logo
ಕನ್ನಡ ಸುದ್ದಿ  /  ಜೀವನಶೈಲಿ  /  Hubli News: ರುಚಿಗೂ ಆರೋಗ್ಯಕ್ಕೂ ಬೆಸ್ಟ್‌ ಅಪರೂಪದ ಹಕ್ಕರಕಿ ಸೊಪ್ಪು; ಮಳೆಗಾಲದಲ್ಲಿ ಉತ್ತರ ಕರ್ನಾಟಕ ಕಡೆ ಹೋದರೆ ತಿನ್ನೋದು ಮರಿಬೇಡಿ

Hubli News: ರುಚಿಗೂ ಆರೋಗ್ಯಕ್ಕೂ ಬೆಸ್ಟ್‌ ಅಪರೂಪದ ಹಕ್ಕರಕಿ ಸೊಪ್ಪು; ಮಳೆಗಾಲದಲ್ಲಿ ಉತ್ತರ ಕರ್ನಾಟಕ ಕಡೆ ಹೋದರೆ ತಿನ್ನೋದು ಮರಿಬೇಡಿ

HT Kannada Desk HT Kannada

Aug 02, 2023 10:39 AM IST

google News

ಕೆರೆದಂಡೆಯಲ್ಲಿ ಬೆಳೆದಿರುವ ಹಕ್ಕರಕಿ ಸೊಪ್ಪು ಕೀಳುತ್ತಿರುವ ಜನರು (ಎಡಚಿತ್ರ) ಹಕ್ಕರಕಿ ಸೊಪ್ಪು (ಬಲಚಿತ್ರ)

    • Hakkarakki Palye: ಕಪ್ಪು ಹಾಗೂ ಕೆಂಪು ಮಣ್ಣಿನಲ್ಲಿ ಬೆಳೆಯುವ ಹಕ್ಕರಕಿ ಸೊಪ್ಪು ಒಂದು ಕಳೆ ಸಸ್ಯ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದನ್ನು ಕಾಣಬಹುದು. ಇದು ಕಪ್ಪು(ಎರೆ) ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ‘ಸೇವಿದರೆ ಉದರಕ್ಕೆ, ಜಮೀನಿನಲ್ಲೇ ಬಿಟ್ಟರೆ ಭೂಮಿಗೆ ಸತ್ವ’ ನೀಡುವ ಗೊಬ್ಬರವೂ ಆಗುವ ಗುಣವುಳ್ಳ ಅಪರೂಪದ ಸಸ್ಯವಿದು.
ಕೆರೆದಂಡೆಯಲ್ಲಿ ಬೆಳೆದಿರುವ ಹಕ್ಕರಕಿ ಸೊಪ್ಪು ಕೀಳುತ್ತಿರುವ ಜನರು (ಎಡಚಿತ್ರ) ಹಕ್ಕರಕಿ ಸೊಪ್ಪು (ಬಲಚಿತ್ರ)
ಕೆರೆದಂಡೆಯಲ್ಲಿ ಬೆಳೆದಿರುವ ಹಕ್ಕರಕಿ ಸೊಪ್ಪು ಕೀಳುತ್ತಿರುವ ಜನರು (ಎಡಚಿತ್ರ) ಹಕ್ಕರಕಿ ಸೊಪ್ಪು (ಬಲಚಿತ್ರ)

ಹುಬ್ಬಳ್ಳಿ: ಮುಂಗಾರು ಮಳೆ ಆರಂಭ ಆಗುತ್ತಿದಂತೆ ಉತ್ತರ ಕರ್ನಾಟಕದ ಹೊಲಗಳಲ್ಲಿ ‘ಹಕ್ಕರಕಿ ಸೊಪ್ಪು’ ಅಥವಾ ‘ಹಕ್ಕರಕಿ ಪಲ್ಯೆ’ ಬೆಳೆಯಲು ಶುರುವಾಗುತ್ತದೆ. ಈ ಸೊಪ್ಪಿನ ಸೇವನೆಯು ಆರೋಗ್ಯಕ್ಕೆ ಬಹಳ ಉತ್ತಮ, ಹಾಗಾಗಿ ಇದನ್ನು ಯಥೇಚ್ಛವಾಗಿ ಸೇವಿಸುತ್ತಾರೆ.

