ ಶಾಪದಂತೆ ಭಾಸವಾಗುತ್ತದೆ. ಪರಿಣಾಮ ಮುಂಜಾನೆ ಎದ್ದು ಕೆಲಸ ಶುರುಮಾಡುವುದು ಬಿಡಿ, ಹಾಸಿಗೆ ಬಿಟ್ಟು ಏಳಲು ಕಷ್ಟವೆನಿಸಬಹುದು. ಬೆಳಗ್ಗೆ ಎದ್ದು ಕುಳಿತು ಕೆಲವು ನಿಮಿಷ ಡೈರಿ ಬರೆದು ಭಾವ ಹಗುರಾಗಿಸಿಕೊಂಡು ಬಿಟ್ಟರೆ, ಆ ಭಾವನೆಗಳಿಂದ ಹೊರಬಹುದು ಸುಲಭವಾಗಲಿದೆ.
2) ಜೀವನದಲ್ಲಿ ಉಂಟಾಗಬಹುದಾದ ಹಠಾತ್ ಬದಲಾವಣೆ
ಜೀವನದಲ್ಲಿ ಯಾವ ಕ್ಷಣ ಏನು ಬೇಕಾದರೂ ಆಗಬಹುದು. ವೃತ್ತಿ ಜೀವನದಲ್ಲೂ ಹಠಾತ್ ಬದಲಾವಣೆ ಉಂಟಾಗಬಹುದು. ಕೆಲವೊಮ್ಮೆ ಇಂತಹ ಬದಲಾವಣೆಗಳು ಮನಸ್ಸಿನ ಸ್ಥೈರ್ಯವನ್ನು ಕುಗ್ಗಿಸಬಹುದು. ಬದುಕಿನಲ್ಲಿ ಹಿಮ್ಮೆಟ್ಟುವಂತೆ ಮಾಡಬಹುದು. ಆಗ ನಾವು ಅತಿಯಾಗಿ ಭಾವುಕರಾಗಿ ಬಿಡುತ್ತೇವೆ. ಇಂತಹ ಸನ್ನಿವೇಶದಲ್ಲಿ ಸಮಚಿತ್ತ ಕಾಪಾಡಲು ಬೆಳಗ್ಗೆ ಡೈರಿ ಬರೆಯವುದು ನೆರವಿಗೆ ಬರುತ್ತದೆ.
3) ಒತ್ತಡಗಳು ಮತ್ತು ಪ್ರಚೋದನೆಯ ಸನ್ನಿವೇಶಗಳು
ನಿತ್ಯ ಬದುಕಿನಲ್ಲಿ ಒತ್ತಡಗಳು ಮತ್ತು ಪ್ರಚೋದನೆಯ ಸನ್ನಿವೇಶಗಳು ಅನೇಕ. ಅವುಗಳನ್ನು ಗುರುತಿಸುವುದಕ್ಕೆ ಡೈರಿ ಬರೆಯವುದು ನೆರವಾಗುತ್ತದೆ. ನಾವು ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಬರೆಯುವಾಗ, ಒತ್ತಡ ಮತ್ತು ಪ್ರಚೋದಕಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಹಚ್ಚು ಭಾವುಕ ಸ್ಥಿತಿ ಉಂಟುಮಾಡುವ ವಿಷಯಗಳನ್ನು ಗುರುತಿಸಿ ಸುರಕ್ಷಿತ ಭಾವ ಹೊಂದುವುದಕ್ಕೆ ಇದು ನೆರವಾಗುತ್ತದೆ.
4) ಸಮಸ್ಯೆ-ಪರಿಹರಿಸುವ ಕೌಶಲಗಳನ್ನು ಹೆಚ್ಚಿಸುವುದು
ನಾವು ನಮ್ಮ ಸಮಸ್ಯೆಯನ್ನು ಕಾಗದದ ಮೇಲೆ ಬರೆದಾಗ, ನಾವು ಅದನ್ನು ಹೊಸ ದೃಷ್ಟಿಕೋನದಿಂದ ನೋಡಲು ಶುರುಮಾಡುತ್ತೇವೆ. ಆ ಸಮಸ್ಯೆಗಳನ್ನು ಎದುರಿಸುವುದಕ್ಕೆ ಮತ್ತು ಅವುಗಳನ್ನು ಎದುರಿಸುತ್ತ ಮುಂದುವರಿಯಲು ಅಗತ್ಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಹೀಗಾಗಿ ಡೈರಿ ಬರೆಯುವ ಹವ್ಯಾಸವು ಉತ್ತಮ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಕಂಡುಹಿಡಿಯಲು ನೆರವಾಗುತ್ತದೆ.