ಕಪ್ಪು ಹಾಗೂ ಕೆಂಪು ಮಣ್ಣಿನಲ್ಲಿ ಬೆಳೆಯುವ ಹಕ್ಕರಕಿ ಸೊಪ್ಪು ಒಂದು ಕಳೆ ಸಸ್ಯ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದನ್ನು ಕಾಣಬಹುದು. ಇದು ಕಪ್ಪು(ಎರೆ) ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೆಳೆಗಳ ನಡುವೆ ಬೆಳೆಯುವ ಈ ಸೊಪ್ಪು ಕಳೆಯ ಗುಂಪಿಗೆ ಸೇರಿದ್ದರೂ ರೈತರು ಮಾತ್ರ ಇದನ್ನು ಉಳಿದ ಕಳೆ ಸಸ್ಯದಂತೆ ಕಿತ್ತು ಎಸೆಯುವುದಿಲ್ಲ. ‘ಸೇವಿದರೆ ಉದರಕ್ಕೆ, ಜಮೀನಿನಲ್ಲೇ ಬಿಟ್ಟರೆ ಭೂಮಿಗೆ ಸತ್ವ’ ನೀಡುವ ಗೊಬ್ಬರವೂ ಆಗುವ ಗುಣವುಳ್ಳ ಅಪರೂಪದ ಸಸ್ಯವಿದು.

ಗುರುತಿಸುವುದು ಹೇಗೆ?

ಹಸಿರು ಬಣ್ಣದ ಉದ್ದನೆಯ ಎಲೆಗಳನ್ನು ಹೊಂದಿರುವ ಹಕ್ಕರಕಿ, ನಕ್ಷತ್ರಾಕಾರದಲ್ಲಿ ಹರಡಿಕೊಂಡು ಬೆಳೆದಿರುತ್ತದೆ. ಭೂಮಿಯ ಬದು ಸೇರಿದಂತೆ ಹೊಲದಲ್ಲಿ ಆವರಿಸಿಕೊಂಡು ಬೆಳೆದಿರುತ್ತದೆ. ಎಲೆಗಳ ಅಂಚಿನ ಸುತ್ತ ಸಣ್ಣ ಎಳೆ ಮುಳ್ಳುಗಂತೆ ಒರಟಾಗಿರುತ್ತದೆ. ತಂಪಿರುವ ಜಮೀನು, ನೀರಾವರಿ ಪ್ರದೇಶಗಳಲ್ಲಿ ವರ್ಷ ಪೂರ್ತಿ ಕಂಡುಬರುವ ಸಸ್ಯವಿದು.

ಔಷಧೀಯ ಗುಣ

‘ಹಕ್ಕರಕಿ ತಿದ್ದವ ಗಟ್ಟಿ-ಮುಟ್ಟಿ’ ಎಂಬ ಜನಪದರ ಮಾತುಗಳು ಇನ್ನೂ ಪ್ರಚಲಿತದಲ್ಲಿವೆ. ಉತ್ತರ ಕರ್ನಾಟಕ ರೈತರು ಹೊಲದಲ್ಲಿ ಊಟ ಮಾಡುವಾಗ ಊಟದ ಜತೆಗೆ ಹಕ್ಕರಕಿ ಸೊಪ್ಪು ಸೇವಿಸುವುದುಂಟು. ಮಧ್ಯಾಹ್ನ ಊಟದ ಸಮಯಕ್ಕೆ ಹೊಲದ ಒಂದು ಸುತ್ತು ಹಾಕಿ ಹಕ್ಕರಕಿ ಕಿತ್ತು ತಂದು ಊಟದ ಮೇನುಗೆ ಸೇರಿಸಿಕೊಳ್ಳುತ್ತಾರೆ. ಅಂದ ಹಾಗೆ ಈ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ. ಹಾಗಾಗಿಯೇ ಜನಪದರು ಹಿಂದಿನ ಕಾಲದಿಂದಲೂ ಸೇವಿಸುತ್ತಾ ಬಂದಿದ್ದಾರೆ.

ನಾರಿನಂಶ ಹೇರಳ

ಹಕ್ಕರಿಕೆ ಎಲೆಗಳಲ್ಲಿ ನಾರಿನ ಅಂಶ ಹೇರಳವಾಗಿದೆ. ಗ್ಲಯೋಕ್ಸಿಲೇಟ್, ರಿಡಕ್ಟೇಸ್ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಈ ಕಿಣ್ವಗಳು ಮೂತ್ರ ಪಿಂಡಗಳಲ್ಲಿ ಹರಳು ಉಂಟಾಗುವುದನ್ನು ತಡೆಗಟ್ಟುತ್ತವೆ. ಹಕ್ಕರಿಕೆ ಸೇವನೆಯಿಂದ ಬಳಲಿಕೆ ಆಯಾಸ ದೂರವಾಗುತ್ತದೆ. ದೇಹ ತೂಕ ಇಳಿಕೆಗೂ ಇದು ಸಹಕಾರಿ. ಹಕ್ಕರಗಿ ಸೊಪ್ಪಿನ ನಿರಂತರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತದೊತ್ತಡ ನಿಯಂತ್ರಣ, ಚರ್ಮರೋಗ, ಮೂಳೆಗಳ ಸವೆತ ತಡೆಯಲು ಸಹಕಾರಿ ಆಗಿದೆ. ಒಟ್ಟಿನಲ್ಲಿ ಹಕ್ಕರಕಿ ಸೊಪ್ಪು ಬಹು ಉಪಯೋಗಿಯಾಗಿದೆ.

ಊಟದೊಂದಿಗೆ ಸಲಾಡ್‌

ಹಕ್ಕರಗಿ ಪಲ್ಯೆ ಉತ್ತರ ಕರ್ನಾಟಕದ ಜನರ ಊಟದಲ್ಲಿ ಬಳಸುವ ಸಲಾಡ್. ಮೆಂತ್ಯೆ, ಮೂಲಂಗಿ ಸೊಪ್ಪು, ಸೌತೆಕಾಯಿ, ಗಜ್ಜರಿ ಇತ್ಯಾದಿಗಳ ಬಳಕೆಯಂತೆ ಹಕ್ಕರಗಿ ಸೊಪ್ಪನ್ನು ಸಲಾಡ್ ರೂಪದಲ್ಲಿ ಬಳಸಲಾಗುತ್ತದೆ. ಹಕ್ಕರಗಿ ಎಲೆಗಳನ್ನು ಸ್ವಚ್ಛವಾಗಿ ತೊಳೆದ ಬಳಿಕ ಸಣ್ಣದಾಗಿ ಕತ್ತರಿಸಬೇಕು. ಅದಕ್ಕೆ ಈರುಳ್ಳಿ, ಉಪ್ಪು, ಸ್ವಲ್ಪ ಖಾರ ಸೇರಿಸಿ ಮಿಶ್ರಣ ಮಾಡಿದರೆ ಹಕ್ಕರಗಿ ಸೊಪ್ಪಿನ ಸಲಾಡ್ ಸಿದ್ಧವಾಗುತ್ತದೆ. ಇದಕ್ಕೆ ಒಗ್ಗರಣೆ ಕೊಡಬೇಕೆಂದರೆ ಎನ್ನಿಸಿದರೆ ಒಗ್ಗರಣೆ ಹಾಕಿ ಹಕ್ಕರಕಿ ಪಲ್ಯೆ ಕೂಡ ಮಾಡಿ ಸೇವಿಸಬಹುದು.

ಪಟ್ಟಣಗಳಲ್ಲೂ ಮಾರಾಟ

ಹಕ್ಕರಗಿ ಸೊಪ್ಪು ಎಂದರೆ ಎಲ್ಲರಿಗೂ ಇಷ್ಟ. ನಗರದ ಪ್ರದೇಶದಲ್ಲಿ ವಾಸಿಸುವ ಜನತೆಗೆ ಈ ಸೊಪ್ಪಿನ ಬಗ್ಗೆ ತಿಳಿವಳಿಕೆ ಕಡಿಮೆ. ಆದರೆ ಹಳ್ಳಿ ಮೂಲಗಳಿಂದ ಬಂದು ಪಟ್ಟಣಗಳಲ್ಲಿ ವಾಸಿಸುವವರಿಗೆ ಹಕ್ಕರಗಿ ಸೊಪ್ಪಿನ ಮಹತ್ವ ಸಾಕಷ್ಟು ಗೊತ್ತು. ಈ ಹಿಂದೆ ಹಳ್ಳಿಗಳಿಗೆ ಸೀಮಿತವಾಗಿದ್ದ ಹಕ್ಕರಕಿ ಸೊಪ್ಪು ನಿಧಾನವಾಗಿ ನಗರ ಪ್ರದೇಶಗಳಿಗೆ ಮಾರಾಟಕ್ಕೆ ಲಗ್ಗೆ ಇಡುತ್ತದೆ. ಒಂದು ಹಿಡಿಗೆ ಇಂತಿಷ್ಟು ಎಂದು ಮಾರಾಟ ಮಾಡಲಾಗುತ್ತಿದೆ. ರೈತರು ಹೊಲಗಳಲ್ಲಿ ಬೆಳೆದ ಸೊಪ್ಪನ್ನು ನಗರ ಪ್ರದೇಶಕ್ಕೆ ತಂದು ಮಾರಾಟ ಮಾಡಲು ಆರಂಭಿಸಿದ್ದಾರೆ. ಈ ಮೂಲಕ ಹಳ್ಳಿ ರುಚಿ ಸಿಟಿ ಜನಕ್ಕೂ ತಂದಿದ್ದಾರೆ. ಕೆಲವೊಂದು ಲಿಂಗಾಯತ ಖಾನಾವಳಿಗಳಲ್ಲೂ ಸಲಾಡ್ ಆಗಿ ನೀಡುತ್ತಿದ್ದಾರೆ.

ಲೇಖನ: ಪ್ರಹ್ಲಾದಗೌಡ ಬಿ.ಜಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