5) ಸಂಬಂಧಗಳನ್ನು ಸುಧಾರಿಸಲು ನೆರವಾಗುತ್ತದೆ
ಜರ್ನಲಿಂಗ್ ನಮ್ಮ ಸಂಬಂಧದ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದನ್ನು ನಿರ್ವಹಿಸುವುದಕ್ಕೆ ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಪಾಲುದಾರ ಮತ್ತು ನಮ್ಮ ನಡವಳಿಕೆಯ ಮಾದರಿಗಳ ಬಗ್ಗೆ ಹೆಚ್ಚು ಅರಿವು ಮೂಡಿಸಲು ಇದು ನಮಗೆ ಸಹಾಯ ಮಾಡುತ್ತದೆ. ಇದು ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಬೆಳಗ್ಗೆ ಡೈರಿ ಬರವಣಿಗೆ ಪರಿಣಾಮದ ಕಿರು ಅವಲೋಕನ
ನಿಮ್ಮ ದಿನಚರಿಯಲ್ಲಿ ಬೆಳಗ್ಗೆ ಡೈರಿ ಬರೆಯುವುದನ್ನು ಸೇರಿಸುವುದರಿಂದ ನಿಮ್ಮ ನಿತ್ಯದ ನಡವಳಿಕೆಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಆಲೋಚನೆಗಳು, ಗುರಿಗಳು ಮತ್ತು ಪ್ರತಿಬಿಂಬಗಳನ್ನು ಬರೆಯಲು ಪ್ರತಿ ಬೆಳಿಗ್ಗೆ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ನಿಮ್ಮ ಗಮನವನ್ನು ಹೆಚ್ಚಿಸಬಹುದು. ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಮತ್ತು ಒತ್ತಡವನ್ನು ಕಡಿಮೆ ಮಾಡಬಹುದು. ಈ ಸರಳವಾದ ಆದರೆ ಶಕ್ತಿಯುತವಾದ ಅಭ್ಯಾಸವು ಸ್ವಯಂ-ಅರಿವನ್ನು ಬೆಳೆಸುತ್ತದೆ ಮತ್ತು ದಿನಕ್ಕೆ ಧನಾತ್ಮಕ ಧ್ವನಿಯನ್ನು ಹೊಂದಿಸುತ್ತದೆ. ನಿಮ್ಮ ಕಾರ್ಯಗಳನ್ನು ಸ್ಪಷ್ಟತೆ ಮತ್ತು ಉದ್ದೇಶದಿಂದ ಮುನ್ನಡೆಯಲು ಸಹಾಯ ಮಾಡುತ್ತದೆ. ಬೆಳಗಿನ ಜರ್ನಲಿಂಗ್ ಅನ್ನು ಅಳವಡಿಸಿಕೊಳ್ಳುವುದು ಹೆಚ್ಚು ಸಂಘಟಿತ, ಉದ್ದೇಶಪೂರ್ವಕ ಮತ್ತು ಪೂರೈಸುವ ದಿನಕ್ಕೆ ಕಾರಣವಾಗಬಹುದು, ಅಂತಿಮವಾಗಿ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ.
ಗಮನಿಸಿ: ಈ ಲೇಖನವು ಮಾಹಿತಿ ಉದ್ದೇಶಕ್ಕೆ ಮಾತ್ರ ಸೀಮಿತ. ಇದು ವೃತ್ತಿಪರ ವೈದ್ಯಕೀಯ ಸಲಹೆಗೆ ಬದಲಿ ಅಲ್ಲ. ವೈದ್ಯಕೀಯ ಸ್ಥಿತಿಯ ಬಗ್ಗೆ ಯಾವುದೇ ಸಂದೇಹ, ಪ್ರಶ್ನೆಗಳಿದ್ದರೂ ಅದಕ್ಕೆ ಸಂಬಂಧಿಸಿ ಯಾವಾಗಲೂ ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳಿತು.